ಮಂಗಳೂರು : ನೃತ್ಯಾಂಗನ್ ಸಂಸ್ಥೆ ಮತ್ತು ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ನೃತ್ಯ ಲಹರಿ ವತಿಯಿಂದ ‘ಶಾಸ್ತ್ರೀಯ ಭರತನಾಟ್ಯ ಉತ್ಸವ’ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2024ರಂದು ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಇವರು ಮಾತನಾಡಿ “ಕಲೆಗಳಿಂದ ಭಾರತದ ಶ್ರೀಮಂತಿಕೆ ಉಳಿದಿದೆ. ಕಲಾರಂಗದಲ್ಲಿ ತೊಡಗಿಕೊಂಡಿರುವ ಕಲಾವಿದರ ಕೊಡುಗೆ ಸ್ಮರಣೀಯ. ನಮ್ಮ ದೇಶದಲ್ಲಿ ಪ್ರದೇಶಗಳಿಗೆ ಅನುಸಾರವಾಗಿ ಹಲವು ಕಲೆಗಳಿವೆ. ಜಾನಪದ ಹಾಗೂ ಶಾಸ್ತ್ರೀಯ ಕಲೆಗಳು ಜನಮಾನಸದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ. ಕಾವ್ಯಾ ಗಣೇಶ್ ಶಾಸ್ತ್ರೀಯ ನೃತ್ಯ ಮತ್ತು ಉತ್ತರ ಭಾರತದಲ್ಲಿ ಅಳಿವಿನ ಅಂಚಿನಲ್ಲಿರುವ ಬುಡಕಟ್ಟು ಜನಾಂಗದ ಸಮಸ್ಯೆಯನ್ನು ಬಿಂಬಿಸುವ ಪ್ರಾಚಿ ಸಾಥಿ ಅವರ ನಾಟ್ಯ ಈ ದೇಸಿ ಸೊಗಡನ್ನು ಪ್ರತಿಬಿಂಬಿಸಿವೆ. ಮಂಗಳೂರಿನ ಸದಭಿರುಚಿಯ ಪ್ರೇಕ್ಷಕರು ನೃತ್ಯವನ್ನು ಸ್ವೀಕರಿಸಿದ ರೀತಿಯೂ ಶ್ಲಾಘನೀಯ” ಎಂದು ಹೇಳಿದರು.
ಚೆನ್ನೈಯ ಕಲಾವಿದೆ ಕಾವ್ಯಾ ಗಣೇಶ್ ಇವರು ‘ಡಾನ್ಸಿಂಗ್ ಟು ಹರ್ ಓನ್ ಟ್ಯೂನ್’ ಎಂಬ ಏಕವ್ಯಕ್ತಿ ನೃತ್ಯವನ್ನು ಸಾದರಪಡಿಸಿದ ಬಳಿಕ ಮುಂಬೈಯ ಕಲಾವಿದೆ ಪ್ರಾಚಿ ಸಾಥಿ ಇವರು ‘ಭರತನಾಟ್ಯ, ವರ್ಲಿ ಕಲೆ ಮತ್ತು ತಲ್ಲೀನತೆಯ ಆನಿಮೇಷನ್’ ಎಂಬ ಕಲ್ಪನೆಯ ವೆನ್ ವಾಲ್ಸ್ ಡಾನ್ಸ್ ಎಂಬ ಎಂಬ ಏಕವ್ಯಕ್ತಿ ನೃತ್ಯ ಪ್ರಸ್ತುತಪಡಿಸಿದರು. ಯೋನಿತಾ ಜೈನ್ ಬೆಂಗಳೂರು ಬೆಳಕು ಸಂಯೋಜನೆ ನಿರ್ವಹಿಸಿ, ನೃತ್ಯಾಂಗನ್ ಸಂಸ್ಥೆ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.