ಸಿದ್ದಾಪುರ: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ‘ವಚನ ಗಾಯನ’ ಕಾರ್ಯಕ್ರಮವು ದಿನಾಂಕ 19 ಡಿಸೆಂಬರ್ 2024ರಂದು ನೆಲ್ಲಿಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ಕಣಿವೆ ಭಾರಧ್ವಜ್ ಆನಂದತೀರ್ಥ ಮಾತನಾಡಿ “ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಬದುಕುವ ಸಮಾನ ಹಕ್ಕನ್ನು ಪ್ರತಿಪಾದಿಸಿದ ಶರಣರು ದಯೆಯನ್ನು ಧರ್ಮದ ಮೂಲವಾಗಿಸಿದರು. ಜೊತೆಗೆ ಎಲ್ಲಾ ಧರ್ಮಗಳ ಸಾರವೂ ಇದೇ ಆಗಿದೆ ಎಂದು ಹೇಳಿದರು. ಪ್ರಾಣಿ ಪಕ್ಷಿಗಳೊಂದಿಗಿನ ಜೀವರಾಶಿಗಳು ಹಾಗೂ ಮನುಷ್ಯನ ಜೀವ ಒಂದೇ. ಯಾವ ಕಾರಣಕ್ಕೂ ಅನಗತ್ಯವಾಗಿ ಹರಣವಾಗಬಾರದು ಎಂಬ ಸದುದ್ದೇಶದಿಂದ ಬಸವಾದಿ ಶರಣರು, ಕಲಬೇಡ ಕೊಲಬೇಡ ಎಂಬ ವಚನದ ಮೂಲಕ ಮನುಷ್ಯನ ಸುಂದರ ಬದುಕಿಗೆ ಅಗತ್ಯವಿರುವ ದೀವಿಗೆ ಹಚ್ಚಿದ್ದಾರೆ. ಹಾಗೆಯೇ ಇಸ್ಲಾಂ, ಕ್ರೈಸ್ತ, ಬೌದ್ಧ ಮೊದಲಾದ ಎಲ್ಲಾ ಧರ್ಮಗಳು ಕೂಡ ಅದೇ ಸಂದೇಶ ಸಾರಿವೆ. ಆದರೆ ನಾವು ಅವುಗಳನ್ನು ಅರಿಯುವಲ್ಲಿ ಹಾಗೂ ಪಾಲನೆ ಮಾಡುವಲ್ಲಿ ಎಡವಿದ್ದೇವೆ. ಹಾಗಾಗಿ ಸಂಕೋಲೆಗಳಲ್ಲಿ ಸಿಲುಕಿದ್ದೇವೆ.” ಎಂದು ವಿಷಾದಿಸಿದರು.
‘ಸಾಂಸ್ಕೃತಿಕ ನಾಯಕ ಬಸವಣ್ಣ’ ಎಂಬ ವಿಚಾರದ ಕುರಿತು ಪ್ರವಚನ ನೀಡಲು ಆಗಮಿಸಿದ್ದ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಮೆ. ನಾ. ವೆಂಕಟನಾಯಕ್ ಮಾತನಾಡಿ “ಹನ್ನೆರಡನೇ ಶತಮಾನದಲ್ಲಿನ ಬಸವಾದಿ ಶರಣರು ಇಡೀ ಮನು ಕುಲಕ್ಕೆ ಅಗತ್ಯವಿರುವ ಜೀವನ ಮೌಲ್ಯಗಳನ್ನು ವಚನಗಳಲ್ಲಿ ಸಾರಿ ಹೋಗಿದ್ದಾರೆ. ಆದರೆ ಅತಿಯಾಸೆಯ ಮಾನವ ಅವುಗಳನ್ನು ಅರಿಯುವಲ್ಲಿ ವಿಫಲನಾಗಿದ್ದಾನೆ. ಹಾಗಾಗಿ ಸಮಾಜದಲ್ಲಿ ನಿತ್ಯವೂ ಮೋಸ, ವಂಚನೆ, ದ್ವೇಷ, ದರೋಡೆ, ಕೊಲೆ ಮತ್ತು ಸುಲಿಗೆಗಳು ಘಟಿಸುತ್ತಿವೆ. ಒಳ್ಳೆಯ ಮಾತುಗಳು, ನಡೆ ಹಾಗೂ ನುಡಿ, ಸತ್ಯ ಶುದ್ಧ ಕಾಯಕ ಶರಣರ ಧ್ಯೇಯವಾಗಿತ್ತು. ಅಸಮಾನತೆ, ವರ್ಗ ಹಾಗೂ ವರ್ಣ ಸಂಘರ್ಷಗಳನ್ನು ತೊರೆಯಲು ಶರಣರು ಮಾಡಿದ ಕ್ರಾಂತಿ ಅನನ್ಯವಾದುದು.” ಎಂದು ಬಸವಾದಿ ಶರಣ ಶರಣೆಯರ ವಚನಗಳ ಸಾರವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಮುಸ್ತಾಫ ಮಾತನಾಡಿ “ಶರಣರ ಸಂದೇಶಗಳ ಪಾಲನೆಯಿಂದ ಆದರ್ಶ ಸಮಾಜ ಸಾಧ್ಯವಿದೆ.” ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೆ. ಎನ್. ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ಕೆ. ಪಿ. ಎಸ್. ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಭಕ್ತ ಹಾಗೂ ಶಾಲೆಯ ಹಲವು ವಿದ್ಯಾರ್ಥಿಗಳು ಬಸವೇಶ್ವರ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯ ಮೊದಲಾದವರ ವಚನಗಳನ್ನು ಗಾಯನ ಮಾಡಿದರು. ಶರಣ ಸಾಹಿತ್ಯ ಪರಿಷತ್ತು ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನಟರಾಜು, ಶಾಲೆಯ ಶಿಕ್ಷಕ ಟಿ. ಎನ್. ಶಶಿಕುಮಾರ್, ಶಿಕ್ಷಕಿ ಆಶಾ, ಏರಿನ್, ರಮ್ಯಾ, ಪುಷ್ಪಲತಾ, ಮೇರಿ, ಸುನೀತಾ ಮೊದಲಾದವರು ಉಪಸ್ಥಿತರಿದ್ದರು.