ಎಲ್ಲ ಪ್ರಯೋಗಗಳನ್ನು ತನ್ನ ಒಡಲೊಳಗೆ ತುಂಬಿಕೊಳ್ಳಬಲ್ಲ ಸಾಮರ್ಥ್ಯ ಯಕ್ಷಗಾನವೆಂಬ ರಂಗಭೂಮಿಗೆ ಇದೆ ಎಂಬುದು ಡಾ ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯ ಕಾಲದಿಂದ ನಾವು ಕಾಣುತ್ತಾ ಬಂದಿದ್ದೇವೆ. ಅದರ ಗಾನಾಂಶ, ನಾಟ್ಯಾಂಶ, ನೃತ್ಯಾತ್ಮಕ ರಂಗಚಲನೆ, ಆಹಾರ್ಯ, ಅರ್ಥಗಾರಿಕೆ ಇತ್ಯಾದಿ ಕಲಾಘಟಕಗಳನ್ನು ವಿಸ್ತರಿಸಿ ಅಥವಾ ಪ್ರತ್ಯೇಕಿಸಿ, ಒಮ್ಮೊಮ್ಮೆ ವೈಭವೀಕರಿಸಿ ಯಕ್ಷಗಾನದ ರೂಪಾಂತರಗಳನ್ನು ವಿವಿಧ ಸೃಜನಶೀಲ ನಿರ್ದೇಶಕರು ಹೊಸ ಪ್ರಯೋಗದ ಹೆಸರಿನಲ್ಲಿ ಮಾಡುತ್ತಾ ಬಂದಿದ್ದಾರೆ. ಆ ಮೂಲಕ ಈ ರಂಗಭೂಮಿಯನ್ನು ಪ್ರಸ್ತುತಗೊಳಿಸುತ್ತಾ ಜೀವಂತವಾಗಿರಿಸಿದ್ದಾರೆ. ನಮ್ಮ ದೇಶದ ಇತರ ಪಾರಂಪರಿಕ ಕಲೆಗಳ ಸ್ಥಿತಿಗತಿಗೆ ಹೋಲಿಸಿದರೆ ಯಕ್ಷಗಾನ ವಿವಿಧ ಮುಖಗಳಲ್ಲಿ ಬೆಳೆಯುತ್ತಿದೆ(ಇಂಥ ಪ್ರಯೋಗಗಳು/ಬದಲಾವಣೆಗಳು ಯಕ್ಷಗಾನದ ಮೂಲಸ್ವರೂಪಕ್ಕೆ ಕಳಂಕ ತರುತ್ತಿವೆ ಎಂಬ ಸಂಪ್ರದಾಯವಾದಿಗಳ ಅಭಿಪ್ರಾಯ ಒಂದೆಡೆ ಇದೆ. ಅದು ಪತ್ಯೇಕ ವಿವೇಚನೆಗೆ ಬಿಟ್ಟ ವಿಷಯ).
ಇತ್ತೀಚೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸೇರಿ ಮಹಾಭಾರತದ ಭೀಷ್ಮ ಪಾತ್ರವನ್ನು ಕೇಂದ್ರವಾಗಿರಿಸಿಕೊಂಡು ಯಕ್ಷಗಾನದ ಪ್ರಸಂಗ ಪಠ್ಯವನ್ನು ಪ್ರಧಾನವಾಗಿಸಿ, ’ನಿರುತ್ತರಾಯಣ’ ಎಂಬ ಯಕ್ಷರೂಪಕವನ್ನು ಪ್ರದರ್ಶಿಸಿದರು. ಕಳೆದ ಹಲವಾರು ವರ್ಷಗಳಲ್ಲಿ ಅನೇಕ ಕಾಲೇಜುಗಳ ಯಕ್ಷಗಾನ ಸಂಘಗಳು ಯಕ್ಷಗಾನವನ್ನು ಪ್ರದರ್ಶಿಸುತ್ತ ಬಂದಿರುತ್ತಾರಾದರೂ, ಅವೆಲ್ಲ ಹೆಚ್ಚಾಗಿ ವೃತ್ತಿಮೇಳಗಳ ಪ್ರದರ್ಶನ ಶೈಲಿಯ ಅನುಕರಣೆಗಳು. ಆದರೆ ಅಲೋಶಿಯಸ್ ಕಾಲೇಜಿನ ತಂಡದ ಮುಖ್ಯಸ್ಥರು ಭಿನ್ನ ದಿಸೆಯಲ್ಲಿ ಯೋಚಿಸಿ ಪ್ರಯೋಗಾತ್ಮಕ ಪ್ರದರ್ಶನ ನೀಡಿದ್ದು ಗಮನಾರ್ಹ(ಎರಡು ವರ್ಷದ ಹಿಂದೆ ಶೇಕ್ಸ್ ಪಿಯರ್ನ ‘ಮ್ಯಾಕ್ಬೆತ್’ ನಾಟಕದ ಯಕ್ಷಗಾನ ರೂಪಾಂತರವನ್ನು ಪ್ರದರ್ಶಿಸಿದ್ದನ್ನು ನೆನಪಿಸಿಕೊಳ್ಳಬಹುದು).
ಸಂಘಟಕರೇ ಹೇಳಿಕೊಂಡಂತೆ, ’ನಿರುತ್ತರಾಯಣ’ಕ್ಕೆ ಪ್ರೇರಣೆ ಕಳೆದ ಅಕ್ಟೋಬರ್ ನಲ್ಲಿ ಮಂಗಳೂರಿನ ಪುರಭವನದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದವರು ಪ್ರದರ್ಶಿಸಿದ ’ಶ್ರೀ ಮನೋಹರ ಸ್ವಾಮಿ ಪರಾಕು’ ಎಂಬ ಯಕ್ಷರೂಪಕ(ನಿರ್ದೇಶನ: ಡಾ. ಪೃಥ್ವಿರಾಜ್ ಕವತ್ತಾರ್). ಅದು ಭೀಷ್ಮ ಪಾತ್ರವನ್ನು ಕೇಂದ್ರವಾಗಿಸಿ ಹೆಣೆದ ಭಕ್ತಿಪ್ರಧಾನ ಕಥಾನಕ. ಯಕ್ಷಗಾನ ’ಭೀಷ್ಮಪರ್ವ’ದಲ್ಲಿ ಭೀಷ್ಮನ ಶರಾಘಾತಕ್ಕೆ ನೊಂದ ಶ್ರೀಕೃಷ್ಣ ಚಕ್ರವನ್ನು ಹಿಡಿದು ಭೀಷ್ಮನೆಡೆಗೆ ಧಾವಿಸುವಾಗ ಭೀಷ್ಮನು ಕೃಷ್ಣ ಸ್ತುತಿ ಮಾಡುವುದು ’ಶ್ರೀ ಮನೋಹರ ಸ್ವಾಮಿ ಪರಾಕು’ ಎಂದು ಆರಂಭವಾಗುವ ಪದ್ಯದಿಂದ. ಅಲ್ಲಿ ಭೀಷ್ಮನ ವ್ಯಕ್ತಿತ್ವದ ಸಂಕೀರ್ಣತೆಗೆ ಹೆಚ್ಚಿನ ಗಮನ ಕೊಡದೆ ಭಕ್ತಿ ಭಾವಕ್ಕೆ ಪ್ರಾಧಾನ್ಯ ಕೊಡಲಾಗಿತ್ತು.
’ನಿರುತ್ತರಾಯಣ’ದಲ್ಲಿ ಭೀಷ್ಮನ ಬದುಕಿನ ಸಂಕೀರ್ಣತೆಯನ್ನು ವಿವಿಧ ಆಯಾಮಗಳಲ್ಲಿ ತೋರಿಸುವ ತವಕ ಹೆಚ್ಚಾಗಿತ್ತು. ರಂಗ ಪ್ರಸ್ತುತಿಯ ತಂತ್ರದಲ್ಲಿ ಮಾತ್ರ ಕಲಾರಂಗದ ಪ್ರದರ್ಶನವನ್ನೇ ಅನುಸರಿಸಲಾಗಿತ್ತು.
ಆದರೆ ’ನಿರುತ್ತರಾಯಣ’ ಶೀರ್ಷಿಕೆಯೇ ಧ್ವನಿಸುವಂತೆ ಈ ಪ್ರದರ್ಶನ ವೈಚಾರಿಕ ಆಯಾಮಕ್ಕೆ ವಿಶೇಷ ಒತ್ತು ನೀಡಿತ್ತು(ಉತ್ತರಾಯಣದ ಶ್ಲೇಷೆಯನ್ನು ಗಮನಿಸಬಹುದು. ಶರಶಯ್ಯೆ ಸೇರಿದ ಇಚ್ಛಾಮರಣಿಯಾದ ಭೀಷ್ಮ ದೇಹ ತ್ಯಜಿಸುವುದಕ್ಕೆ ಉತ್ತರಾಯಣ ಕಾಲವನ್ನು ಕಾಯುತ್ತಿರುತ್ತಾನೆ. ಪ್ರದರ್ಶನದ ಅಂತ್ಯಭಾಗದಲ್ಲಿ ಕೌರವ ಭೀಷ್ಮನಿಗೆ ಕೆಲವು ತಾರ್ಕಿಕ ಪ್ರಶ್ನೆಗಳನ್ನು ಮುಂದಿಡುತ್ತಾನೆ. ಭೀಷ್ಮನಿಂದ ಉತ್ತರವನ್ನು ನಿರೀಕ್ಷಿಸದೇ/ಬಯಸದೇ ಹೊರಟುಹೋಗುತ್ತಾನೆ.). ಆಸಕ್ತಿಯ ಸಂಗತಿ ಎಂದರೆ ಮನುಷ್ಯನ ಬದುಕಿನಲ್ಲಿ ಉತ್ತರವಿಲ್ಲದ ಎಷ್ಟೋ ಪ್ರಶ್ನೆಗಳಿವೆ. ಮಾನವನ ಬದುಕು ನಿಗೂಢ ಮತ್ತು ವಿಸ್ಮಯಕಾರಿ. ಮಹಾಭಾರತದ ಕಥಾಲೋಕವೂ ಹಾಗೆ. ವೇದವ್ಯಾಸರ ನಿರುತ್ತರ ಧೋರಣೆಯೇ ಮಹಾಭಾರತದ ಅಧ್ಯಯನಕಾರನಲ್ಲಿ ಕುತೂಹಲವನ್ನು, ತುದಿಕಾಣದ ಜಿಜ್ಞಾಸೆಯನ್ನು ಮತ್ತು ರೋಚಕತೆಯನ್ನು ಮೂಡಿಸುತ್ತದೆ. ಈ ಚಿಂತನೆಯ ಪೂರ್ವ ನಿರೀಕ್ಷೆಯಿಂದಲೇ ’ನಿರುತ್ತರಾಯಣ’ ವನ್ನು ಪ್ರೇಕ್ಷಕ ವೀಕ್ಷಿಸಲಾರಂಭಿಸಿದ್ದು ತಪ್ಪಲ್ಲ ತಾನೇ?
ಅಂದಿನ ಪ್ರದರ್ಶನದಲ್ಲಿ ಆಧುನಿಕ ನಾಟಕ ನಿರ್ದೇಶಕರು ಬಳಸುವ ತಂತ್ರಗಳು ಸಾಕಷ್ಟಿದ್ದವು. ಮುಖ್ಯವಾಗಿ ಬೆಳಕಿನ ಬಳಕೆ, ರಂಗವಿನ್ಯಾಸ, ಕೇಳುಗನ ಸೂಕ್ಷ್ಮ ಶ್ರವಣ ಶಕ್ತಿಗೆ ಮುದ ನೀಡುವ ನಾದ ನಿಯಂತ್ರಣ, ರಂಗದಲ್ಲಿ ಕೇವಲ ಪಾತ್ರಗಳ ಮೇಲೆ ಬೆಳಕು ಚೆಲ್ಲಿ ಉಳಿದ ನಿಷ್ಕ್ರಿಯ ಭಾಗಗಳಲ್ಲಿ ಮಬ್ಬುಗತ್ತಲೆ- ಇವೆಲ್ಲ ನೋಡುಗನನ್ನು ಆಕರ್ಷಿಸಿದ್ದಲ್ಲದೆ, ಇವು ರಂಗ ಮೂಡಿಸುವ ಪ್ರೇಕ್ಷಕರ ನೇತ್ರಾನಂದಕ್ಕೆ ಕಾರಣವಾಗುತ್ತದೆ. ಹಿಮ್ಮೇಳ ಮತ್ತು ಪಾತ್ರಗಳ ಅರ್ಥಗಾರಿಕೆಗೆ ಹಿತಮಿತವಾದ ಧ್ವನಿವರ್ಧಕಗಳನ್ನು ಬಳಸಲಾಗಿತ್ತು. ಈ ಅಂಶ ಒಟ್ಟಾರೆಯಾಗಿ ಮೃದುವಾದ ಆನಂದಾನುಭೂತಿಗೆ ಪೂರಕವಾಗಿತ್ತು(ಇದು ಏಕೆ ಗಮನಾರ್ಹ ಅಂಶವೆಂದರೆ ಹೆಚ್ಚಿನ ಪ್ರಚಲಿತ ಯಕ್ಷಗಾನ ವೃತಿಮೇಳಗಳಲ್ಲಿ, ಆಧುನಿಕ ಧ್ವನಿವರ್ಧಕದ ತಂತ್ರಜ್ಞಾನದ ದುರ್ಬಳಕೆಯಿಂದಾಗಿ ಭಾಗವತಿಕೆಯ ಮತ್ತು ಚೆಂಡೆ ಮದ್ದಲೆಗಳ ವಾದನ ವೈಖರಿಯಿಂದಾಗಿ, ನಾದ ಮಾಧುರ್ಯ ಹಾಗು ನಾದ ಸುಖ ಮರೆಯಾಗುತ್ತಿದೆ. ಇದರಲ್ಲಿ ಧ್ವನಿವರ್ಧಕ ಯಂತ್ರದ ಕೃತಕ ಪ್ರತಿಧ್ವನಿಯ ಕೊಡುಗೆಯೂ ಇದೆ).
‘ನಿರುತ್ತರಾಯಣ’ ಪ್ರದರ್ಶನ ಅನಾವರಣಗೊಳ್ಳುತ್ತಿದ್ದಂತೆ ನಿಯಂತ್ರಿತ ಹಿಮ್ಮೇಳದ ಧ್ವನಿಮಟ್ಟ(Sound level), ಹಾಡುಗಾರಿಕೆಯ ನಿಧಾನ ಲಯ ಗತಿ, ಅದಕ್ಕೆ ಪೂರಕವಾದ ಚೆಂಡೆಮದ್ದಲೆಗಳ ಏರಿಳಿತಗಳ ವಾದನ ವೈಖರಿ, ಮಧ್ಯೆ ಮಧ್ಯೆ ಸೃಷ್ಟಿಸಿದ ಸಂಪೂರ್ಣ ಮೌನ ಇತ್ಯಾದಿಗಳು ಚೇತೋಹಾರಿಯಾಗಿತ್ತು(Music of the silence…ಎಂದರೆ ಏನೆಂಬುದು ನಮ್ಮ ಗಮನಕ್ಕೆ ಬಂದಿತ್ತು). ಮಾತ್ರವಲ್ಲದೆ ಪ್ರೇಕ್ಷಕ ಜಾಗ್ರತಪೂರ್ಣ ಆಸಕ್ತಿಯಿಂದ ಕೇಳಬೇಕಾದುದೂ ಅನಿವಾರ್ಯವಾಗಿತ್ತು. ಒಡ್ಡೋಲಗ, ಪಾತ್ರಪ್ರವೇಶ ಮೊದಲಾದ ಸಂದರ್ಭಗಳಲ್ಲಿ ಪರದೆಯನ್ನು ಬಳಸುವಾಗಲೂ ರಂಗದಲ್ಲಿ ಸೃಷ್ಟಿಸಲ್ಪಟ್ಟ ಕ್ಷಣ ಕಾಲದ ನೀರವ ಮೌನ ಹಾಲಿಗೆ ಕೇಸರಿ ಬೆರೆಸಿದಂತಿತ್ತು. ಆದಿಯಿಂದ ಆಂತ್ಯದವರೆಗೆ ಕಥಾನಕ ಬೆಳೆಯುತ್ತಾ ಅರಳುತ್ತಿದ್ದಂತೆ, ಶ್ರವ್ಯಕಾವ್ಯದಲ್ಲಿ ನಾವು ಕಾಣುವ ಧ್ವನಿ, ಸಂಕೇತ(suggestion, symbolism ಇತ್ಯಾದಿಗಳು) ಈ ದೃಶ್ಯ ಕಾವ್ಯದಲ್ಲೂ ಬೆಸೆದುಕೊಂಡುದು ನಿರ್ದೇಶಕರ ಸೂಕ್ಷ್ಮ ಚಿಂತನೆಗೆ ಸಾಕ್ಷಿ ಹೇಳುತ್ತಿತ್ತು. ಕೌರವರಿಗೆ ಕೆಂಪುದಗಲೆ, ಪಾಂಡವರಿಗೆ ಪಚ್ಚೆದಗಲೆ ಬಳಸಿ ಎರಡು ಪಂಗಡಗಳೊಳಗೆ ವೇಷಭೂಷಣದಲ್ಲೂ ’ಯುನಿಪಾರ್ಮಿಟಿ’ ಕಾಣಿಸಿದ್ದು, ಆಹಾರ್ಯದ ಒಪ್ಪ ಓರಣದ ಜೊತೆಗೆ ಕಣ್ಣಿಗೆ ಹಿತವಾಗಿರುವ ಮೃದುತ್ವ(mildness)ದ ಅನುಭವ ಹೃದ್ಯವಾಗಿತ್ತು. ಸೇನಾಧಿಪತ್ಯದ ಪೂರ್ವದ ಭೀಷ್ಮನಿಗೆ ಪರಂಪರೆಯ ರಾಜಕಿರೀಟವಾದರೆ, ಸೇನಾಧಿಪತಿ ಭೀಷ್ಮನಿಗೆ ’ಧರ್ಮರಾಯನ ಕಿರೀಟ’ ತೊಡಿಸಿದ್ದು ಪಾತ್ರದ ಸ್ಥಾನಾಂತರವನ್ನು ಆಹಾರ್ಯದ ಮೂಲಕ ಸಂಕೇತಿಸುತ್ತಿತ್ತು. ಶಿಖಂಡಿಯನ್ನು ಪಕಡಿ ವೇಷದಲ್ಲಿ ಕಾಣಿಸಿದ್ದರಿಂದ ಅವನು ಷಂಡನಲ್ಲ, ಆತನೂ ವೀರನೆಂಬುದನ್ನು ತೋರಿಸುವ ಉದೇಶವಾಗಿತ್ತು. ಇದು ಮೂಲ ಮಹಾಭಾರತದ ಶಿಖಂಡಿ ಪಾತ್ರದ ಚಿತ್ರಣವಾಗಿತ್ತು(ಆಟಗಳಲ್ಲಿ ಸಾಮಾನ್ಯವಾಗಿ ತುರಾಯಿ ಕಟ್ಟಿದ ಸ್ತ್ರೀವೇಷವನ್ನು ಶಿಖಂಡಿಯಾಗಿ ತೋರಿಸುವುದು ಪದ್ಧತಿ).
ಹೀಗೆ ಆದ್ಯಂತವಾಗಿ ಪ್ರದರ್ಶನದಲ್ಲಿ ಹಿತಮಿತವಾದ ಕುಣಿತ, ರಂಗಚಲನೆ, ಸಂಕ್ಷಿಪ್ತಗೊಂಡ ಪದ್ಯಗಳು, ಪರಿಕಲ್ಪನೆಗೆ ಪೂರಕವಾಗುವಂತೆ ಹೊಸದಾಗಿ ರಚಿಸಿದ ಪದ್ಯಗಳ ಜೋಡಣೆ, ಕಡಿತಗೊಳಿಸಿದ ಯಕ್ಷಗಾನದ ಶಬ್ದಸಂಭ್ರಮ, ಭೀಷ್ಮನ ಬದುಕಿನ ಹಿಂದಿನ ಪ್ರಧಾನ ಸಂಗತಿಗಳನ್ನು ರಂಗದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ವಿಶೇಷ ಬೆಳಕಿನ ಸಂಯೋಜನೆಯಲ್ಲಿ ಹಿಮ್ಮುಖ ದೃಶ್ಯವಾಗಿ ಅಂದರೆ ಫ್ಲ್ಯಾಶ್ ಬ್ಯಾಕ್(Flashback) ತಂತ್ರದಲ್ಲಿ ತೋರಿಸಿದ ರೀತಿ-ಇತ್ಯಾದಿಗಳು ಇಡೀ ಪ್ರದರ್ಶನಕ್ಕೆ ಒಂದು ಕಲಾತ್ಮಕ ಸೂಕ್ಷ್ಮತೆಯ ಮೆರುಗನ್ನು ತುಂಬಿದವು. ಅಂದರೆ ಸಾಮಾನ್ಯ ಆಟಕ್ಕಿಂತ ಭಿನ್ನವಾದ ನಾಟಕೀಯತೆ ಆಯಾಮ ಈ ಪ್ರದರ್ಶನದ ನಾವೀನ್ಯವಾಗಿತ್ತು. ಪಾತ್ರಗಳ ಅರ್ಥಗಾರಿಕೆ ಮಿತವಾಗಿತ್ತು. ಪಾತ್ರಗಳ ಭಾವ ಸ್ಫುಟವಾಗುವುದಕ್ಕೆ ವಾಚಿಕಾಭಿನಯದಲ್ಲಿ ವಯೊಲಿನ್ ವಾದನವನ್ನು ಮಿಳಿತಗೊಳಿಸಿದ್ದರೂ ದ್ವನಿವರ್ಧಕದ ತೀವ್ರತೆಯಿಂದಾಗಿ ಕೇಳುಗರಿಗೆ ಸ್ವಲ್ಪ ತೊಡಕನ್ನುಂಟು ಮಾಡಿತ್ತು(ಯಕ್ಷಗಾನ ಹಿಮ್ಮೇಳದಲ್ಲಿ ಪಿಟೀಲಿನ ಬಳಕೆ ಹೊಸದೇನಲ್ಲ).
’ನಿರುತ್ತರಾಯಣ’ದ ಆಶಯವೇ ಭೀಷ್ಮನು ಹೇಗೆ ಕುರು-ಪಾಂಡವರ ಜಟಿಲ ಸಮಸ್ಯೆಗಳಿಗೆ, ಕುಟುಂಬ ಕಲಹಕ್ಕೆ ಸರ್ವಸಮ್ಮತವಾದ ಪರಿಹಾರ ಹೇಳುವಲ್ಲಿ ವಿಫಲನಾದ ಮತ್ತು ಅದಕ್ಕೆ ಸುಲಭ, ಸರಳವಾದ ಪರಿಹಾರವಿಲ್ಲ ಎನ್ನುವುದನ್ನು ತೋರಿಸುವುದು. ಹಾಗಾಗಿ ಹಲವು ಚರ್ಚಾಸ್ಪದ ಸಂಕೀರ್ಣ ಸಂಗತಿಗಳ ಮೂಟೆಯಂತಿರುವ ಭೀಷ್ಮನನ್ನು ಪ್ರಶ್ನಿಸುವ ದೃಶ್ಯ ಪ್ರದರ್ಶನದ ಕೊನೆಯಲ್ಲಿ ಬರುತ್ತದೆ. ಭೀಷ್ಮನು ಸರಳಮಂಚ ಸೇರಿದ ಬಳಿಕ ಒಂದೇ ಸವನೆ ಕೌರವ ಭೀಷ್ಮನನ್ನು ಪ್ರಶ್ನಿಸುತ್ತಾನೆ. ಯಾವುದೇ ಪ್ರತಿಕ್ರಿಯೆಯನ್ನು ತೋರಿಸದೆ ಭೀಷ್ಮ ನಿರುತ್ತರನಾಗಿ ಸುಮ್ಮನಿರುತ್ತಾನೆ. ಈ ಸಂದರ್ಭದಲ್ಲಿ ಭೀಷ್ಮನ ಚಡಪಡಿಕೆ ಸೂಕ್ಷ್ಮ ಆಂಗಿಕ ಚೇಷ್ಟೆಗಳಿಂದ ಅಥವಾ ಬಾಯಿಯಿಂದ / ಗಂಟಲಿನಿಂದ ಹೊರಡಿಸಬಹುದಾದ ಸ್ವರವೈವಿಧ್ಯಗಳಿಂದ ಪ್ರಕಟಗೊಂಡಿರುತ್ತಿದ್ದರೆ, ಹಾಗೆಯೇ ದುರ್ಯೋಧನನು ಕೆಲವು ರಂಗಚಲನೆಯನ್ನು ಮಾಡಿ ಪ್ರಶ್ನೆಗಳನ್ನು ಹರಿತಗೊಳಿಸಿರುತ್ತಿದ್ದರೆ ಪ್ರದರ್ಶನದ ಪರಿಣಾಮ ಇನ್ನೂ ಹೆಚ್ಚಾಗಿರುತ್ತಿತ್ತು ಎಂದು ಅನಿಸುತ್ತದೆ. ಹಾಗಾಗಿ ಇಲ್ಲಿ ಭೀಷ್ಮನ ’ನಿರುತ್ತರಾಯಣತೆ’ ಸ್ವಲ್ಪ ಮಟ್ಟಿಗೆ ಪ್ರೇಕ್ಷಕನನ್ನು ತಲುಪುವಲ್ಲಿ ಸೋತಂತೆ ತೋರಿತು. ಮಹಾಭಾರತದ ರಾಜಕಾರಣವನ್ನು ವರ್ತಮಾನದ ರಾಜಕಾರಣದ ಒಳಸುಳಿಗಳ ಒಳಗಿನಿಂದಲೇ ಹಿಡಿಯಲೆತ್ನಿಸಿದ ದುರ್ಯೋಧನನು ಭೀಷ್ಮನನ್ನು ತಾರ್ಕಿಕವಾಗಿ ಪ್ರಶ್ನಿಸುತ್ತಾ ಹೋಗುತ್ತಾನೆ. ಆದರೆ ದುರ್ಯೋಧನನ ಪ್ರಶ್ನಾವಳಿಗಳು ಸ್ವಲ್ಪ ಅವಸರದಲ್ಲಿ ಇದ್ದಂತೆ ಭಾಸವಾಯಿತು. ವಿದ್ಯಾರ್ಥಿಗಳು ಹೆಚ್ಚು ಪಳಗಿದವರಲ್ಲವಾದ್ದರಿಂದ ಕೆಲವೆಡೆ ಅಪಕ್ವತೆ, ನೀರಸತೆಯೂ ನುಸುಳುತ್ತಿತ್ತು.
ಆದರೆ ಇಂದು ವೃತ್ತಿ ಮೇಳಗಳ ಆಟಗಳನ್ನು ನೋಡುತ್ತಿರುವವರಿಗೆ ಕಾಲೇಜಿನ ವಿದ್ಯಾರ್ಥಿಗಳಿಂದ ಯಕ್ಷಗಾನವನ್ನು ಸೂಕ್ಷ್ಮ ಸಂವೇದನೆಗಳೊಂದಿಗೆ ಪ್ರದರ್ಶಿಸಲು ಸಾಧ್ಯವೆಂಬುದು ’ನಿರುತ್ತರಾಯಣ’ ಪ್ರಯೋಗದ ಮೂಲಕ ಶ್ರುತವಾಯಿತು. ಈ ಕಾರಣಕ್ಕಾಗಿ ಯಕ್ಷಗಾನದ ತರಬೇತಿಯ ಹೊಸ ಶಿಸ್ತಿಗೆ ಒಗ್ಗಿಸಿಕೊಂಡ ಎಲ್ಲರನ್ನು ಅಭಿನಂದಿಸಲೇಬೇಕು. ಇಂಥಾ ಪ್ರಯೋಗವನ್ನು ಪ್ರೋತ್ಸಾಹಿಸುತ್ತಿರುವ ಕಾಲೇಜಿನ ವರಿಷ್ಠರ ಕಲಾಪ್ರೀತಿ, ಪರಿಣಾಮ ರಮಣೀಯತೆಯನ್ನು ಹೆಚ್ಚಿಸಿದ ಹಿಮ್ಮೇಳದವರ ಪ್ರಯತ್ನ ಹಾಗೂ ಉಡುಪಿಯ ಯಕ್ಷಗಾನ ಕಲಾರಂಗದ ಪ್ರಸ್ತುತಿಯಿಂದ ಸ್ಫೂರ್ತಿಪಡೆದು ಅದರ ಮುಂದುವರಿಕೆಗೆ ಪ್ರಯತ್ನಪಟ್ಟ ಡಾ ದಿನೇಶ್ ನಾಯಕ್ ಇವರೆಲ್ಲ ಅಭಿನಂದನಾರ್ಹರು.
ಕೊನೆಗೊಂದು ಮಾತು. ಈ ಹವ್ಯಾಸಿಗಳ ಮಧ್ಯೆ ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದರಾದ, 86ರ ಹರೆಯದ ಶ್ರೀ ಸೂರಿಕುಮೇರು ಕೆ ಗೋವಿಂದ ಭಟ್ಟರು ತಮ್ಮ ವೃದ್ಧಾಪ್ಯದ ದೈಹಿಕ ಶೈಥಿಲ್ಯದ ತೊಡಕಿನೊಂದಿಗೆ ಭೀಷ್ಮ ಪಾತ್ರವನ್ನು ನಿರ್ದೇಶಕರ ಸೂಚನೆಯಂತೆ ನಿರ್ವಹಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಅವರ ಪಾತ್ರ ನಿರ್ವಹಣೆಗಿಂತಲೂ ಹವ್ಯಾಸಿಗಳೊಂದಿಗೂ ವಿನೀತಭಾವದಿಂದ, ಪ್ರೋತ್ಸಾಹಕ ಪ್ರೀತಿಯಿಂದ ಪ್ರಯೋಗಾತ್ಮಕ ಹೊಸತನಗಳಿಗೆ ತನ್ನನ್ನು ತಾನು ತೆರೆದುಕೊಳ್ಳುವ ಉದಾರತೆ ಮತ್ತು ಆ ಮೂಲಕ ವ್ಯಕ್ತವಾಗುವ ಅವರ ಕಲಾಧೋರಣೆ ಹಾಗೂ ಕಲಾಪ್ರೀತಿ ಇತರ ಹಿರಿಯ ಮತ್ತು ಕಿರಿಯ ಕಲಾವಿದರಿಗೆ ಮಾರ್ಗದರ್ಶಕದಂತಿತ್ತು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಈ ಬಗೆಯ ಹೊಸ ಹೊಸ ಪ್ರಯೋಗಗಳು ಮತ್ತಷ್ಟು ಮೂಡಿಬರಲಿ, ಇಂಥಾ ಪ್ರಯೋಗಗಳಿಂದ ಯಕ್ಷಗಾನವು ಬೇರೊಂದು ಮಜಲಿನಲ್ಲಿ ಸಾಗುತ್ತಾ ಬೆಳೆಯುವಂತಾಗಲಿ ಎಂಬ ಹಾರೈಕೆಗಳು.
- ಪ್ರೊ ಎಂ ಎಲ್ ಸಾಮಗ, ಉಡುಪಿ