ಮಂಗಳೂರು : ರಾಗ ತರಂಗ(ರಿ.)ಮಂಗಳೂರು ಇದರ ಸಾಂಸ್ಕೃತಿಕ ಸ್ಪರ್ಧೆ “ಬಾಲ ಪ್ರತಿಭಾ-2024” ದಿನಾಂಕ 13,14 ಮತ್ತು 15 ಡಿಸೆಂಬರ್ 2024ನೇ ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರದಂದು ಮಂಗಳೂರಿನ ಭಾರತೀಯ ವಿದ್ಯಾಭವನದ ಸಹಯೋಗದೊಂದಿಗೆ ವಿದ್ಯಾಭವನದ ಸಭಾಂಗಣದಲ್ಲಿ ನಡೆಯಿತು.
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಸರಕಾರಿ, ಖಾಸಗಿ ಮತ್ತು ಕೇಂದ್ರೀಯ ವಿದ್ಯಾಲಯಗಳ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಗಳು ಕಳೆದ 4 ದಶಕಗಳಿಂದ ನಿರಂತರ ನಡೆಯುತ್ತಿದ್ದು, ಈ ವರ್ಷ ಸರಕಾರಿ ಶಾಲಾ ಮಕ್ಕಳಿಗಾಗಿ ಒಂದು ದಿನವನ್ನು ಮೀಸಲಾಗಿರಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ ಮತ್ತು ಈ ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಈ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಸಪ್ರಶ್ನೆ,ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರಿಯ ವಾದ್ಯ ಸಂಗೀತ, ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ, ಭಾವಗೀತೆ ಗಾಯನ, ಸುಗಮ ಸಂಗೀತ, ಆಶುಭಾಷಣ, ದೇಶಭಕ್ತಿಗೀತೆ ಗಾಯನ, ಛದ್ಮವೇಷ ಸ್ಪರ್ಧೆ, ಜನಪದ ನೃತ್ಯ, ಭರತನಾಟ್ಯ ಮುಂತಾದ ಕಲಾ ಪ್ರಕಾರಗಳ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಹಲವು ಶಾಲೆಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ರಾಗ ತರಂಗದ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಭಾರತೀಯ ವಿದ್ಯಾಭವನದ ಜತೆಗೆ ನಗರದ ಹಲವು ಸಂಘ ಸಂಸ್ಥೆಗಳು ಮತ್ತು ಹಿರಿಯ ಸದಸ್ಯರು ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದ್ದರು.
ದಿನಾಂಕ 13 ಡಿಸೆಂಬರ್ 2024ರಂದು ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಶ್ರೀಮತಿ ಶಮ್ಮಿ ಆತ್ಮಚರಣ್ ಸ್ಪರ್ಧೆಗಳಿಗೆ ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿಶುಲ್ಕವಾಗಿ ಪ್ರವೇಶ ಹೊಂದಿದ್ದ ಈ ಸ್ಪರ್ಧೆಗಳು ಅಪಾರ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ಬಗ್ಗೆ ರಾಗ ತರಂಗದ ಅಧ್ಯಕ್ಷರಾದ ಶ್ರೀ ಶಶಿಧರ್ ಕೆ. ಎನ್. ಸಂತಸ ವ್ಯಕ್ತಪಡಿಸಿದರು. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಪಿ. ಸಿ. ರಾವ್, ಉಪಾಧ್ಯಕ್ಷರಾಗಿ ಶ್ರೀ ಚಂದ್ರಶೇಖರ್ ದೈದೋಟ ಮತ್ತು ಶ್ರೀ ಕೃಷ್ಣ ಶೆಟ್ಟಿ ತಾರೆಮಾರ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಶ್ರೀ ಪಿ. ಪಾಂಡುರಂಗ ರಾವ್, ಕೋಶಧಿಕಾರಿಯಾಗಿ ಶ್ರೀಮತಿ ಸೌಮ್ಯಾ ಪಿ. ರಾವ್ ಸ್ಪರ್ಧಾ ಕಾರ್ಯಕ್ರಮದ ನೇತೃತ್ವ ವಹಿಸಿದರು. ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಮಮತಾ ಎಮ್. ಎಸ್. ಹಾಗೂ ಶ್ರೀ ಜಯಪ್ರಕಾಶ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಜೊತೆ ಕೋಶಾಧಿಕಾರಿ ಶ್ರೀಮತಿ ಸಂಜನಾ ಭಟ್, ಸಮಿತಿ ಸದಸ್ಯರಾದ ಶ್ರೀಮತಿ ಪುಷ್ಪಾ ಜೋಗಿ, ಶ್ರೀಮತಿ ಸುಪ್ರಭಾ ಸುರೇಶ್, ಶ್ರೀಮತಿ ಶಿಲ್ಪಾ ರಾಮಚಂದ್ರ, ಶ್ರೀಮತಿ ಚೇತನಾ ನರೇಂದ್ರ ಹಾಗೂ ಶ್ರೀಮತಿ ವೀಣಾವಾಣಿ ನಿತಿನ್ ಶೆಟ್ಟಿ ಸಹಕರಿಸಿದರು.
ಬಾಲ ಪ್ರತಿಭಾ-2024 ರ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತ ಸ್ಪರ್ಧಾಳುಗಳಿಗೆ ಬಹುಮಾನ ವಿತರಣಾ ಸಮಾರಂಭವು ದಿನಾಂಕ 05 ಜನವರಿ 2025ರಂದು ಮಂಗಳೂರಿನ ಕರಂಗಲಪಾಡಿಯ ಸುಬ್ರಹ್ಮಣ್ಯ ಸಭಾದ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಸಂಜೆ ಘಟೆ 4.00 ರಿಂದ ಆಯ್ಕೆಯಾದ ಪ್ರತಿಭಾ ಸಂಪನ್ನ ಮಕ್ಕಳದೇ ಅಧ್ಯಕ್ಷತೆ ಮತ್ತು ಉಪಾಧ್ಯಕ್ಷತೆಯಲ್ಲಿ ಬಾಲಪ್ರತಿಭೋತ್ಸವ-2024-25 ಎಂಬ ಶಿರೋನಾಮೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬಾಲ ಪ್ರತಿಭಾ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಜರುಗಲಿದೆ. ಎಲ್ಲ ಕಲಾಸಕ್ತ ಬಂಧುಗಳು ಭಾಗವಹಿಸಿ ಸಹಕರಿಸಬೇಕಾಗಿ ರಾಗ ತರಂಗದ ಪ್ರಧಾನ ಕಾರ್ಯದರ್ಶಿ ಶ್ರೀ ಪಿ ಸಿ ರಾವ್ ವಿನಂತಿಸಿರುತ್ತಾರೆ.
Subscribe to Updates
Get the latest creative news from FooBar about art, design and business.
Related Posts
Comments are closed.