ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿನಾಂಕ 21 ಡಿಸೆಂಬರ್ 2024ರಂದು ಮಧ್ಯಾಹ್ನ 1-00 ಗಂಟೆಗೆ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮುರಳಿ ಶೃಂಗೇರಿ ರಚಿಸಿ, ಸಂಗೀತ ನೀಡಿರುವ ರಮೇಶ ಬೆಣಕಲ್ ಇವರ ನಿರ್ದೇಶನದಲ್ಲಿ ಶ್ರೀರಂಗಪಟ್ಟಣದ ಗಮ್ಯ (ರಿ.) ಇವರು ಪ್ರಸ್ತುತ ಪಡಿಸುವ ‘ಪರಿಣಯ ಪ್ರಸಂಗ’ ನಾಟಕ ಪ್ರದರ್ಶನಗೊಳ್ಳಲಿದೆ.
ತಂಡದ ಬಗ್ಗೆ :
ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕ ಹಲವು ಕುರುಹುಗಳ ಬಾಹುಳ್ಯದಿಂದಾಗಿ ಶ್ರೀರಂಗಪಟ್ಟಣ ಎಂದಿಗೂ ಗಮನೀಯವೇ ಆಗಿದೆ. ಮಂಡ್ಯ ಜಿಲ್ಲೆಯ ಕಲಾಪರಂಪರೆಗೆ ಇಲ್ಲಿನ ಮಣ್ಣಿನ ಕೊಡುಗೆಯೂ ಅಪಾರವೇ ಸರಿ. ಹೀಗಿದ್ದೂ ಹೊಸತನಕ್ಕೆ ತೆರೆದುಕೊಳ್ಳುವ, ರೂಢಿಸಿಕೊಳ್ಳುವ ತುರ್ತು ಇದ್ದೇ ಇತ್ತು ಎನ್ನುವುದೂ ಅಷ್ಟೇ ಸಮೀಚೀನ. ಹಾಗೇ ಚಿಂತನಾಶೀಲರಾದವರ ಮನದಲ್ಲಿ ಗುರಿಯೊಂದನ್ನು ಇರಿಸಿಕೊಂಡು ಮುನ್ನಡೆಯುವ ಮಾರ್ಗವನ್ನು ಹುಡುಕುತ್ತಿದ್ದಾಗ ಹೊಳೆದದ್ದೇ ‘ಗಮ್ಯ’. ಗ್ರಾಮೀಣ ಭಾಗದ ಆಸಕ್ತರಿಂದ ಮೊದಲ್ಗೊಂಡು, ಪಟ್ಟಣವಾಸಿಗಳನ್ನೂ ಒಳಗೊಂಡು ಒಂದು ಶಿಷ್ಟ ತಂಡವಾಗಿ ರೂಪುಗೊಳ್ಳುತ್ತಾ ರಂಗಾಭ್ಯಾಸದ ಹಿನ್ನೆಲೆಯೊಂದಿಗೆ ಒಂದಿಷ್ಟು ಕಲಾಕೈಂಕರ್ಯವನ್ನು ಕೈಗೆತ್ತಿಕೊಳ್ಳುವ ಹುಮ್ಮಸ್ಸಿನಲ್ಲಿ ‘ಗಮ್ಯ’ ರೂಪುಗೊಳ್ಳುತ್ತಿದೆ. ನಿರಂತರ ಕಲಿಕೆಯ ಸೊಗಡಿನೊಂದಿಗೆ ಕಲಿತಿದ್ದನ್ನು ಪ್ರದರ್ಶಿಸುವ ಉತ್ಸಾಹ ನಮ್ಮಲ್ಲಿದೆ. ಪೋಷಿಸುವ, ಮುನ್ನಡೆವ ಮಾರ್ಗಕ್ಕೆ ದೀವಟಿಗೆಯಾಗುವ ನಿಮ್ಮೆಲ್ಲರ ಸಹಭಾಗಿತ್ವ ಅತ್ಯಂತ ಮಹತ್ವದ್ದಾದುದೆಂದು ಬೇರೆ ಹೇಳಬೇಕಿಲ್ಲ. ನೀವು ನಮ್ಮೊಟ್ಟಿಗೆ ಇದ್ದರೆ, ಯಾವ ಪರಿಧಿಯೂ ನಮಗೆ ಸಮನಿಲ್ಲ ಎಂದು ಮುನ್ನುಗ್ಗಲಿದ್ದೇವೆ.
ತಂಡದ ಇತರ ನಾಟಕಗಳ ಪಟ್ಟಿ : ‘ದೂತವಾಕ್ಯ’ : ನಿರ್ದೇಶನ ರಮೇಶ ಬೆಣಕಲ್, ‘ಮಾರನಾಯಕ’ ಮತ್ತು ‘ಡಾ. ಸಿದ್ರಾಜು’ : ನಿರ್ದೇಶನ ನಾರಾಯಣಸ್ವಾಮಿ ಸಿ., ‘ಒಂದು ಸೈನಿಕ ವೃತ್ತಾಂತ’, ‘ಊರುಭಂಗ’ ಮತ್ತು ‘ಸಾಫಲ್ಯ’ : ನಿರ್ದೇಶನ ಆದಿತ್ಯ ಭಾರದ್ವಾಜ್ ಎನ್.,
ನಾಟಕ : ಪರಿಣಯ ಪ್ರಸಂಗ
ಈ ಪ್ರಹಸನವು ವಸುಭಾಗ ಭಟ್ಟನ ಪಂಚತಂತ್ರದ ಉಪಕಥೆಗಳಲ್ಲೊಂದನ್ನು ಆಧರಿಸಿದ್ದಾಗಿದೆ. ಮಾನವ ಲೋಕದ ವ್ಯವಹಾರಗಳು ಎಂತೆಂತಹ ಸಂದಿಗ್ಧಗಳನ್ನು ತಂದೊಡ್ಡುತ್ತವೆ ಎಂಬುದೇ ಈ ಕಥನ ವಸ್ತುವಾಗಿದೆ. ರಾಜಕುಮಾರಿಯನ್ನು ಮದುವೆಯಾಗಬಯಸುವ ನೇಕಾರನೊಬ್ಬ ಗೆಳೆಯ ಬಡಗಿಯ ಸಹಾಯದಿಂದ ಸಫಲನಾದರೂ, ಸಮರಭೀತಿಗೆ ಸಿಲುಕುವ ಹಂತಕ್ಕೆ ತಲುಪುತ್ತಾನೆ. ಈ ವಿದ್ಯಮಾನದಿಂದ ಕಂಗೆಟ್ಟ ದೇವತೆಗಳು ಪರಿಹಾರ ಕಾರ್ಯಕ್ಕೆ ಇಳಿಯಲೇಬೇಕಾಗುತ್ತದೆ. ಮನುಕುಲದ ಮತಿಗೇಡಿ ಕೃತ್ಯಗಳಿಂದ ಎಂತೆಂತಹ ಅವಘಡಗಳಿಗೆ ಈಡಾಗಬೇಕಾಗುತ್ತದೆ ಎಂಬುದನ್ನು ವಿಡಂಬನಾತ್ಮಕವಾಗಿ ಈ ಪ್ರಹಸನ ಪ್ರೇಕ್ಷಕರ ಮುಂದಿಡುತ್ತದೆ. ಸಮಕಾಲೀನ ವಸ್ತು ವಿಷಯಗಳು ಪ್ರಯೋಗದುದ್ದಕ್ಕೂ ಮಿಂಚಿಹೋಗುವುದಾದರೂ, ಮುಕ್ತ ನಗೆಗೆ ಯಾವುದೇ ಅಡ್ಡಿಯಿಲ್ಲ.