ಸರಸ ಸಜ್ಜನಿಕೆಯ ‘ಹಾಸ್ಯಪ್ರಿಯ’ರೆಂದು ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾದವರು ಡಾ. ಎಂ.ಎಸ್. ಸುಂಕಾಪುರ. ಗ್ರಾಮೀಣ ಬದುಕು, ಸಾಹಿತ್ಯ, ಸಂಸ್ಕೃತಿಗಳಿಂದ ಪ್ರಭಾವಿತರಾದ ಇವರು ವಂಶಪಾರಂಪರ್ಯವಾಗಿ ಜಾನಪದ ಸೊಗಡನ್ನು ಪಡೆದುಕೊಂಡವರು. ಮರಿ ಬಸಪ್ಪ ಸಣ ಬಸಪ್ಪ ಸುಂಕಾಪುರ 10 ಜನವರಿ 1921ರಂದು ಗದಗ ಜಿಲ್ಲೆಯ ಮುಳಗುಂದದಲ್ಲಿ ಜನಿಸಿದರು. ಅವರು ತಮ್ಮ ನಗೆಲಹರಿಯಿಂದ, ಮಾತಿನ ಚುರುಕಿನಿಂದ, ನಟರಾಗಿ, ನಾಟಕಕಾರರಾಗಿ, ಹರಟೆಮಲ್ಲರಾಗಿ ಮೆರೆದಿದ್ದರು.
ಬೆಳಗಾವಿ ಹಾಗೂ ಬಾಗಲಕೋಟೆಯ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದರು. ‘ಶೋಭಮೂಲ’ ಎಂಬುದು ಇವರು ಸ್ಥಾಪಿಸಿದ ಪ್ರಕಾಶನ ಸಂಸ್ಥೆ. ಹಾಸ್ಯ ಸಾಹಿತಿಯಾದ ಎಂ.ಎಸ್. ಸುಂಕಾಪುರ ಅವರು ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಎಂಬ ಸಂಶೋಧನಾ ಪ್ರೌಢ ಪ್ರಬಂಧವನ್ನು ರಚಿಸಿ, ಅದಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪಡೆದರು.
‘ನಗೆ-ಹೊಗೆ’, ‘ಗಪ್-ಚಿಪ್’, ‘ತಲೆ ಹರಟೆಗಳು’, ‘ನಗೆಗಾರ ನಯಸೇನ’, ‘ಜೀವನದಲ್ಲಿ ಹಾಸ್ಯ’ ಅವರ ಕೃತಿಗಳು, ರೇಡಿಯೋ ನಾಟಕಗಳು ಹಾಗೂ ನಮ್ಮ ನಾಟಕಗಳು ಅವರ ದೃಶ್ಯಕಾವ್ಯಗಳು. ಇವರು ಸಂಪಾದಿಸಿರುವ ಗ್ರಂಥಗಳು ‘ಜೀವನ ಜೋಕಾಲಿ’, ‘ಗಿರಿಜಾ ಕಲ್ಯಾಣ’, ‘ಶಬರಶಂಕರ ವಿಲಾಸ’, ‘ಶ್ರೀ ಕೃಷ್ಣ ಪಾರಿಜಾತ’, ‘ಪ್ರಭುಲಿಂಗ ಲೀಲೆ’. ಇವರ ಸಂಶೋಧನಾ ಗ್ರಂಥಗಳು ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಹಾಗೂ ‘ಛಂದಸ್ಸಿನ ಗ್ರಂಥ’.
ಜನಪದ ಸಾಹಿತ್ಯ ಮತ್ತು ಕನ್ನಡ ಜನಪದ ರಂಗಭೂಮಿಯ ವಿಚಾರವಾಗಿ ಸುಂಕಾಪುರ ಇವರು ತಮ್ಮದೇ ಆದ ಖಚಿತ ನಿಲುವು ಹೊಂದಿದ್ದರು. ಉತ್ತರ ಕರ್ನಾಟಕದ ಜಾನಪದವನ್ನು ಕುರಿತು ಅಧಿಕೃತವಾಗಿ ಮಾತನಾಡುತ್ತಿದ್ದ ಬೆರಳೆಣಿಕೆಯ ವಿದ್ವಾಂಸರಲ್ಲೋರ್ವರು ಸುಂಕಾಪುರ. ಜನಪದ ಗೀತೆಗಳ ಸಂಗ್ರಹ (9 ಕೃತಿಗಳು) ಹಾಗೂ ಕನ್ನಡ ಬಯಲಾಟ (5 ಕೃತಿಗಳು) ಅಲ್ಲದೇ ನೂರಾರು ಜಾನಪದ ವೈಚಾರಿಕ ಲೇಖನ – ಪ್ರಬಂಧಗಳನ್ನು ರಚಿಸಿರುವ ಸುಂಕಾಪುರ ತಮ್ಮ ಬದುಕಿನ ಬಹುಭಾಗವನ್ನು ಜಾನಪದ ಏಳಿಗೆಗೆ ಮೀಸಲಿಟ್ಟಿರುವುದು ಅವರ ಜಾನಪದ ಕಾಳಜಿಗೆ ಸ್ಪಷ್ಟ ಸಾಕ್ಷಿಗಳಾಗಿವೆ.
- ವಿಮರ್ಶಕರು ಮಾಧುರಿ ಶ್ರೀರಾಮ್
ಅಧ್ಯಾಪಕಿ