ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಕಾರ್ಯ ಚಟುವಟಿಕೆಗಳಲ್ಲಿ ಪುಸ್ತಕ ಪ್ರಕಟಣೆ ಬಹಳ ಮುಖ್ಯವಾದದ್ದು. ಇದುವರೆಗೂ 1,800ಕ್ಕೂ ಹೆಚ್ಚು ಪುಸ್ತಕಗಳನ್ನು ಪರಿಷತ್ತು ಪ್ರಕಟಿಸಿದ್ದು, ಅದು ಒಂದು ರೀತಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು. ಪರಿಷತ್ತು ಪ್ರಕಟಿಸುವ ಪುಸ್ತಕಗಳು ಎಂದರೆ ಹೂರಣ ಮತ್ತು ಮುದ್ರಣಗಳೆರಡರೆಲ್ಲಿಯೂ ಶ್ರೇಷ್ಠ ಗುಣಮಟ್ಟವನ್ನು ಹೊಂದಿರುತ್ತದೆ.
ಪುಸ್ತಕಗಳ ಬಗ್ಗೆ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ “ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಲ್ಲಿ ಬಹಳ ವಿಶೇಷವಾದದ್ದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಗುವ ಪ್ರಕಟಣೆಗಳು. ಎಷ್ಟನೆಯ ಸಮ್ಮೇಳನ ನಡೆಯತ್ತದೆಯೋ ಅಷ್ಟು ಪುಸ್ತಕಗಳನ್ನು ಪ್ರಕಟಿಸುವ ಉನ್ನತ ಪರಂಪರೆಯೊಂದು ಪರಿಷತ್ತಿನಲ್ಲಿತ್ತು. ಕಾರಣಾಂತರಗಳಿಂದ ಅದು ನಿರಂತರವಾಗಿರಲಿಲ್ಲ. ನನ್ನ ಅವಧಿಯಲ್ಲಿ ಅದನ್ನು ಮುಂದುವರೆಸಲು ಸಂಕಲ್ಪಿಸಿದ್ದೇನೆ. ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 86 ಪುಸ್ತಕಗಳು ಪ್ರಕಟವಾಗಿ ನಾಡಿನ ಸಾಹಿತ್ಯಾಸಕ್ತರ ಮೆಚ್ಚುಗೆಯನ್ನು ಪಡೆದಿದ್ದವು. ಪ್ರಸ್ತುತ ಮಂಡ್ಯದಲ್ಲಿ ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 87 ಪುಸ್ತಕಗಳು ಪ್ರಕಟವಾಗುತ್ತಿವೆ. ಸಂಖ್ಯೆಗೆ ಮಾತ್ರವಲ್ಲದೆ ಗುಣಮಟ್ಟಕ್ಕೂ ಕೂಡ ಮಹತ್ವವನ್ನು ನೀಡುತ್ತಿದ್ದು, ಪ್ರಾದೇಶಿಕ, ಸಾಮಾಜಿಕ, ಪ್ರತಿಭಾ ನ್ಯಾಯಗಳನ್ನೂ ಗಮನದಲ್ಲಿರಿಸಿ ಕೊಳ್ಳಲಾಗಿದೆ.” ಎಂದು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಯ 29ರ ಅನ್ವಯ ‘ಪ್ರಕಟಣಾ ಸಮಿತಿ’ ಇದ್ದು, ಅಲ್ಲಿ ನಾಡೋಜ ಡಾ.ಮಹೇಶ ಜೋಶಿ ಇವರ ಅಧ್ಯಕ್ಷತೆಯಲ್ಲಿ ನಾಡಿನ ಪರಿಣಿತರು ಇರುತ್ತಾರೆ. ಅವರೆಲ್ಲರೂ ಅನೇಕ ಸಭೆಗಳನ್ನು ನಡೆಸಿ ಮೌಲಿಕವಾದ, ಬೇಡಿಕೆ ಇರುವ, ಇಂದಿನ ಸಮಾಜಕ್ಕೆ ಅಗತ್ಯವಾದ ಪುಸ್ತಕಗಳನ್ನು ಆಯ್ಕೆ ಮಾಡುತ್ತಾರೆ. ಇದರೊಂದಿಗೆ ಡಾ. ಎಚ್. ಎಸ್. ಮುದ್ದೇಗೌಡರ ಅಧ್ಯಕ್ಷತೆಯಲ್ಲಿ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಪ್ರಕಟಣಾ ಸಮಿತಿಯನ್ನು ರೂಪಿಸಿದ್ದು ಈ ಸಮಿತಿಯು 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಅಯೋಜಿತವಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯಜಿಲ್ಲೆಗೆ ಸಂಬಂಧಿಸಿದ ಪುಸ್ತಕಗಳನ್ನು ಆಯ್ಕೆ ಮಾಡಿತು. ಎರಡೂ ಸಮಿತಿಗಳು ನಿರಂತರವಾಗಿ ಸಾಕಷ್ಟು ಸಭೆಗಳನ್ನು ನಡೆಸಿವೆ.
87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಟವಾಗುವ 87 ಕೃತಿಗಳ ವೈಶಿಷ್ಟ್ಯತೆ ಈ ಕೆಳಗಿನಂತಿದೆ.
01 ಕನ್ನಡ ಸಾಹಿತ್ಯದ ಮಹತ್ವದ ಕೃತಿಗಳಲ್ಲೊಂದಾದ ತೊರವೆ ನರಹರಿಯ ‘ತೊರವೆ ರಾಮಾಯಣ’ದ ಎರಡು ಸಂಪುಟಗಳು ಬಿಡುಗಡೆಯಾಗಲಿವೆ. ಕೆ. ಎಸ್. ಕೃಷ್ಣಮೂರ್ತಿಯವರ ಗದ್ಯಾನುವಾದದ ಜೊತೆಗೆ ಪ್ರಕಟವಾಗುತ್ತಿರುವ ಕೃತಿ ಕನ್ನಡಿರೆಲ್ಲರ ಬಹುಬೇಡಿಕೆಯ ಕೃತಿಯಾಗಿತ್ತು.
2 ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರಸ್ತಂಭಗಳಾದ ನ್ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಜೀವನ ಮತ್ತು ಸಾಧನೆಯನ್ನು ವಿವರಿಸುವ ಕೃತಿಗಳು ಪ್ರಕಟವಾಗುತ್ತಿವೆ. ಇದರ ವಿಶೇಷವೆಂದರೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚರಿತ್ರೆಯನ್ನು ಎಲ್. ಸ್ವಾಮಿರಾವ್ ಬರೆದಿದ್ದರೆ, ಸರ್. ಎಂ. ವಿಶ್ವೇಶ್ವರಯ್ಯನವರ ಚರಿತ್ರೆಯನ್ನು ಅವರ ಮಗ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರು ಬರೆದಿದ್ದಾರೆ. ವಿ. ಎಸ್. ನಾರಾಯಣರಾಯರು ಮಿರ್ಜಾ ಇಸ್ಮಾಯಿಲ್ ಅವರ ಕುರಿತ ಕೃತಿಯನ್ನು ಬರೆದಿದ್ದಾರೆ.
3. ಶ್ರೀ ಬಸವಲಿಂಗ ಪಟ್ಟದ್ದೇವರು ಇವರ ‘ಬಸವಣ್ಣ ಮತ್ತು ಅಷ್ಟಾವರಣ’ ಹಾಗೂ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ‘ವಚನ ವೈಭವ’ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರ್ಕಾರ ಘೋಷಿಸಿದ ಸಂದರ್ಭದಲ್ಲಿ ವಿಶಿಷ್ಟವಾಗಿ ಪ್ರಕಟವಾಗುತ್ತಿವೆ.4. ಮಂಡ್ಯ ನೆಲದ ಸಾಧಕರಾದ ಆಚಾರ್ಯ ರಾಮಾನುಜರ ಕುರಿತ ಬೋರಾಪುರದ ಜೈರಾಂ ಅವರು ಬರೆದ ಕೃತಿ, ತ್ರಿವೇಣಿಯವರ ಕುರಿತು ಎನ್. ವಿ. ವಿಮಲ ಅವರು ಬರೆದ ಕೃತಿ, ಬಿ. ಎಂ. ಶ್ರೀಕಂಠಯ್ಯ ಇವರ ಕುರಿತು ಪ್ರೊ. ಎ. ಎನ್.ಮೂರ್ತಿರಾವ್ ಅವರು ಬರೆದ ಕೃತಿ, ಪು.ತಿ.ನ ಅವರ ಕುರಿತು ಡಾ.ಕಮಲಾ ನರಸಿಂಹ ಅವರು ರಚಿಸಿದ ಅಧಿಕೃತ ಕೃತಿಗಳು ಈ ಸಂದರ್ಭದಲ್ಲಿ ಪ್ರಕಟವಾಗುತ್ತಿವೆ.
5. ಮಂಡ್ಯ ಜಿಲ್ಲೆಯ ಹೆಮ್ಮೆ ಪ್ರೊ.ಜಿ .ವೆಂಕಟಸುಬ್ಬಯ್ಯನವರ ‘ನಿಘಂಟು ಚಿಂತನೆ’ಗಳ ಕುರಿತು ಅವರ ಮಗ ಜಿ.ವಿ.ಅರುಣ ಮತ್ತು ಡಾ.ಎಸ್.ಎಲ್.ಶ್ರೀನಿವಾಸ ಮೂರ್ತಿಯವರು ರಚಿಸಿರುವ ವಿಶಿಷ್ಟ ಕೃತಿ ಪ್ರಕಟವಾಗುತ್ತಿದೆ.
6. ಮಂಡ್ಯ ಜಿಲ್ಲೆಯ ಹೆಮ್ಮೆ ಕೆ. ಎಸ್.ನರಸಿಂಹ ಸ್ವಾಮಿಯವರ ಅಜರಾಮರ ಕೃತಿ ‘ಮೈಸೂರು ಮಲ್ಲಿಗೆ’ ಸಮ್ಮೆಳನದ ಸಂದರ್ಭದಲ್ಲಿ ಪ್ರಕಟವಾಗುತ್ತಿದೆ.
7. ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಮೆರಗನ್ನು ನೀಡಿದ ಪು. ತಿ. ನ ಅವರ ಅಪ್ರಕಟಿತ ಕವಿತೆಗಳ ಸಂಕಲನ ‘ಹಳೆ ಬೇರು ಹೊಸ ಚಿಗುರು’ ವಿಶಿಷ್ಟ ಕೃತಿಯಾಗಿ ಪ್ರಕಟವಾಗುತ್ತಿದೆ.
8. ಮಂಡ್ಯ ಜಿಲ್ಲೆಯ ಹೆಮ್ಮೆಯ ಕಥೆಗಾರರಾದ ಕೆ. ಸತ್ಯ ನಾರಾಯಣ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ಮಂಡ್ಯದ ಸೀಮೆಯ ತವಕ-ತಲ್ಲಣಗಳನ್ನು ಹೇಳುವ ಕಥಾ ಸಂಕಲನಗಳು ಪ್ರಕಟವಾಗುತ್ತಿವೆ.
9. ಮಂಡ್ಯ ಜಿಲ್ಲೆಯವರಾದ ಖ್ಯಾತ ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡರ ಚಿಂತನ ಬರಹಗಳ ಸಂಕಲನ ‘ದಾರಿದೀಪ’ ಈ ಸಂದರ್ಭದಲ್ಲಿ ಪ್ರಕಟವಾಗುತ್ತಿದೆ.
10. ಮಂಡ್ಯದ ಹಿರಿಮೆಯನ್ನು ಕನ್ನಡ ಕಥಾಲೋಕದಲ್ಲಿ ಮೂಡಿಸಿರುವ ಬೆಸಗರಳ್ಳಿ ರಾಮಣ್ಣನವರ ಆಯ್ದ ಮಂಡ್ಯದ ಸೊಗಡಿನ ಕಥೆಗಳ ಸಂಕಲನ ಪ್ರಕಟವಾಗುತ್ತಿದೆ.
11. ಮಂಡ್ಯದ ಹೆಮ್ಮೆ ಖ್ಯಾತ ಗೀತರಚನೆಕಾರ ವಿಜಯನಾರಸಿಂಹ ಮತ್ತು ಅವರ ಮಡದಿ ಸರಸ್ವತಿ ನಾರಸಿಂಹ ರಚಿಸಿದ ‘ಕಾಡು ಮಲ್ಲಿಗೆ ಮತ್ತು ಇತರ ಕತೆಗಳು’ ಕಥಾ ಸಂಕಲನಗಳು ಕೂಡ ಇದೇ ಸಂದರ್ಭದಲ್ಲಿ ಪ್ರಕಟವಾಗುತ್ತಿವೆ.
12. ಮಂಡ್ಯದ ಏಳು ತಾಲೂಕುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ತಾಲೂಕು ದರ್ಶನಗಳು, ಮಂಡ್ಯ ಜಿಲ್ಲೆಯ ಪ್ರಮುಖ ಸಾಧಕರ ಪರಿಚಯಗಳು ಈ ಸಂದರ್ಭದಲ್ಲಿ ಸಂಗ್ರಾಹ್ಯ ಕೃತಿಗಳಾಗಿ ಪ್ರಕಟವಾಗುತ್ತಿವೆ.
13. ಮಂಡ್ಯ ಜಿಲ್ಲೆಯ ಶಾಸನಗಳು, ಜಲಮೂಲಗಳು, ಜನಪದ ಮಹಾಮಹಿಮರು, ಭಾಷೆಯ ವೈಶಿಷ್ಟ್ಯತೆ, ಜಾತ್ರೆಗಳು ಹೀಗೆ ಅನೇಕ ಮಗ್ಗುಲುಗಳನ್ನು ಪರಿಚಯ ಮಾಡಿ ಕೊಡುವ ಅಧ್ಯಯನಪೂರ್ಣ ಕೃತಿಗಳು ಈ ಸಂದರ್ಭದಲ್ಲಿ ಪ್ರಕಟವಾಗಲಿವೆ.
14. ಮಂಡ್ಯ ಜಿಲ್ಲೆಯ ಹೊಸ ಪೀಳಿಗೆಯ ತುಡಿತಗಳನ್ನು ಗುರುತಿಸುವ ಶ್ವೇತ ಎಂ. ಯು. ಸಂಪಾದಿಸಿರುವ ಪ್ರಾತಿನಿಧಿಕ ಕಥಾ ಮತ್ತು ಮಂಡ್ಯದ ಸೊಗಡನ್ನು ಬಿಂಬಿಸುವ ಕೊತ್ತತ್ತಿ ರಾಜು ಸಂಪಾದಿಸಿರುವ ಪ್ರಾತಿನಿಧಿಕ ಕವನ ಸಂಕಲನಗಳು ಈ ಸಂದರ್ಭದಲ್ಲಿ ಪ್ರಕಟವಾಗಲಿವೆ.
15. ಮಂಡ್ಯ ಜಿಲ್ಲೆಯ ಸಾಧಕ ಕನ್ನಡ ಚಿತ್ರರಂಗದ ನಿರ್ಮಾತೃಗಳಲ್ಲೊಬ್ಬರಾದ ‘ಬೇಡರ ಕಣ್ಣಪ್ಪ’ ಖ್ಯಾತಿಯ ಎಚ್. ಎಲ್. ಎನ್. ಸಿಂಹ ಅವರ ಬಗ್ಗೆ ಅವರ ಮಗ ಎಚ್. ಎಲ್. ಶೇಷಚಂದ್ರ ಬರೆದ ‘ಅಣ್ಣನ ಸ್ಮರಣೆ’ ವಿಶಿಷ್ಟ ಕೃತಿಯಾಗಿ ಪ್ರಕಟವಾಗುತ್ತಿದೆ.
16. ಕನ್ನಡ ಸಾಹಿತ್ಯ ಚರಿತ್ರೆಗೆ ಬಹು ಉಪಯುಕ್ತ ಮೂರು ಕೃತಿಗಳು ಈ ಸಂದರ್ಭದಲ್ಲಿ ಪ್ರಕಟವಾಗುತ್ತಿವೆ. ತ. ಸು. ಶಾಮರಾಯರ ‘ಕನ್ನಡ ಸಾಹಿತ್ಯ ಚರಿತ್ರೆ’ ಉತ್ತರ ಕರ್ನಾಟಕದ ಬರಹಗಾರರ ಚರಿತ್ರೆ ಹೇಳುವ ರಾ. ಯ. ಧಾರವಾಡಕರ ಅವರ ‘ಹೊಸಗನ್ನಡ ಸಾಹಿತ್ಯದ ಉದಯಕಾಲ’ ಮತ್ತು ಅನುವಾದ ಸಾಹಿತ್ಯದ ಚರಿತ್ರೆ ಹೇಳುವ ಪ್ರೊ. ಮೋಹನ್ ಕುಂಟಾರ್ ಇವರ ಕೃತಿಗಳು ಈ ಮಾಲಿಕೆಯಲ್ಲಿ ಪ್ರಕಟವಾಗಲಿವೆ. 17. ದೇವುಡು ನರಸಿಂಹ ಶಾಸ್ತ್ರಿಗಳ ಅಮರ ಕೃತಿ ‘ಕನ್ನಡ ಸಂಸ್ಕೃತಿ’ ಪ್ರೊ. ಎಂ. ವಿ .ಸೀತಾರಾಮಯ್ಯ ಇವರ ‘ಕವಿರಾಜ ಮಾರ್ಗ’ ಮಹೋಮಹೋಪಾಧ್ಯಾಯ ವಿದ್ವಾನ್ ರಂಗನಾಥ ಶರ್ಮ ಇವರ ‘ಹೊಸಗನ್ನಡ ವ್ಯಾಕರಣ’, ಬಿ. ಎಂ. ಶ್ರೀ ಇವರ ‘ಅಶ್ವತ್ಥಾಮನ್’ , ದೇಜಗೌ ಇವರ ‘ಅಮೆರಿಕಾ ಗಾಂಧಿ’ ಉತ್ತಂಗಿ ಚನ್ನಪ್ಪನವರ ‘ಸರ್ವಜ್ಞನ ವಚನಗಳು’ ಡಾ. ಎಸ್. ವಿದ್ಯಾಶಂಕರ್ ಗದ್ಯಾನುವಾದ ಮಾಡಿರುವ ಚಾಮರಸನ ‘ಪ್ರಭುಲಿಂಗಲೀಲೆ’, ತರಾಸು ಅವರ ‘ಶಿಲ್ಪಶ್ರೀ’ ಬಹು ಮಹತ್ವದ ಕೃತಿಗಳಾಗಿ ಪ್ರಕಟವಾಗುತ್ತಿವೆ.
18. ಸಂವಿಧಾನದ ಜಾರಿಗೆ 75 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರ ‘ಸಂವಿಧಾನದ ಓದು’ ಕೃತಿ ಪ್ರಕಟವಾಗುತ್ತಿದೆ. ಬೇಂದ್ರೆಯವರಿಗೆ ಜ್ಞಾನಪೀಠ ಬಂದು ಐವತ್ತು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ನಾಡೋಜ ಕೆ.ಕೃಷ್ಣಪ್ಪನವರ ‘ಬೇಂದ್ರೆ ಕಂಡ ಬೆಳಗು’ ಪ್ರಕಟವಾಗುತ್ತಿದೆ.
19. ಡಾ. ಧರಣೀ ದೇವಿ ಮಾಲಗಿತ್ತಿಯವರ ‘ಇಳಾ ಭಾರತ’, ಕನ್ನಡ ಬೆರಳಚ್ಚು ಯಂತ್ರದ ಶೋಧಕ ಕೆ.ಅನಂತ ಸುಬ್ಬರಾಯರ ಕುರಿತು ಅವರ ಮಗ ಎ.ಆರ್.ಮಂಜುನಾಥ್ ಬರೆದಿರುವ ಕೃತಿ, ‘ಸೈಬರ್ ಸುರಕ್ಷತೆ’ ಕುರಿತು ಡಾ.ಉದಯಶಂಕರ ಪುರಾಣಿಕ ಬರೆದಿರುವ ಕೃತಿ ಈ ಮಾಲಿಕೆಯ ವಿಶೇಷ ಆಕರ್ಷಣೆಗಳಾಗಿವೆ.
Subscribe to Updates
Get the latest creative news from FooBar about art, design and business.
87ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುವ 87 ಪುಸ್ತಕಗಳ ವೈಶಿಷ್ಟ್ಯಗಳು
No Comments4 Mins Read
Related Posts
Comments are closed.