ಕಾಸರಗೋಡು : “ರಾಗಾಲಾಪ ಎಂಬ ಕಾರ್ಯಕ್ರಮವೇ ವಿಶಿಷ್ಟವಾಗಿದೆ. ಕರ್ನಾಟಕದಲ್ಲಿಯೇ ಇಂಥ ಪ್ರಯೋಗಗಳು ನಡೆದಿಲ್ಲ. ಅಂಥದ್ರಲ್ಲಿ ಕಾಸರಗೋಡಿನ ‘ಸ್ವರ ಚಿನ್ನಾರಿ’ಯ ಈ ಪ್ರಯತ್ನ ಶ್ಲಾಘನೀಯ. ಇಂಥಹ ಕಾರ್ಯಕ್ರಮಗಳ ಮೂಲಕ ಒಬ್ಬ ಅದ್ಭುತ ಕವಿ ಹುಟ್ಟಿಕೊಳ್ಳಬಹುದು. ಒಬ್ಬ ರಾಗ ಸಂಯೋಜಕ ಸೃಷ್ಟಿ ಆಗಬಹುದು. ಹಲವು ಪ್ರತಿಭೆಗಳಿಗೆ ವೇದಿಕೆ ಆಗುವ ಸಾಧ್ಯತೆ ಇದೆ. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರರವರ ನಿರ್ದೇಶನದಲ್ಲಿ ಇಂಥಹ ವಿಶಿಷ್ಟವಾದ ಕಾರ್ಯಕ್ರಮ ಜರಗುವುದು ಖುಷಿ ನೀಡಿದೆ” ಎಂದು ಖ್ಯಾತ ಪತ್ರಕರ್ತ, ಅಂಕಣಗಾರ ರವೀಂದ್ರ ಜೋಶಿ ಮೈಸೂರು ನುಡಿದರು.
ಅವರು ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯ ನೇತೃತ್ವದಲ್ಲಿ ಜರಗಿದ ರಾಗಸಂಯೋಜನಾ ಶಿಬಿರ ‘ರಾಗಾಲಾಪ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಮ್ಮಟದ ನಿರ್ದೇಶಕ ವಿ. ಮನೋಹರರವರು ಮಾತನಾಡಿ “ನಾವು ಸ್ವರ ಸಂಯೋಜಕರಲ್ಲ, ನಿಜ ಅರ್ಥದಲ್ಲಿ ಗಾನ ಸಂಯೋಜಕರು ಅಂತ ಹೇಳಬೇಕು. ನಾವು ಪದಗಳನ್ನು ಜೋಡಿಸಿ ಗಾಯನ ಮಾಡುತ್ತೇವೆ. ಸಿನೇಮಾದಲ್ಲಿ ಇದಕ್ಕೆ ವಿರುದ್ಧ ಸಂಪ್ರದಾಯವಿದೆ. ಮೊದಲು ಸ್ವರ ಸಂಯೋಜಿಸಿ ನಂತರ ಅದಕ್ಕೆ ತಕ್ಕ ಹಾಗೆ ಶಬ್ದ ಪೋಣಿಸುವ ಪ್ರತಿಕ್ರಿಯೆ ಕೂಡಾ ಇದೆ” ಎಂದು ಹಾಡಿ ತೋರಿಸಿದರು.
‘ರಾಗಾಲಾಪ’ ಶಿಬಿರವನ್ನು ಖ್ಯಾತ ನೇತ್ರ ತಜ್ಞ ಡಾ. ಅನಂತ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಏರ್ಪಡಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವರ ಚಿನ್ನಾರಿಯ ಗೌರವಧ್ಯಕ್ಷರಾದ ಶ್ರೀ ಕೃಷ್ಣಯ್ಯ ಅನಂತಪುರ ವಹಿಸಿದ್ದರು.
ರಂಗಚಿನ್ನಾರಿಯ ನಿರ್ದೇಶಕರೂ, ಖ್ಯಾತ ರಂಗಕರ್ಮಿ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ರಂಗ ಚಿನ್ನಾರಿಯು ವರ್ಷಕ್ಕೆ ಸುಮಾರು 30 ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸತತ 18 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಬಗ್ಗೆ ತಿಳಿಸಿದರಲ್ಲದೆ ‘ಸ್ವರ ಚಿನ್ನಾರಿ’, ‘ನಾರಿ ಚಿನ್ನಾರಿ’ ಘಟಕಗಳ ವಿವರ ನೀಡಿದರು.
‘ನಾರಿ ಚಿನ್ನಾರಿ’ಯ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಟೀಚರ್, ರಂಗ ಚಿನ್ನಾರಿ ನಿರ್ದೇಶಕ ಕೆ. ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು. ಸ್ವರ ಚಿನ್ನಾರಿಯ ಕಾರ್ಯಾಧ್ಯಕ್ಷರಾದ ಪುರುಷೋತ್ತಮ ಕೊಪ್ಪಳ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ ಪೆರ್ಲ ಧನ್ಯವಾದವಿತ್ತರು. ರತ್ನಾಕರ ಓಡಂಗಲು ಪ್ರಾರ್ಥಿಸಿದರು. ಸಾಹಿತಿ ಗಣೇಶ್ ನಾಯಕ್ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಶಿಬಿರ ನಿರ್ದೇಶಕರಾದ ವಿ. ಮನೋಹರರವರು ಪ್ರಮಾಣ ಪತ್ರ ವಿತರಿಸಿದರು. ಶಿಬಿರಾರ್ಥಿಗಳಾದ ಶ್ರೀಮತಿ ಅನುಪಮಾ ಉಡುಪುಮೂಲೆ ಮತ್ತು ಶ್ರೀಪತಿ ಭಟ್ ಇವರು ತಮ್ಮ ಅನುಭವಗಳನ್ನು ಹಂಚಿಕೊಂಡರು.