ಮಂಗಳೂರು : ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ವೇದಿಕೆ ಹಾಗೂ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 14 ಡಿಸೆಂಬರ್ 2024ರಂದು ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿತು.
ಯಕ್ಷಗಾನ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರಿಗೆ ಈ ವೇಳೆ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅರುವ ಕೊರಗಪ್ಪ ಶೆಟ್ಟಿ ಮಾತನಾಡಿ “ಕುಂಬ್ಳೆ ಸುಂದರ ರಾವ್ ಜೊತೆ ಅನ್ಯೋನ್ಯ ಸಂಬಂಧ ಹೊಂದಿದ್ದೆ. ಅವರಿಂದಾಗಿ ನನಗೆ ಸಂಘದ ಸಂಪರ್ಕ ಸಿಕ್ಕಿತು. ನನ್ನ ಯಕ್ಷಗುರು ಪಡ್ರೆ ಚಂದು. ಆದರೆ, ಯಕ್ಷಗಾನ ರಂಗದಲ್ಲಿ ನನಗೆ ವ್ಯಕ್ತಿತ್ವ ಕರುಣಿಸಿದ್ದು ಕುಂಬ್ಳೆ” ಎಂದರು.
ಸಂಸ್ಮರಣಾ ಭಾಷಣ ಮಾಡಿದ ಯಕ್ಷಗಾನ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ, “ಕುಂಬ್ಳೆ ಸುಂದರ ರಾವ್ ಅವರು ಯಕ್ಷಗಾನ ರಂಗದ ಪ್ರಾತಃಸ್ಮರಣೀಯರು. ಯಕ್ಷಗಾನದಲ್ಲಿ ಅರ್ಥಗಾರಿಕೆಗೆ ಹೊಸ ಆಯಾಮ ನೀಡಿದ ಇವರು ಅಮೋಘ ಮಾತಿನ ಸಾಹಿತ್ಯದ ಮೂಲಕವೇ ಅಭಿಮಾನಿಗಳನ್ನು ಸೆಳೆಯುತ್ತಿದ್ದ ಅಪ್ರತಿಮ ಕಲಾವಿದ. ತಾಳಮದ್ದಳೆಯಲ್ಲಿ ಅವರ ಮಾತುಗಾರಿಕೆ ಅಸಾಧಾರಣ. ಅವರದು ಪ್ರೇರಣಾದಾಯಕ ಹಾಗೂ ಸ್ನೇಹಶೀಲ ವ್ಯಕ್ತಿತ್ವ. ಶಾಸಕನಾದ ಬಳಿಕವೂ ಸರಳ, ಸಜ್ಜನಿಕೆಯ ವ್ಯಕ್ತಿತ್ವನ್ನು ಬಿಟ್ಟು ಕೊಡದೇ ಜನರ ನಡುವೆ ಸದಾ ಇದ್ದವರು” ಎಂದರು.
ಅಗರಿ ಎಂಟರ್‌ಪ್ರೈಸಸ್ ಮಾಲೀಕ ಆಗರಿ ರಾಘವೇಂದ್ರ ರಾವ್, “ಕುಂಬ್ಳೆ ಹೆಸರು ಕೇಳುವಾಗಲೇ ವಿದ್ಯುತ್ ಸಂಚಾರವಾಗುತ್ತದೆ. ಶಾಸಕರಾಗಿ ಕಾರ್ಯ ನಿರ್ವಹಿಸಿದ ಏಕೈಕ ಯಕ್ಷಗಾನ ಕಲಾವಿದ ಅವರು. ಮುಂದಿನ ತಲೆಮಾರಿನ ಕಲಾವಿದರಿಗೂ ಅವರು ಪ್ರೇರಣೆ” ಎಂದರು.
ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಕುಂಬ್ಳೆ ಸುಂದರ ರಾವ್ ಅವರ ಅಳಿಯ ಸತ್ಯನಾರಾಯಣ ರಾವ್ ವಂದಿಸಿ, ರಂಗ ಸಂಗಾತಿಯ ಶಶಿರಾಜ್ ಕಾವೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ಸುಧನ್ವ ಮೋಕ್ಷ’ ಯಕ್ಷಗಾನ ತಾಳಮದ್ದಲೆ ನಡೆಯಿತು.