ಕುಂದಾಪುರ: ಬನ್ನೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ನೀಡುವ ‘ಬನ್ನೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ’ಗೆ ನಿವೃತ್ತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ ಆಯ್ಕೆಯಾಗಿದ್ದಾರೆ.
ದಿನಾಂಕ 24 ಡಿಸೆಂಬರ್ 2024ರಂದು ಸಂಜೆ ಘಂಟೆ 6.00 ರಿಂದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆಯುವ ‘ಬಿ.ಅಪ್ಪಣ್ಣ ಹೆಗ್ಡೆ-90’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ, ಬನ್ನೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಅಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ತಿಳಿಸಿದ್ದಾರೆ. ಪ್ರಶಸ್ತಿಯು ಬೆಳ್ಳಿಫಲಕ, ಸನ್ಮಾನ ಪತ್ರ ಒಳಗೊಂಡಿದೆ.
ಡಾ. ಬಿ. ಎ. ವಿವೇಕ ರೈ ಇವರು ಕನ್ನಡದ ಹಿರಿಯ ಸಂಶೋಧಕ, ವಿಮರ್ಶಕ, ಅನುವಾದಕ, ಜಾನಪದ ವಿದ್ವಾಂಸ, ನಿವೃತ್ತ ಕನ್ನಡ ಪ್ರಾಧ್ಯಾಪಕರು ಮತ್ತು ವಿಶ್ರಾಂತ ಕುಲಪತಿಗಳು. ಇವರು ಕಳೆದ 54 ವರ್ಷಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳುವಿನ ಕುರಿತು ಹೆಚ್ಚಿನ ಕೆಲಸ ಮಾಡಿದ್ದಾರೆ. ಇವರ ತಾಯ್ನುಡಿ ತುಳು. ಇವರಿಗೆ ಚಿಕ್ಕ ವಯಸ್ಸಿಗೆ ತಮ್ಮ ತಂದೆ ಅಗ್ರಾಳ ಪುರಂದರ ರೈ ಅವರ ಮೂಲಕ ಶಿವರಾಮ ಕಾರಂತರ ಸಂಪರ್ಕ ಬೆಳೆಯಿತು. ಆ ಪ್ರಭಾವದಿಂದಾಗಿ ಇವರು ಭಾಷೆ,ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಂಶೋಧನೆಯ ಕೆಲಸಗಳನ್ನು ಮಾಡಿ, ಸಂಶೋಧನೆಯ ಯೋಜನೆಗಳನ್ನು ನಿರ್ವಹಿಸಿ ಗ್ರಂಥಗಳನ್ನು ಪ್ರಕಟಿಸಿದವರು. ಪ್ರಾದೇಶಿಕ ಅಧ್ಯಯನ ಮತ್ತು ಸಂಸ್ಕೃತಿಯ ಅಧ್ಯಯನದ ಕ್ಷೇತ್ರಗಳಲ್ಲಿನ ಇವರ ಕೆಲಸಗಳು ಅಂತಾರಾಷ್ಟ್ರೀಯ ವಿದ್ವಾಂಸರ ಗಮನವನ್ನು ಸೆಳೆದಿವೆ.