ಪಡುಬಿದ್ರಿ : ಪಡುಬಿದ್ರಿ ಪರಿಸರದ ಎಂಟು ಪ್ರೌಢಶಾಲೆಗಳ ‘ಕಿಶೋರ ಯಕ್ಷಗಾನ’ ಸಂಭ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 20 ಡಿಸೆಂಬರ್ 2024ರಂದು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಾಲಯದ ವಠಾರದಲ್ಲಿ ನಡೆಯಿತು.
ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ. ಜಿ. ಶಂಕರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಕ್ಷೇತ್ರ ಆಡಳಿತ ಅಧ್ಯಕ್ಷರಾದ ಗಿರಿಧರ ಸುವರ್ಣ, ಮಹಾಜನ ಸಂಘದ ಸದಸ್ಯರಾದ ಗುಂಡು ಬಿ. ಅಮೀನ್ ಹಾಗೂ ಕೋಶಾಧಿಕಾರಿ ಸುಧಾಕರ ಕುಂದರ್ ಅಭ್ಯಾಗತರಾಗಿ ಭಾಗವಹಿಸಿದರು.
ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿ, ಅಜಿತ್ ಕುಮಾರ್ ಮತ್ತು ಕಿಶೋರ್ ಸಿ. ಉದ್ಯಾವರ ಸಹಕರಿಸಿದರು. ಸಭೆಯ ಪೂರ್ವದಲ್ಲಿ ಗಣಪತಿ ಪ್ರೌಢಶಾಲೆ, ಪಡುಬಿದ್ರಿ ಇಲ್ಲಿಯ ವಿದ್ಯಾರ್ಥಿಗಳಿಂದ ನಿತಿನ್ ಪಡುಬಿದ್ರಿ ನಿರ್ದೇಶನದಲ್ಲಿ ‘ತರಣಿಸೇನಾ ಕಾಳಗ’ ಮತ್ತು ಸಭೆಯ ಬಳಿಕ ಮಹಾದೇವಿ ಪ್ರೌಢಶಾಲೆ ಕಾಪು ಇದರ ವಿದ್ಯಾರ್ಥಿಗಳಿಂದ ಸತೀಶ್ ಆಚಾರ್ಯ ನಿರ್ದೇಶನದಲ್ಲಿ ‘ಅಷ್ಟಾಕ್ಷರೀ ಮಂತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡವು.