ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025 ಜನವರಿಯಿಂದ ಡಿಸೆಂಬರ್ ತನಕ ಪ್ರತೀ ತಿಂಗಳು ‘ರಾಮಸಾಗರಗಾಮಿನೀ’ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಮಾಲೆಯನ್ನು ಹಮ್ಮಿಕೊಂಡಿದ್ದು, ಮಾಲೆಯ ಮೊದಲ ಸೋಪಾನ ‘ವಾಲ್ಮೀಕಿ ಗಿರಿಯಲ್ಲಿ ಜನಿಸಿ’ ಎಂಬ ವಿಷಯದ ಕುರಿತು ದಿನಾಂಕ 11 ಜನವರಿ 2025ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಖ್ಯಾತ ವಿದ್ವಾಂಸರೂ, ವಾಗ್ಮಿಗಳೂ ಆಗಿರುವ ಡಾ. ರಾಘವೇಂದ್ರ ರಾವ್ ಪಡುಬಿದ್ರಿಯವರು ಮಾತನಾಡುತ್ತಾ ಆದಿಕಾವ್ಯವಾಗಿ ರಾಮಾಯಣವು ಇಂದು ಭಾರತೀಯ ಸಂಸ್ಕೃತಿಯ ಆಗರವಾಗಿ ನಿಂತಿದೆ. ಸರ್ವ ಸದ್ಗುಣಗಳನ್ನು ಹೊಂದಿರುವ ವ್ಯಕ್ತಿ ಯಾರಾದರೂ ಈ ಪ್ರಪಂಚದಲ್ಲಿದ್ದಾರೆಯೇ ಎಂಬ ವಾಲ್ಮೀಕಿ ಮಹರ್ಷಿಗಳ ಪ್ರಶ್ನೆಗೆ ನಾರದರು ಉತ್ತರ ರೂಪವಾಗಿ ಅಂತಹ ಒಬ್ಬ ವ್ಯಕ್ತಿ ಈ ಜಗತ್ತಿನಲ್ಲಿದ್ದು, ಆತನೇ ಅಯೋಧ್ಯೆಯನ್ನು ಆಳುತ್ತಿರುವ ಪ್ರಭು ಶ್ರೀರಾಮಚಂದ್ರ ಎಂಬುದಾಗಿ ತಿಳಿಸುತ್ತಾ ಬಾಲಕಾಂಡದ ನೂರು ಶ್ಲೋಕಗಳಲ್ಲಿ ಸಂಕ್ಷಿಪ್ತ ರಾಮಾಯಣದ ಕಥೆಯನ್ನು ತಿಳಿಸುತ್ತಾರೆ. 24,000 ಶ್ಲೋಕಗಳ ರಾಮಾಯಣವು ನಂತರ ರಚನೆಗೊಂಡ ಹಿನ್ನೆಲೆಯ ಪ್ರಸಂಗಗಳನ್ನು ಅವರು ವಿಸ್ತೃತವಾಗಿ ವಿವರಿಸಿದರು. ಈ ಕಾವ್ಯವು ಒಂದು ಕಾಲಕ್ಕೆ ಸೀಮಿತಗೊಳ್ಳದೆ ಈ ಜಗತ್ತಿನಲ್ಲಿ ನದಿ, ಪರ್ವತಗಳಲ್ಲದೆ ಸೂರ್ಯ ಚಂದ್ರರ ಬೆಳಕಿರುವ ತನಕ ಜನರ ಬಾಯಿಯಲ್ಲಿ ಇದು ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಎಂದು ಬ್ರಹ್ಮ ದೇವರು ವಾಲ್ಮೀಕಿ ಮಹರ್ಷಿಗಳಿಗೆ ನೀಡಿದ ಅನುಗ್ರಹದಂತೆ ರಾಮಾಯಣವು ಸಂಸ್ಕೃತಿಯ ನಿಧಿಯಾಗಿ ನಮ್ಮೊಂದಿಗೆ ಇದೆ ಎಂದರು.
ಡಾ. ನಾ. ಮೊಗಸಾಲೆಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದು, ಎಸ್. ನಿತ್ಯಾನಂದ ಪೈಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕುಮಾರಿ ಪ್ರಾಂಜಲಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸುಧಾಕರ ಶ್ಯಾನುಭಾಗ್ ಇವರು ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರೂಪಿಸಿ, ಸದಾನಂದ ನಾರಾವಿ ಸ್ವಾಗತಿಸಿ, ಡಾ. ಸುಮತಿ ಪಿ. ವಂದಿಸಿದರು.