ಮೈಸೂರು : ರಂಗರಥ ಬೆಂಗಳೂರು ಅರ್ಪಿಸುವ ಸಂಚಲನ ಮೈಸೂರು (ರಿ.) ಇವರ ಸಹಕಾರದೊಂದಿಗೆ ಕನ್ನಡ ಹಾಸ್ಯ ನಾಟಕ ‘ಇದ್ದಾಗ ನಿಮ್ದು ಕದ್ದಾಗ ನಮ್ದು’ ಪ್ರದರ್ಶನವನ್ನು ದಿನಾಂಕ 12 ಜನವರಿ 2025ರಂದು ಸಂಜೆ 7-00 ಗಂಟೆಗೆ ಮೈಸೂರಿನ ಕಿರುರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೂಲ : ದಾರಿಯೋ ಫೋ (ದ ವರ್ಚುವಸ್ ಬರ್ಗಲರ್) ಕನ್ನಡಕ್ಕೆ ಅನುವಾದ : ಕೆ.ವಿ. ಅಕ್ಷರ, ರಂಗಪಠ್ಯ : ಆಸಿಫ್ ಕ್ಷತ್ರಿಯ, ಸಂಗೀತ: ಭಿನ್ನಷಡ್ಜ ಮತ್ತು ಆಸಿಫ್ ಕ್ಷತ್ರಿಯ ಮತ್ತು ಶ್ವೇತ ಶ್ರೀನಿವಾಸ್ ಇವರ ನಿರ್ದೇಶನದಲ್ಲಿ ಈ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕಕ್ಕೆ 15 ನಿಮಿಷ ಮುಂಚಿತವಾಗಿ ಬನ್ನಿ ಹಾಗೂ ಟಿಕೆಟ್ ಗಳಿಗಾಗಿ 8050157443 / 9448386776 ಸಂಪರ್ಕಿಸಿ.
ರಂಗರಥ ಸಂಸ್ಥೆಯ ಬಗ್ಗೆ :
ಭಾರತೀಯ ಪ್ರದರ್ಶನ ಕಲಾ ಸಂಸ್ಥೆಯಾದ ‘ರಂಗರಥ’ ಎಂಬುದು ರಂಗಪ್ರೇಕ್ಷಕರ ಮನಸೂರೆಗೊಂಡ ಬೆಂಗಳೂರಿನ ಕೆಲವು ರಂಗತಂಡಗಳಲ್ಲಿ ಒಂದು. ಹಲವು ವರ್ಷಗಳ ರಂಗಾನುಭವದ ಆಧಾರದ ಮೇಲೆ ರಂಗರಥದ ಪಯಣ ಸಾಗಿದೆ. ಅನುಭವೀ ರಂಗಕರ್ಮಿಗಳು, ನಾಟಕಕಾರರು, ಸಾಹಿತಿಗಳು, ಸಂಗೀತ ಸಂಯೋಜಕರು ಒಂದಾಗಿ, ರಂಗಪ್ರಯೋಗಗಳಲ್ಲಿ ಹೊಸ ಆಯಾಮ ಮತ್ತು ಸಾಧ್ಯತೆಗಳನ್ನು ಅಳವಡಿಸಿಕೊಂಡು, ಒಳ್ಳೆ ಅಭಿರುಚಿಯ ನಾಟಕ, ಯಕ್ಷಗಾನ, ನೃತ್ಯನಾಟಕಗಳನ್ನು ತಯಾರಿಸಿ ದೇಶಾದ್ಯಂತ ಪ್ರದರ್ಶಿಸುತ್ತಿದೆ. ವಿವಿಧ ತಂತ್ರಜ್ಞರು ಮತ್ತು ಹಲವು ವಿಭಾಗಗಳ ಪರಿಣಿತರ ಸಹಯೋಗದೊಂದಿಗೆ, ಪುರಾಣ, ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಇಂದಿನ ಪೀಳಿಗೆಯವರಿಗೆ ತಲುಪಿಸಲು, ಮನರಂಜನಾತ್ಮಕ ಹಾಗೂ ಶೈಕ್ಷಣಿಕ ಮಹತ್ವವುಳ್ಳ ರಂಗಚಟುವಟಿಕೆಗಳನ್ನು ಮಾಡುವಲ್ಲಿ ರಂಗರಥ ನಿರತವಾಗಿದೆ.
ರಂಗರಥ ತಂಡವು, ಮಕ್ಕಳಿಗೆ ಹಾಗೂ ಎಲ್ಲಾ ವಯಸ್ಸಿನ ಆಸಕ್ತರಿಗೆ, ರಂಗಭೂಮಿಯ ವಿಭಾಗಗಳಾದ ವಾಕ್-ವಿಜ್ಞಾನ, ಹಾವಭಾವ ತಂತ್ರಜ್ಞಾನ, ಮಾನಸ-ಚಲನೆ, ಇತ್ಯಾದಿ ವಿಶಿಷ್ಟ ವಿಷಯಗಳಲ್ಲಿ ಆನ್ಲೈನ್ ಮತ್ತು ಆಫ್ ಲೈನ್ ನಲ್ಲಿ ತರಬೇತಿ ನೀಡುತ್ತಿದೆ. ಈ ತಂಡವು, ವಿಶೇಷವಾಗಿ ನಟರಿಗೆ, ನೃತ್ಯಪಟುಗಳಿಗೆ ಮತ್ತು ಅನೇಕ ಪ್ರದರ್ಶನ ಕಲಾವಿದರಿಗಾಗಿಯೇ ವಿಶಿಷ್ಟವಾಗಿ ಸಿದ್ಧಪಡಿಸಿದ ‘ನಟಯೋಗ’ ಯೋಗ ವಿಧಾನವನ್ನು ಕಲಿಸುವುದರಲ್ಲಿ ನಿರತವಾಗಿದೆ.
ಇದಲ್ಲದೇ, ಗ್ರಾಮೀಣ ಯುವ ಆಸಕ್ತರಿಗೆ, ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ರಂಗ ನಿರ್ವಹಣೆ, ವಿತ್ತ ನಿರ್ವಹಣೆ, ಚಲನಚಿತ್ರ ನಿರ್ದೇಶನ, ಚಿತ್ರಕಥೆ, ಸಂಭಾಷಣೆ, ಇತ್ಯಾದಿಗಳಲ್ಲಿ ಕೂಡ ತರಬೇತಿ ನೀಡುವ ಪ್ರಮಾಣಿಕೃತ ತರಗತಿಗಳನ್ನು ನಡೆಸಲು ರಂಗರಥ ಟ್ರಸ್ಟ್ ಸಜ್ಜಾಗಿದೆ. ಜೊತೆಗೆ, ಬೇರೆ ಪ್ರತಿಷ್ಠಿತ ರಂಗಶಾಲೆ ಅಥವಾ ಚಲನಚಿತ್ರ ತರಬೇತಿ ಸಂಸ್ಥೆಗಳಿಂದ ಉತ್ತೀರ್ಣರಾಗಿ ಬಂದಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ, ‘ಥಿಯೇಟರ್ ಇಂಟರ್ನ್ ಶಿಪ್ ಕೋರ್ಸ್’ಗಳನ್ನು ಕೂಡ ರಂಗರಥ ತಂಡವು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಜೊತೆಗೆ, ಹಲವಾರು ಹೊಸ ಹೊಸ ನಾಟಕಕಗಳನ್ನು ನಿರ್ಮಿಸಿ ಪ್ರದರ್ಶಿಸುತ್ತಾ ಇದೆ.
ಆಸಿಫ್ ಕ್ಷತ್ರಿಯ (ನಿರ್ದೇಶಕರು) :
ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ವಿಶಿಷ್ಟ ಮಿಶ್ರಣದ ವ್ಯಕ್ತಿತ್ವ ಹೊಂದಿರುವ, ರಂಗಭೂಮಿ ಮತ್ತು ಚಲನಚಿತ್ರ ರಂಗದಲ್ಲಿ ಚಿರಪರಿಚಿತ ವ್ಯಕ್ತಿ ಆಸಿಫ್ ಕ್ಷತ್ರಿಯ, ದಕ್ಷಿಣ ಭಾರತದಲ್ಲಿ ದಶಕಗಳ ಹಿಂದೆಯೇ ಕಿರುಚಿತ್ರ ನಿರ್ಮಾಣ ಸಂಸ್ಕೃತಿಯನ್ನು ಹುಟ್ಟುಹಾಕಿದ ಇವರಿಗೆ ಚಿತ್ರರಂಗ ಮತ್ತು ರಂಗಭೂಮಿಯ ಒಡನಾಟ ಕಳೆದ 40 ವರ್ಷಗಳಿಂದಲೂ ಇದೆ. ಈ ಎರಡೂ ವಲಯಗಳಲ್ಲಿ ಆಸಿಫ್ ಕ್ಷತ್ರಿಯ ಅವರು ಒಬ್ಬ ಬರಹಗಾರರಾಗಿ, ಸಂವೇದನಾಶೀಲ ನಟರಾಗಿ ಹಾಗೂ ಸೃಜನಶೀಲ ನಿರ್ದೇಶಕರಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಕಲಾ ದಿಗ್ಗಜರಾದ ಬಿ.ವಿ. ಕಾರಂತ, ಎಂ.ಎಸ್. ಸತ್ಯು. ಆರ್.ಎನ್. ಜಯಗೋಪಾಲ್, ಭಾರ್ಗವ, ಪೀಟರ್ ಬ್ರೂಕ್, ಇರ್ಶಾದ್ ಪಂಜತನ್, ಸಿ.ಜಿ.ಕೆ., ಗಿರೀಶ್ ಕಾರ್ನಾಡ್, ಅರುಂಧತಿ ನಾಗ್, ಪ್ರೋತಿಮಾ ಬೇಡಿ, ಸಿರಿಗಂಧ ಶ್ರೀನಿವಾಸಮೂರ್ತಿ, ಎಚ್.ಎಲ್. ನಾಗೇಗೌಡ, ಮುಂತಾದವರೊಡನೆ ಕೆಲಸ ಮಾಡಿದ ಆಸಿಫ್ ಅವರು ನಟನೆ ಮತ್ತು ನಿರ್ದೇಶನದ ಸೂತ್ರಗಳನ್ನು ಇಂತಹ ಅನೇಕ ದಿಗ್ಗಜರಿಂದ ಕಲಿತು, ತಮ್ಮ ನಾಟಕ ಮತ್ತು ಚಲನಚಿತ್ರಗಳಲ್ಲಿ ಅಳವಡಿಸಿಕೊಂಡು ಬಂದಿದ್ದಾರೆ.
ಇವರು ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ ತಮ್ಮನ್ನು ತಾವು ಸಂಪೂರ್ಣವಾಗಿ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅರ್ಪಿಸಿಕೊಂಡಿದ್ದಾರೆ. ಅನೇಕ ನಾಟಕಗಳು, ಕಿರುಚಿತ್ರಗಳು, ಚಲನಚಿತ್ರಗಳು, ವನ್ಯಜೀವಿ ಮತ್ತು ಜನಪದ ಸಂಸ್ಕೃತಿಯ ಸಾಕ್ಷ್ಯಚಿತ್ರಗಳು, ಕಾರ್ಪೋರೇಟ್ ಮತ್ತು ಜಾಹೀರಾತು ಚಿತ್ರಗಳನ್ನು ಮಾಡಿ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಸ್ತುತ, 4 ವರ್ಷಗಳ ಹಿಂದೆ ಸ್ಥಾಪಿಸಿದ, ‘ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ’ಯ ಸಂಸ್ಥಾಪಕ ನಿರ್ದೇಕರಾಗಿ ಮತ್ತು ವ್ಯವಸ್ಥಾಪಕ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಾ, ಹಲವು ನಾಟಕಗಳನ್ನು ಬರೆದು ನಿರ್ದೇಶಿಸುತ್ತಾ, ಹೊಸ ಪೀಳಿಗೆಯ ಯುವಕ ಯುವತಿಯರಿಗೆ ರಂಗಭೂಮಿ ಮತ್ತು ನಟನೆಯ ಪಾಠಗಳನ್ನು ಹೇಳಿಕೊಡುವುದರಲ್ಲಿ ನಿರತರಾಗಿದ್ದಾರೆ.
ಶ್ವೇತಾ ಶ್ರೀನಿವಾಸ್ (ನಿರ್ದೇಶಕರು) :
ಶ್ವೇತಾ ಶ್ರೀನಿವಾಸ್ ಅವರು ಕನ್ನಡ ರಂಗಭೂಮಿಯ ಒಬ್ಬ ಚಿರಪರಿಚಿತ ಪ್ರತಿಭಾನ್ವಿತ ನಟಿ. ಬಾಲ್ಯದಿಂದಲೂ ರಂಗಭೂಮಿಯ ಒಡನಾಟ ಹೊಂದಿರುವ ಇವರು, ನಟನೆಯ ಜೊತೆಗೆ ಸೃಜನಶೀಲ ವಸ್ತ್ರ ವಿನ್ಯಾಸ ಮತ್ತು ನೃತ್ಯ ಸಂಯೋಜನೆಗೆ ದೇಶಾದ್ಯಂತ ಹೆಸರಾದವರು. ಇದಕ್ಕಾಗಿ ಇವರು ಹಲವು ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ನೀನಾಸಂ ಪದವೀಧರರಾದ ಇವರು, 60ಕ್ಕೂ ಹೆಚ್ಚು ಪ್ರಮುಖ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದಲ್ಲದೇ ಅನೇಕ ಚಲನಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ.
ಶ್ವೇತಾ ಶ್ರೀನಿವಾಸ್ ಅವರು ‘ಪಂಚರಂಗಿ’, ‘ದ್ಯಾವ್ರೆ’, ಬೆಂಕಿಪೊಟ್ಟಣ’, ‘ಕೃಷ್ಣಲೀಲಾ’, ‘ಡಿ.ಎನ್.ಎ. ‘ನೀರು ತಂದವರು’, ‘ನಾತಿಚರಾಮಿ, ‘ಗಂಗಾ’, ‘ತರ್ಕ’, ‘ಬ್ಯಾಚಲರ್ ಪಾರ್ಟಿ’, ‘ಬೇಲಿ ಹೂ’ ಮುಂತಾದ ಜನಮನಗೆದ್ದ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ ಚಲನಚಿತ್ರಗಳಲ್ಲಿ ನಟಿಸಿ ಅಪಾರ ಮನ್ನಣೆಯನ್ನು ಗಳಿಸಿದ್ದಾರೆ. ಜೊತೆಗೆ ಶ್ವೇತ ಶ್ರೀನಿವಾಸ್ ಅವರು ಒಬ್ಬ ಸಮರ್ಥ ಯಕ್ಷಗಾನ ಪಟು ಆಗಿರುವುದಲ್ಲದೇ, ಗುರುಗಳಾದ ಉದಯಕುಮಾರ್ ಶೆಟ್ಟಿ, ಪಾರ್ವತಿದತ್ತ ಮತ್ತು ಮಧುಲಿತ ಮಹಾಪಾತ್ರ ಇವರುಗಳ ಮಾರ್ಗದರ್ಶನದಲ್ಲಿ ಒಡಿಸ್ಸಿ ಶಾಸ್ತ್ರೀಯ ನೃತ್ಯವನ್ನೂ ಅಭ್ಯಸಿಸಿದ್ದಾರೆ. ಸಧ್ಯ ಗುರು ಶ್ವೇತಾ ಕೃಷ್ಣ ಅವರ ಬಳಿ ಒಡಿಸ್ಸಿ ನೃತ್ಯಾಭ್ಯಾಸವನ್ನು ಮುಂದುವರೆಸಿದ್ದಾರೆ.
ಹಿರಿಯ ರಂಗಕರ್ಮಿಗಳಾದ ಸಿ.ಜಿ.ಕೆ, ಕೆ.ವಿ. ಅಕ್ಷರ, ಅಭಿಲಾಷ್ ಪಿಳ್ಳೆ, ಮಾನವ್ ಕೌಲ್, ವೆಂಕಟರಮಣ ಐತಾಳ್, ಜಿ. ವೇಣು, ಇವರುಗಳ ಜೊತೆ ಕೆಲಸ ಮಾಡಿದ ಶ್ವೇತಾ ಇವರು ‘ಚಿತ್ರಪಟ’ ನಾಟಕದಲ್ಲಿನ ತಮ್ಮ ನಟನೆಗೆ ಮತ್ತು ವಸ್ತ್ರವಿನ್ಯಾಸಕ್ಕೆ ‘ಮೆಟಾ’ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೇ ‘ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ’ ನಾಟಕಕ್ಕೆ ಅತ್ಯುತ್ತಮ ನಟಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರದು.
ಇದರ ಜೊತೆಗೇ, ಶ್ವೇತಾ ಶ್ರೀನಿವಾಸ್ ಅವರು ಭಾರತ ಸರ್ಕಾರದ, ಆಯುಷ್ ಮತ್ತು ಯೋಗ ಅಲಾಯನ್ಸ್ ಮಂತ್ರಾಲಯದಿಂದ ಧೃಡೀಕರಿಸಲ್ಪಟ್ಟ ಪ್ರಮಾಣಪತ್ರವನ್ನು ಪಡೆದು ಈಗ, ವಿಶೇಷವಾಗಿ ನಟರಿಗೆ, ನೃತ್ಯಪಟುಗಳಿಗೆ ಮತ್ತು ಅನೇಕ ಪ್ರದರ್ಶನ ಕಲಾವಿದರಿಗಾಗಿಯೇ ವಿಶಿಷ್ಟವಾಗಿ ಸಿದ್ಧಪಡಿಸಿದ ಯೋಗ ವಿಧಾನವನ್ನು ಕಲಿಸುವುದರಲ್ಲಿ ನಿರತರಾಗಿದ್ದಾರೆ.
ಪ್ರಸ್ತುತ 4 ವರ್ಷಗಳ ಹಿಂದೆ ಸ್ಥಾಪಿಸಿದ. ‘ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ’ಯ ಸಂಸ್ಥಾಪಕ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ, ಹಲವು ನಾಟಕಗಳನ್ನು ನಿರ್ದೇಶಿಸುತ್ತಾ, ಹೊಸ ಪೀಳಿಗೆಯ ಯುವಕ ಯುವತಿಯರಿಗೆ ರಂಗಭೂಮಿಯ ಸಮಗ್ರ ಪರಿಚಯವನ್ನು ನೀಡುತ್ತಾ ರಂಗತಂತ್ರಗಳನ್ನು ಕಲಿಸುವುದರಲ್ಲಿ ನಿರತರಾಗಿದ್ದಾರೆ.