ಭಾರತದ ಮಹತ್ವದ ಲೇಖಕರಲ್ಲಿ ಒಬ್ಬರಾದ ಎಂ.ಟಿ. ವಾಸುದೇವನ್ ನಾಯರ್ ಅವರು ಮಲಯಾಳಂ ಕಥನ ಸಾಹಿತ್ಯದಲ್ಲಿ ಹೊಸಶಖೆಯನ್ನು ಆರಂಭಿಸಿದ ಕತೆಗಾರರಾಗಿದ್ದಾರೆ. ಕನ್ನಡದ ನೆಲದಲ್ಲಿ ನವ್ಯ ಸಾಹಿತ್ಯ ಆರಂಭವಾಗಲು ಕಾರಣವಾದ ವಸ್ತು ವಿಚಾರಗಳೇ ಮಲಯಾಳದಲ್ಲಿ ‘ಮಾಡರ್ನಿಸಂ’ ಆರಂಭವಾಗಲು ಕಾರಣವಾಗಿದ್ದು, ಅದನ್ನೇ ಮುಖ್ಯ ಸಂವೇದನೆಯನ್ನಾಗಿರಿಸಿಕೊಂಡ ಎಂ.ಟಿ.ಯವರು ಸಾಮಾಜಿಕ ಮೌಲ್ಯ ಮತ್ತು ಆದರ್ಶಗಳು ಕುಸಿದು ಬೀಳುತ್ತಿರುವುದನ್ನು ಕಂಡು ಭ್ರಮನಿರಸನಗೊಂಡು ಆತ್ಮ ವಿಮರ್ಶೆಯತ್ತ ತಿರುಗಿದರು. ವ್ಯಕ್ತಿಯ ವೈಯಕ್ತಿಕ ವಿಚಾರಗಳು ಮತ್ತು ಒಂಟಿತನದ ಭಾವವನ್ನು ಅಭಿವ್ಯಕ್ತಿಸುವಲ್ಲಿ ಆಸಕ್ತಿಯನ್ನು ಹೊಂದಿದ್ದ ಅವರು ಹೆನ್ರಿ ಜೇಮ್ಸ್ ಮತ್ತು ಜೇಮ್ಸ್ ಜಾಯ್ಸರ ವಿಧಾನದಿಂದ ಸ್ಪೂರ್ತಿಯನ್ನು ಪಡೆದು ಬರವಣಿಗೆಯನ್ನು ಆರಂಭಿಸಿದರು. ಬಳಿಕ ಮಲಯಾಳಂ ಕಥಾ ಸಾಹಿತ್ಯವು ಕಾಲ್ಪನಿಕತೆಯನ್ನು ಮೀರಿ ನಿಂತು ವ್ಯಕ್ತಿತ್ವದ ಪೂರ್ಣತೆಯತ್ತ ಗಮನ ಹರಿಸತೊಡಗಿತು. ಎಂ.ಟಿ.ಯವರು ಪ್ರತಿನಿಧಿಸುವ ನಾಯರ್ ಸಮುದಾಯವನ್ನು ಒಳಗೊಂಡ ಸಾಮಾಜಿಕ ಸ್ವರೂಪ ಮತ್ತು ಸಾಹಿತ್ಯಕ ಪರಿಸರವು ಅವರ ಬರಹಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು.
ರಾಜರ ಆಡಳಿತ ಕಾಲದಲ್ಲಿ ನಾಯಮ್ಮಾರರು ರಾಜ್ಯದ ರಕ್ಷಣಾ ವ್ಯವಸ್ಥೆಯನ್ನು ವಹಿಸಿದ್ದರು. ಇವರನ್ನು ಶೂದ್ರರು ಎನ್ನಲಾಗುತ್ತಿತ್ತು. ಕೊಚ್ಚಿ, ತಿರುವಾಂಕೂರು ಮತ್ತು ಕೋಝಿಕೋಡು ಪ್ರಾಂತ್ಯದ ಉಸ್ತುವಾರಿಯು ಇವರದ್ದೇ ಆಗಿತ್ತು. ರಾಜನಿಗೆ ಬೇಕಾಗಿ ಯುದ್ಧವನ್ನು ಮಾಡುತ್ತಿದ್ದ ಇವರನ್ನು ‘ನಾಯಕರ್’ ಎನ್ನತೊಡಗಿದರು. ಈ ಪದವು ಕಾಲಕ್ರಮೇಣ ಅಪಭ್ರಂಶ ಹೊಂದಿ ‘ನಾಯರ್’ ಎಂದಾಯಿತು. ಸುಮಾರು ನೂರು ವರ್ಷಗಳವರೆಗೆ ನಿರಂತರವಾಗಿ ನಡೆದ ಚೇರ-ಚೋಳರ ನಡುವಿನ ಹೋರಾಟದ ಫಲವಾಗಿ ಹಲವಾರು ನಾಯರ್ ಗಂಡಸರು ವೀರಮರಣವನ್ನಪ್ಪಿದರು. ನಾಯರ್ ಯುವತಿಯರು ಅನಾಥರಾಗತೊಡಗಿದರು. ನಾಶವಾಗತೊಡಗಿದ ತಲೆಮಾರನ್ನು ಉಳಿಸುವ ಹೆಸರಿನಲ್ಲಿ ಬ್ರಾಹ್ಮಣ ಸಮುದಾಯದ ನಂಬೂದಿರಿ ಯುವಕರು ಅವರೊಂದಿಗೆ ಸಂಬಂಧ ಇರಿಸಿಕೊಳ್ಳತೊಡಗಿದರು. ಆದರೆ ದೈಹಿಕ ಸಂಬಂಧ ಮತ್ತು ಆರ್ಥಿಕ ಸಹಾಯವನ್ನು ಹೊರತುಪಡಿಸಿದ ಜವಾಬ್ದಾರಿಯನ್ನು ಹೊರಲು ಅವರು ತಯಾರಾಗಲಿಲ್ಲ. ನಂಬೂದಿರಿಯಿಂದ ನಾಯರ್ ಹೆಂಗಸಿಗೆ ಹುಟ್ಟಿದ ಮಗುವನ್ನು ನಾಯರ್ ಆಗಿಯೇ ಬೆಳೆಸಬೇಕಾಯಿತು. ಮಗುವಿನ ತಂದೆ ಯಾರು ಎಂಬ ಪ್ರಶ್ನೆಗೆ ಅವಕಾಶವಿಲ್ಲದಿರುವುದರಿಂದ ತಂದೆಯಾದವನು ಕೌಟುಂಬಿಕ ವ್ಯವಸ್ಥೆಯಲ್ಲಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡ. ತಾಯಿಯ ದೊಡ್ಡಣ್ಣನಾದ ಸೋದರಮಾವನು ತಂದೆಯ ಸ್ಥಾನದಲ್ಲಿ ನಿಂತು ಮಗುವಿನ ಆರೈಕೆಗಳನ್ನು ನೋಡಿಕೊಳ್ಳಬೇಕಾಯಿತು. ಆತನು ತೀರಿಕೊಂಡರೆ ಈ ಮಗನೇ ಎಳ್ಳುನೀರನ್ನು ಬಿಡಬೇಕು. ಈ ಮೂಲಕ ಅಳಿಯ ಕಟ್ಟು ರೂಢಿಗೆ ಬಂತು. ನಾಯರ್ ಜನಾಂಗದ ಮೂಲಕ ಆಸ್ತಿಯ ಹಕ್ಕು ಹೆಣ್ಣು ಮಕ್ಕಳಿಗೆ ದೊರಕಿದಾಗ ಕೇರಳದಲ್ಲಿ ಆ ಪದ್ಧತಿಯು ಪ್ರಬಲವಾಯಿತು. ಹುಟ್ಟು ಸಾವುಗಳು ಉಂಟಾದಾಗ ಅಮ್ಮನ ಮುಖಾಂತರ ನಡೆಯುವ ಕ್ರಿಯಾ ಕರ್ಮಗಳಿಗೆ ಮಾತ್ರ ಪ್ರಾಮುಖ್ಯತೆಯು ಲಭಿಸಿತು. 60ರ ದಶಕದವರೆಗೂ ಶಾಲೆಯಲ್ಲಿ ನಾಯರ್ ಹುಡುಗನ ಬಳಿ ಅವನ ಅಮ್ಮ-ಮಾವನ ಹೆಸರುಗಳನ್ನು ಕೇಳುತ್ತಿದ್ದರೇ ಹೊರತು ತಂದೆಯ ಹೆಸರನ್ನಲ್ಲ. ಅವನು ತನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡುವಂತಿಲ್ಲ. ಆದರೆ ತಾಯಿಯು ತನಗೆ ಯಾವನಿಂದಲೋ ಹುಟ್ಟಿದ ಮಗನಿಂದ ತನ್ನ ಸೋದರನ ಕ್ರಿಯಾಕರ್ಮಗಳನ್ನು ಮಾಡಿಸಬೇಕಾದ ಪರಿಸ್ಥಿತಿಯು ತಲೆದೋರಿತು. ಮಾವನ ಮಕ್ಕಳಿಗೆ ಕೂಡ ಅವನ ಉತ್ತರಕ್ರಿಯೆಯನ್ನು ಮಾಡುವ ಹಕ್ಕಿರಲಿಲ್ಲ. ಯಾರಿಂದಲೋ ಹುಟ್ಟಿದ ಮಗನನ್ನು ಪ್ರೀತಿಸದ ಹಿರಿಯ ಮಾವ. ಕಠಿಣ ಶಿಸ್ತಿನ ಬದುಕು. ಮಾವ ಕೊಟ್ಟದ್ದನ್ನು ತೆಗೆದುಕೊಳ್ಳಬೇಕೇ ಹೊರತು ಹೆಚ್ಚು ಬೇಡುವಂತಿಲ್ಲ. ಓಣಂ, ವಿಷುವಿನಂಥ ವಿಶೇಷ ದಿನಗಳಲ್ಲಿ ಮಾತ್ರವೇ ಅವರಿಗೆ ಹೊಸ ಬಟ್ಟೆ, ಔತಣಗಳು ಸಿಗುತ್ತಿದ್ದವು.
ಕೇರಳದಲ್ಲಿ ಎಡರಂಗ ಸರಕಾರವು ಅಧಿಕಾರ ವಹಿಸಿದ ಬಳಿಕ ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೆ ಬಂತು. ಎಕರೆಗಟ್ಟಲೆ ಜಮೀನುಗಳನ್ನು ಹೊಂದಿದ್ದ ನಂಬೂದಿರಿಗಳ ಪ್ರಾಬಲ್ಯವು ಕ್ಷೀಣಿಸಿದೊಡನೆ ಆಸ್ತಿಗಳ ಹಕ್ಕು ಅವರ ಕಾರ್ಯಸ್ಥ (ಆಪ್ತ ಸಹಾಯಕ)ರಾದ ನಾಯರ್‌ಗಳ ಪಾಲಾಯಿತು. ನಂಬೂದಿರಿ ಯುವಕರೆಲ್ಲರೂ ನಾಯರ್ ಹೆಂಗಸರೊಡನೆ ಸಂಬಂಧವಿಟ್ಟುಕೊಂಡಿದ್ದರಿಂದ ಆ ಸಲಿಗೆಯನ್ನು ಉಪಯೋಗಿಸಿಕೊಂಡು ಅವರು ಆಸ್ತಿಯನ್ನು ತಮ್ಮದಾಗಿಸಿಕೊಂಡರು. ಆದರೆ ಭೂಮಸೂದೆ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿಯು ಹದಿಮೂರು ಎಕರೆಗಿಂತ ಹೆಚ್ಚು ಭೂಮಿ ಹೊಂದುವಂತಿಲ್ಲ. ಬುದ್ಧಿವಂತರಾದ ನಂಬೂದಿರಿಗಳು ಮತ್ತು ನಾಯರರು ಕೂಡಲೇ ತಮ್ಮ ಮಕ್ಕಳಿಗೆ ಭೂಮಿ ಕಾಣಿಗಳನ್ನು ಹಂಚಿಕೊಟ್ಟರು. ಹಾಗೆ ಮಾಡಲಾಗದವರು ಆಸ್ತಿಗಳನ್ನು ಕಳೆದುಕೊಂಡರು. ತುಂಬಾ ಆಸ್ತಿವಂತನಾಗಿದ್ದವನು ಇದ್ದಕ್ಕಿದ್ದಂತೆ ಎಲ್ಲವನ್ನು ಕಳೆದುಕೊಂಡಾಗ ಉಂಟಾಗುವ ಮಾನಸಿಕ ಒತ್ತಡವನ್ನು ನಾಯರ್ ಸಮುದಾಯದವರು ಅನುಭವಿಸಿದರು. ಬೇರೆ ಉದ್ಯಮಗಳನ್ನು ಕೈಗೊಳ್ಳಲು ಅಂತಸ್ತು, ಸ್ವಾಭಿಮಾನಗಳು ಅಡ್ಡ ಬಂದವು. ಬೇರೆ ದಾರಿಯಿಲ್ಲದೆ ಭೂಮಿಯನ್ನು ಹಂಚಿಕೊಂಡು ಬೇಸಾಯದ ಮೊರೆ ಹೊಕ್ಕರು. ಮಾತೃ ಪ್ರಧಾನ ಕುಟುಂಬದ ಒಡೆಯನಾದ ಕಾರಣವರ್ (ದೊಡ್ಡ ಮಾವ)ನ ದರ್ಪಕ್ಕೆ ರೋಸಿದ ಅವನ ಅಳಿಯಂದಿರು ಮತ್ತು ಸೊಸೆಯರು ನಡೆಸತೊಡಗಿದ ಒಳಜಗಳಗಳಿಂದಾಗಿ ಅವಿಭಕ್ತ ಕುಟುಂಬಗಳು ಅವ್ಯವಸ್ಥೆಗೆ ಒಳಗಾದವು. ಆಧುನಿಕತೆ ಮತ್ತು ಮಕ್ಕಳ ಕಟ್ಟು ಪದ್ಧತಿಯು ಅಸ್ತಿತ್ವಕ್ಕೆ ಬಂದು ಅವಿಭಕ್ತ ಕುಟುಂಬವು ಅಣುಕುಟುಂಬಗಳಾಗಿ ಬದಲಾಗತೊಡಗಿದವು. ಹಳೆಯ ಪದ್ಧತಿಯನ್ನು ಉಳಿಸಿಕೊಳ್ಳಲು ಅವಿಭಕ್ತ ಕುಟುಂಬವು ಶಕ್ತಿಮೀರಿ ಯತ್ನಿಸಿತು. ದೊಡ್ಡ ಮಾವನು ಇತರರ ಮೇಲೆ ಹೇರುವ ಅತಿಯಾದ ಕಟ್ಟುನಿಟ್ಟು, ಸ್ವೇಚ್ಛಾಧಿಪತ್ಯವು ಕಿರಿಯ ತಲೆಮಾರಿಗೆ ಅಸಹನೀಯವೆನಿಸಿತು. ದೊಡ್ಡ ಮಾವ ಮತ್ತು ಕಿರಿಯರ ನಡುವೆ ಅಸಮಾಧಾನ, ಅತೃಪ್ತಿಗಳು ಹೊಗೆಯಾಡತೊಡಗಿದವು. ಈ ಪ್ರಕ್ಷುಬ್ಧ ಪರಿಸ್ಥಿಯಲ್ಲಿ ಸಿಲುಕಿದ ಮಕ್ಕಳು ದೊಡ್ಡ ಮಾವನಿಗೆ ಹೆದರುತ್ತಾ ತಾಯಿಗೆ ಅಂಟಿಕೊಂಡರು. ಹೀಗೆ ಘರ್ಷಣೆ ತುಂಬಿದ ವಾತಾವರಣದಲ್ಲಿ ಸ್ವಾನುಭವದ ಆಧಾರದಿಂದ ಎಂ.ಟಿ.ಯವರ ಪಾತ್ರಗಳು ರೂಪುಗೊಂಡವು.
ತರವಾಡು ಮನೆಗಳಲ್ಲಿ ತಿರಸ್ಕಾರಕ್ಕೊಳಗಾಗಿ ಒಂಟಿತನದ ನೋವಿನಿಂದ ಬಳಲುವ ಮಕ್ಕಳ ವ್ಯಥೆಗಳನ್ನು ಎಂ.ಟಿ.ಯವರು ಹೃದಯಸ್ಪರ್ಶಿಯಾಗಿ ಪ್ರಸ್ತುತಪಡಿಸುತ್ತಾರೆ. ಅವಿಭಕ್ತ ಕುಟುಂಬದ ನಡುವೆ ಅನೇಕ ಮಂದಿಗಳ ಜೊತೆ ಬದುಕುವಾಗಲೂ ಅವರು ಏಕಾಕಿತನವನ್ನು ಅನುಭವಿಸುತ್ತಾರೆ. ಹಿರಿಯವರಿಂದ ಬೈಗುಳ, ಹಿಂಸೆ ಮತ್ತು ಶಾಪಗಳಿಗೆ ಗುರಿಯಾದಾಗ ತಮ್ಮನ್ನು ಪ್ರೀತಿಸುವವರು ಯಾರೂ ಇಲ್ಲ ಎಂಬ ಯೋಚನೆಯು ಅವರಲ್ಲಿ ಪರಕೀಯತೆಯನ್ನು ಉಂಟು ಮಾಡುತ್ತದೆ. ಒಳ್ಳೆಯ ಊಟ, ಬಟ್ಟೆಬರೆ, ಹುಟ್ಟುಹಬ್ಬಕ್ಕೊಂದು ಪಾಯಸ ಮುಂತಾದ ಸೀಮಿತ ಆಸೆಗಳೂ ಪೂರೈಸದಿದ್ದಾಗ ಸಮವಯಸ್ಕರ ಮುಂದೆ ಅಪಹಾಸ್ಯಕ್ಕೀಡಾಗಿ ನೊಂದುಕೊಳ್ಳುವ ಮಕ್ಕಳನ್ನು ಎಂ.ಟಿ.ಯವರ ಕತೆಗಳಲ್ಲಿ ಕಾಣಲು ಸಾಧ್ಯ. ಆಸೆಗಳನ್ನು ಅದುಮಿಟ್ಟುಕೊಂಡು ಕಳೆದ ಬಾಲ್ಯವನ್ನು ನೆನಪಿಸಿಕೊಂಡು ಇಡೀ ಜಗತ್ತಿನ ಮೇಲೆ ಕಿಡಿ ಕಾರುತ್ತಾ ನಡೆಯುವ ಬಾಲ್ಯ, ಯೌವನಗಳ ಅವಸ್ಥೆಯನ್ನು ಎಂ.ಟಿ.ಯವರು ಜಾಣ್ಮೆಯಿಂದ ಹೆಣೆಯುತ್ತಾರೆ. ‘ಕರ್ಕಾಟಕ’ (ಕರ್ಕಿಟಕಂ) ಎಂಬ ಕತೆಯು ಈ ಪರಿಸ್ಥಿತಿಗೆ ಬರೆದ ಮುನ್ನುಡಿಯಾಗಿದೆ. ಖಾದ್ಯವಸ್ತುಗಳ ಅಭಾವವಿರುವ ದಿನಗಳಿಂದ ಕೂಡಿದ ಕರ್ಕಾಟಕ ತಿಂಗಳು ಮಲಯಾಳಿಗಳ ಪಾಲಿಗೆ ಅಶುಭಕಾರಿಯಾಗಿದೆ. ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಮಾಡಲು ಅನ್ನವಿಲ್ಲದೆ ಹಸಿದು ಬಂದ ಹುಡುಗನಿಗೆ ಮನೆಯಲ್ಲಿಯೂ ಅನ್ನವಿಲ್ಲ. ರಾತ್ರಿಯ ಹೊತ್ತಿನಲ್ಲಾದರೂ ಊಟ ಸಿಗಬಹುದು ಎಂದು ಆಸೆ ಪಡುತ್ತಿದ್ದಂತೆ ನೆಂಟನೊಬ್ಬ ಬಂದು ಬಾಲಕನ ಪಾಲಿನ ಊಟವನ್ನು ಮುಗಿಸಿದಾಗ ಹಸಿವಿನಿಂದ ನಿದ್ದೆ ಹೋಗುವ ಹುಡುಗನ ಯಾತನೆಯು ಹೃದಯವನ್ನು ತಟ್ಟುತ್ತದೆ. ತರವಾಡು ಮನೆಯಲ್ಲಿ ಸಿರಿವಂತಿಕೆಯ ಸೋಗಿದ್ದರೂ ಹಸಿವೆಯಿಂದ ಬಳಲಿದವರಿದ್ದಾರೆ. ಅಧಿಕಾರವನ್ನು ಚಲಾಯಿಸುವ ಅಳಿಯನು ಮನೆಯ ಯಜಮಾನನಾಗಿದ್ದರೂ ಒಲೆಯಲ್ಲಿ ಬೆಂಕಿಯು ಉರಿಯಬೇಕಿದ್ದರೆ ಮನೆಯ ಹೆಂಗಸರು ಸಾಲಕ್ಕೆ ಪರದಾಡಬೇಕಾದ ದುಸ್ಥಿತಿಯು ಒದಗಿರುತ್ತದೆ. ಮನೆತನದ ಅಂತಸ್ತನ್ನು ಕಾಪಾಡುವ ಆತುರದಲ್ಲಿ ಹುಡುಗನ ಹಸಿವನ್ನು ಯಾರೂ ಗಮನಿಸುವುದಿಲ್ಲ. ಅವನು ಪ್ರತಿಭಟನೆಯ ವಿಚಾರವನ್ನು ಮಾಡಲಾರ. ಆದರೆ ಅವನ ಮೂಕ ಯಾತನೆಯು ಓದುಗರನ್ನು ವ್ಯವಸ್ಥೆಯ ವಿರುದ್ಧ ಬಂಡೇಳಿಸಬಲ್ಲದು.
‘ಅಕ್ಕಯ್ಯ’ (ಓಪ್ಪೋಳ್) ‘ನರಿಯ ಮದುವೆ’ (ಕುರುಕ್ಕಂಡೆ ಕಲ್ಯಾಣಂ) ಕತೆಗಳಲ್ಲಿ ತಂದೆಯ ಪ್ರೀತಿಯಿಂದ ವಂಚಿತರಾದ ಮಕ್ಕಳ ಸಂಕಟವನ್ನು ಕಾಣಲು ಸಾಧ್ಯ. ದುರ್ಬಲ ಗಳಿಗೆಯಲ್ಲಿ ಜಾರಿದ ಹೆಣ್ಣೊಬ್ಬಳು ಮದುವೆಯಾಗದೆ ಹೆತ್ತರೂ ಮಗನೆಂದು ಕರೆಯಲಾಗದ, ತಾಯಿಯೆಂದು ತಿಳಿಯದೆ ಅಕ್ಕನೆಂದು ಕರೆಯುವ ಹುಡುಗನ ಪರಿಸ್ಥಿತಿಯು ಮನಕಲಕುತ್ತದೆ. ಚಿಕ್ಕಪುಟ್ಟ ಆಸೆಗಳನ್ನೂ ಈಡೇರಿಸಲಾರದೆ ಮೂಲೆಗುಂಪಾಗಿರುವ ಹುಡುಗನಿಗೆ ಅದೇ ಪರಿಸ್ಥಿತಿಯನ್ನು ಅನುಭವಿಸುವ ಅಕ್ಕನೇ ಎಲ್ಲವೂ ಆಗಿದ್ದಾಳೆ. ದೊಡ್ಡಮ್ಮನ ಆಕ್ರಮಣ, ಬಿರುನುಡಿ, ಅವಮಾನಗಳಿಂದ ಪಾರಾಗಲು ತಾಯಿಯ ಮೊರೆ ಹೋಗುವ ಮಗುವಿನಂತೆ ಹುಡುಗನು ಅಕ್ಕಯ್ಯನಲ್ಲಿ ರಕ್ಷಣೆಯನ್ನು ಬಯಸುತ್ತಾನೆ. ಅಕ್ಕಯ್ಯನ ಅಂತರಂಗದಂತೆ ಅವನ ಅಂತರಂಗವೂ ಭಯಗ್ರಸ್ತವಾಗಿದೆ. ‘ಅಕ್ಕಯ್ಯ’ ಕತೆಯ ನಿಜವಾದ ವಸ್ತು ಸಮಾಜದ ದೃಷ್ಟಿಯಲ್ಲಿ ಪಾಪವೆನಿಸಿಕೊಂಡ ಕ್ರಿಯೆಯ ಪರಿಣಾಮವಾಗಿ ಅಕ್ಕಯ್ಯ ಅನುಭವಿಸುವ ನೋವು, ಯಾತನೆಗಳಾಗಿವೆ. ಬದುಕುಳಿಯುವ ಆಸೆ ಇರುವುದರಿಂದ ತನ್ನ ತಪ್ಪಿನ ಪರಿಣಾಮವನ್ನು ಮೌನವಾಗಿ ಅನುಭವಿಸುತ್ತಾಳೆ. ಆಕೆಯ ದುರಂತ ಕಥನವು ಬಾಲಕನ ನಿವೇದನೆಯ ರೂಪದಲ್ಲಿ ಓದುಗನನ್ನು ತಟ್ಟುತ್ತದೆ. ಪರಿಸ್ಥಿತಿಯ ಒತ್ತಡಕ್ಕೆ ಬಲಿಯಾದ ಅಕ್ಕಯ್ಯನು ತನ್ನ ಭೂತಕಾಲವನ್ನು ಮುಚ್ಚಿಟ್ಟು ವಯನಾಡಿನವನನ್ನು ಮದುವೆಯಾಗಿ ತೆರಳುವಾಗ ಹುಡುಗನು ಎಲ್ಲ ಅರ್ಥದಲ್ಲೂ ಒಂಟಿಯಾಗುತ್ತಾನೆ. ‘ಗಲ್ಲಿಯ ಬೆಕ್ಕು ಮೂಕಬೆಕ್ಕು’ (ಇಡವಳಿಯಿಲೆ ಪೂಚ್ಚ ಮಿಂಡಾ ಪೂಚ್ಚ) ಎಂಬ ಕತೆಯು ಇದೇ ವಸ್ತುವನ್ನು ತಪ್ಪಿತಸ್ಥ ಹೆಣ್ಣಿನ ಕಣ್ಣಿನಿಂದ ನೋಡುತ್ತದೆ. ಆಕೆಯ ತಪ್ಪಿನಿಂದಾಗಿ ಮನಸ್ಸು ಕೆಡಿಸಿಕೊಂಡ ಗಂಡ ಮನೆ ಬಿಟ್ಟು ಹೋಗಿದ್ದಾನೆ. ಹಿಂದಿನ ದಿನಗಳಲ್ಲಿ ಸಂತೃಪ್ತವಾಗಿದ್ದ ಸಂಸಾರ ಈಗ ಸುಖಮಯವಾಗಿರುವುದಿಲ್ಲ. ಮಕ್ಕಳಾದ ಸಣ್ಣಿ ಮತ್ತು ವನಜ ಆಕೆಯನ್ನು ಅನ್ಯಳಾಗಿ ಕಾಣುತ್ತಾರೆ. ನಡೆನುಡಿಯಲ್ಲೂ ಯಾಂತ್ರಿಕತೆ ಮತ್ತು ಔಪಚಾರಿಕತೆ ತಲೆಯೆತ್ತಿದೆ. ಈ ಪರಿಸ್ಥಿತಿಯು ದೇಶಕಾಲ ಪರಿಮಿತವಾದದ್ದಲ್ಲ. ಆದರೆ ಆಕೆಯ ಮನೋವೇದನೆಯು ವ್ಯಕ್ತವಾಗುವ ಬಗೆಯು ಆ ಕಾಲಕ್ಕೆ ಹೊಸತು. ಸಾಂಪ್ರದಾಯಿಕ ಕತೆಯಲ್ಲಾದರೆ ಆಕೆಯ ಅಪರಾಧಿ ಪ್ರಜ್ಞೆ ಮತ್ತು ಕೊರಗು ಅತಿಭಾವುಕತೆಗೆ ದಾರಿ ಮಾಡುವ ಸಾಧ್ಯತೆಯಿತ್ತು. ಆದರೆ ವಸ್ತುಸ್ಥಿತಿಯನ್ನು ದಾಖಲಿಸುವುದರಲ್ಲಿ ಪರವಶವಾಗದೆ ಮರುಕ್ಷಣವೇ ನೆನಪುಗಳ ಸುರುಳಿಯನ್ನು ಬಿಚ್ಚಿಡುವ ಪ್ರಜ್ಞಾಪ್ರವಾಹ ತಂತ್ರವು ಅದಕ್ಕೆ ಕಟ್ಟೆಯನ್ನು ಕಟ್ಟಿದೆ. ಆದರೆ ಈ ಕತೆಯು ಆಕೆಯ ಕೊರಗಿನೊಡನೆ ತನ್ನ ಪ್ರಿಯಕರನಿಗಾಗಿ ಹೊಂದಿದ ಪ್ರೀತಿ ಅವನಿಂದ ದೊರಕಿರಬಹುದಾದ ಸುಖ, ಗಂಡನಿಗೆ ಮೋಸ ಮಾಡುತ್ತಿರುವುದರಿಂದ ಮನಸ್ಸು ತೂಗುಯ್ಯಾಲೆಯಾಡುವ ರೀತಿಯನ್ನು ಒಟ್ಟಾಗಿ ಹರಿಯಬಿಟ್ಟಿದ್ದರೆ ಕತೆಗೆ ಅಪೂರ್ವವಾದ ಸಂಕೀರ್ಣತೆಯು ಒದಗುವ ಸಾಧ್ಯತೆಯಿತ್ತು.
ಬಿಸಿಲು ಮತ್ತು ಮಳೆ ಜೊತೆಯಾಗಿ ಸುರಿಯುವುದನ್ನು ‘ನರಿಯ ಮದುವೆ’ ಎನ್ನುವ ರೂಢಿಯಿದೆ. ನರಿಗೆ ಮದುವೆಯಾಗುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಪರಸ್ಪರ ವಿರುದ್ಧವಾಗಿರುವ ಬಿಸಿಲು ಮತ್ತು ಮಳೆ ಜೊತೆಯಾಗಿ ಬರುವುದು ಸಾಧ್ಯವಿಲ್ಲ. ಆದರೆ ಪ್ರಕೃತಿಯಲ್ಲಿ ಬಿಸಿಲುಮಳೆ ಎಂಬ ವಿದ್ಯಮಾನವಿರುವುದು ನಿಜ. ಆದ್ದರಿಂದ ಸಂಭವನೀಯಲ್ಲದ್ದು ಸಂಭವಿಸುತ್ತದೆ ಎಂಬ ಜನಪದ ನಂಬಿಕೆಯನ್ನು ಈ ಕತೆಯ ಶೀರ್ಷಿಕೆಯು ಧ್ವನಿಸುತ್ತದೆ. ಗಂಡುಹೆಣ್ಣಿನ ಸಂಬಂಧಗಳ ಸ್ವರೂಪ, ಕುಂಞನ ಹುಟ್ಟು, ಅನೈತಿಕ ಸಂಬಂಧದ ಪರಿಣಾಮವಾಗಿ ಹುಟ್ಟಿದ್ದರಿಂದ ನೆರೆಮನೆಯ ನಾರಾಯಣ ಆಚಾರಿಯನ್ನು ತಂದೆಯೆಂದು ಕರೆಯಲಾರದ ಪರಿಸ್ಥಿತಿ, ತನ್ನ ಹುಟ್ಟಿನ ಬಗ್ಗೆ ಅಪಹಾಸ್ಯ ಮಾಡಿದ ಶಂಕುಣ್ಣಿಯನ್ನು ಕೊಲ್ಲುವ ಕ್ರಿಯೆಗಳು ರೂಢಿಗೆ ವಿರುದ್ಧ ನೆಲೆಯಲ್ಲಿರುವುದರಿಂದ ಶೀರ್ಷಿಕೆಯು ಧ್ವನಿಪೂರ್ಣವೆನಿಸುತ್ತದೆ. ಅಂತ್ಯದಲ್ಲಿ ರಹಸ್ಯವನ್ನು ಸ್ಫೋಟಿಸಿ ಓದುಗರನ್ನು ಬೆಚ್ಚಿ ಬೀಳಿಸುವ ತಂತ್ರವನ್ನು ಬಿಟ್ಟುಕೊಟ್ಟ ಕತೆಯು ಸತ್ಯವನ್ನು ಮೊದಲೇ ಧ್ವನಿಸಿ, ಅದನ್ನು ಒಪ್ಪಿಕೊಂಡೇ ಕುಂಞನ ವರ್ತನೆ, ತಲ್ಲಣ ಮತ್ತು ಯಾತನೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವಕಾಶವನ್ನು ನೀಡುತ್ತದೆ. ಮನೆಯ ಅವ್ಯವಸ್ಥೆ, ಅಸ್ವಸ್ಥತೆ, ತಿರಸ್ಕಾರ ಮತ್ತು ಸುತ್ತುಮುತ್ತಲಿನವರ ಅಪಹಾಸ್ಯಗಳು ಕುಂಞನನ್ನು ಏಕಾಕಿತನದತ್ತ ಒಯ್ಯುತ್ತವೆ. ಇವುಗಳಿಂದ ತಪ್ಪಿಸಿಕೊಂಡು ನಿಶ್ಚಿಂತನಾಗಲು ಜಾಗಗಳನ್ನು ಹುಡುಕುತ್ತಾ ಅಲೆಯುತ್ತಾನೆ. ಮಳೆಗೆ ಒದ್ದೆಯಾಗದಂತೆ, ಬಿಸಿಲು ತಾಗದಂತೆಬಾಗಿ ನಿಂತ ಬಂಡೆಗಳ ನಡುವಿನ ಪ್ರದೇಶವು ಅವನ ಖಾಸಗಿ ಜಾಗವಾಗಿದೆ. ಆ ಗುಡ್ಡದ ಇಳಿಜಾರು, ಬಾಗಿದ ಬಂಡೆ, ಹಸಿರು ಕಾಡುಗಳೆಲ್ಲವೂ ತನ್ನ ಸ್ವಂತವೆಂಬಂತೆ ಅವನು ಸಂಭ್ರಮಿಸುತ್ತಾನೆ. ಅಲ್ಲಿ ಯಾವ ಆತಂಕವೂ ಇಲ್ಲದೆ, ಒಂಟಿಯಾಗಿ ಉಳಿದು ನೆಮ್ಮದಿಯನ್ನು ಅನುಭವಿಸುತ್ತಾನೆ. ವ್ಯಕ್ತಿ ವಿಶಿಷ್ಟವಾದ ಈ ಅವಸ್ಥೆಯನ್ನು ಎಂ.ಟಿ.ಯವರು ರೋಗಿಷ್ಟ ನೆಲೆಯಲ್ಲಿ ಗ್ರಹಿಸಿದ್ದರೂ ಇದು ಪರಕೀಯತೆಯನ್ನು ಮೀರುವ ಪ್ರಯತ್ನವಾಗಿದೆ.
‘ಕರ್ಕಾಟಕ’ದಂತೆ ‘ತಾಂತ್ರಿಕ’ (ಒಡಿಯನ್), ‘ಪಟಾಕಿ’ (ಪಡಕ್ಕಂ) ಎಂಬ ಕತೆಗಳು ಒಂದು ಸನ್ನಿವೇಶ, ಮನಸ್ಸಿನ ಭಾವಸ್ಥಿತಿ, ಸಂಬಂಧದ ಬಿಕ್ಕಟ್ಟುಗಳ ಸ್ವರೂಪದ ಸೂಚನೆಯನ್ನು ನೀಡುತ್ತಲೇ ವ್ಯವಸ್ಥೆಯೊಳಗಿನ ಅಸಮಾನತೆ ಮತ್ತು ಕ್ರೌರ್ಯಗಳನ್ನು ಬಿಚ್ಚಿಡುತ್ತವೆ. ‘ತಾಂತ್ರಿಕ’ ಎಂಬ ಕತೆಯಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯವನ್ನು ಕಾಣಬಹುದು. ಸಮಾಜದಲ್ಲಿ ಕೆಳವರ್ಗಕ್ಕೆ ಸೇರಿದ ಕಂಡಂಕಾಳಿ ಎಂಬ ತಾಂತ್ರಿಕನು ನಂದಿಕುಣಿತವನ್ನು ಮಾಡಲು ಬರುವಾಗ ತಡ ಮಾಡಿದ್ದಕ್ಕೆ ತರವಾಡಿನ ಹಿರಿಯ ಮಾವನು ಆತನಿಗೆ ಹೊಡೆಯುತ್ತಾನೆ. ಆತನು ಮುಂದೆ ವಾಮಾಚಾರವನ್ನು ಪ್ರಯೋಗಿಸಬಹುದಾದ ಸಾಧ್ಯತೆಯನ್ನು ಕಲ್ಪಿಸಿದ ಉಣ್ಣಿ ಎಂಬ ಹುಡುಗನು ಮುಂದಿನ ಭವಿಷ್ಯವನ್ನು ನೆನೆದು ತಲ್ಲಣಿಸುತ್ತಾನೆ. ಹಿರಿಯ ಮಾವನು ತಾಂತ್ರಿಕನಿಗೆ ಹೊಡೆದದ್ದು ಪ್ರೌಢಜಗತ್ತಿನಲ್ಲಿ ವಿರಳವಾದ ಸಂಗತಿಯಲ್ಲದಿದ್ದರೂ ಅದು ಸಾಮಾನ್ಯವೆಂಬಂತೆ ಸ್ವೀಕೃತಗೊಳ್ಳುವುದು ದುರಂತವೇ ಸರಿ. ಆದರೆ ಹುಡುಗನು ಕ್ರೌರ್ಯದ ಪ್ರತಿಬಿಂಬವಲ್ಲ. ಅಂಥ ಕ್ಷಣಗಳು ಅವನನ್ನು ಪ್ರೌಢ ಜಗತ್ತಿನಿಂದ ಬೇರ್ಪಡಿಸುತ್ತವೆ.
ಹಬ್ಬದ ದಿನ ಪಟಾಕಿಯನ್ನು ಸಿಡಿಸಲು ಭಗವತಿಯ ಹುಂಡಿಯಿಂದ ಹಣವನ್ನು ಕದ್ದ ಬಳಿಕ ಹುಡುಗನು ಅನುಭವಿಸುವ ಭಯ, ಗೊಂದಲ ಮತ್ತು ಪಶ್ಚಾತ್ತಾಪವನ್ನು ವಿವರಿಸುವ ‘ಪಟಾಕಿ’ ಎಂಬ ಕತೆಯು ಅದಕ್ಕೆ ಸಂಬಂಧಿಸಿದ ಕಾರ್ಯಕಾರಣ ಸಂಬಂಧಗಳನ್ನು ಓದುಗರ ಊಹೆಗೆ ಬಿಡುತ್ತದೆ. ನಾಯರ್ ತರವಾಡಿನ ಹುಡುಗನು ಪಟಾಕಿ ಕೊಳ್ಳಲೂ ಗತಿಯಿಲ್ಲದವನೆಂದರೆ ಆತನ ಕುಟುಂಬದ ಮುಖ್ಯಸ್ಥನಾಗಿದ್ದ ಹಿರಿಯ ಮಾವನು ಕಿರಿಯರ ಆಶೋತ್ತರಗಳನ್ನು ಅದೆಷ್ಟು ನಿಕೃಷ್ಟವಾಗಿ ಕಾಣುತ್ತಿರಬಹುದು ಎಂಬ ವಿಚಾರವನ್ನು ಧ್ವನಿಸುತ್ತದೆ. ಮುಗ್ಧ ಮನಸ್ಸಿನ ಹುಡುಗನನ್ನು ಕೇಂದ್ರವಾಗಿಟ್ಟುಕೊಂಡು ಇಂಥ ಕತೆಗಳನ್ನು ನಿರೂಪಿಸುವ ಮೂಲಕ ಕಥನ ಕ್ರಿಯೆಯ ಪರಿಣಾಮವನ್ನು ಸಾಮಾಜಿಕ ನ್ಯಾಯ ಅನ್ಯಾಯಗಳ, ಪಾಪ ಪುಣ್ಯಗಳ ಸೋಂಕಿಲ್ಲದಂತೆ ಕೇವಲ ಮಾನವೀಯ ಅನುಭೂತಿಯಾಗಿ ಗ್ರಹಿಸುವ ಮನೋಭಿತ್ತಿಯು ಸೃಷ್ಟಿಯಾಗಿದೆ. ಬದುಕನ್ನು ಯಾವ ಪೂರ್ವಾಗ್ರಹಗಳಿಲ್ಲದ ನಿಷ್ಪಕ್ಷಪಾತ ದೃಷ್ಟಿಯಿಂದ ನೋಡಲು ಸಾಧ್ಯವಾಗಿದೆ. ಬದುಕಿನ ಮೂಕ ವೇದನೆಗಳನ್ನು, ಅರ್ಥಹೀನ ರೂಪಗಳನ್ನು ಹುಡುಗನ ಮುಗ್ಧನೋಟದಿಂದ ನೋಡಿರುವುದರಿಂದ ಕತೆಗಳ ಸೊಗಸು ಹೆಚ್ಚಿದೆ.
ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಮೇಷ್ಟ್ರ ಮನಸ್ಸಿಗೆ ನೋವನ್ನು ಉಂಟು ಮಾಡುವಂಥ ತಪ್ಪೆಸಗಿದ ಹುಡುಗನ ಮನಸ್ಸಿನಲ್ಲೆದ್ದ ಪಶ್ಚಾತ್ತಾಪದ ಭಾವನೆಯೇ ‘ತಪ್ಪು ಒಪ್ಪು’ (ತೆಟ್ಟುಂ ತಿರುತ್ತುಂ) ಎಂಬ ಕತೆಯಲ್ಲಿ ಪ್ರತಿಫಲಿಸಿದೆ. ವಾಸು ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಅಧ್ಯಾಪಕರ ಪಾಲಿಗೆ ತಲೆನೋವಾಗಿದ್ದ ಅಪ್ಪುಣ್ಣಿ, ಆನೆಪಾಚ್ಚ ಮುಂತಾದ ಉಡಾಳ ಹುಡುಗರ ತಂಡದ ಕಿಡಿಗೇಡಿತನಗಳನ್ನು ಕೃಷ್ಣ ಮೇಷ್ಟ್ರು ತಮ್ಮ ಶಿಸ್ತಿನ ನಡವಳಿಕೆಯ ಮೂಲಕ ನಿಯಂತ್ರಿಸುತ್ತಾರೆ. ಇದರಿಂದ ಕನಲಿದ ವಿದ್ಯಾರ್ಥಿಗಳು ಅಧ್ಯಾಪಕನ ಮೇಲೆ ಹಗೆಯನ್ನು ತೀರಿಸುವ ಉದ್ದೇಶದಿಂದ ಅಮ್ಮಿಣಿ ಟೀಚರ್ ಮತ್ತು ಕೃಷ್ಣ ಮೇಷ್ಟ್ರ ನಡುವೆ ಅನೈತಿಕ ಸಂಬಂಧವನ್ನು ಆರೋಪಿಸಿ ಗೋಡೆ ಬರಹಗಳನ್ನು ಬರೆಯುತ್ತಾರೆ. ಮೇಷ್ಟ್ರು ಪ್ರಯಾಣಿಸುತ್ತಿದ್ದ ದೋಣಿ ಮಗುಚುವಂತೆ ಮಾಡಿ ಅವರನ್ನು ನದಿಗೆ ಬೀಳಿಸುತ್ತಾರೆ. ಮೇಷ್ಟ್ರು ಬದುಕುಳಿದರೂ ಅವರ ಕೊಡೆ, ಚಪ್ಪಲಿ ಮತ್ತು ಥರಮಾಸಗಳು ನೀರುಪಾಲಾಗುತ್ತವೆ. ಕೆಲವೇ ದಿನಗಳಲ್ಲಿ ಅವರಿಗೆ ವರ್ಗವಾದಾಗ ಮಕ್ಕಳು ದ್ವೇಷವನ್ನು ಮರೆತು ತಮ್ಮ ಹಣದಿಂದ ಹೊಸ ಥರಮಾಸನ್ನು ಖರೀದಿಸಿ ಉಡುಗೊರೆಯ ರೂಪದಲ್ಲಿ ನೀಡಲು ತೀರ್ಮಾನಿಸುವಷ್ಟರಲ್ಲಿ ಮೇಷ್ಟ್ರು ಶಾಲೆಯಿಂದ ಹೊರಟು ಹೋಗಿರುತ್ತಾರೆ. ಎಂದಾದರೊಂದು ದಿನ ಮೇಷ್ಟ್ರನ್ನು ಭೇಟಿಯಾಗಿ ಕ್ಷಮೆಯನ್ನು ಕೇಳಬೇಕೆಂದು ಬಯಸುತ್ತಿದ್ದ ವಾಸುವಿನ ಮುಂದೆ ಮೇಷ್ಟ್ರು ಕಾಣಿಸಿಕೊಂಡರೂ ಅವರ ಬಳಿ ತಪ್ಪೊಪ್ಪಿಗೆಯನ್ನು ಮಾಡಿಕೊಳ್ಳಲಾರದೆ ಮೂಕನಾಗುವ ಪರಿಸ್ಥಿತಿಯ ಚಿತ್ರಣವನ್ನು ಕಾಣುತ್ತೇವೆ.
‘ಇರುಳಿನ ಆತ್ಮ’ (ಇರುಟ್ಟಿಂಡೆ ಆತ್ಮಾವ್) ಎಂ.ಟಿ.ಯವರ ಶ್ರೇಷ್ಠ ಕತೆಗಳಲ್ಲಿ ಒಂದು. ತಂದೆ ತಾಯಿಯರನ್ನು ಕಳೆದುಕೊಂಡು ತಬ್ಬಲಿಯಾದ ವೇಲಾಯುಧನ್ ತರವಾಡಿನಲ್ಲಿ ಬದುಕುತ್ತಿದ್ದಾನೆ. ಮನೆಮಂದಿಯ ಅನಾದರ ಮತ್ತು ಪ್ರೀತಿಯ ಕೊರತೆಯಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ. ವ್ಯಕ್ತಿ, ಸಮಾಜ ಮತ್ತು ಕುಟುಂಬದಲ್ಲಿ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿರುವ ವೇಲಾಯುಧನು ಹುಚ್ಚನಲ್ಲದಿದ್ದರೂ ಅವನನ್ನು ಚಿಕ್ಕ ಕೋಣೆಯೊಳಗೆ ಕೂಡಿ ಹಾಕುತ್ತಾರೆ. ಆತನು ತನ್ನ ಮಾವನ ಮಗಳು ಅಮ್ಮುವನ್ನು ಹೊರತು ಪಡಿಸಿ ಮಿಕ್ಕುಳಿದ ಎಲ್ಲರನ್ನೂ ದ್ವೇಷಿಸುತ್ತಾನೆ. ಚಿಕ್ಕಂದಿನಲ್ಲಿ ಆಕೆಯು ತೋರುತ್ತಿದ್ದ ಮೃದು ಭಾವನೆಗಳು ಅವನೊಳಗಿನ ಪ್ರೇಮದ ಕನಸುಗಳನ್ನು ಬೆಚ್ಚಗೆ ಇರಿಸಿರುತ್ತವೆ. ಒಂದು ದಿನ ಆತನು ಸರಪಳಿಯನ್ನು ಕಿತ್ತೊಗೆದು ಹೊರನುಗ್ಗಿದಾಗ ಜನರು ಅವನನ್ನು ಅಟ್ಟಿಸಿಕೊಂಡು ಕಲ್ಲೆಸೆಯುತ್ತಾರೆ. ಗಾಯಗೊಂಡು ರಕ್ತ ಸುರಿಯುತ್ತಿರುವ ಮೈಯೊಂದಿಗೆ ಅವನು ಅಮ್ಮುವಿನ ಬಳಿಗೆ ಓಡಿ ಬಂದಾಗ ಅವಳೂ ‘ಹುಚ್ಚ ಹುಚ್ಚ’ ಎಂದು ಚೀರುತ್ತಾಳೆ. ಇದನ್ನು ಕೇಳಿ ಆಘಾತಗೊಂಡ ವೇಲಾಯುಧನು ತಾನು ಹುಚ್ಚನಲ್ಲ ಎಂದು ತಿಳಿದಿದ್ದರೂ, ತರವಾಡಿಗೆ ಹೋಗಿ ‘ನಾನು ಹುಚ್ಚ. ನನ್ನನ್ನು ಕಟ್ಟಿ ಹಾಕಿ’ ಎಂದು ಕೂಗಿಕೊಳ್ಳುತ್ತಾನೆ. ಕೌಟುಂಬಿಕ ವಾತಾವರಣವು ವ್ಯಕ್ತಿಯನ್ನು ಹುಚ್ಚನನ್ನಾಗಿಸುವ ಬಗೆಯನ್ನು ನಾಟಕೀಯವಾಗಿ ಪ್ರಸ್ತುತಪಡಿಸುವ ಕತೆಯು ಯೌವನದ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ಕತ್ತಲೊಳಗೆ ಕರಗಿಹೋಗುತ್ತಿರುವ ವೇಲಾಯುಧನ ಬದುಕು ಮತ್ತು ತಬ್ಬಲಿತನದ ಪರಿಸ್ಥಿತಿಯನ್ನು ಕತ್ತಲ ಸಂಕೇತದ ಮೂಲಕ ಚಿತ್ರಿಸುತ್ತದೆ. “ವೇಲಾಯುಧನು ಸೂಕ್ಷ್ಮ ಪ್ರಜ್ಞೆಯವನಾಗಿರುವುದರಿಂದ ಅವನಿಗೆ ತನ್ನ ಸುತ್ತಲಿನ ಕ್ರೌರ್ಯ ಮತ್ತು ಭಯಾನಕ ಸ್ಥಿತಿಯ ಅರಿವಾಗುತ್ತದೆ. ಅವನು ನಿರೀಕ್ಷಿಸಿದಂತೆ ಜಗತ್ತು ಇರುವುದಿಲ್ಲ. ಅಲ್ಲಿ ಗಾಢವಾದ ಕತ್ತಲು ತುಂಬಿಕೊಂಡಿದೆ. ಬೆಳಕಿಗಾಗಿ ಕಾಯುವ ಆತ್ಮವು ಕತ್ತಲಲ್ಲೇ ಕಷ್ಟಪಡುವುದು ಬದುಕಿನ ವ್ಯಂಗ್ಯವಾಗಿದೆ” ಎಂದು ಅನುವಾದಕ ಮೋಹನ್ ಕುಂಟಾರ್ ಅವರು ಕತೆಯ ಮರ್ಮವನ್ನು ಸರಿಯಾಗಿ ಗ್ರಹಿಸಿದ್ದಾರೆ.
‘ದುಃಖದ ಕಣಿವೆಗಳು’ (ದುಃಖತ್ತಿಂಡೆ ತಾಳ್ವರಗಳ್) ಎಂಬ ಕತೆಯ ನಾಯಕನಿಗೆ ಗ್ಲೋರಿಯಾಳಂಥ ಆಕರ್ಷಕ ಮತ್ತು ಪ್ರಬುದ್ಧ ಫ್ರೆಂಚ್ ತರುಣಿಯ ಸ್ನೇಹವಿದೆ. ಸ್ವಾತಂತ್ರ್ಯವಿದೆ. ತಿಳುವಳಿಕೆಯಿದೆ. ಗ್ಲೋರಿಯಾಳಲ್ಲಿ ಸ್ವಾರ್ಥವಿಲ್ಲ. ನಾಯಕನು ತನ್ನವನಾಗಲಿ ಎಂಬ ಹಟವಿಲ್ಲ. ಇಂಥ ಸಂದರ್ಭದಲ್ಲಿ ಹಲವರು ಜಾರುವುದೇ ಹೆಚ್ಚು. ಆದರೆ ಯಾವ ಪರಿಸ್ಥಿತಿಯಲ್ಲೂ ಅವರು ವಿವೇಕ, ಸ್ವಾತಂತ್ರ್ಯಗಳನ್ನು ಕಳೆದುಕೊಳ್ಳುವುದಿಲ್ಲ. ಊರಿನಲ್ಲಿ ಪ್ರೇಯಸಿ ಇರುವುದರಿಂದ ನಾಯಕನು ಮೈಮನಗಳ ಸುಳಿಯಲ್ಲಿ ಸಿಲುಕಿ ಒದ್ದಾಡದಿದ್ದರೂ ಗ್ಲೋರಿಯಾಳ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆದರೆ ಆಕೆ ಬಿಟ್ಟು ಹೋದಾಗ ನಾಯಕನು ದುಃಖದಲ್ಲಿ ಮುಳುಗುವ ಸೂಚನೆಯಿದೆ.
‘ಬೀಜಗಳು’ (ವಿತ್ತುಗಳ್) ಎಂಬ ಕತೆಯು ತಾಯಿಯ ನೆನಪುಗಳನ್ನು ಆರ್ದ್ರವಾಗಿ ಕಟ್ಟಿಕೊಡುವುದರೊಂದಿಗೆ ಆಕೆಯ ಮರಣದ ಬಳಿಕ ನಡೆಯುವ ಆಚಾರ ಅನುಷ್ಠಾನಗಳ ಕಡೆಗಿನ ವಿಮುಖತೆಯನ್ನು ದಾಖಲಿಸುತ್ತದೆ. ಈ ಶೀರ್ಷಿಕೆಯು ಸಂತಾನಗಳು ಮತ್ತು ಸಾಂಪ್ರದಾಯಿಕತೆಗಳನ್ನು ಜೊತೆಯಾಗಿ ಧ್ವನಿಸುತ್ತದೆ. ಬದುಕಿನ ಸಮಸ್ಯೆಗಳನ್ನು ಎದುರಿಸಲು ಭವಿಷ್ಯದಲ್ಲಿ ಹೊಸ ಹಾದಿಗಳನ್ನು ತೆರೆಯುವುದರಿಂದ ಇವುಗಳು ‘ಮುಗ್ಧ’ ಕತೆಗಳಿಗಿಂತ ಉಪಯುಕ್ತವಾದ ರಚನೆಗಳಾಗಿವೆ. ಬಾಲ್ಯವು ಹೆಚ್ಚೆಂದರೆ ಮನೆ ಹಂಬಲ ನೋಸ್ಟಾಲ್ಜಿಯಕ್ಕೆ ಸೀಮಿತವಾಗಬಲ್ಲುದು.
ಬಾಪುಟ್ಟಿ ಎಂಬ ಅನಾಥನ ಭಗ್ನಪ್ರೇಮವನ್ನು ವಸ್ತುವನ್ನಾಗಿರಿಸಿಕೊಂಡ ‘ಅಲೆ ಮತ್ತು ದಡ’ (ಓಳವುಂ ತೀರವುಂ) ಎಂಬ ಕತೆಯು ವಿರಹಯಾತನೆಗೆ ಸೀಮಿತವಾಗದೆ ಆತನ ಮಾನವೀಯತೆಯನ್ನು ಅನಾವರಣಗೊಳಿಸುತ್ತದೆ. ತಾನು ಪ್ರೀತಿಸಿದ ನಫೀಸಾಳು ಕಾದರ್ ಕುಟ್ಟಿಯನ್ನು ಮದುವೆಯಾಗುತ್ತಾಳೆ. ಆತನು ಯಾವುದೋ ಪ್ರಕರಣದಲ್ಲಿ ಸಿಲುಕಿ ಸೆರೆಮನೆಯನ್ನು ಸೇರಿದಾಗ ಬಸುರಿಯಾಗಿದ್ದ ನಫೀಸಾಳ ಹೆರಿಗೆಗಾಗಿ ಬಾಪುಟ್ಟಿಯು ಧನಸಹಾಯವನ್ನು ಮಾಡಿ ಹಿಂತಿರುಗುವ ಸನ್ನಿವೇಶವು ಇಲ್ಲಿದೆ. ಕತೆಯ ವಸ್ತು, ಭಾಷೆ ಮತ್ತು ಶೈಲಿಗಳಲ್ಲಿ ಹಿರಿಯ ಸಮಕಾಲೀನರಾದ ತಗಳಿ ಶಿವಶಂಕರ ಪಿಳ್ಳೆ, ಕೇಶವದೇವ್, ಉರೂಬ್, ಎಸ್.ಕೆ. ಪೊಟ್ಟೆಕ್ಕಾಟ್ ವೈಕಂ ಮುಹಮ್ಮದ್ ಬಷೀರ್, ಮೊದಲಾದವರ ಪ್ರಭಾವವನ್ನು ಕಾಣಬಹುದು. ತಗಳಿಯವರ ‘ರಂಡ್ ಇಡಂಙಳಿ’ (ಎರಡು ಬಳ್ಳ) ಎಂಬ ಕಾದಂಬರಿಯ ನಾಯಕಿ ಚಿರುದೆಯು ಕೋರನನ್ನು ಮದುವೆಯಾಗುತ್ತಾಳೆ. ಆಕೆಯ ಮಾನಭಂಗಕ್ಕೆ ಯತ್ನಿಸಿದ ತನ್ನ ಯಜಮಾನನ ಮಗನನ್ನು ಕೊಂದ ಕೋರನು ಸೆರೆಮನೆಗೆ ಹೋದಾಗ ಬಸುರಿಯಾಗಿದ್ದ ಚಿರುದೆಯನ್ನು ಆಕೆಯ ಪ್ರಿಯಕರನಾಗಿದ್ದ ಚಾತ್ತನು ಸಂರಕ್ಷಿಸುವ ಹೃದಯಸ್ಪರ್ಶಿ ಕತೆಯು ಅದರಲ್ಲಿದೆ. ಎಷ್ಟೋ ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದು, ಬದುಕಿನ ಯಾವುದೋ ಅಲೆ ಎತ್ತಿ ಎಸೆದಂತೆ ಬೇರೆಯಾಗಿ, ಎಲ್ಲಿಂದಲೋ ಬೀಸಿದ ಗಾಳಿಯ ರಭಸಕ್ಕೆ ಸಿಲುಕಿ ಒಂದೆಡೆ ಬಂದು ಸೇರುವಂತೆ ಜೀವನದ ವಿಷಮ ಗಳಿಗೆಯಲ್ಲಿ ಭೇಟಿಯಾಗುವ ಕುಂಜುಕುಟ್ಟಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಹೆರಿಗೆಯನ್ನು ಮಾಡಿಸುವ ಮತ್ತು ರಾಮನ್ ಮಾಸ್ತರ್ ‘ಸುಂದರಿಯರು ಸುಂದರರು’ ಕಾದಂಬರಿಯಲ್ಲಿ ಇದೇ ರೀತಿಯ ದುರ್ಭರ ಪ್ರಸಂಗವನ್ನು ಎದುರಿಸಿದ್ದಾರೆ. ಬಷೀರ್ ಅವರ ‘ಹಸಿವು’ ಎಂಬ ಕತೆಯ ಕೊಚ್ಚುಕೃಷ್ಣನು ತಾನು ಒಳಗೊಳಗೆ ಪ್ರೀತಿಸುತ್ತಿದ್ದ ಎಲಿಸಬೆತ್ತಳನ್ನು ಸೇರುವ ಉದ್ದೇಶದಿಂದ ಆಕೆಯ ಹಾದಿಯನ್ನು ಕಾಯುತ್ತಾನೆ. ಆದರೆ ಆಕೆಯು ಬರುವುದಿಲ್ಲ. ನಾಲ್ಕು ವರ್ಷಗಳು ಕಳೆದ ಬಳಿಕ ಬಡಕಲು ಹೆಂಗಸೊಬ್ಬಳು ಆತನ ಹತ್ತಿರ ಭಿಕ್ಷೆಯನ್ನು ಬೇಡಿದಾಗ ಆಕೆಯೇ ಎಲಿಸಬೆತ್ ಎಂದು ಅವನಿಗೆ ತಿಳಿಯುತ್ತದೆ. ಸೊಗಸುಗಾತಿಯಾಗಿದ್ದವಳು ಮುದುಕಿಯಂತಾದುದನ್ನು ಕಂಡು ಅವನೊಳಗಿನ ಪ್ರೇಮವು ಕರುಣೆಯಾಗಿ ಬದಲಾಗುತ್ತದೆ. ಆಹಾರವನ್ನು ತೆಗೆದುಕೊಟ್ಟ ಬಳಿಕ ನಾಲ್ಕು ವರ್ಷಗಳ ಹಿಂದೆ ಆಕೆಗಾಗಿ ಖರೀದಿಸಿಟ್ಟಿದ್ದ ಉಡುಗೊರೆಯನ್ನು ಅವಳ ಕೈಯಲ್ಲಿಟ್ಟು ತಿರುಗಿಯೂ ನೋಡದೆ ನಡೆಯುತ್ತಾನೆ. ಈ ರಚನೆಗಳ ಸಾಮಾಜಿಕ ಸಂದರ್ಭ ಮತ್ತು ಕಲೆಗಾರಿಕೆ ಸಂಪೂರ್ಣ ಭಿನ್ನವಾಗಿದ್ದು, ಎಂ.ಟಿ.ಯವರು ತಮ್ಮ ಹಿಂದಿನ ತಲೆಮಾರಿನ ಮಹತ್ವದ ಸಾಹಿತಿಗಳಿಂದ ಕಲಿತುಕೊಂಡು, ಅವರ ಪ್ರಭಾವಗಳನ್ನು ಮೀರಿ ತಮ್ಮದೇ ಆದ ಮಾರ್ಗವನ್ನು ಸೃಷ್ಟಿಸಿಕೊಂಡ ವಿಚಾರವು ಮುಖ್ಯವಾಗುತ್ತದೆ.
ಎಂ.ಟಿ. ವಾಸುದೇವನ್ ನಾಯರ್ ಅವರು ತಾವು ಹುಟ್ಟಿ ಬೆಳೆದ ಕುಡಲೂರಿನಲ್ಲಿ ಬದುಕುತ್ತಿರುವ ಜನಸಮುದಾಯದ ದೈನಂದಿನ ಜೀವನದ ಸುಖದುಃಖಗಳ, ಇಕ್ಕಟ್ಟು ಬಿಕ್ಕಟ್ಟುಗಳನ್ನು ನಿರೂಪಿಸಿದ್ದಾರೆ. ಮಲಯಾಳಂ ಸಾಹಿತ್ಯದಲ್ಲಿ ಮಾಡರ್ನಿಸಂ (ನವ್ಯ) ಪ್ರಖರವಾಗಿದ್ದ ಕಾಲದಲ್ಲಿ ಮುಂಚೂಣಿಗೆ ಬಂದುದರಿಂದ ಆ ಕಾಲಘಟ್ಟದ ಪ್ರಭಾವವು ಅವರ ಮೇಲಿದೆ. ನಾಯರ್ ಸಮುದಾಯದ ತರವಾಡುಗಳ ಅಧಪತನ ಮತ್ತು ಜನಸಾಮಾನ್ಯರ ಬದುಕನ್ನು ಹತ್ತಿರದಿಂದ ಕಂಡ ಅನುಭವವೂ ಅವರ ಕತೆಗಳ ವಸ್ತುಪ್ರಪಂಚದ ಭಾಗವಾಗಿದೆ. ತಮ್ಮ ಕತೆಗಳ ಮೂಲಕ ಮನುಷ್ಯನ ಸಣ್ಣತನಗಳು, ಕ್ಷುದ್ರ ಸ್ವಾರ್ಥಗಳು, ಮೋಸ ವಂಚನೆಗಳು, ಗಂಡು ಹೆಣ್ಣುಗಳ ನಡುವಿನ ಆಕರ್ಷಣೆ, ಭಗ್ನಪ್ರೇಮ, ಆರ್ದತೆ ಅನುಕಂಪಗಳನ್ನು ವ್ಯಕ್ತಪಡಿಸುವ ಮೂಲಕ ಮನುಷ್ಯರನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಶ್ರಮಿಸುವುದರ ಅಂಗವಾಗಿ ಪಾತ್ರಗಳ ಮನಸ್ಸಿನ ಆಳಕ್ಕೆ ಇಳಿಯಲು ಅವರಿಗೆ ಸಾಧ್ಯವಾಗಿದೆ. ಗಂಡು ಹೆಣ್ಣುಗಳ ನಡುವಿನ ಸಂಕೀರ್ಣ ಸಂಬಂಧ, ವಿಷಮ ದಾಂಪತ್ಯ, ವ್ಯಕ್ತಿಯನ್ನು ಕ್ರೂರವಾಗಿ ನಡೆಸಿಕೊಳ್ಳುವ ವ್ಯವಸ್ಥೆ, ಸಣ್ಣಪುಟ್ಟ ಕನಸುಗಳನ್ನೂ ನನಸಾಗಿಸಿಕೊಳ್ಳಲಾಗದ ಬದುಕು, ಜೀವನದ ಸಮಸ್ಯೆ, ಆಘಾತ ಮತ್ತು ಪರಿಣಾಮಗಳ ಸುತ್ತ ಹೆಣೆದ ಕತೆಗಳು ತಮ್ಮ ಆರ್ದತೆ ಮತ್ತು ಆರ್ತತೆಗಳಿಂದ ಮನ ಮುಟ್ಟುತ್ತವೆ. ಕತೆಗಳು ಸರಳವಾಗಿದ್ದರೂ, ಸಂಕೀರ್ಣವಾಗಿದ್ದರೂ ಓದುಗರ ಸಂವೇದನೆ ಮತ್ತು ಪ್ರಜ್ಞೆಯ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತವೆ. ಕುಟುಂಬದಲ್ಲಿ ನವೆದು ಸವೆದು ಹೋಗುವ ಗೃಹಸ್ಥರು, ಪ್ರೇಯಸಿಯನ್ನು ನೆನೆಯುವ ಭಗ್ನಪ್ರೇಮಿಗಳು, ಕನಸಿನಿಂದ ವಾಸ್ತವದ ನರಕಕ್ಕೆ ಬಿದ್ದು ಘಾಸಿಗೊಳ್ಳುವವರ ದೈನಂದಿನ ಬದುಕಿನ ಚಿತ್ರವನ್ನು ಬಿಡಿಸುವ ಎಂ.ಟಿ.ಯವರ ಸಾಹಿತ್ಯವು ಜನಸಾಮಾನ್ಯರಿಗೆ ಹತ್ತಿರವಾಗುತ್ತವೆ.
ಸಂಶೋಧಕ ಮತ್ತು ಅನುವಾದಕರಾದ ಮೋಹನ ಕುಂಟಾರ್ ಅವರು ಎಂ.ಟಿ. ವಾಸುದೇವನ್ ನಾಯರ್ ಅವರ ಹನ್ನೊಂದು ಕತೆಗಳನ್ನು ಆಯ್ದು ‘ವಾಸುದೇವನ್ ನಾಯರ್ ಕತೆಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಿ.ಕೆ. ತಿಮ್ಮಪ್ಪ, ಕೆ.ಕೆ. ನಾಯರ್, ಪಾರ್ವತಿ ಜಿ. ಐತಾಳ, ಕೆ.ಕೆ. ಗಂಗಾಧನ್ ಮೊದಲಾದವರಂತೆ ಇವರು ಕೂಡ ಮಲಯಾಳಂ ಭಾಷೆಯಿಂದ ನೇರವಾಗಿ ಭಾಷಾಂತರಿಸಿದ್ದರೂ ಕುಂಟಾರ ಅನುವಾದವು ಅವರಿಗಿಂತ ಭಿನ್ನವಾಗಿದ್ದು, ತನ್ನದೇ ಆದ ವಿಶೇಷತೆಗಳಿಂದ ಕಂಗೊಳಿಸುತ್ತದೆ. ಈ ಸಂಕಲನವು ವಾಸುದೇವನ್ ನಾಯರ್ ಅವರ ಬರವಣಿಗೆಯ ಮುಖ್ಯ ಲಕ್ಷಣಗಳನ್ನು ಬೇರೆ ಬೇರೆ ಬಗೆಗಳಲ್ಲಿ ಮತ್ತು ಮಟ್ಟಗಳಲ್ಲಿ ತೋರುವಂತಿದೆ. ವಳ್ಳುವನಾಡನ್ (ದಕ್ಷಿಣ ಮಲಬಾರ್) ಪ್ರದೇಶದ ಆಡುಮಾತಿನ ಲಯವನ್ನು ಹೊಂದಿದ ಎಂ.ಟಿ. ಯವರ ಕತೆಗಳ ಮೋಡಿ, ಕಾವ್ಯಾತ್ಮಕತೆಯನ್ನು ಉಳಿಸಿಕೊಂಡು ಅನುವಾದಿಸುವಲ್ಲಿ, ಧ್ವನಿಶಕ್ತಿಯನ್ನು ಹೊಮ್ಮಿಸುವಲ್ಲಿ ಅನುವಾದಕರು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಕತೆಗಳನ್ನು ಕನ್ನಡದ ಜಾಯಮಾನಕ್ಕೆ ಹೊಂದಿಸುವುದಕ್ಕಾಗಿ ಯಾವುದೇ ರೀತಿಯ ಕೂಡಿ ಕಳೆಯುವ ಕ್ರಿಯೆಯನ್ನು ಮಾಡದೆ ಪದಕ್ಕೆ ಪದವಿಟ್ಟು ಅನುವಾದಿಸಿದ್ದಾರೆ. ಅನುವಾದಿತ ಭಾಷೆಗಿಂತ ಮೂಲ ಲೇಖಕರ ಶೈಲಿಯ ಪರಿಚಯವಾಗಬೇಕೆಂಬ ಉದ್ದೇಶ, ಮೂಲಬರಹದ ಮೇಲೆ ಅನುವಾದಕರಿಗೆ ಇರುವ ನಿಷ್ಠೆಯು ವ್ಯಕ್ತವಾಗುತ್ತದೆ. ಕನ್ನಡದ ಕತೆಗಳಾಗಿ ಅನುವಾದಗೊಳ್ಳುವ ಬದಲು ಮಲಯಾಳಂ ಕತೆಗಳಾಗಿ ಸಂವಹನಗೊಳ್ಳಬೇಕೆಂಬ ಆಶಯವು ಮುಖ್ಯವಾಗುತ್ತದೆ. ಮಲಯಾಳದ ಬರವಣಿಗೆಯ ಕ್ರಮ, ಕನ್ನಡ ಮತ್ತು ಮಲಯಾಳ ಶೈಲಿಗಳ ನಡುವಿನ ವ್ಯತ್ಯಾಸವನ್ನು ಕನ್ನಡದ ಓದುಗರಿಗೆ ತಿಳಿಸುವ ಪ್ರಯತ್ನದ ಭಾಗವೆಂಬಂತೆ ಅನುವಾದವು ರೂಪು ತಾಳಿರುವುದರ ಪರಿಣಾಮವಾಗಿ ಮಲಯಾಳದ ಕೆಲವು ಪದಗಳು ಹಾಗೆಯೇ ಉಳಿದುಕೊಂಡಿದ್ದು ಅವುಗಳು ತಪ್ಪು ಪ್ರಯೋಗಗಳಂತೆ ಭಾಸವಾಗುವುದರಿಂದ ಸುಲಭ ಸಂವಹನಕ್ಕೆ ತೊಡಕನ್ನು ಉಂಟು ಮಾಡುತ್ತವೆ. ‘ವೇಸ್ಟಿ ವಯಲೆಟ್ ಬದಿಯದ್ದೇ’ (ಪುಟ೧) ‘ಬಡ ಅಮ್ಮಿಣಿ ಮಿಸ್ಟ್ರೆಸ್’, ‘ತಂಟೆ ಹುಡುಗರಿಗೆ’ (ಪುಟ ೩) ‘ಕೊಡವನಿಗೆ ಪಾಚ್ಚಾ’ (ಪುಟ ೪) ‘ಅವಜ್ಞೆಯಿಂದ’ (ಪುಟ ೮) ‘ಮಾಮೂಲಿಗೆ’ (ಪುಟ ೯) ‘ಶಾಸನ ಎಸೆದಳು’ (ಪುಟ ೨೩) ಎಂದು ಪದಕ್ಕೆ ಪದವಿಟ್ಟು ಅನುವಾದ ಮಾಡಿರುವುದರಿಂದ ‘ಬದಿ’, ‘ಬಡ’, ‘ತಂಟೆ’, ‘ಕೊಡವನಿಗೆ’, ‘ಮಾಮೂಲಿ’, ‘ಶಾಸನ’ ಮುಂತಾದ ಪದಗಳು ಅರ್ಥ ವ್ಯತ್ಯಾಸವನ್ನು ಉಂಟು ಮಾಡುತ್ತವೆ. ಮಲಯಾಳಂ ಭಾಷೆಯನ್ನು ಬಲ್ಲ ಕನ್ನಡಿಗರ ಓದಿಗೆ ತೊಂದರೆಯಾಗದಿದ್ದರೂ ‘ವೇಸ್ಟಿ ವಯಲೆಟ್ ಅಂಚಿನದ್ದೇ’, ‘ಬಡಪಾಯಿ ಅಮ್ಮಿಣಿ ಮಿಸ್ಟ್ರೆಸ್’, ‘ತಂಟೆಕೋರ ಹುಡುಗರಿಗೆ’, ‘ತಿರಸ್ಕಾರದಿಂದ’, ‘ರೂಢಿಗೆ’, ‘ಆದೇಶವನ್ನು ಎಸೆದಳು’ ಎಂಬ ಪದಗಳನ್ನು ಬಳಸಿದ್ದರೆ ಕತೆಗಳು ಇನ್ನಷ್ಟು ಅರ್ಥಪೂರ್ಣವಾಗುವುದರೊಂದಿಗೆ ಕರ್ನಾಟಕದ ಓದುಗರಿಗೂ ಸುಲಭ ಗ್ರಾಹ್ಯವಾಗುತ್ತಿತ್ತು. ‘ಚರ್ಮದ ಅಟ್ಟೆಯುಳ್ಳ ಮೆಟ್ಟು ಅಗೋ ಕೂಗುತ್ತದೆ’ (ಪುಟ ೧೦) ಎಂಬ ಸಾಲನ್ನು ಬೇರೆ ಯಾವ ರೀತಿಯಲ್ಲೂ ಅನುವಾದಿಸಲು ಸಾಧ್ಯವಿಲ್ಲದಿರುವುದರಿಂದ ಅದರ ಅರ್ಥವನ್ನು (ಆಡಿನ ಚರ್ಮದಿಂದ ತಯಾರಿಸಿದ ಹೊಸ ಚಪ್ಪಲಿಯನ್ನು ಧರಿಸಿ ನಡೆಯುವಾಗ ಹಿಮ್ಮಡಿಯಿಂದ ಹೊಮ್ಮುವ ಸದ್ದು) ಕೊನೆ ಟಿಪ್ಪಣಿಯ ಮೂಲಕ ನೀಡಬಹುದಿತ್ತು. ಕನ್ನಡದ ಶೈಲಿಗೆ ಹೊರತಾದ ಪದಗಳನ್ನು ಪ್ರಯೋಗಿಸುವ ಬದಲು ಕನ್ನಡದ ಪದಗಳನ್ನು ಬಳಸಿಯೂ ಮಲಯಾಳದ ಸೊಗಡನ್ನು ಉಳಿಸಿಕೊಂಡು ಮಲಯಾಳಂ ಕತೆಗಳ ಬರವಣಿಗೆಯ ವಿಧಾನವನ್ನು ಕನ್ನಡದ ಓದುಗರಿಗೆ ತಿಳಿಯಪಡಿಸಬಹುದಿತ್ತು. ನಂತರದ ವರ್ಷಗಳಲ್ಲಿ ಮೋಹನ ಕುಂಟಾರ್ ಅವರು ಉರೂಬ್ ಅವರ ‘ಸುಂದರಿಯರು ಸುಂದರರು’, ತಗಳಿ ಶಿವಶಂಕರ ಪಿಳ್ಳೆಯವರ ‘ಚೆಮ್ಮೀನು’ ಮತ್ತು ಪಿ. ವತ್ಸಲ ಅವರ ‘ಆಗ್ನೇಯ’ ಎಂಬ ಕಾದಂಬರಿಗಳ ಅನುವಾದದಲ್ಲಿ ಆ ಮಿತಿಗಳನ್ನು ಮೀರಿರುವುದು ಗಮನಾರ್ಹವಾಗಿದೆ.
ವಿಮರ್ಶಕರು ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.