ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಯಕ್ಷಗಾನ ಕಲಾರಂಗ (ರಿ.) ಉಡುಪಿ ಮತ್ತು ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದ್ದ 15 ದಿನಗಳ ‘ಕಿಶೋರ ಯಕ್ಷಗಾನ ಸಂಭ್ರಮ – 2024’ ಇದರ ಸಮಾರೋಪ ಸಮಾರಂಭವು ದಿನಾಂಕ 14 ಡಿಸೆಂಬರ್ 2024ರಂದು ನಡೆಯಿತು.
ಈ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ “ಕಲೆ ಸಾಹಿತ್ಯದಿಂದ ಜೀವನದಲ್ಲಿ ಲವಲವಿಕೆ ಇರುತ್ತದೆ. ಯಕ್ಷಗಾನ ಪರಿಪೂರ್ಣ ಕಲಾಪ್ರಕಾರ. ಇದು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿ ಜೀವನ ಮೌಲ್ಯ ಕಲಿಸುತ್ತದೆ” ಎಂದು ನುಡಿದರು.
ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು “ಮಕ್ಕಳಿಗೆ ಪುರಾಣ ಕಥೆಗಳನ್ನು ತಿಳಿಯುವುದಕ್ಕೆ ಇದು ಅತ್ಯುತ್ತಮ ಮಾರ್ಗವಾಗಿದೆ” ಎಂದರು. ಯಕ್ಷಶಿಕ್ಷಣ ಟ್ರಸ್ಟಿನ ಅಧ್ಯಕ್ಷರೂ, ಉಡುಪಿಯ ಶಾಸಕರೂ ಆದ ಯಶ್ಪಾಲ್ ಸುವರ್ಣರು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಶಿಕ್ಷಣ ತಜ್ಞರಾದ ಡಾ. ಅಶೋಕ್ ಕಾಮತ್, ಯಕ್ಷಗಾನದ ಪೋಷಕರಾದ ಶ್ರೀ ಎಂ. ಸಿ. ಕಲ್ಕೂರ, ತೆಂಕುತಿಟ್ಟು ಯಕ್ಷಗಾನವನ್ನು ಮಕ್ಕಳಲ್ಲಿ ಬೆಳೆಸುತ್ತಿರುವ ಶ್ರೀಮತಿ ಗೋಪಿಕಾ ಮಯ್ಯ ಇವರೆಲ್ಲಾ ಔಚಿತ್ಯಪೂರ್ಣ ಮಾತುಗಳನ್ನಾಡಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು. ವೇದಿಕೆಯಲ್ಲಿ ಯಕ್ಷಶಿಕ್ಷಣದ ಟ್ರಸ್ಟಿಗಳಾದ ಎಸ್.ವಿ. ಭಟ್ ಮತ್ತು ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.
ನವೆಂಬರ್ 30ರಿಂದ ಡಿಸೆಂಬರ್ 14ರವರೆಗೆ ನಡೆದ ಈ ಅಭಿಯಾನದಲ್ಲಿ 27 ಪ್ರೌಢಶಾಲೆಗಳ 293 ಹುಡುಗರು, 507 ಹುಡುಗಿಯರು ಒಟ್ಟು 800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ 228 ಹೊರ ಜಿಲ್ಲೆ, 7 ಹೊರ ರಾಜ್ಯ, 2 ಕ್ರಿಶ್ಚಿಯನ್ ಹಾಗೂ 5 ಮುಸ್ಲಿಂ ವಿದ್ಯಾರ್ಥಿಗಳಿದ್ದರು. ಈ ಸಂದರ್ಭದಲ್ಲಿ ಪಾಲುಗೊಂಡ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಪ್ರಮಾಣ ಪತ್ರ ಹಾಗೂ ಗುಂಪು ಫೋಟೊಗಳನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಲಾಯಿತು. ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಜಾಹ್ನವಿ ಶ್ರೀಧರ್ ಪೂಜಾರಿ, ಯಶಸ್ವಿ ನಾಯಕ್ ಹಾಗೂ ಮೇಧಾ ಭಟ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಆರಂಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿ, ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು. ಕೋಶಾಧಿಕಾರಿ ಎಚ್.ಎನ್. ಶೃಂಗೇಶ್ವರ ಸಹಕರಿಸಿದರು. ಸಮಾರಂಭದ ಬಳಿಕ ನಿಟ್ಟೂರು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನಿಶ್ವಲ್ ನಿರ್ದೇಶನದಲ್ಲಿ ‘ಜಟಾಯು ಮೋಕ್ಷ’ ಮತ್ತು ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮಂಜುನಾಥ್ ಕುಲಾಲ್ ನಿರ್ದೇಶನದಲ್ಲಿ ‘ಬಬ್ರುವಾಹನ ಕಾಳಗ’ ಯಕ್ಷಗಾನ ಪ್ರದರ್ಶನಗೊಂಡಿತು.