ಕನ್ನಡ ನಾಡು ನುಡಿ ಕಂಡ ಶ್ರೇಷ್ಠ ಸಂಗೀತ ಪ್ರತಿಭೆಗಳಲ್ಲಿ ಅಗ್ರಪಂಕ್ತಿಯಲ್ಲಿ ಸದಾ ರಾರಾಜಿಸುವವರು ಮಲ್ಲಿಕಾರ್ಜುನ ಭೀಮರಾಯಪ್ಪ ಮನ್ಸೂರ್. ಜೈಪುರ – ಅತ್ರೋಲಿ ಘರಾನಾದ ‘ಖಯಾಲಿ’ ಶೈಲಿಯ ಸಂಗೀತಗಾರರಾಗಿದ್ದ ಇವರು ಆರು ದಶಕಗಳಿಗೂ ಮಿಕ್ಕಿ ದೇಶ – ವಿದೇಶಗಳಲ್ಲಿ ತಮ್ಮ ಸಂಗೀತ ಸುಧೆ ಹರಿಸಿ ಗಾನಾಸಕ್ತರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಕರ್ನಾಟಕದ ಧಾರವಾಡ ಸಮೀಪ ‘ಮನಸೂರ’ ಎಂಬ ಚಿಕ್ಕ ಗ್ರಾಮದಲ್ಲಿ ಭೀಮರಾಯಪ್ಪ ಹಾಗೂ ನೀಲಮ್ಮ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ್ದು 31 ಡಿಸೆಂಬರ್ 1911ರಂದು. ಎಳವೆಯಲ್ಲಿಯೇ ಮನ್ಸೂರ್ ಜೀ ಅವರನ್ನು ಕಲೆ ಸೆಳೆದದ್ದು ನಾಟಕ ಕ್ಷೇತ್ರದೆಡೆಗೆ. ನಾಟಕ ಹಾಗೂ ಸಂಗೀತ ಪ್ರಿಯರಾಗಿದ್ದ ತಂದೆ ಭೀಮರಾಯಪ್ಪರು ಮಲ್ಲಿಕಾರ್ಜುನರ ಸಂಗೀತ ಪ್ರಜ್ಞೆಯನ್ನು ಬಾಲ್ಯದಲ್ಲೇ ಕಂಡರಿದಿದ್ದರು. ತನ್ನ 9ನೇ ಹರೆಯದಲ್ಲಿ ಶಾಲೆಗೆ ವಿದಾಯ ಹೇಳಿ ಅಣ್ಣ ಬಸವರಾಜರೊಂದಿಗೆ ವಾಮನ ರಾವ್ ಮಾಸ್ಟರರ ನಾಟಕ ಕಂಪನಿಗೆ ಸೇರ್ಪಡೆಗೊಂಡರು. ಈ ನಾಟಕ ತಂಡದಲ್ಲಿ ಪ್ರಹ್ಲಾದ, ಧ್ರುವ, ನಾರದ, ಹೀಗೆ ಹಲವಾರು ಪಾತ್ರಗಳು ಜನಮನ್ನಣೆಗಳಿಸಿದ್ದರೂ, ಸಾಧನೆಗೈದದ್ದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ.
ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ‘ಹಫೀಸ್ ಅಲಿ ಖಾನ್ ಸಂಸ್ಮರಣಾ ಉತ್ಸವ’ದಲ್ಲಿ ಕಛೇರಿಯೊಂದರಲ್ಲಿ (ರವೀಂದ್ರ ಸದನ, ಕಲ್ಕತ್ತಾ – 1977)
ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದರಾದ ಪಂಡಿತ ಅಯ್ಯಪ್ಪ ಸ್ವಾಮಿಯವರು ಪುಟಾಣಿ ಮಲ್ಲಿಕಾರ್ಜುನನ ಪ್ರದರ್ಶನ ನೋಡಿ ಅವನಲ್ಲಿದ್ದ ಅಗಾಧ ಪ್ರತಿಭೆಯನ್ನು ಮನಗಂಡು ತನ್ನ ಶಿಷ್ಯನನ್ನಾಗಿ ಸ್ವೀಕರಿಸಿದರು. ಪ್ರಾಥಮಿಕ ಕಲಿಕೆಯ ನಂತರ ಪಂಡಿತ್ ನೀಲಕಂಠ ಬುವಾ ಇವರ ಗರಡಿಯಲ್ಲಿ ಹಿಂದೂಸ್ತಾನಿ ಸಂಗೀತದ ಅಭ್ಯಾಸ ಮುಂದುವರೆಸಿದರು. ಮುಂದೆ ಪ್ರಸಿದ್ಧ ಗಾಯಕ ಉಸ್ತಾದ್ ಅಲ್ಲಾದಿಯಾ ಖಾನ್ ಇವರ ಮಕ್ಕಳಾದ ಮಂಜಿ ಖಾನ್ ಹಾಗೂ ಬುರ್ಜಿ ಖಾನರಲ್ಲಿ ಶಿಕ್ಷಣ ಪಡೆದು ವಿಶ್ವ ವಿಖ್ಯಾತ ಜೈಪುರ – ಅತ್ರೋಲಿ ಗಾಯಕರೆನಿಸಿಕೊಂಡರು.
ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ರಾಗ ಸುಧಾ ಸಾರಂಗ್ ಕಾರ್ಯಕ್ರಮದಲ್ಲಿ (ಭೋಪಾಲ್ 1981)
1970ರಲ್ಲಿ ‘ಪದ್ಮಶ್ರೀ’, 1976ರಲ್ಲಿ ‘ಪದ್ಮ ಭೂಷಣ’ ಹಾಗೂ 1992ರಲ್ಲಿ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಪಡೆದು ‘ತ್ರಿಪದ್ಮ’ ಪ್ರಶಸ್ತಿಗೆ ಪಾತ್ರರಾದ ಬೆರಳೆಣಿಕೆಯ ಸಾಧಕರಲ್ಲಿ ಒಬ್ಬರಾಗಿದ್ದಾರೆ. ದೇಶ ವಿದೇಶದ ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದರೂ, ತಮ್ಮ ವಿನಯವಂತಿಕೆ, ನಡೆನುಡಿ, ಸರಳ ಜೀವನಕ್ಕೇ ಹೆಸರಾದವರು ಮಲ್ಲಿಕಾರ್ಜುನ ಮನ್ಸೂರ್. ಸಂಗೀತಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟು, ಸಂಗೀತವೇ ತನ್ನ ಜೀವನ, ಕಾಯಕ ಮತ್ತು ಪೂಜೆ ಎಂದು ಬಾಳಿ ತೋರಿಸಿದವರು ಮನ್ಸೂರ್ ಜೀ. ಧಾರವಾಡದ ಮೃತ್ಯುಂಜಯ ಮಹಾಸ್ವಾಮಿಗಳಿಂದ ಪ್ರಭಾವಿತರಾಗಿ ವಚನ ಸಂಗೀತಕ್ಕೂ ಇವರು ನೀಡಿದ ಕೊಡುಗೆ ಅಪಾರ. ಕರ್ನಾಟಕ ವಿದ್ಯಾಲಯವು ಇವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೆ ದೇಶದ ಪ್ರತಿಷ್ಠಿತ ‘ಕಾಳಿದಾಸ ಸನ್ಮಾನ್’ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಎಂಬುದು ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಚಾರ.ಇವರು ತನ್ನ ಜೀವನ ಗಾಥೆಯನ್ನು ‘ನನ್ನ ರಸಯಾತ್ರೆ’ ಎಂಬ ಆತ್ಮಚರಿತ್ರೆಯ ಮೂಲಕ ಪುಸ್ತಕ ರೂಪದಲ್ಲಿ ಅಮರಗೊಳಿಸಿದ್ದಾರೆ.
1985 ಸತ್ಕಾರ ಸಮಾರಂಭವೊಂದರಲ್ಲಿ ಮಲ್ಲಿಕಾರ್ಜುನ ಮನ್ಸೂರ್ – ಪಂ. ವಿಜಯ್ ಕಿಚ್ಲು, ಪಂ. ರವಿಶಂಕರ್ ಹಾಗೂ ಪಂ. ಭೀಮ್ ಸೇನ್ ಜೋಷಿಯವರೊಂದಿಗೆ
ಸಂಪೂರ್ಣ ಮಾಲ್ಕೌಂಸ್, ಹೇಮ್ ನಠ್,ಶುದ್ಧ ನಠ್, ಲಚ್ಚಾಸಖ್, ಕಠ್, ಬಿಹಾರಿ, ಹೀಗೆ ಹಲವು ಅಪರೂಪದ ಹಾಗೂ ಕಠಿಣ ರಾಗಗಳ ಭವ್ಯ ಪ್ರಸ್ತುತಿಗೆ ಮನ್ಸೂರ್ ಜೀ ಖ್ಯಾತರಾಗಿದ್ದರು. ಅಂತಹದೇ ಒಂದು ಕಷ್ಟಕರ ಜೋಡು ರಾಗದ ಕಬಿರ್, ಭೈರವ್ ಪ್ರಸ್ತುತಿ ಇಲ್ಲಿ ಕೇಳಬಹುದು.
ಟೈಮ್ಸ್ ಆಫ್ ಇಂಡಿಯಾದ 150ನೇ ವರ್ಷದ ಸಂಭ್ರಮಾಚರಣೆಯ ಸಂಗೀತ ಕಛೇರಿಯಲ್ಲಿ ಮಲ್ಲಿಕಾರ್ಜುನ ಮನ್ಸೂರ್ (ಬಾಂಬೆ 1988)
ತನ್ನ ಮಗ ಡಾ. ಚಂದ್ರಶೇಖರ್ ಮನ್ಸೂರ್, ಮಗಳು ನೀಲಮ್ಮ ಕೊಡ್ಲಿ, ಅಳಿಯ ಪ್ರೋ. ಅಜ್ಜಣ್ಣ ಪಾಟೀಲರಿಗೂ ತಾಲೀಮು ನೀಡಿ ಸಂಗೀತ ಲೋಕಕ್ಕೆ ತನ್ನನ್ನು ಸಮರ್ಪಿಸಿದ ಮಹಾನುಭಾವರು ಮನ್ಸೂರ್ ಜೀ.
ಬಿಸ್ವಜಿತ್ ರಾಯ್ ಚೌಧರಿ, ಸಿದ್ಧರಾಮ ಜಂಬಲ ದಿನ್ನಿ, ಪಂಚಾಕ್ಷರಿ ಸ್ವಾಮಿ ಮತ್ತಿಕಟ್ಟೆ, ಬಿ. ಸಿ. ಪಾಟೀಲ, ರಾಜೀವ ಪುರಂದರೆ, ಗೀತಾ ಕುಲಕರ್ಣಿ, ಶಂಕರ ಮೊಕಾಶಿ ಪುಣಿಕರ, ಗೋದೂತಾಯಿ ಹಾನಗಲ್ಲ, ಹೀಗೆ ಮಲ್ಲಿಕಾರ್ಜುನರಿಂದ ಸಂಗೀತ ಜ್ಞಾನವನ್ನು ಪಡೆದವರು ಹಲವಾರು.
12 ಸೆಪ್ಟೆಂಬರ್ 1992ರಲ್ಲಿ ಇಹಲೋಕ ತ್ಯಜಿಸಿದ ಮಲ್ಲಿಕಾರ್ಜುನ ಭೀಮರಾಯಪ್ಪ ಮನ್ಸೂರ್ ಇವರ ನೆನಪು ಚಿರಸ್ಥಾಯಿಯಾಗಲು, ಕರ್ನಾಟಕ ಸರಕಾರವು ಡಾ, ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅನ್ನು ಧಾರವಾಡದಲ್ಲಿ ಸ್ಥಾಪನೆಗೈದು, ವಾರ್ಷಿಕ ಪ್ರಶಸ್ತಿ ನೀಡುತ್ತಾ ಬಂದಿದೆ.