ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಸಹಯೋಗದೊಂದಿಗೆ ಡಾ. ಜಗದೀಶ್ ಶೆಟ್ಟಿ ಸಂಯೋಜನೆಯಲ್ಲಿ ‘ಸಿನ್ಸ್ 1999 ಶ್ವೇತಯಾನ-84’ ಹಾಗೂ ದಿನಾಂಕ 15 ಡಿಸೆಂಬರ್ 2024ರ ಭಾನುವಾರದಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಲೀಲಾವತಿ ಬೈಪಡಿತ್ತಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಮಾತನಾಡಿ “ವಿವಾಹ ನಂತರ ಪತಿಯೇ ಗುರುವಾಗಿ ಸಂಗೀತಗಾರರಾಗಿದ್ದ ಲೀಲಾವತಿಯಮ್ಮನನ್ನು ತೆಂಕು ತಿಟ್ಟಿನ ಯಶಸ್ವೀ ಭಾಗವತರನ್ನಾಗಿ ಮಾಡಿದ ಖ್ಯಾತಿ ಅವರ ಪತಿ ಹರಿ ನಾರಾಯಣ ಬೈಪಡಿತ್ತಾಯರಿಗೆ ಸಲ್ಲುತ್ತದೆ. ಗುರುವಾಗಿ ಅನೇಕ ಶಿಷ್ಯರನ್ನು ಭಾಗವತಿಕೆ ಕ್ಷೇತ್ರಕ್ಕೆ ನೀಡಿದ ಹಿರಿಮೆ ಲೀಲಾವತಿ ಬೈಪಡಿತ್ತಾಯರದು. ಕಷ್ಟದ ಬದುಕಿನ ನಿವಾರಣೆಗಾಗಿ ಮೇಳದ ತಿರುಗಾಟ ನಡೆಸಿದ ಏಕೈಕ ಮಹಿಳಾ ಪ್ರಥಮ ಭಾಗವತರಾಗಿ ನಿಂತವರು ಲೀಲಾವತಿ ಬೈಪಡಿತ್ತಾಯರು. ಯಕ್ಷಲೋಕಕ್ಕೆ, ಯಕ್ಷಗಾನ ಕಲಾವಿದರಿಗೆ ಎಂದೆಂದಿಗೂ ಮಾತೆಯಾಗಿ ಉಳಿದು ಅಜರಾಮರರಾದರು.” ಎಂದರು.
ಶಿರಸಿ ಮೇಳವನ್ನು ಮೆರೆಸಿ ಯಕ್ಷಗಾನವನ್ನು ಶ್ರೀಮಂತಗೊಳಿಸಿದ್ದ ಯಜಮಾನರಾದ ಶ್ರೀ ಕೃಷ್ಣ ನಾಯ್ಕ್, ಡಾ. ಗಣೇಶ್ ಯು., ಉದ್ಯಮಿ ಗೋಪಾಲ ಪೂಜಾರಿ, ಭಾಗವತ ದರ್ಶನ್ ಗೌಡ, ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ ಉಪಸ್ಥಿತರಿದ್ದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ‘ಕರ್ಣ ಭೇದನ’ ಪ್ರಸಂಗದ ತಾಳಮದ್ದಳೆ ಪ್ರಸ್ತುತಿಗೊಂಡಿತು.