ಕಾಸರಗೋಡು : ಸಂಘಟಕಿ, ಬಹುಮುಖ ಪ್ರತಿಭೆ, ಕನ್ನಡ ಸಾಹಿತ್ಯ ನಾಡು ನುಡಿಗೆ, ಕನ್ನಡ ಸಂಸ್ಕೃತಿಗೆ ತನ್ನದೇ ಆದ ಬಹುಮುಖ ಕೊಡುಗೆಗಳನ್ನು ನೀಡುತ್ತಾ ವಿವಿಧ ಸಂಘ, ಸಂಸ್ಥೆಗಳೊಂದಿಗೆ ಕಾರ್ಯಮುಖ ಸಂಪರ್ಕ ಸಾಧನೆಯಲ್ಲಿರುವ ಡಾ. ಅಮೀನಾ ಬೇಗಂ ಎಂ. ಕಾಲೇಖಾನ್ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಮೈಸೂರು ಜಿಲ್ಲಾಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದಾರೆ.
ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕವನ್ನು ಸ್ಥಾಪಿಸಲಾಗುತ್ತದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿದರು. ಬಾಗಲಕೋಟ ಜಿಲ್ಲಾಧ್ಯಕ್ಷರಾದ ಡಾ. ಸಿದ್ದಣ್ಣ ಬ್ಯಾಡಗಿ ಮುದೋಳ ಹಾಗೂ ಕನ್ನಡ ಭವನ ನಿರ್ದೇಶಕರಾದ ಸಿ.ವೈ. ಮೆಣಸಿನಕಾಯಿ ಅನುಮೋದಿಸಿದರು. ಸರ್ವಾನುಮತದೊಂದಿಗೆ ಆಯ್ಕೆಯಾದ ಡಾ. ಅಮೀನಾ ಬೇಗಂ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಕಾಸರಗೋಡು ಪ್ರದೇಶಕ್ಕೆ ಆಗಮಿಸುವ ಸಾಹಿತ್ಯ, ಸಾಂಸ್ಕೃತಿಕ ರಾಯಬಾರಿಗಳಿಗೆ ‘ಉಚಿತ ವಸತಿ ಸೌಕರ್ಯ ಹಾಗೂ ರಜತ ಸಂಭ್ರಮ ವಿಶೇಷ ಕನ್ನಡ ಕಾರ್ಯಕ್ರಮ ಸಂಘಟನೆ, ಸಂಯೋಜನೆಯ ಜವಾಬ್ದಾರಿ ಸ್ವೀಕರಿಸಿ ಜಿಲ್ಲಾ ಘಟಕವನ್ನು ವಿಸ್ತರಿಸಿ ಕಾರ್ಯ ಪ್ರವೃತರಾಗಬೇಕೆಂದು ಕನ್ನಡ ಭವನ ಸಾಂಸ್ಕೃತಿಕ ಸಮುಚ್ಚಯದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಚಾಲಕಿಯಾದ ಸಂಧ್ಯಾರಾಣಿ ಟೀಚರ್ ಜಂಟಿಯಾಗಿ ತಿಳಿಸಿದ್ದಾರೆ.