ಧಾರವಾಡ : ವರಕವಿ ದ.ರಾ. ಬೇಂದ್ರೆ ಹೆಸರಲ್ಲಿ ಕೊಡುವ 2025ನೇ ಸಾಲಿನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ ಲೇಖಕಿ ಡಾ. ವೀಣಾ ಶಾಂತೇಶ್ವರ ಹಾಗೂ ಕವಿ, ವಿಮರ್ಶಕ ಮತ್ತು ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಇವರುಗಳಿಗೆ ಒಲಿದಿದೆ. ಬೇಂದ್ರೆಯವರ 129ನೇ ಜನ್ಮದಿನದ ನಿಮಿತ್ತ ದಿನಾಂಕ 31 ಜನವರಿ 2025ರಂದು ಬೇಂದ್ರೆ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಡಾ. ದ.ರಾ. ಬೇಂದ್ರೆ ಟ್ರಸ್ಟ್ ಅಧ್ಯಕ್ಷರಾದ ಡಾ. ಡಿ.ಎಂ. ಹಿರೇಮಠ ಇವರು ತಿಳಿಸಿದರು.
ಪ್ರಶಸ್ತಿ ಮೊತ್ತ ರೂಪಾಯಿ ಒಂದು ಲಕ್ಷವಿದ್ದು, ಇಬ್ಬರು ಹಂಚಿಕೊಂಡಿದ್ದಾರೆ. ಪ್ರಶಸ್ತಿ ಫಲಕ, ಫಲ-ಪುಷ್ಪಗಳನ್ನು ಒಳಗೊಂಡಿದೆ. ಧಾರವಾಡದ ನವೋದಯ ಸಾಹಿತ್ಯದ ಸ್ತ್ರೀ ಸಂವೇದನೆ ಸೃಜನಶೀಲ ಲೇಖಕಿ ಡಾ. ವೀಣಾ ಶಾಂತೇಶ್ವರ ಮತ್ತು ಗಾಂಧಿ, ಅಂಬೇಡ್ಕರ್, ಲೋಹಿಯಾ, ಕುವೆಂಪು ಇವರ ವಿಚಾರಧಾರೆಗಳಿಂದ ಪ್ರಭಾವಿತರಾದ ತುಮಕೂರು ಮೂಲದ ಪ್ರೊ. ಎಸ್.ಜಿ. ಸಿದ್ದರಾಮಯ್ಯರವರನ್ನು ಪ್ರಶಸ್ತಿ ಆಯ್ಕೆ ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದೆ.
ಪ್ರೊ. ವೀಣಾ ಶಾಂತೇಶ್ವರ :
ಧಾರವಾಡದಲ್ಲಿ ಹುಟ್ಟಿದ ಪ್ರೊ. ವೀಣಾ ಶಾಂತೇಶ್ವರ ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಕನ್ನಡ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರೆಯಾದ ಇವರು ಇಂಗ್ಲೀಷ್ ಭಾಷಾ ಶಿಕ್ಷಣದಲ್ಲಿ ಪಿ.ಎಚ್.ಡಿ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿ ಹಾಗೂ ಇಂಗ್ಲೀಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ವೀಣಾ ಶಾಂತೇಶ್ವರ ಇವರು ಸಣ್ಣಕತೆ, ಕಾದಂಬರಿಗಳ ಜೊತೆಗೆ ಹಲವಾರು ವಿಮರ್ಶಾತ್ಮಕ ಪ್ರಬಂಧ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದ ಇವರು ಅಖಿಲ ಭಾರತ ಲೇಖಕಿಯರ ಸಮ್ಮೇಳನದ ಸಂಯೋಜಕಿಯಾಗಿದ್ದರು. ‘ಮುಳ್ಳುಗಳು’, ‘ಕೊನೆಯ ದಾರಿ’, ‘ಕವಲು’, ‘ಹಸಿವು’, ‘ಬಿಡುಗಡೆ’ ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿರುವ ವೀಣಾ ‘ಗಂಡಸರು ಮತ್ತು ಶೋಷಣೆ’, ‘ಬಂಡಾಯ’ ಇತ್ಯಾದಿ’ ಎಂಬ ಎರಡು ಕಾದಂಬರಿಗಳನ್ನು ರಚಿಸಿದ್ದಾರೆ. ಇವರು ಕನ್ನಡದಲ್ಲಲ್ಲದೆ, ಇಂಗ್ಲೀಷಿನಲ್ಲಿಯೂ ಸಾಹಿತ್ಯ ರಚಿಸಿದ್ದು ‘ರೆಪ್ಯೂಟೇಶನ್’, ‘ಕ್ರಾಸ್ ರೋಡ್ಸ್’, ‘ಹರ್ ಫ್ರೀಡಮ್’ ಮತ್ತು ‘ದಿ ಶಾಡೊ’ ಎಂಬ ಸಣ್ಣ ಕಥೆಗಳನ್ನು ಮತ್ತು ‘ಮೆನ್’ ಎಂಬ ಕಾದಂಬರಿಯನ್ನೂ ಬರೆದಿದ್ದಾರೆ. ‘ಮಹಿಳೆಯರ ಸಣ್ಣಕಥೆಗಳು’, ‘ಹೊಸ ಹೆಜ್ಜೆ’ ಎಂಬ ಮಹಿಳೆಯರ ಪ್ರಾತಿನಿಧಿಕ ಕವನ ಸಂಕಲನಗಳನ್ನೊಳಗೊಂಡಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ‘ನಡೆದದ್ದೇ ದಾರಿ’ ಎಂಬ ಹೆಸರಿನಲ್ಲಿ ವೀಣಾ ಅವರ ಸಮಗ್ರ ಕಥನ ಸಾಹಿತ್ಯ ಪ್ರಕಟಗೊಂಡಿದೆ. ಇವರ ಹದಿನೈದು ರೇಡಿಯೊ ನಾಟಕಗಳು ಧಾರವಾಡ ಹಾಗೂ ಬೆಂಗಳೂರು ಆಕಾಶವಾಣಿಯಿಂದ ಬಿತ್ತರಗೊಂಡಿವೆ.
ಪ್ರೊ. ಎಸ್.ಜಿ. ಸಿದ್ಧರಾಮಯ್ಯ :
ಗುರುಸಿದ್ದಯ್ಯ ಮತ್ತು ಶ್ರೀಮತಿ ರೇವಕ್ಕ ದಂಪತಿಗಳ ಸುಪುತ್ರರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಕನ್ನಡದ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮತ್ತು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿರುವ ಇವರು ಅನೇಕ ಕೃತಿಗಳನ್ನು ರಚಿಸಿರುತ್ತಾರೆ. ‘ಗಾಲ್ಫ್ ಉಬ್ಬಿನ ಮೇಲೆ’, ‘ಕಾಡುವ ಬೇಲಿ ಹೂ’, ‘ಅವಳೆದೆಯ ಜಂಗಮ’, ‘ಸೊಲ್ಲು ಫಲವಾಗಿ’, ‘ಮರುಜೇವಣಿ’, ‘ಅಕ್ಕರೆಬಳಗ’, ‘ಬೀದಿ ಅಲ್ಲಮ’, ‘ಕಾಯ ಮಾಯದ ಹಾಡು’, ‘ಉರಿವ ಬತ್ತಿ ತೈಲ’, ‘ಅರಿವು ನಾಚಿತ್ತು’, ‘ನೆನಪು ದಯಾದಿ’ ಕಾವ್ಯ ಕೃತಿ, ‘ಅಂಬಿಗರ ಚೌಡಯ್ಯ – ಒಂದು ಓದು’, ‘ಎಡೆಗುಂಟೆ ಗೆಣೆಸಾಲು’, ‘ಕೇಡಿಲ್ಲವಾಗಿ’, ‘ಸಾಲಾವಳಿ’, ‘ನಿಶ್ಯಬ್ದದ ಜಾಡು’, ‘ಕಣ್ಣಗಾಯದ ಕಾಳುದಾರಿಗಳು’ ಸಾಹಿತ್ಯ ವಿಮರ್ಶೆ, ‘ಕನ್ನಡ ಪುಸ್ತಕ ಜಗತ್ತು’ ಎಂಬ ಅನುಭವ ಕಥನ, ‘ದಂಡೆ’, ‘ನೆತ್ತಮನಾಡಿ’, ‘ದಾಳ’ ಮತ್ತು ‘ಅನ್ನದಾತ’ ಎಂಬ ನಾಟಕ ಕೃತಿಗಳನ್ನು ರಚಿಸಿರುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಮತ್ತು ಪು.ತಿ.ನ. ಕಾವ್ಯ ಪ್ರಶಸ್ತಿ ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.