ಬಂಟ್ವಾಳ : ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಟ್ರಸ್ಟಿನ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಶಾಸಕರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ಹಾಗೂ ಡಾ. ವೈ.ಭರತ್ ಶೆಟ್ಟಿಯವರ ನೇತೃತ್ವದಲ್ಲಿ ದಿನಾಂಕ 08 ಜನವರಿ 2025ರಂದು ಗಂಜಿಮಠ ಒದ್ದೂರು ಫಾರ್ಮ್ಸ್ ನಲ್ಲಿ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ-2024-25 ಯಕ್ಷಧ್ರುವ-ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಒಟ್ಟು 20 ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.
ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನವನ್ನು ಶಾಸಕರಾದ ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ಹಾಗೂ ಡಾ. ವೈ. ಭರತ್ ಶೆಟ್ಟಿ ಉದ್ಘಾಟಿಸಿದರು. ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಟ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಸಲಹಾ ಸಮಿತಿ ಸದಸ್ಯ ಸರಪಾಡಿ ಅಶೋಕ ಶೆಟ್ಟಿ, ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿ. ದೇವದಾಸ್ ಶೆಟ್ಟಿ ಮೊದಲಾದವರಿದ್ದರು.
ಗಂಜಿಮಠ ಒಡ್ಡೂರು ಫಾರ್ಮ್ಸ್ ನಲ್ಲಿ ಯಕ್ಷಲೋಕವೇ ಸೃಷ್ಟಿಯಾಗಿದ್ದು, ಒಂದೇ ಸೂರಿನಡಿ ಪ್ರತ್ಯೇಕ ಎರಡು ರಂಗಸ್ಥಳಗಳಲ್ಲಿ ಬರೋಬ್ಬರಿ ಒಂದು ಸಾವಿರದಷ್ಟು ವಿದ್ಯಾರ್ಥಿಗಳು ಬಣ್ಣ ಹಚ್ಚಿ ತಮ್ಮ ಯಕ್ಷ ಸೇವೆಗೆ ಮುಂದಡಿಯಿಟ್ಟರು. ಯಕ್ಷಾಭ್ಯಾಸ ಪಡೆಯುವ ಮಕ್ಕಳ ಸಣ್ಣ ಪುಟ್ಟ ಲೋಪವನ್ನು ಹೊರತುಪಡಿಸಿ ಮಕ್ಕಳ ಅದ್ಭುತ ಪ್ರದರ್ಶನವನ್ನು ಕಂಡು ಯಕ್ಷಗಾಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ಎರಡು ಪ್ರತ್ಯೇಕ ರಂಗಸ್ಥಳಗಳಲ್ಲಿ ತಲಾ 10 ಶಾಲೆಗಳ ಮಕ್ಕಳಂತೆ ಒಟ್ಟು 20 ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. ರಂಗಸ್ಥಳದಲ್ಲಿ ಮಕ್ಕಳ ಕುಣಿತ, ಮಾತುಗಾರಿಕೆ, ಚೌಕಿಯಲ್ಲಿ ಬಣ್ಣ ಹಚ್ಚುವ ತವಕ, ಅವರೊಳಗಿನ ಆತಂಕ, ಅದ್ಭುತ ಪ್ರದರ್ಶನ ನೀಡಬೇಕು ಎಂಬ ಛಲ ಕಂಡುಬಂತು.
ವಿವಿಧ ಮೇಳಗಳು, ಹವ್ಯಾಸಿ ಭಾಗವತರು, ಇತರ ಹಿಮ್ಮೇಳ ಕಲಾವಿದರು ಮಕ್ಕಳಿಗೆ ಶಕ್ತಿ ತುಂಬುವ ಕಾರ್ಯ ಮಾಡಿದ್ದು, ಪೂರ್ವರಂಗದ ಜತೆಗೆ ಸಾಕಷ್ಟು ಪ್ರಸಂಗಗಳು ಎರಡೂ ರಂಗಸ್ಥಳದಲ್ಲಿ ಪ್ರದರ್ಶನಗೊಂಡವು. ಯಕ್ಷಧ್ರುವ ಪಟ್ಟ ಫೌಂಡೇಶನ್ ನಡೆಸುವ ಯಕ್ಷಶಿಕ್ಷಣ ಯೋಜನೆಯ ವಿವಿಧ ಯಕ್ಷಗುರುಗಳು ನೀಡಿದ ನಾಟ್ಯಾಭ್ಯಾಸದಂತೆ ಮಕ್ಕಳು ಪ್ರದರ್ಶನ ನೀಡಿದ್ದಾರೆ.
ಪೊಳಲಿ ರಾಜರಾಜೇಶ್ವರೀ ಪ್ರೌಢಶಾಲೆ (40 ವಿದ್ಯಾರ್ಥಿಗಳು), ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆ (38), ಮಣಿನಾಲ್ಕೂರು ಸ.ಪ.ಪೂ. ಕಾಲೇಜು (50), ಮಧ್ಯ ಸರಕಾರಿ ಹಿ.ಪ್ರಾ.ಶಾಲೆ (60), ಫರಂಗಿಪೇಟೆ ಶ್ರೀರಾಮ ಪ್ರೌಢಶಾಲೆ (40), ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ (25), ಮುಲ್ಲಕಾಡು ಸರಕಾರಿ ಪ್ರೌಢಶಾಲೆ (50), ಪುಂಜಾಲಕಟ್ಟೆ ನಾರಾಯಣ ಗುರು ವಸತಿ ಶಾಲೆ (85), ಬೈಕಂಪಾಡಿ ಸರಕಾರಿ ಪ್ರೌಢಶಾಲೆ (45), ನೆಲ್ಲಿತೀರ್ಥ ಮೊರಾರ್ಜಿ ದೇಸಾಯಿ ವಸತಿ ಶಾಲೆ (30), ಉಳಾಯಿಬೆಟ್ಟು ಡಾ. ಅಂಬೇಡ್ಕರ್ ವಸತಿ ಶಾಲೆ (150), ಕೊಯಿಲ ಪ್ರೌಢಶಾಲೆ (45), ನರಿಕೊಂಬು ಬೋಳಂತೂರು ಶಾಲೆ (20), ಬೆಂಜನಪದವು ಪ್ರೌಢಶಾಲೆ (22), ಪಂಜಿಕಲ್ಲು ಪ್ರೌಢಶಾಲೆ (38), ಸರಪಾಡಿ ಪ್ರೌಢಶಾಲೆ (32). ಮೊಗರ್ನಾಡು ಹಿ.ಪ್ರಾ. ಶಾಲೆ (15), ಕಡೇಶ್ವಾಲ್ಯ ಪ್ರೌಢಶಾಲೆ (25), ಶಂಭೂರು ಪ್ರೌಢಶಾಲೆ (24), ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆ (97) ಹೀಗೆ 931 ವಿದ್ಯಾರ್ಥಿಗಳು ಬಣ್ಣ ಹಚ್ಚಿದರು.