ಗಂಗೊಳ್ಳಿ : ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕ ಆಯೋಜಿಸಿದ ಕುಮಾರವ್ಯಾಸ ಸ್ಮೃತಿ ಮತ್ತು ಗಮಕ ಕಲಾ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 11 ಜನವರಿ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕದ ಅಧ್ಯಕ್ಷ ಎಚ್. ಸುಜಯೀಂದ್ರ ಹಂದೆ ಮಾತನಾಡಿ “ಕನ್ನಡ ನಾಡು ಕಂಡ ಅತ್ಯದ್ಭುತ ಕವಿ ಕುಮಾರವ್ಯಾಸ. ಕನ್ನಡ ನೆಲದ ಮನೆ ಮನಗಳಲ್ಲಿ ಭಾರತ ಕತೆಯನ್ನು ನೆಲೆಯಾಗುವಂತೆ, ಆಪ್ತವಾಗುವಂತೆ ಮಾಡಿದ ಧೀಮಂತ ಕವಿ. ಮಹಾ ಭಾರತದ ಕಥಾ ವಸ್ತುವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿ, ಅದನ್ನು ಕೃಷ್ಣ ಕತೆಯೆಂದು ಸಾರಿದವನು. ಕುವೆಂಪು ಅವರು ಹೇಳುವಂತೆ ಕಲಿಯುಗದಲ್ಲೂ ದ್ವಾಪರವನ್ನು ಕಟ್ಟಿಕೊಟ್ಟವನು. ವ್ಯಾಸ ರಚಿತ ಭಾರತದ ಮುಂದೆ ತಾನು ಕುಮಾರವ್ಯಾಸನೆಂದು ಹೇಳಿಕೊಳ್ಳುವಲ್ಲಿ ನಾರಣಪ್ಪನ ವಿನಯ ಸಂಪನ್ನತೆ ಎದ್ದು ಕಾಣುತ್ತದೆ. ನಾಡಿನ ಮೂಲೆ ಮೂಲೆಗಳ ವಿದ್ವಾಂಸರನ್ನೂ, ಜನ ಸಾಮಾನ್ಯರನ್ನೂ ತನ್ನ ಕಾವ್ಯ ಸೊಬಗಿನಿಂದ ಬೆರಗುಗೊಳಿಸುತ್ತಾ ಒಂದರ್ಥದಲ್ಲಿ ಕನ್ನಡದ ಭಾಷಾ ಏಕೀಕರಣವನ್ನು ಸಾಧಿಸಿದ ಕವಿ ಕುಮಾರವ್ಯಾಸ” ಎಂದರು.
ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ ದೇವಾಡಿಗ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಗಂಗೊಳ್ಳಿ ಜಿ. ಎಸ್. ವಿ. ಎಸ್. ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಾ. ಕಾಶೀನಾಥ ಪೈ ಭಾಗವಹಿಸಿ ಶುಭ ಹಾರೈಸಿದರು.
ವಿದ್ಯಾರ್ಥಿಗಳಿಗಾಗಿ ಗಮಕಿ ಕುಮಾರಿ ಕಾವ್ಯ ಹಂದೆ ಕುಮಾರವ್ಯಾಸನ ‘ಕರ್ಣ ಭೇದನ’ ಪ್ರಸಂಗದ ಕಾವ್ಯ ಭಾಗವನ್ನು ವಿವಿಧ ರಾಗಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು. ಸುಜಯೀಂದ್ರ ಹಂದೆ ವ್ಯಾಖ್ಯಾನ ನೀಡಿದರು. ಕಛೇರಿಯ ಪ್ರಬಂಧಕರಾದ ಶ್ರೀಧರ ಗಾಣಿಗ ಸ್ವಾಗತಿಸಿ, ಅಧ್ಯಾಪಕ ಆದಿನಾಥ ಕಿಣಿ ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.