ಧಾರವಾಡ: ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಹಾವೇರಿ, ಮನೋಹರ ಗ್ರಂಥ ಮಾಲಾ ಆಶ್ರಯದಲ್ಲಿ ಡಾ. ಕೃಷ್ಣಮೂರ್ತಿ ಕಿತ್ತೂರ ಸಂಶೋಧಿಸಿ ಬರೆದ ‘ಗಳಗನಾಥರು ಮತ್ತು ಅವರ ಕಾದಂಬರಿಗಳು’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 15 ಡಿಸೆಂಬರ್ 2024ರ ಶನಿವಾರದಂದು ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ “ಗಳಗನಾಥರು ಮತ್ತು ಅವರ ಕಾದಂಬರಿಗಳು’ ಕೃತಿ ಗಳಗನಾಥರ ಬರಹವನ್ನು ಅಮೂಲಾಗ್ರವಾಗಿ ಚರ್ಚಿಸುವುದಾಗಿದೆ. ಈ ಪುಸ್ತಕ ಭಾಷಾ ಸಂಪತ್ತನ್ನು ಒಳಗೊಂಡಿದೆ. ಗಳಗನಾಥರ ವ್ಯಕ್ತಿತ್ವವನ್ನು ಈ ಕೃತಿ ತೋರ್ಪಡಿಸುತ್ತದೆ. ಹೊಸಗನ್ನಡ ಭಾಷೆ-ಸಾಹಿತ್ಯಗಳಿಗೆ ಭದ್ರ ಬುನಾದಿ ಹಾಕಿದ ಪುಣ್ಯ ಪುರುಷರಲ್ಲಿ ಗಳಗನಾಥರೂ ಒಬ್ಬರು. 70ರ ದಶಕದಲ್ಲಿ ಕಾದಂಬರಿಗಳು ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದವು. ಆಧುನಿಕ ಕಲಾತ್ಮಕ ಕೃತಿಗಳನ್ನು ತುಲನೆ ಮಾಡುವ ಕಾರ್ಯವನ್ನು ಡಾ. ಕೃಷ್ಣಮೂರ್ತಿ ಕಿತ್ತೂರ ಮಾಡಿದ್ದಾರೆ. ಗಳಗನಾಥರ ಸಾಹಿತ್ಯವನ್ನು ವಿಸ್ತಾರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಭಾಷಾಂತರ, ರೂಪಾಂತರ, ಅನುವಾದದ ರೀತಿಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ. ಅನುವಾದ, ಭಾಷಾಂತರ ಮೂಲಕ ಕನ್ನಡಕ್ಕೆ ಬಂದ ಕೃತಿಗಳನ್ನು ಹೋಲಿಕೆ ಮಾಡುತ್ತ ಗಳಗನಾಥರ ಬರಹದ ಕುರಿತು ಈ ಕೃತಿಯನ್ನು ಕಿತ್ತೂರ ಸಂಪಾದನೆ ಮಾಡಿದ್ದಾರೆ. ಧಾರವಾಡದ ಟ್ರೇನಿಂಗ್ ಕಾಲೇಜ್ ಹಿರಿಮೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಬಗ್ಗೆ ಬರೆದ ಹಾಗೂ ಸಕ್ಕರಿ ಬಾಳಾಚಾರ್ಯರ ಬಗೆಗಿನ ವಿಷಯಗಳು ಈ ಕೃತಿಯಲ್ಲಿ ಓದುಗನನ್ನು ಸೆಳೆಯುತ್ತದೆ. ಗಳಗನಾಥರು ತಮ್ಮ ಲೇಖಕ ವೃತ್ತಿಗೆ ಸೇರ್ಪಡೆಗೊಳ್ಳುವಾಗ ಕನ್ನಡದ ಅರುಣೋದಯ ಕಾಲವಾಗಿತ್ತು. ನವೋದಯ ಸಾಹಿತ್ಯವನ್ನು ಗಳಗನಾಥರು ಸ್ವೀಕರಿಸಲಿಲ್ಲ. ಕನ್ನಡದ ಐತಿಹಾಸಿಕ ಸಂಶೋಧನೆ ಇನ್ನೂ ಆರಂಭವಾಗದ ಕಾಲದಲ್ಲಿಯೇ ಸಂಶೋಧನೆ ನಡೆಸುತ್ತಿದ್ದವರು ಗಳಗನಾಥರು. ಐತಿಹಾಸಿಕತೆ ಜೊತೆಗೆ ಕೃತಿಯಲ್ಲಿ ರೋಮ್ಯಾನ್ಸ್ ಬರಹ ಸೇರಿಸುವುದು ಗಳಗನಾಥರಿಗೆ ಅನೀವಾರ್ಯವಾಗಿತ್ತು. ಓದುಗರು ಕೂಡಾ ಗಳಗನಾಥರ ಕಾದಂಬರಿಯನ್ನು ತನ್ಮಯತೆಯಿಂದ ಸ್ವೀಕರಿಸಿದ್ದರು. ಕನ್ನಡಿಗರಲ್ಲಿ ಓದುಗ ಸದಭಿರುಚಿಯನ್ನು ಕೊಟ್ಟಂತವರು ಗಳಗನಾಥರು.” ಎಂದರು.
ಹರ್ಷ ಡಂಬಳ ಮಾತನಾಡಿ “ಈ ಗ್ರಂಥ 464 ಪುಟಗಳನ್ನೊಳಗೊಂಡಿದ್ದು, ಒಂದೇ ಒಂದು ಅನವಶ್ಯಕ ಪದವನ್ನು ಹೊಂದಿಲ್ಲ. ಈ ಕೃತಿಯನ್ನು ಡಾ. ಕೃಷ್ಣಮೂರ್ತಿ ಕಿತ್ತೂರ ಅವರು ಹನ್ನೊಂದು ಪ್ರಕರಣಗಳಲ್ಲಿ ಪ್ರಕಟ ಮಾಡಿದ್ದಾರೆ. ಬೇರೆ ಭಾಷೆ ಹಾವಳಿಯಿಂದ ಕನ್ನಡ ಭಾಷೆ ಕ್ಷೀಣಿಸುವುದನ್ನು ಈ ಕೃತಿ ತೋರಿಸುತ್ತದೆ. ಕನ್ನಡದ ಸಂಶೋಧನಾ ಗ್ರಂಥಗಳಲ್ಲಿ ಧಾರವಾಡಕರ ಅವರ ಸಂಶೋಧನಾ ಗ್ರಂಥವೂ ಆದರೆ ಈ ಕಾದಂಬರಿ ಆ ಸಂಶೋಧನಾ ಗ್ರಂಥಕ್ಕೆ ಸಮಾನವಾಗಿದೆ. ಇಂತಹ ಕೃತಿಯನ್ನು ಕೊಟ್ಟ ಕೃಷ್ಣಮೂರ್ತಿಯವರಿಗೆ ನಾವು ಚಿರ ಋಣಿಯಾಗಿರಬೇಕು. ಗಳಗನಾಥರದ್ದು ತನ್ನದೇ ಆದ ಅಪ್ಪಟ ಶೈಲಿಯಾಗಿದ್ದು, ಯಾರಿಂದಲೂ ಎರವಲು ಪಡೆದಯದ ಶೈಲಿ ಅವರದ್ದಾಗಿದೆ.” ಎಂದು ಹೇಳಿದರು.
ಬಿ. ವಿ. ಕುಲಕರ್ಣಿ ಮಾತನಾಡಿ “ಗಳಗನಾಥರು ಮತ್ತು ಕೃಷ್ಣಮೂರ್ತಿ ಕಿತ್ತೂರ ಅವರ ಸಂಪರ್ಕ ನನಗೆ 1992ರಲ್ಲಿ ಬಂತು. ಒಂದೊಮ್ಮೆ ಕಿತ್ತೂರ ಅವರ ಮನೆಗೆ ಹೋದಾಗ ಈ ಪುಸ್ತಕವನ್ನು ಓದಬೇಕೆಂಬ ಆಸೆಯಿಂದ ಪುಸ್ತಕವನ್ನು ಎರವಲು ಪಡೆದಿದ್ದೆ. ಈ ಪುಸ್ತಕವನ್ನು ಕರ್ನಾಟಕ ವಿಶ್ವವಿದ್ಯಾಲಯದ ವತಿಯಿಂದ ಪ್ರಕಟಿಸಲಾಯಿತು. ಈ ಪುಸ್ತಕ ಇಂದು ಹೊರ ಬರಲು ಧಾರವಾಡದ ಡಯಟ್ ಹಾಗೂ ಮನೋಹರ ಗ್ರಂಥ ಮಾಲಾ ಮೂಲ ಕಾರಣ.” ಎಂದರು.
ಆನಂದತೀರ್ಥ ಕಿತ್ತೂರ, ವೆಂಕಟೇಶ ಗಳಗನಾಥ, ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾದ ದುಷ್ಯಂತ ನಾಡಗೌಡ, ಮನೋಹರ ಗ್ರಂಥ ಮಾಲಾದ ರಮಾಕಾಂತ ಜೋಶಿ, ಸಮೀರ ಜೋಶಿ, ಶ್ರೀನಿವಾಸ ವಾಡಪ್ಪಿ ಉಪಸ್ಥಿತರಿದ್ದರು.