ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸಾಪ್ತಾಹಿಕ ನೃತ್ಯಸರಣಿ ಕಾರ್ಯಕ್ರಮವು ದಿನಾಂಕ 13 ಜನವರಿ 2025ರಂದು ಸಂಜೆ ಗಂಟೆ 6-25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಕುಂದಾಪುರದ ಕುಮಾರಿ ಗಾರ್ಗಿದೇವಿ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಕುಮಾರಿ ಗಾರ್ಗಿದೇವಿ ಶ್ರೀಮತಿ ಪ್ರವಿತಾ ಅಶೋಕ್ ಹಾಗೂ ಶ್ರೀ ಅಶೋಕ್ ಕುಮಾರ್ ಇವರ ಸುಪುತ್ರಿ. ತನ್ನ ಆರನೇ ವಯಸ್ಸಿಗೆ ತಾಯಿ ಹಾಗೂ ಗುರು ವಿದುಷಿ ಪ್ರವಿತಾ ಅಶೋಕ್ ಇವರ ಬಳಿ ತನ್ನ ನೃತ್ಯಭ್ಯಾಸವನ್ನು ಪ್ರಾರಂಭಿಸಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಪ್ರಸ್ತುತ ಸೀನಿಯರ್ ಪರೀಕ್ಷೆಯ ತಯಾರಿಯಲ್ಲಿರುತ್ತಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮುಗಿಸಿದ್ದು, ಪ್ರಸ್ತುತ ಶ್ರೀಮತಿ ಉಷಾ ರಾಮಕೃಷ್ಣ ಇವರ ಬಳಿ ಸೀನಿಯರ್ ಅಭ್ಯಾಸ ಮಾಡುತ್ತಿದ್ದಾಳೆ.
ಕುಮಾರಿ ಗಾರ್ಗಿ ದೇವಿ ಇವರು ಹಲವಾರು ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಎನ್.ಸಿ.ಆರ್.ಟಿ. ದೆಹಲಿಯಲ್ಲಿ ಆಯೋಜಿಸಿದ್ದ ಕಲೋತ್ಸವದಲ್ಲಿ ಬಹುಮಾನ ಗಳಿಸುವುದರ ಮುಖೇನ 2024ರ ಗಣರಾಜ್ಯೋತ್ಸವ ಪರೇಡ್ ಹಾಗೂ ಪರೀಕ್ಷಾ ಪಿ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ಮಾನ್ಯ ಪ್ರಧಾನ ಮಂತ್ರಿಗಳ ಸಮ್ಮುಖದಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುತ್ತಾರೆ. ಇದಲ್ಲದೆ ಸಿ.ಸಿ.ಆರ್.ಟಿ. ಇವರು ಕೊಡ ಮಾಡುವ ಶಿಷ್ಯವೇತನವನ್ನು ಪಡೆದಿರುದ್ದು, ಹಲವಾರು ಹಿರಿಯ ನೃತ್ಯ ಗುರುಗಳ ನೃತ್ಯ ಕಾರ್ಯಾಗಾರದಲ್ಲಿ ಭಾಗವಹಿಸಿರುತ್ತಾಳೆ. ಸಹೋದರಿ ಪೂರ್ವಿಕಳೊಂದಿಗೆ ಹಲವಾರು ವೇದಿಕೆಯಲ್ಲಿ ಇವುಗಳ ನೃತ್ಯ ಪ್ರದರ್ಶನವನ್ನು ನೀಡಿದ್ದು, ಆಳ್ವಾಸ್ ನುಡಿಸಿರಿ, ಭರತಂಜಲಿ ಮಂಗಳೂರು ಇವರು ನಡೆಸಿದ ನೃತ್ಯ ದೀಪದಲ್ಲಿ, ಮೂಕಾಂಬಿಕಾ ಕಲ್ಚರ್ ಅಕಾಡೆಮಿ ಪುತ್ತೂರು, ಸರಿಗಮ ಭಾರತಿ ಪರ್ಕಳ, ಲಾಸ್ಯ ನೃತ್ಯ ಅಕಾಡೆಮಿ ಬೆಂಗಳೂರು ಸೇವಾ ಸದನದ ಬೆಂಗಳೂರು ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುತ್ತಾರೆ. ಶಿವಪ್ರಾಣಂ ಕಿನ್ನಿಗೋಳಿ ಇವರು ಆಯೋಜಿಸಿದ್ದ ಶಿವಾಂಜಲಿ ಕಾರ್ಯಕ್ರಮದಲ್ಲಿ ಹಾಗೂ ನೃತ್ಯ ವಸಂತ ನಾಟ್ಯಾಲಯದ ಮುಖೇನ ದೇಶದಾದ್ಯಂತ ಕಾರ್ಯಕ್ರಮವನ್ನು ನೀಡಿರುತ್ತಾಳೆ.