ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಹಮ್ಮಿಕೊಂಡಿರುವ ವಿಶ್ವಕರ್ಮ ಕಲಾ ಸಿಂಚನ -2024 ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2024 ರಂದು ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಫೂರ್ತಿ ಮೆಡಿಕಲ್ ಅಕಾಡೆಮಿಯ ಆಡಳಿತ ನಿರ್ದೇಶಕಿಯಾಗಿರುವ ಡಾ. ಜ್ಯೋತಿ ಜಗದೀಶ್ ಮಾತನಾಡಿ “ವಿದ್ಯಾರ್ಥಿಗಳಲ್ಲಿರುವ ವಿಶಿಷ್ಟ ಪ್ರತಿಭೆಯನ್ನು ಎಳವೆಯಲ್ಲೇ ಗುರುತಿಸಿದಲ್ಲಿ ಅವರ ಮುಂದಿನ ವೃತ್ತಿಜೀವನದ ಆಯ್ಕೆ ಸುಲಭವಾಗುತ್ತದೆ. ಇದರಿಂದ ವಿದ್ಯಾರ್ಥಿಯು ತನ್ನ ಆಸಕ್ತಿಯ ಕ್ಷೇತ್ರದಲ್ಲೇ ಸಾಧನೆ ಮಾಡಲು ಅನುಕೂಲವಾಗುತ್ತದೆ.” ಎಂದರು.
ಶುಭಾಶಂಸನೆಗೈದ ಕ್ಷೇತ್ರದ ಆಡಳಿತಾಧಿಕಾರಿಗಳಾದ ಕೆ. ಉಮೇಶ್ ಆಚಾರ್ಯ “ವಿಶ್ವಕರ್ಮ ಕಲಾ ಪರಿಷತ್ ಸಮುದಾಯದ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ” ಎಂದರು. ಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಈ ಸಂದರ್ಭದಲ್ಲಿ ಲೇಖಕಿ, ನಿವೃತ್ತ ಪ್ರಾಂಶುಪಾಲೆ ಹಾಗೂ ಕಲಾವಿದೆಯೂ ಆಗಿರುವ ಲಲಿತಾ ಕೆ. ಆಚಾರ್ ಇವರ ʼಸುಲಲಿತ ಕಾವ್ಯ ಚಿತ್ತಾರʼ ಎನ್ನುವ ಕೃತಿಯನ್ನು ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಮಂಗಳೂರು ವಿಭಾಗದ ಅಧ್ಯಕ್ಷರಾಗಿರುವ ಡಾ. ಮೀನಾಕ್ಷಿ ರಾಮಚಂದ್ರ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು “ಬಳಸಿ ಬಿಸಾಡುವ ಹೂ, ಹಣ್ಣು, ಎಲೆ, ಬೀಜಗಳನ್ನು ಬಳಸಿ ತಯಾರಿಸಲಾದ ವಿಭಿನ್ನ ಕಲಾಕೃತಿಗಳು ಹಾಗೂ ಅದಕ್ಕೆ ಸಂಬಂಧಿಸಿದ ಕವನಗಳನ್ನು ಒಳಗೊಂಡಿರುವ ಈ ಕೃತಿಯು ಬಹಳ ಅಪರೂಪವಾದದ್ದು.” ಎಂದರು. ಕೃತಿಕಾರರಾದ ಲಲಿತಾ ಕೆ. ಆಚಾರ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ವಿಶ್ವಕರ್ಮ ಕಲಾ ಪರಿಷತ್ತಿನ ಗೌರವಾಧ್ಯಕ್ಷರಾದ ಪಿ. ಎನ್. ಆಚಾರ್ಯ, ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾಸಂಘದ ಗೌರವಾಧ್ಯಕ್ಷರಾದ ಪಿ. ಕೆ. ದಾಮೋದರ ಆಚಾರ್ಯ, ಪ್ರಸನ್ನ ಜ್ಯುವೆಲ್ಲರ್ಸ್ ಇದರ ಮಾಲಕರಾದ ಪ್ರಭಾಕರ ಮಣೇಲ್ ಆಚಾರ್ಯ, ಮಹಾನಗರ ಪಾಲಿಕಾ ಸದಸ್ಯೆಯಾದ ಸಂಧ್ಯಾ ಮೋಹನ ಆಚಾರ್ಯ, ಫಾರ್ಮಾ ಎಕ್ಸಿಕ್ಯೂಟಿವ್ ಜೆ. ಭಾಸ್ಕರ ಆಚಾರ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಲಾ ಪರಿಷತ್ತಿನ ಉಪಾಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಯಜ್ಞೇಶ್ವರ ಆಚಾರ್ಯ ಕೃಷ್ಣಾಪುರ ಪ್ರಸ್ತಾವನೆಗೈದು, ಕಾರ್ಯಕಾರಿ ಸದಸ್ಯ ಜಗದೀಶ ಸಿದ್ಧಕಟ್ಟೆ, ಭರತ್ ರಾಜ್ ಬೈಕಾಡಿ ಹಾಗೂ ಅಕ್ಷತಾ ಬೈಕಾಡಿ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ರಮ್ಯಾ ಲಕ್ಷ್ಮೀಶ್ ಆಚಾರ್ಯ ಧನ್ಯವಾದ ಸಮರ್ಪಿಸಿದರು.
ಕೋಶಾಧಿಕಾರಿ ಎ. ಜಿ. ಸದಾಶಿವ ಮಂಗಳಾದೇವಿ, ಗೌರವ ಸಲಹೆಗಾರರಾದ ಪ್ರೊ. ಜಿ. ಯಶವಂತ ಆಚಾರ್ಯ, ಪದಾಧಿಕಾರಿಗಳಾದ ವೈ. ಎನ್. ತಾರಾನಾಥ ಆಚಾರ್ಯ, ಸುಧಾಮ ಆಚಾರ್ಯ, ನಾಗರಾಜ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಆಭರಣ ವಿನ್ಯಾಸ ಸ್ಪರ್ಧೆ, ಶ್ರೀ ವಿಶ್ವಕರ್ಮ ಹಾಗೂ ಶ್ರೀ ಕಾಳಿಕಾಂಬೆಯ ಭಕ್ತಿಗೀತೆ ಗಾಯನ ಸ್ಪರ್ಧೆ, ವಿಶ್ವಬ್ರಾಹ್ಮಣರ ಸಂಸ್ಕೃತಿ ಪರಂಪರೆಗಳ ಕುರಿತಾದ ರಸಪ್ರಶ್ನೆ ಸ್ಪರ್ಧೆ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳು ಜರಗಿದವು.ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನವನ್ನು ನೀಡಲಾಯಿತು.