ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೊಂದನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 12 ಡಿಸೆಂಬರ್ 2024ರಂದು ಮಂಗಳೂರಿನ ವಳಚ್ಚಿಲ್ ನಲ್ಲಿರುವ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ “ಯುವಕರಲ್ಲಿ ಸಂಯಮ ಮತ್ತು ಪರಿಶ್ರಮ – ಸ್ವಾಮಿ ವಿವೇಕಾನಂದರ ಸಂದೇಶ” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಪುತ್ತೂರಿನ ಖ್ಯಾತ ವಾಗ್ಮಿಗಳಾದ ಶ್ರೀಕೃಷ್ಣ ಉಪಾಧ್ಯಾಯ “ಸ್ವಾಮಿ ವಿವೇಕಾನಂದರು ತಮ್ಮ ಜೀವನದ ಮತ್ತು ಸಂದೇಶಗಳ ಮೂಲಕ ಯುವಕರಿಗೆ ಪ್ರೇರಣೆಯ ರೂಪವಾಗಿದ್ದಾರೆ. ಅವರು ಸಂಯಮವನ್ನು ಜೀವನದ ಪ್ರಮುಖ ಗುಣವೆಂದು ಬೋಧಿಸುತ್ತಾ, ಅದು ಯಶಸ್ಸಿನ ಮೂಲಾಧಾರವೆಂದು ವಿವರಿಸಿದ್ದಾರೆ. ಯುವಕರಿಗೆ ಶ್ರದ್ಧೆ, ತಾಳ್ಮೆ ಮತ್ತು ಪರಿಶ್ರಮದ ಮಹತ್ವವನ್ನು ತಿಳಿಸುವಲ್ಲಿ ಅವರು ಅನನ್ಯವಾದ ಪಾತ್ರವನ್ನು ನಿರ್ವಹಿಸಿದರು. ನಂಬಿಕೆ ಮತ್ತು ಪರಿಶ್ರಮದಿಂದ ಯಾವುದರನ್ನಾದರೂ ಸಾಧಿಸಬಹುದು ಎಂಬ ವಿವೇಕಾನಂದರ ಮಾತು ಯುವಕರಿಗೆ ಆಧ್ಯಾತ್ಮಿಕ ಪ್ರೇರಣೆಯೊಂದಿಗೆ ಆಳವಾದ ಜೀವನದ ಪಾಠವನ್ನು ನೀಡುತ್ತದೆ. ಅವರು ಆತ್ಮವಿಶ್ವಾಸವನ್ನು ಉಕ್ಕಿಸುವ ಮೂಲಕ, ಜೀವನದ ಬದ್ಧತೆ ಮತ್ತು ಗುರಿಯ ಸಾಧನೆಗೆ ಅಗತ್ಯವಾದ ಪರಿಶ್ರಮವನ್ನು ಉತ್ತೇಜಿಸಿದರು. ಸಂಯಮವು ಒತ್ತಡದ ಸಂದರ್ಭದಲ್ಲಿ ಶಾಂತಿ ಮತ್ತು ಸಮತೋಲನವನ್ನು ಕಾಪಾಡುವ ಶಕ್ತಿಯನ್ನು ಒದಗಿಸುತ್ತದೆ ಎಂಬುದನ್ನು ಅವರು ಒತ್ತಿ ಹೇಳಿದ್ದರು. ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುವುದು ಯುವಜನರ ಅತ್ಯುತ್ತಮ ಕರ್ತವ್ಯವೆಂದು ಅವರು ತಿಳಿದಿದ್ದರು.” ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯ ಡಿ., ಮಾಜಿ ಸೈನಿಕರಾದ ಬೆಳ್ಳಾಲ ಗೋಪಿನಾಥ್ ರಾವ್, ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ನಿಧಿಶಾ ಮತ್ತು ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿ, ಕಾರ್ಯಕ್ರಮದ ಸಂಯೋಜಕರಾದ ಸುಧೀಂದ್ರ ಎಚ್. ಎನ್. ಸಹಾಯಕ ಪ್ರಾಧ್ಯಾಪಕರು, ಯಾಂತ್ರಿಕ ವಿಭಾಗ ಇವರು ವಂದಿಸಿದರು.