ಮಡಿಕೇರಿ : ವಿಕೆ3 ಪಿಕ್ಚರ್ಸ್‌ನಡಿ ಸಿನಿಮಾ ನಿರ್ಮಾಪಕಿ, ಸಹ ನಿರ್ದೇಶಕಿ, ನಟಿ ಹಾಗೂ ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಇವರ ಮೂರನೇ ಪುಸ್ತಕ ‘ವಾಸ್ತವ'(ಮನಗಳ ಮಂಥನ) ಕಥಾ ಪುಂಜದ ಲೋಕಾರ್ಪಣಾ ಸಮಾರಂಭವು ದಿನಾಂಕ 11 ಡಿಸೆಂಬರ್ 2024ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಈರಮಂಡ ಹರಿಣಿ ವಿಜಯ್ “ಅಕ್ಷರಗಳಿಗೆ ಮತ್ತು ಓದುವ ಹವ್ಯಾಸಕ್ಕೆ ತನ್ನದೇ ಆದ ಶಕ್ತಿ ಇದ್ದು, ಸಾಹಿತ್ಯದಿಂದಲೂ ಸಾಮಾಜಿಕ ಬದಲಾವಣೆ ಸಾಧ್ಯ. ಇತ್ತೀಚೆಗೆ ಅಕ್ಷರಗಳಿಗಾಗಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕೈಬರಹಗಳನ್ನು ಮರೆಯುವ ಪರಿಸ್ಥಿತಿ ಎದುರಾಗಿದೆ, ಈ ಬೆಳವಣಿಗೆ ಒಳ್ಳೆಯದಲ್ಲ. ಕೈಬರಹಕ್ಕೆ ತನ್ನದೇ ಆದ ಶಕ್ತಿ ಇದೆ, ಅಕ್ಷರಗಳನ್ನು ಯಾರೂ ಮರೆಯಬಾರದು. ಬರೆಯುವ ಮತ್ತು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು.” ಎಂದು ಕರೆ ನೀಡಿದರು.
‘ವಾಸ್ತವ’ ಪುಸ್ತಕವನ್ನು ಲೋಕರ್ಪಣೆಗೈದ ಕನ್ನಡ ಸಾಹಿತ್ಯ ಪರಿಷತ್ ಇದರ ಜಿಲ್ಲಾ ಕೋಶಾಧಿಕಾರಿ ಎಸ್. ಎಸ್. ಸಂಪತ್ ಕುಮಾರ್ ಮಾತನಾಡಿ “ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಮತ್ತು ಖ್ಯಾತಿಗಳಿಸಬೇಕು ಎನ್ನುವ ಆಕಾಂಕ್ಷೆಗಳು ಪ್ರತಿಯೊಬ್ಬರಲ್ಲೂ ಇರುತ್ತದೆ. ವಾಸ್ತವಾಂಶಗಳನ್ನು ಧೈರ್ಯದಿಂದ ಎದುರಿಸಿದಾಗ ಮಾತ್ರ ಇದು ಸಾಧ್ಯ. ವಾಸ್ತವಕ್ಕೆ ಹತ್ತಿರವಾದ ವಿಚಾರಗಳಿಗೆ ತಮ್ಮ ಕಲ್ಪನೆಯ ಸ್ಪರ್ಷ ನೀಡಿ ‘ವಾಸ್ತವ’ಪುಸ್ತಕಕ್ಕೆ ಬರಹಗಾರ್ತಿ ಹರಿಣಿ ವಿಜಯ್ ಅವರು ಜೀವ ತುಂಬಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಮತ್ತಷ್ಟು ಪುಸ್ತಕಗಳು ರಚನೆಯಾಗಲಿ.” ಎಂದು ಹಾರೈಸಿದರು.
ಹಿರಿಯ ಪತ್ರಕರ್ತ ಬಿ. ಸಿ. ದಿನೇಶ್ ಮಾತನಾಡಿ “ಸಿನಿಮಾ ಅಥವಾ ಸಾಕ್ಷ್ಯಚಿತ್ರವಾಗಲು ಯೋಗ್ಯವಾಗಿರುವ ‘ಅಗ್ನಿಯಾತ್ರೆ’ಯಂತಹ ಅದ್ಭುತ ಕಾದಂಬರಿಯನ್ನು ರಚಿಸಿರುವ ಹರಿಣಿ ವಿಜಯ್ ಅವರು ಇದೀಗ ತಮ್ಮ ಉತ್ತಮ ಚಿಂತನೆ ಮತ್ತು ಕಲ್ಪನೆಗೆ ‘ವಾಸ್ತವ’ ಪುಸ್ತಕದಲ್ಲಿ ಅಕ್ಷರದ ರೂಪ ನೀಡಿ ಯಶಸ್ವಿಯಾಗಿದ್ದಾರೆ.” ಎಂದರು.
ಸಿರಿ ಗನ್ನಡ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ಮಾತನಾಡಿ “ಕೊಡಗಿನಲ್ಲಿ ವೈಚಾರಿಕತೆಯ ಬರಹಗಳ ಕೊರತೆ ಇದೆ, ಇದನ್ನು ತುಂಬುವ ಪ್ರಯತ್ನವನ್ನು ಹರಿಣಿ ವಿಜಯ್ ಮಾಡುತ್ತಿದ್ದಾರೆ ಎಂದರು. ಮಡಿಕೇರಿಯ ಫೀ. ಮಾ. ಕೆ. ಎಂ. ಕಾರ್ಯಪ್ಪ, ಬೊಳ್ಳಜಿರ ಅಯ್ಯಪ್ಪ, ಯಮುನಾ ಅಯ್ಯಪ್ಪ ಉಪಸ್ಥಿತರಿದ್ದರು.