ಬೆಂಗಳೂರು: ಪುಸ್ತಕ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ‘ಕ್ರಿಯೇಟಿವ್ ಪುಸ್ತಕ ಮನೆ’ ವತಿಯಿಂದ 6 ಪುಸ್ತಕಗಳ ಲೋಕಾರ್ಪಣೆ ಹಾಗೂ ‘ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ-2024’ ಪ್ರದಾನ ಸಮಾರಂಭವು ದಿನಾಂಕ 15 ಡಿಸೆಂಬರ್ 2024ರಂದು ಬೆಂಗಳೂರಿನ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಬರಹಗಾರ ಪದ್ಮರಾಜ್ ದಂಡಾವತಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಖ್ಯಾತ ಸಾಹಿತಿಗಳಾದ ಜೋಗಿ, ಬಿ. ಆರ್. ಲಕ್ಷ್ಮಣ್ ರಾವ್ ಹಾಗೂ ಡಾ. ನಾ. ಸೋಮೇಶ್ವರ ಇವರುಗಳು ಈ ವೇದಿಕೆಯಲ್ಲಿ ಕೃತಿಕಾರರಾದ ಕೆ. ಸತ್ಯನಾರಾಯಣ್, ಡಿ. ಎಸ್. ಚೌಗಲೆ, ನರೇಂದ್ರ ರೈ ದೇರ್ಲ, ಡಾ. ಲಕ್ಷ್ಮಣ ವಿ. ಎ. ಈ ಕೃತಿಕಾರರ ಆರು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.
ಪ್ರಾಸ್ತವಿಕ ಮಾತನಾಡಿದ ಕ್ರಿಯೇಟಿವ್ ಕಾಲೇಜು ಹಾಗೂ ಪುಸ್ತಕ ಮನೆ ಸಂಸ್ಥಾಪಕರಲ್ಲಿ ಒಬ್ಬರಾದ ಅಶ್ವಥ್ ಎಸ್. ಎಲ್. “ಕರಾವಳಿಯಿಂದ ರಾಜಧಾನಿಯವರೆ ನಮ್ಮ ಪುಸ್ತಕ ಪಯಣಕ್ಕೆ ಇದು ಸಂಭ್ರಮದ ಕ್ಷಣ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಶಿಕ್ಷಣದ ಜತೆ ಜತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೌಲ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಇಪ್ಪತ್ತು ಸಾವಿರ ಕೃತಿಗಳನ್ನು ಓದುಗರ ಕೈ ತಲುಪಿಸುವ ಕೆಲಸ ಮಾಡಿದ್ದೇವೆ. ಹೊಸ ಓದುಗರನ್ನು ಸೃಷ್ಟಿ ಮಾಡಬೇಕು. ಬದುಕಿನಲ್ಲಿ ಮಕ್ಕಳು ಗೆಲ್ಲಬೇಕಾದರೆ ಪುಸ್ತಕ ಓದುವ ಹವ್ಯಾಸ ಹೆಚ್ಚಬೇಕು.” ಎಂದರು.
ಪುಸ್ತಕ ಲೋಕಾರ್ಪಣೆಗೊಳಿಸಿದ ಕನ್ನಡದ ಖ್ಯಾತ ಬರಹಗಾರ ಜೋಗಿ ಮಾತನಾಡಿ “ಅಧುನಿಕತೆಯ ವೇಗದಲ್ಲಿ ಯುವಜನತೆ ಮೊಬೈಲ್ ನಲ್ಲಿ ಮುಳುಗಿದ್ದಾರೆ. ಕ್ರಿಯೇಟಿವ್ ಕಾಲೇಜು ಶಿಕ್ಷಣದ ಜತೆಗೆ ಬದುಕು ಕಟ್ಟುವ ಶಿಕ್ಷಣ ನೀಡಿ ಜೀವನದಲ್ಲಿ ಸಾಧನೆ ಮಾಡಲು ಅವಕಾಶ ಮಾಡಿಕೊಟ್ಟಿದೆ, ಪುಸ್ತಕ ಮನೆಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಕಾಣಿಕೆ ನೀಡುತ್ತಿದೆ.” ಎಂದರು.
ಖ್ಯಾತ ಲೇಖಕ ಪದ್ಮರಾಜ್ ದಂಡಾವತಿ ಮಾತನಾಡಿ “ನಾನು ಈ ವರ್ಷ ಬರೆದ ಪುಸ್ತಕಕ್ಕೆ ಪ್ರಶಸ್ತಿ ಬಂದಿದೆ. ಮೊಬೈಲ್ ಬಳಕೆ ಅತಿಯಾದ ಕಾರಣದಿಂದ ಯುವ ಜನತೆ ಹಾಳಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಯುವ ಜನತೆಯ ಯೋಚನೆ ಬದಲಿಸಲು ‘ಕ್ರಿಯೇಟಿವ್ ಪುಸ್ತಕ ಮನೆ’ ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡಿದೆ.” ಎಂದರು.
ಖ್ಯಾತ ವಿಮರ್ಶಕ ಹಾಗೂ ಸಾಹಿತಿಗಳಾದ ರಾಜಶೇಖರ್ ಹಳೆಮನೆ 6 ಕೃತಿಗಳ ಪರಿಚಯ ಮಾಡಿಕೊಡುವುದರ ಜತೆಗೆ ಕೃತಿಕಾರರ ಬಗ್ಗೆ ಮಾತುಗಳನ್ನಾಡಿ ಎಲ್ಲಾ ಕೃತಿಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ವೈದ್ಯ ಹಾಗೂ ಸಾಹಿತಿಗಳಾದ ಡಾ. ನಾ. ಸೋಮೇಶ್ವರ ಮಾತನಾಡಿ “ಕನ್ನಡದ ಹಿರಿಯ ಹಾಗೂ ಕಿರಿಯ ಬರಹಗಾರರ ಪುಸ್ತಕ ಪ್ರಕಟ ಮಾಡುವ ಜತೆಗೆ ಪುಸ್ತಕ ಮನೆ ನಾಡಿಗೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಯಾವ ಕ್ಷೇತ್ರದಲ್ಲಿ ಪುಸ್ತಕಗಳು ಹೊರ ಬಂದಿಲ್ಲ, ಆ ವಿಷಯದ ಪುಸ್ತಕ ತರಲು ಪ್ರಯತ್ನ ಮಾಡಬೇಕು. ಪ್ರತಿ ಜಿಲ್ಲೆ, ಪ್ರತಿ ತಾಲೂಕಿಗೆ ಪುಸ್ತಕ ಮನೆ ಪಯಣ ಸಾಗಬೇಕು. ಕನ್ನಡ ಪುಸ್ತಕ, ಸಾಹಿತ್ಯ, ನಾಡು ನುಡಿಗೆ ಕೊಡುಗೆ ನೀಡುತ್ತಿರುವ ‘ಕ್ರಿಯೇಟಿವ್ ಪುಸ್ತಕ ಮನೆ’ಗೆ ಅಭಿನಂದನೆಗಳು.” ಎಂದರು.
ಸಾಹಿತಿ ಬಿ. ಆರ್. ಲಕ್ಷಣರಾವ್ ಮಾತನಾಡಿ ಕ್ರಿಯೇಟಿವ್ ಕಾಲೇಜಿನ ಕಾರ್ಕಳ ಹಾಗೂ ಹಾಸನ ವಿದ್ಯಾರ್ಥಿಗಳ ಶಿಸ್ತು ನೋಡಿ ಸಂತಸವಾಗಿತ್ತು. ಅಲ್ಲಿನ ಯುವ ತಂಡ ಇಡೀ ರಾಜ್ಯಕ್ಕೇ ಮಾದರಿಯಾಗಿದೆ.” ಎಂದರು.
ಉಡುಪಿ ಕ್ರಿಯೇಟಿವ್ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆ ಕವನ ವಾಚನದ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಖ್ಯಾತ ಕಾದಂಬರಿಕಾರ ಅನು ಬೆಳ್ಳೆ ಅವರು ಸ್ವಾಗತಿಸಿ, ಲೋಹಿತ್ ಎಸ್. ಕೆ. ನಿರೂಪಿಸಿದರು. ಕೃತಿಕಾರರಾದ ಕೆ. ಸತ್ಯನಾರಾಯಣ್, ಡಿ. ಎಸ್. ಚೌಗಲೆ, ನರೇಂದ್ರ ರೈ ದೇರ್ಲ, ಡಾ. ಲಕ್ಷ್ಮಣ ವಿ. ಎ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ‘ಅಂಪೈರ್ ಮೇಡಂ’ (ಕಾದಂಬರಿ), ‘ವಾರಸಾ’ (ಕಥಾ ಸಂಕಲನ), ‘ಹಸಿರು ಅಧ್ಯಾತ್ಮ’ (ಲೇಖನಗಳು), ‘ದೇಹಿ’(ಕಾದಂಬರಿ), ‘ಕಾವ್ಯ ಸಂಭವ’ (ಕವಿಯ ಟಿಪ್ಪಣಿ ಪುಸ್ತಕ) ಹಾಗೂ ‘ಪಿ. ಎಚ್. ಸಿ. ಕವಲುಗುಡ್ಡ’ (ಕಾದಂಬರಿ) ಕೃತಿಗಳು ಲೋಕಾರ್ಪಣೆಗೊಂಡವು.