ಬೆಳ್ತಂಗಡಿ : ಮಂಗಳೂರು ಯಕ್ಷಧ್ರುವ ಪಟ್ಟ ಫೌಂಡೇಶನ್ ಇದರ ಬೆಳ್ತಂಗಡಿ ಘಟಕದಿಂದ ಯಕ್ಷಸಂಭ್ರಮ-2024 ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಡಿಸೆಂಬರ್ 2024ರಂದು ಗುರುವಾಯನಕೆರೆ ನವಶಕ್ತಿ – ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ “ಯಕ್ಷಗಾನಕ್ಕೆ ಹೊಸ ಕಲ್ಪನೆ ಕೊಟ್ಟವರು ಪಟ್ಲ ಸತೀಶ್ ಶೆಟ್ಟಿಯಾದರೆ ಅದಕ್ಕೆ ಶಶಿಯಾಗಿ ಬೆಳಕು ಕೊಟ್ಟವರು ಶಶಿಧರ್ ಶೆಟ್ಟಿ. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಮನಸ್ಸು ಕರಾವಳಿಯಲ್ಲಿದೆ. ಯಕ್ಷಗಾನವನ್ನು ಈ ರೀತಿಯೂ ನಡೆಸಬಹುದು ಎಂಬ ಕಲ್ಪನೆ ಬೆಳ್ತಂಗಡಿಗೆ ನೀಡುವ ಮೂಲಕ ಬೆಳ್ತಂಗಡಿಯ ಜನತೆ ಹಿಂದೆಂದೂ ಕಂಡರಿಯದಂತಹ ಯಕ್ಷಲೋಕಕ್ಕೆ ಕರೆದೊಯ್ದಿದ್ದಾರೆ. ಯಕ್ಷಗಾನ ಕಲೆಯ ಮೂಲಕ ಎಲ್ಲ ಜಾತಿ, ಧರ್ಮವನ್ನು ಒಗ್ಗೂಡಿಸುವ ಕೆಲಸವಾಗಿದೆ.” ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ “25 ವರ್ಷದ ವೃತ್ತಿ ಜೀವನದ ಇತಿಹಾಸದಲ್ಲಿ ಯಕ್ಷಗಾನಕ್ಕಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಸಂಯೋಜಿಸಿರುವುದು ಇದೇ ಪ್ರಥಮ. ಕರ್ನಾಟಕದಾದ್ಯಂತ ನಮ್ಮ ಫೌಂಡೇಶನ್ ನಿಂದ 9 ಸಾವಿರ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಯಲ್ಲಿ ನಿರತರಾಗಿದ್ದಾರೆ.” ಎಂದರು.
ನಟ ರಾಜ್ ಬಿ. ಶೆಟ್ಟಿ ಮಾತನಾಡಿ “ಕರಾವಳಿಯಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರ ಉಳಿಸಿ ಬೆಳೆಸುವ ಮನಸ್ಸುಗಳು ನಮಗೆ ಬೇಕು. ಅದು ಕರಾವಳಿಯಲ್ಲಿ ಜೀವಂತವಾಗಿದೆ ಎಂಬುದಕ್ಕೆ ಯಕ್ಷಸಂಭ್ರಮ ಸಾಕ್ಷಿ.” ಎಂದರು.
ನಟಿ ಸಂಯುಕ್ತ ಹೊರನಾಡು, ಅಮೆರಿಕ ಉದ್ಯಮಿ ಮಂಜುನಾಥ್ ಶೆಟ್ಟಿ, ಪಟ್ಲ ದೆಹಲಿ ಘಟಕ ಅಧ್ಯಕ್ಷ ವಸಂತ್ ಶೆಟ್ಟಿ ಬೆಳ್ಳಾರೆ, ಕೇಂದ್ರ ಸಮಿತಿಯ ಪುರುಷೋತ್ತಮ ಅಡ್ಯಾರ್, ಕೇಂದ್ರ ಸಮಿತಿ ಕೋಶಾಧಿಕಾರಿ ಸುದೇಶ್, ರವಿಚಂದ್ರ ಶೆಟ್ಟಿ, ಪಟ್ಲ ಮಹಾಬಲ ರೈ, ಮುನಿಯಾಲು ಉದಯ ಕುಮಾರ ಶೆಟ್ಟಿ, ಘಟಕದ ಕಾರ್ಯದರ್ಶಿ ಶಿತಿಕಂಠ ಭಟ್, ಕೋಶಾಕಾರಿ ಆದರ್ಶ್ ಜೈನ್, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ.” ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಘಟಕ ಗೌರವಾಧ್ಯಕ್ಷ ಹಾಗೂ ಬರೋಡಾದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ “ಓರ್ವ ಕಲಾವಿದನೇ ಇನ್ನೋರ್ವ ಕಲಾವಿದನ ಪರಿಸ್ಥಿತಿಯನ್ನು ತಿಳಿಯಲು ಸಾಧ್ಯ. ಪಟ್ಲ ಘಟಕವು 10 ವರ್ಷ ಪೂರೈಸುವ ಸಂದರ್ಭದಲ್ಲಿ ಕಲಾವಿದರ ನೆರವಿಗಾಗಿ 10 ಕೋ.ರೂ. ಸಂಗ್ರಹಿಸುವ ಗುರಿ ಹೊಂದಿದೆ.” ಎಂದರು.
ಇದೇ ಸಂದರ್ಭದಲ್ಲಿ ಯಕ್ಷಗಾನದಲ್ಲಿ 25 ವರ್ಷ ಪೂರೈಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಇವರನ್ನು ಬೆಳ್ತಂಗಡಿ ಘಟಕದಿಂದ ಸಮ್ಮಾನಿಸಲಾಯಿತು.
ಬೆಳ್ತಂಗಡಿ ಘಟಕ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಸ್ವಾಗತಿಸಿ, ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿ, ರವೀಂದ್ರ ಶೆಟ್ಟಿ ಬಳಂಜ ವಂದಿಸಿದರು.