ಹುಬ್ಬಳ್ಳಿ : ಅವ್ವ ಸೇವಾ ಟ್ರಸ್ಟ್ ಆಯೋಜಿಸಿದ್ದ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯಸ್ಮರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 12 ಸಾಧಕರಿಗೆ ‘ಅವ್ವ’ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 15 ಡಿಸೆಂಬರ್ 2024 ರಂದು ಹುಬ್ಬಳ್ಳಿಯ ‘ಗುಜರಾತ್ ಭವನ’ದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಮಾತನಾಡಿ “ನಾಡಿನ ಮುತ್ಸದ್ದಿ ನಾಯಕರು ಹಾಗೂ ವಿಧಾನ ಪರಿಷತ್ ಇದರ ಸಭಾಪತಿಯಾದ ಬಸವರಾಜ ಹೊರಟ್ಟಿಯವರು ಅವರ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಹೆಸರಲ್ಲಿ ಸಾಧಕರಿಗೆ ಕೊಡಮಾಡುವ ‘ಅವ್ವ ಪ್ರಶಸ್ತಿ’ಯು ರಾಜ್ಯಕ್ಕೆ ಮಾದರಿಯಾದುದು. ಜನರ ಶ್ರೇಯೋಭಿವೃದ್ಧಿಗೆ ಜನಸೇವಕನಾಗಿ ಶ್ರಮಿಸುತ್ತಿರುವ ಬಸವರಾಜ ಹೊರಟ್ಟಿ ಅವರಂತಹ ಪುತ್ರನಿಗೆ ಜನ್ಮ ನೀಡಿದ ತಾಯಿ ಗುರವ್ವ ಅವರು ಮಗನಿಗೆ ಅತ್ಯುತ್ತಮ ಸಂಸ್ಕಾರ ನೀಡಿರುವುದು ಹೊರಟ್ಟಿಯವರ ಭವಿಷ್ಯ ರೂಪಿಸುವಲ್ಲಿ ಆಗಿನ ಕಾಲದಲ್ಲಿ ಅವರು ಪಟ್ಟಿರುವ ಶ್ರಮ ಎದ್ದು ಕಾಣುತ್ತದೆ. ಆ ಮಹಾ ತಾಯಿಯನ್ನು ಸ್ಮರಿಸೋಣ.” ಎಂದು ನುಡಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೇಂದ್ರ ಆಹಾರ ಸಚಿವ ಪ್ರಲ್ಲಾದ ಜೋಶಿ “ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಬಸವರಾಜ ಹೊರಟ್ಟಿ ಅವರಿಗೆ ತಾಯಿ ಗುರವ್ವ ನೇ ತಂದೆ ಮತ್ತು ತಾಯಿಯ ಸ್ಥಾನ ತುಂಬಿ ಪರಿಶ್ರಮಪಟ್ಟು ಓದಿಸಿ ಬೆಳೆಸಿದ್ದೇ ಹೊರಟ್ಟಿಯವರ ಮಹೋನ್ನತ ವ್ಯಕ್ತಿತ್ವ ರೂಪಗೊಳ್ಳಲು ಸಾಧ್ಯವಾಗಿದೆ. ಅವರ ಆಶೀರ್ವಾದದಿಂದಲೇ ಹೊರಟ್ಟಿಯವರು ವಿಧಾನ ಪರಿಷತ್‌ನಲ್ಲಿ 45 ವರ್ಷದಿಂದ ಇದ್ದಾರೆ. ಆಗಿನ ಕಾಲದಲ್ಲಿ ಅವರು ಪಟ್ಟಿರುವ ಶ್ರಮ ಎದ್ದು ಕಾಣುತ್ತದೆ. ಆ ಮಹಾ ತಾಯಿಯನ್ನು ಸ್ಮರಿಸೋಣ.” ಎಂದು ನುಡಿದರು.
ಅವ್ವ ಸೇವಾ ಟ್ರಸ್ಟ್ ಇದರ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇವರು ತಾಯಿ ಹೆಸರಿನಲ್ಲಿ ಅವ್ವ ಟ್ರಸ್ಟ್ ಮೂಲಕ ಕಳೆದ ಹದಿನಾಲ್ಕು ವರ್ಷದಿಂದ ಮಾಡಿಕೊಂಡ ಸಮಾಜಮುಖಿ ಕಾರ್ಯಗಳ ಈ ಬಗ್ಗೆ ವಿವರಿಸಿದರು.
ಇಳಕಲ್ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಅವ್ವ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಪ್ರಾಸ್ತಾವಿಕ ಮಾತನಾಡಿದರು.
2024 ನೇ ಸಾಲಿನ ಪ್ರಶಸ್ತಿಯನ್ನು ಸಮಾಜ ಸೇವೆಗಾಗಿ ಎಸ್.ಆರ್ ಪಾಟೀಲ ಹಾಗೂ ಮಹೇಂದ್ರಕುಮಾರ ಸಿಂಘಿ, ಚಂದ್ರಕಾಂತ ವಡ್ಡು, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಸಂಗಮನಾಥ ಲೋಕಾಪುರ, ಸಂಗೀತ ಕ್ಷೇತ್ರದಲ್ಲಿ ಛೋಟೆ ರಹಮತ್ ಖಾನ್ ಹಾಗೂ ರೇಖಾ ಹೆಗಡೆ, ಯಕ್ಷಗಾನ ಕ್ಷೇತ್ರದಿಂದ ಕೇಶವ ಹೆಗಡೆ ಕೊಳಗಿ ಸಿದ್ದಾಪುರ, ಬಸವಣ್ಣನವರ ತತ್ವಾದರ್ಶ ದಿಂದ ಎಸ್. ಮಹದೇವಯ್ಯ, ಕೃಷಿ ತಜ್ಞೆಯಾದ ರಾಜೇಶ್ವರಿ ವಿ ಪಾಟೀಲ, ಜಾನಪದ ಕ್ಷೇತ್ರದಿಂದ ಬಸವರಾಜ ಶಿಗ್ಗಾವಿ, ಕ್ರೀಡಾಪಟುವಾದ ತ್ರಿಶಾ ಪ್ರವೀಣ ಜಡಲಾ ಹಾಗೂ ಹಳ್ಳಿ ಪ್ರತಿಭೆಯಾದ ‘ಅಂಕಿತಾ ಬಸಪ್ಪ ಕೊಣ್ಣೂರ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.