ಮಂಗಳೂರು : ನಾ’ಡಿಸೋಜ ಎಂದೇ ಪ್ರಖ್ಯಾತರಾಗಿರುವ ಹಿರಿಯ ಸಾಹಿತಿ ನಾಬರ್ಟ್ ಡಿ’ಸೋಜ ಇವರು ವಯೋ ಸಹಜ ಅನಾರೋಗ್ಯದಿಂದ ದಿನಾಂಕ 05 ಜನವರಿ 2025ರ ಭಾನುವಾರ ಸಂಜೆ ನಿಧನರಾದರು. ಇವರಿಗೆ 88ವರ್ಷ ವಯಸ್ಸಾಗಿತ್ತು.
ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಇವರು ತಮ್ಮ ಜೀವನದ ಸಿಂಹ ಪಾಲನ್ನು ಸಾಹಿತ್ಯ ಸೇವೆಗಾಗಿ ಮುಡುಪಾಗಿಟ್ಟವರು. ಇವರು ಪರಿಸರ ಕಾಳಜಿಯುಳ್ಳ ಮಹತ್ವದ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದರು.
ಡಿ’ಸೋಜರು ಮೊದಲಿಗೆ ‘ಪ್ರಪಂಚ’ ಪತ್ರಿಕೆಗೆ ಕಥೆಗಳನ್ನು ಬರೆಯತೊಡಗಿದರು. ನಂತರ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಇವರ ಕಥೆಗಳು ಪ್ರಕಟವಾಗತೊಡಗಿದವು. ಡಿ’ಸೋಜ ಅವರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು 1964ರಲ್ಲಿ. ನಂತರ ‘ಮಂಜಿನ ಕಾನು’, ‘ಈ ನೆಲ ಈಜಲ’, ‘ಕೆಂಪು ತ್ರಿಕೋನ’, ‘ನೆಲೆ’, ‘ಮಾನವ’ ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು 40. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹತ್ತು ಹಲವು ವಿಷಯಗಳನ್ನು ಒಳಗೊಂಡ ಇವರ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ. ಇವರು ಪತ್ರಿಕೆಗಳಿಗೆ ಬರೆದ ಸಣ್ಣ ಕಥೆಗಳು 9 ಸಂಕಲನಗಳಲ್ಲಿ ಸಂಕಲಿತಗೊಂಡಿದ್ದು, ಸಮಗ್ರ ಕಥೆಗಳು 2 ಸಂಪುಟಗಳಲ್ಲಿ ಪ್ರಕಟವಾಗಿವೆ.
ನಾಡಿಗೆ ಬೆಳಕನ್ನು ನೀಡಲು ಪ್ರಾರಂಭಿಸಿದ ವಿದ್ಯುಚ್ಛಕ್ತಿ ಯೋಜನೆಯ ಅಡಿಯಲ್ಲಿ ಬಹಳಷ್ಟು ಜನರ ಬದುಕುಗಳು ಕತ್ತಲೆಯಲ್ಲಿ ಕರಗಿ ಹೋಗುವ ವಸ್ತುವಾಗಿರುವ ‘ಮುಳುಗಡೆ’ ಕಾದಂಬರಿಯು ‘ಮುಳುಗಡೆ’ ಪ್ರದೇಶದ ಜನರು ಪುನಃ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಕಷ್ಟಗಳು ಮನಸ್ಸಿಗೆ ತಟ್ಟುವಂತೆ ಬರೆದಿದ್ದಾರೆ.ಇದು ‘ಸುಧಾ’ ವಾರಪತ್ರಿಕೆಯ ‘ಯುಗಾದಿ ಕಾದಂಬರಿ ಸ್ಪರ್ಧೆ’ಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ಸುರೇಶ್ ಹೆಬ್ರೀಕರ್ ಅವರ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ‘ದ್ವೀಪ’, ಸಿರಿಗಂಧ ಶ್ರೀನಿವಾಸಮೂರ್ತಿ ಅವರ ನಿರ್ದೇಶನದಲ್ಲಿ ‘ಬಳುವಳಿ’, ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದಲ್ಲಿ ‘ಬೆಟ್ಟದಪುರದ ದಿಟ್ಟ ಮಕ್ಕಳು’ ಮತ್ತು ಮನು ಅವರ ನಿರ್ದೇಶನದಲ್ಲಿ ‘ಆಂತರ್ಯ’ ಕಾದಂಬರಿಗಳು ಚಲನಚಿತ್ರಗಳಾಗಿಯೂ ಜನಪ್ರಿಯತೆಯನ್ನು ಪಡೆದಿವೆ. ಇವುಗಳಲ್ಲಿ ‘ಕಾಡಿನ ಬೆಂಕಿ’ ಚಿತ್ರ ರಜತ ಕಮಲ ಪ್ರಶಸ್ತಿಯನ್ನೂ ಮತ್ತು ‘ದ್ವೀಪ’ ಚಿತ್ರ ‘ಸ್ವರ್ಣ ಕಮಲ’ ಪ್ರಶಸ್ತಿಯನ್ನು ಗಳಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಿರಿಮೆ ಗಳಿಸಿವೆ. ದೂರದರ್ಶನ ಮಾಧ್ಯಮದಲ್ಲಿ ಇವರ ಮಕ್ಕಳ ಧಾರವಾಹಿ, ಕಥೆಗಳು, ಹಲವಾರು ಕಾದಂಬರಿಗಳು ನಾಟಕಕ್ಕೆ ರೂಪಾಂತರವಾಗಿ ಪ್ರದರ್ಶಿತವಾಗಿವೆ.
ಕಥೆ, ಕಾದಂಬರಿ, ನಾಟಕ, ಕವನ, ಪ್ರಬಂಧ, ಮಕ್ಕಳ ಸಾಹಿತ್ಯ ಹೀಗೆ ಸಾಹಿತ್ಯದ ನಾನಾ ಮಗ್ಗುಲುಗಳಲ್ಲಿ ಕೈಯ್ಯಾಡಿಸಿದ ನಾ’ಡಿಸೋಜಾರವರು ಒಬ್ಬ ದಣಿವಿಲ್ಲದ ಸಾಹಿತಿ. ಸಂಘರ್ಷ, ಸಮಸ್ಯೆ, ಮನಸ್ಸಿನ ಗೊಂದಲಗಳಿಗೆ ಇವರು ತಮ್ಮ ಸಾಹಿತ್ಯದ ಮೂಲಕ ಕನ್ನಡಿ ಹಿಡಿದವರು. ಒಬ್ಬ ಶ್ರೇಷ್ಠ ಕಾದಂಬರಿಕಾರ, ಶಿಶು ಸಾಹಿತಿ ಒಟ್ಟಿನಲ್ಲಿ ಒಬ್ಬ ಕ್ರಿಯಾಶೀಲ ಸಾಹಿತಿಯನ್ನು ಸಾಹಿತ್ಯ ಲೋಕ ಕಳೆದುಕೊಂಡಿದೆ.