ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ನಿರಂತರ ರಂಗ ಉತ್ಸವ – 2024’ ಕಾರ್ಯಕ್ರಮವನ್ನು ದಿನಾಂಕ 25 ಡಿಸೆಂಬರ್ 2024ರಿಂದ 30 ಡಿಸೆಂಬರ್ 2024ರವರಗೆ ಆರು ದಿನಗಳ ನಾಟಕೋತ್ಸವವನ್ನು ಪ್ರತಿ ದಿನ ಸಂಜೆ 7-00 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 25 ಡಿಸೆಂಬರ್ 2024ರಂದು ಮೈಸೂರಿನ ಸಮತೆಂತೋ ಪ್ರಸ್ತುತಿಯ ಏಕವ್ಯಕ್ತಿ ರಂಗ ಪ್ರಯೋಗ ಡಾ. ಶ್ರೀಪಾದ ಭಟ್ ಇವರ ರಂಗಪಠ್ಯ ವಿನ್ಯಾಸ ನಿರ್ದೇಶನದಲ್ಲಿ, ಇಂದಿರಾ ನಾಯರ್ ಅಭಿನಯಿಸುವ ‘ನೀರ್ಮಾದಳ ಹೂವಿನೊಂದಿಗೆ…’ ನಾಟಕದಲ್ಲಿ ಮೊದಲ ಬಾರಿಗೆ ಕಮಲಾ ದಾಸ್ ರಂಗದ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ದಿನಾಂಕ 26 ಡಿಸೆಂಬರ್ 2024ರಂದು ಅಭಿನವ ವೀರಭದ್ರೇಶ್ವರ ತಂಡದ ವೀರಗಾಸೆ ಜನಪದ ನೃತ್ಯ ನಡೆಯಲಿದೆ. ಇದೇ ದಿನ ನಡೆಯಲಿರುವ ‘ನಿರಂತರ ರಂಗ ಉತ್ಸವ-2024’ದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿ ಮತ್ತು ನಿರಂತರ ನಿರ್ದೇಶಕರು ಶ್ರೀ ಪ್ರಸಾದ್ ಕುಂದೂರು ಇವರುಗಳು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಬರ್ಟೋಲ್ಟ್ ಬ್ರೆಕ್ಟ್ ರಚನೆಯ ಶಕೀಲ್ ಅಹ್ಮದ್ ನಿರ್ದೇಶನದಲ್ಲಿ ನಿರ್ದಿಗಂತ ಅಭಿನಯಿಸುವ ನಾಟಕ ‘ತಿಂಡಿಗೆ ಬಂದ ತುಂಡೇರಾಯ’.
ದಿನಾಂಕ 27 ಡಿಸೆಂಬರ್ 2024ರಂದು ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಇವರು ಭಾಗವಹಿಸಲಿದ್ದಾರೆ. ಡಾ. ಹಂಪನಾ ರಚನೆಯ ಡಾ. ಜೀವನ್‌ರಾಂ ಸುಳ್ಯ ಇವರ ವಿನ್ಯಾಸ, ನಿರ್ದೇಶನದಲ್ಲಿ ಮೂಡುಬಿದಿರೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸುವ ನಾಟಕ ‘ಚಾರುವಸಂತ’.
ದಿನಾಂಕ 28 ಡಿಸೆಂಬರ್ 2024ರಂದು ಮೈಸೂರಿನ ಹಿರಿಯ ರಂಗಕರ್ಮಿಗಳು ಶ್ರೀಮತಿ ರಾಮೇಶ್ವರಿ ವರ್ಮ ಇವರು ಭಾಗವಹಿಸಲಿದ್ದಾರೆ.
ಉಸ್ತಾದ್ ಫಯಾಜ್ ಖಾನ್ ಇವರಿಂದ ‘ಸಂಗೀತ ಸಂಜೆ’ ನಡೆಯಲಿದ್ದು, ಪಂಡಿತ್ ವೀರಭದ್ರಯ್ಯ ಹಿರೇಮಠ್ ಇವರು ಹಾರ್ಮೋನಿಯಂ ಮತ್ತು ಪಂಡಿತ್ ರಮೇಶ್ ಧನ್ನೂರ್ ತಬಲಾ ಸಾಥ್ ನೀಡಲಿದ್ದಾರೆ.
ದಿನಾಂಕ 29 ಡಿಸೆಂಬರ್ 2024ರಂದು ಭಾರತೀಯ ಆಡಳಿತ್ಮಾಕ ಸೇವೆಗಳ ನಿವೃತ್ತ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಎಸ್. ಪ್ರಭಾಕರ್ ಮತ್ತು ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ. ಸುದರ್ಶನ್ ಇವರು ಭಾಗವಹಿಸಲಿದ್ದಾರೆ. ಡಾ. ವಿಕ್ರಮ ವಿಸಾಜಿ ರಚನೆಯ ಪ್ರವೀಣ್ ರೆಡ್ಡಿ ಗುಂಜಹಳ್ಳಿ ಇವರ ನಿರ್ದೇಶನದಲ್ಲಿ ರಾಯಚೂರಿನ ಸಮುದಾಯ ಅಭಿನಯಿಸುವ ನಾಟಕ ‘ರಕ್ತ ವಿಲಾಪ’.
ದಿನಾಂಕ 30 ಡಿಸೆಂಬರ್ 2024ರಂದು ಸಂಜೆ 5:30ಕ್ಕೆ ನಗಾರಿ ಮಂಜು ಮೈಸೂರು ಮತ್ತು ತಂಡದಿಂದ ನಗಾರಿ ಮತ್ತು ತಮಟೆ ವಾದ್ಯ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಖ್ಯಾತ ಕವಿಗಳಾದ ಶ್ರೀ ಪ್ರೊ. ಎಸ್.ಜಿ ಸಿದ್ದರಾಮಯ್ಯ, ರಂಗಕರ್ಮಿಗಳು ಹಾಗೂ ಖ್ಯಾತ ಚಲನಚಿತ್ರ ನಟ ಶ್ರೀ ಪ್ರಕಾಶ್ ರಾಜ್ ಮತ್ತು ಮೈಸೂರಿನ ನಿರಂತರದ ಶ್ರೀ ಸುಗುಣ ಎಂ.ಎಂ. ಇವರುಗಳು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಹೆಗ್ಗೋಡಿನ ಭಳಿರೇ ವಿಚಿತ್ರಮ್ ತಂಡ ಅಭಿನಯಯಿಸುವ ರಾಷ್ಟ್ರಕವಿ ಕುವೆಂಪು ವಿರಚಿತ ‘ಶ್ರೀ ರಾಮಾಯಣ ದರ್ಶನಂ’ ಕೃತಿಯಿಂದ ಆಯ್ದ ರಂಗ ಪ್ರಯೋಗ ಮಂಜು ಕೊಡಗು ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ದಶಾನನ ಸ್ವಪ್ನಸಿದ್ಧಿ’ ನಾಟಕ.
‘ನಿರಂತರ’, ಬದಲಾವಣೆಗಳಿಗೆ ಹೊಂದಿಕೊಳ್ಳುವುದರೊಂದಿಗೆ, ಪರಂಪರೆಯ ಸೊಗಡನ್ನೂ ಮರೆಯದೆ, ಪ್ರಚಲಿತ ಸನ್ನಿವೇಶಗಳೊಂದಿಗೆ ರಂಗಭೂಮಿಯನ್ನು ಮಾಧ್ಯಮವನ್ನಾಗಿಸಿಕೊಂಡು ಮುಖಾಮುಖಿಯಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ಹಲವು ಯಶಸ್ವಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸ್ಪಷ್ಟವಾದ ಉದ್ದೇಶ ಮತ್ತು ಸಾಮಾಜಿಕ ಜವಾಬ್ದಾರಿಗಳಿಂದ ರಂಗಭೂಮಿ, ಜಾನಪದ, ಸಾಹಿತ್ಯ, ಪರಿಸರ ಮುಂತಾದ ಎಲ್ಲಾ ರಂಗಗಳಲ್ಲೂ ಕೆಲಸ ಮಾಡಿರುವ ನಿರಂತರ ಫೌಂಡೇಶನ್, ಜನಪರ ಹೋರಾಟಗಳಲ್ಲಿ ರಂಗಭೂಮಿಯನ್ನು ಪರಿಣಾಮಕಾರಿಯಾಗಿ ಬಳಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ ಹಾಗೂ ಸಾಕ್ಷ್ಯ ಚಿತ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಕರ್ನಾಟಕದ ಮೊತ್ತ ಮೊದಲ ಮಳೆ ನೀರು ಸಂಗ್ರಹಣೆ ಕುರಿತಾದ ಜಲಜಾಥ ಹಾಗೂ ಕರ್ನಾಟಕದಾದ್ಯಂತ ಬಸವಣ್ಣನವರ ವಚನಗಳನ್ನಾಧರಿಸಿದ ‘ಕೂಡಲಸಂಗಮ’ ದೃಶ್ಯರೂಪಕದ 160ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಪ್ರತಿವರ್ಷ ನಿರಂತರ ರಂಗ ಉತ್ಸವವನ್ನು ಹಮ್ಮಿಕೊಂಡು ಬರುತ್ತಿದೆ. ಜನಪದ ಮಹಾಕಾವ್ಯ ಜುಂಜಪ್ಪ ವಾಚನಾಭಿನಯ, ಡಾ. ಚಂದ್ರಶೇಖರ ಕಂಬಾರರ ‘ಶಿವರಾತ್ರಿ’ ನಾಟಕವು ಮುಂಬೈನ ಮೈಸೂರು ಅಸೋಸಿಯೇಶನ್, ಭೂಪಾಲದ ‘ಭಾರತ ರಂಗ ಮಂಡಲ’ ಹಾಗೂ ದೆಹಲಿಯಲ್ಲಿ ರಾಷ್ಟ್ರಿಯ ನಾಟಕ ಶಾಲೆ ಆಯೋಜಿಸಿದ್ದ ‘15ನೇ ಭಾರತ ರಂಗ ಮಹೋತ್ಸವ’ದಲ್ಲಿ ಹಾಗೂ 2015ರ ಸಂಗೀತ ನಾಟಕ ಅಕಾಡೆಮಿಯ ಉತ್ಸವದಲ್ಲಿ ಪ್ರದರ್ಶನ ನೀಡಿದೆ. ಟಿ.ಕೆ. ದಯಾನಂದ್ ಪುಸ್ತಕ ಆಧಾರಿತ ‘ರಸ್ತೆ ನಕ್ಷತ್ರ’ ನಾಟಕವನ್ನು ರಂಗಾಯಣ ಆಯೋಜಿಸಿದ್ದ ‘ಬಹುರೂಪಿ ಬಹುಭಾಷಾ ಅಂತರಾಷ್ಟ್ರಿಯ ರಂಗೋತ್ಸವ 2017’ರಲ್ಲಿ ಪ್ರರ್ದಶನ ಕಂಡಿದೆ.
ಜಯರಾಮ ರಾಯಪುರ ರಚನೆಯ ನಾಟಕ ‘ವಾರಸುದಾರಾ’ವನ್ನು ನಿರಂತರದ ಪ್ರಸಾದ್ ಕುಂದೂರುರವರ ನಿರ್ದೇಶನದಲ್ಲಿ ಅಭಿನಯಿಸಲಾಯಿತು, ವರಕವಿ ದ.ರಾ. ಬೇಂದ್ರೆಯವರ ‘ಸಾಯೋ ಆಟ’ ನಾಟಕವನ್ನು ನಿರಂತರದ ಹಿರಿಯ ಗೆಳೆಯರೇ ನಿರ್ದೇಶಿಸಿ ಹಲವು ಕಾಲೇಜಿನಲ್ಲಿ ಅಭಿನಯಿಸಿದ್ದಾರೆ. ಈ ವರ್ಷದ ‘ನಿರಂತರ’ದ ಹೊಸ ನಾಟಕ ಕನ್ನಡ ಸಾರಸತ್ವ ಲೋಕದ ವಿಸ್ಮಯ ಕಥೆಗಾರ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ತಮ್ಮ ನೀಳ್ಗವಿತೆಯೊಳಗೆ ಸೃಷ್ಟಿಸಿರುವ ‘ಕೃಷ್ಣೇಗೌಡರ ಆನೆ’ ನಾಟಕವು ಜೀವನ್ ಕುಮಾರ್ ಹೆಗ್ಗೋಡು ಇವರ ನಿರ್ದೇಶನದಲ್ಲಿ ಮೂಡಿಬಂದಿದೆ. ಪ್ರತಿವರ್ಷ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಸಹಜರಂಗ’ ಎಂಬ ರಂಗ ತರಬೇತಿಯ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದೆ.
ನಾಡಿನ ರಂಗಭೂಮಿಗೆ ಪ್ರಮುಖ ಕೊಡುಗೆ ನೀಡುತ್ತಿರುವ ನಿರಂತರ ಫೌಂಡೇಶನ್, ಮೈಸೂರು. ನೂರಾರು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ರಂಗ ಉತ್ಸವಗಳನ್ನು ಯಶಸ್ವಿಯಾಗಿ ಮಾಡಿ ಪ್ರಸ್ತುತ 16ನೇ ವರ್ಷದ ಉತ್ಸವದ ಹೊಸ್ತಿಲಿಗೆ ಬಂದಿದೆ ಮತ್ತು ಪ್ರತಿ ವರ್ಷವೂ ರಾಜ್ಯದ ನಾನಾ ಭಾಗಗಳಿಂದ ವಿಭಿನ್ನ ಶೈಲಿಯ ನಾಟಕ ಮತ್ತು ಜಾನಪದ ಪ್ರಕಾರಗಳ ಪ್ರದರ್ಶನವನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ಬಾರಿಯೂ ಸಮಗ್ರತೆಯ ಸಂಕೇತವಾಗಿ ನಮ್ಮ ಮಹಾಕಾವ್ಯಗಳಿಂದ ಹಿಡಿದು ಕುವೆಂಪು ಮತ್ತು ಬ್ರೆಕ್ಟ್ ಇವರ ನಾಟಕಗಳ ಪ್ರಸ್ತುತಿಯೂ ಇರಲಿದೆ.
ದಿನಾಂಕ 18 ಡಿಸೆಂಬರ್ 2024ರಂದು ಬುಧವಾರ ಬೆಳಿಗ್ಗೆ 11-00 ಗಂಟೆಗೆ ಪತ್ರಕರ್ತರ ಭವನದಲ್ಲಿ ‘ನಿರಂತರ ರಂಗ ಉತ್ಸವ -2024’ರ ಬಿತ್ತಿಪತ್ರ ಬಿಡುಗಡೆ ನಡೆಯಿತು. ಈ ಸಂದರ್ಭದಲ್ಲಿ ಮೈಸೂರಿನ ಕನ್ನಡಪ್ರಭ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಶ್ರೀ ಅಂಶಿ ಪ್ರಸನ್ನಕುಮಾರ್, ಲೇಖಕರದ ಶ್ರೀ ನಾ. ದಿವಾಕರ, ನಿರಂತರದ ಸುಗುಣ, ಪ್ರಾಧ್ಯಾಪಕಿಯಾದ ಯಶಸ್ವಿನಿ, ಶ್ರೀನಿವಾಸ್ ಪಾಲಹಳ್ಳಿ ನಿರಂತರ ಮತು ಕೆಂಪರಾಜು ನಿರಂತರ ಉಪಸ್ಥಿತರಿದ್ದರು.