23 ಮಾರ್ಚ್ 2023, ಉಳ್ಳಾಲ: “ಕನ್ನಡ ಭಾಷೆಯನ್ನು ಉಳಿಸುವ ಜೊತೆಗೆ ಅದನ್ನು ನಂಬಿಕೊಂಡಿರುವ ಸಾಂಸ್ಕೃತಿಕ ಬದುಕನ್ನು ಗಂಧದ ಕೊರಡಿನಂತೆ ಉಳಿಸುವ ಕಾರ್ಯ ಸರ್ಕಾರದಿಂದ ಆಗಬೇಕು” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಹೇಳಿದರು. ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳಾ ಸಭಾಂಗಣದಲ್ಲಿ ಉಳ್ಳಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 17-03-2023 ಶುಕ್ರವಾರದಂದು ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಳ್ವರು ಮಾತನಾಡಿದರು.
ಅನುವಾದಕಿ ಶ್ಯಾಮಲಾ ಮಾಧವ್ ಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಟಿ. ಖಾದರ್ ಮಾತನಾಡಿ, ‘ಕ್ಷೇತ್ರದ ಅಭಿವೃದ್ಧಿ ಮತ್ತು ಸವಲತ್ತುಗಳಿಗಾಗಿ ಉಳ್ಳಾಲ ತಾಲೂಕು ರಚನೆಗೆ ಆದ್ಯತೆ ನೀಡಲಾಗಿದೆ. ನಮ್ಮ ಭಾಷೆ, ಸಂಸ್ಕೃತಿ ಹಂಚುವ ಕಾರ್ಯಕ್ಕೆ ಸಮ್ಮೇಳನ ಪೂರಕವಾಗಲಿ’ ಎಂದರು.
ಉದ್ಘಾಟನೆಯ ನಂತರ ನಡೆದ ವಿಚಾರಗೋಷ್ಠಿಯಲ್ಲಿ ಇಬ್ಬರು ಸಾಹಿತಿಗಳು ಬೇರೆ ಬೇರೆ ವಿಷಯಗಳಲ್ಲಿ ತಮ್ಮ ವಿಚಾರ ಮಂಡಿಸಿದರು. “ಕರಾವಳಿ ಸಾಹಿತ್ಯದಲ್ಲಿ ಸಾಮರಸ್ಯ” ವಿಷಯದ ಬಗ್ಗೆ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆ ವಹಿಸಿದ್ದರು. “ಲಿಖಿತ ಸಾಹಿತ್ಯ” ವಿಚಾರದ ಬಗ್ಗೆ ಮಂಗಳೂರು ಬದ್ರಿಯಾ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಇಸ್ಮಾಯಿಲ್ ಎನ್., “ಮೌಖಿಕ ಸಾಹಿತ್ಯ” ವಿಚಾರದ ಬಗ್ಗೆ ಕಲಬುರ್ಗಿ ಕೇಂದ್ರೀಯ ವಿವಿ ಜನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ಸಹಾಯಕ ಪ್ರಾಧ್ಯಾಪಕಿ ಡಾ. ರಾಜಶ್ರೀ ವಿಚಾರ ಮಂಡಿಸಿದರು. ಡಾ. ಸುಧಾ ಕುಮಾರಿ ತೊಕ್ಕೊಟ್ಟು ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಜೀರು ನೃತ್ಯ ಲಹರಿ ನಾಟ್ಯಾಲಯದ ವಿದುಷಿ ರೇಷ್ಮಾ ನಿರ್ಮಲ್ ಭಟ್ ಮತ್ತು ಶಿಷ್ಯ ವೃಂದದವರಿಂದ “ನೃತ್ಯ ಸಂಭ್ರಮ”, ಕುಸುಮ ಪ್ರಶಾಂತ ಉಡುಪ ಮತ್ತು ಬಳಗದಿಂದ “ಯಕ್ಷನೃತ್ಯ”, ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವೀರಗಾಸೆ ನಡೆದು ಜನರನ್ನು ರಂಜಿಸಿತು.
ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ “ಪ್ರಜಾಪ್ರಭುತ್ವದ ಭವಿಷ್ಯ’ ವಿಷಯದ ಬಗ್ಗೆ ಯುವ ಚಿಂತನಾ ಗೋಷ್ಠಿ ವಿಚಾರ ನಡೆದು ಡಾ. ಯಶುಕುಮಾರ್ ಡಿ., ಶಬೀನಾ ಎಂ. ಮುಡಿಪು, ಲತೇಶ್ ಬಾಕ್ರಬೈಲ್ ವಿಚಾರ ಮಂಡಿಸಿದರು. ಚಂದ್ರಶೇಖರ ಪಾತೂರು ನಿರೂಪಿಸಿದರು.
ಮಧ್ಯಾಹ್ನ ನಡೆದ ‘ಕವಿ ಕಾವ್ಯ ಲಹರಿ’ ಕಾರ್ಯಕ್ರಮದಲ್ಲಿ ಕವಿಗಳಾಗಿ ಡಾ. ಚೇತನ್ ಸೋಮೇಶ್ವರ, ವಿಜಯಲಕ್ಷ್ಮಿ ಕಟೀಲು ಭಾಗವಹಿಸಿದ್ದು, ತೋನ್ಸೆ ಪುಷ್ಕಳ ಕುಮಾರ್ ಅವರು ಕವಿತಾ ಗಾಯನ ಮಾಡಿದರು.
ಕ್ಯಾಪ್ಟನ್ ಗಣೇಶ ಕಾರ್ಣಿಕ್ ಮಾತನಾಡಿ, ‘ಸಾಹಿತ್ಯ ಜಾತಿ ಧರ್ಮಗಳನ್ನು ಮೀರಿ ಮನಸುಗಳನ್ನು ಕಟ್ಟುವ ಕಾರ್ಯ ಈ ಸಮ್ಮೇಳನಗಳು ಮಾಡುತ್ತದೆ’ ಎಂದರು. ಸಮ್ಮೇಳನದ ವೇದಿಕೆಯಲ್ಲಿ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಅವರನ್ನು ಗೌರವಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಇವರಿಂದ ಧ್ವಜಾರೋಹಣವಾಯಿತು. ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ, ಮೆರವಣಿಗೆಗೆ ಚಾಲನೆ ನೀಡಿದರು.
ಸ್ವಾಗತ ಸಮಿತಿ ಅಧ್ಯಕ್ಷ ಪ್ರಸಾದ ರೈ ಕಲ್ಲಿಮಾರು ಹೊಸಮನೆ, ಉಳ್ಳಾಲ ಹೋಬಳಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಿ.ರೈ ಕಲ್ಲಿಮಾರ್, ಗೌರವ ಕಾರ್ಯದರ್ಶಿ ಎಡ್ವರ್ಡ್ ಡಿಸೋಜ, ಚಂದ್ರಹಾಸ ಅಡ್ಯಂತಾಯ, ತ್ಯಾಗಂ ಹರೇಕಳ ಉಪಸ್ಥಿತರಿದ್ದರು.
ಸಮ್ಮೇಳನದ ಉದ್ಘಾಟನೆಯ ನಂತರ ‘ಗ್ರಾಮೀಣ ಪತ್ರಿಕೋದ್ಯಮ ಸವಾಲು ಮತ್ತು ಸಾಧ್ಯತೆಗಳು’ ಎಂಬ ವಿಷಯದ ಮೇಲೆ ಸಂವಾದ ಗೋಷ್ಠಿ ನಡೆಯಿತು. ವಿದ್ಯಾಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸತೀಶ್ ಪುಂಡಿಕಾಯಿ, ಹಂಝ ಮಲಾರ್, ಅನ್ಸಾರ್ ಇನೋಳಿ, ಮೋಹನ್ ಕುತ್ತಾರ್ ಭಾಗವಹಿಸಿದ್ದರು. ಹೇಮಚಂದ್ರ ಕೈರಂಗಳ ನಿರೂಪಿಸಿದರು.
ಗುರುವಪ್ಪ ಬಾಳೆಪುಣಿ ಅವರಿಂದ ‘ಉಳ್ಳಾಲದ ಸದ್ದಿಲ್ಲದ ಸಾಧಕರು’ ಎಂಬ ವಿಷಯದ ಮೇಲೆ ವಿಶೇಷೋಪನ್ಯಾಸ ನಡೆಯಿತು. ಅಮಿತಾ ಆಳ್ವ ನಿರೂಪಿಸಿದರು. ಕವಿ ಕಾವ್ಯ ಲಹರಿ ಕಾರ್ಯಕ್ರಮ ಸಾಹಿತ್ಯಾಸಕ್ತರ ಮನಸ್ಸಿಗೆ ರಂಜನೆ ನೀಡಿತು.
ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ, ಹಾವೇರಿ ಇಲ್ಲಿನ ವಿಶ್ರಾಂತ ಕುಲಪತಿ ಪ್ರೊ ಚಿನ್ನಪ್ಪ ಗೌಡ ಇವರು “ಜಾತಿ, ಮತ, ಭಾಷೆಗಳ ನಡುವೆ ಕಲ್ಪಿತ ಭಯಗಳನ್ನು ಹುಟ್ಟಿಸಿ ಸಮಾಜವನ್ನು ಒಡೆಯುವ ಕಾರ್ಯ ರಾಜಕೀಯ ಲಾಭಕ್ಕಾಗಿ ನಡೆಯುತ್ತಿರುವುದು ವರ್ತಮಾನದ ಆತಂಕಕಾರಿ ವಿಷಯ. ಯಾರೋ ಮಾಡಿದ ತಪ್ಪಿಗೆ ಸಮುದಾಯವನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಒಳ್ಳೆಯದಲ್ಲ. ಸಾಮರಸ್ಯದ ಬದುಕು ನಮ್ಮೆಲ್ಲರ ಹಂಬಲ, ಆಶಯ. ಕನ್ನಡ ಸಾಹಿತ್ಯ ಪರಂಪರೆ ಸಾಮರಸ್ಯದ ಬದುಕನ್ನೇ ಪ್ರತಿಪಾದಿಸುತ್ತಾ ಬಂದರೆ ಸಾಹಿತ್ಯದ ಓದು ನಮ್ಮನ್ನು ಪಾಮರತ್ವದೆಡೆಗೆ ಕೊಂಡೊಯ್ಯುತ್ತದೆ” ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಇನ್ಫೋಸಿಸ್ ನ ಕಾರ್ಪೋರೇಟ್ ಅಫೇರ್ಸ್ ಮುಖ್ಯಸ್ಥ ಸಂತೋಷ್ ಅನಂತಪುರ ಮಾತನಾಡಿ “ಸಾಹಿತ್ಯ ಸಮ್ಮೇಳನಗಳು ಸಾಹಿತ್ಯದ ಹೊರತಾದ ಕೃಷಿ, ಲಲಿತಕಲೆ ಸಂಬಂಧೀ ಚರ್ಚೆಗಳನ್ನು ಒಳಗೊಂಡು ಅದರ ವ್ಯಾಪ್ತಿಯನ್ನು ಹೆಚ್ಚಿಸಬೇಕಿದೆ” ಎಂದು ಹೇಳಿದರು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇರಾ ನೇಮು ಪೂಜಾರಿ, ಇಬ್ರಾಹಿಂ ಕೊಡಿಜಾಲು, ರವೀಂದ್ರ ಶೆಟ್ಟಿ ಉಳಿದೊಟ್ಟು, ಡಾ ಸಾಯಿಗೀತಾ, ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ, ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ, ಪತ್ರಕರ್ತ ಪುಷ್ಪರಾಜ್ ಬಿ.ಯನ್., ಮಾಯಿಲ ಕುತ್ತಾರ್ ಇವರನ್ನು ಸಾಮಾಜಿಕ ಮುಖಂಡ ಟಿ.ಜಿ. ರಾಜಾರಾಂ ಭಟ್ ಅವರು ಸನ್ಮಾನಿಸಿದರು.
ಮಂಗಳೂರು ವಿವಿ ಕುಲಸಚಿನ ಪ್ರೊ ಕಿಶೋರ್ ಕುಮಾರ್ ಸಿ.ಕೆ., ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎಂ.ಪಿ.ಶ್ರೀನಾಥ್ , ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ., ಕೇಂದ್ರ ಕಸಾಪ ಸದಸ್ಯ ಮಾಧವ ಎಂ.ಕೆ., ಮಂಜುನಾಥ್ ರೇವಣ್ಕರ್, ಮಿಥುನ್ ಉಡುಪ, ಲಯನ್ ಚಂದ್ರಹಾಸ ಶೆಟ್ಟಿ, ಎಡ್ವರ್ಡ್ ಲೋಬೋ, ರವೀಂದ್ರ ರೈ ಕಲ್ಲಿಮಾರು ಉಪಸ್ಥಿತರಿದ್ದರು. ಉಳ್ಳಾಲ ಕಸಾಪ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿ, ಉಳ್ಳಾಲ ಹೋಬಳಿ ಅಧ್ಯಕ್ಷೆ ವಿಜಯಲಕ್ಷ್ಮಿ ರೈ ಕಲ್ಲಿಮಾರು ವಂದಿಸಿದರು ಮತ್ತು ತ್ಯಾಗಂ ಹರೇಕಳ ನಿರೂಪಿಸಿದರು.
“ಸಾಹಿತ್ಯದಿಂದ ನಮ್ಮ ಮನಸ್ಸು ಅರಳಬೇಕು. ನಮ್ಮ ಅರಿವಿನ ಸೀಮೆ ನಿರಂತರವಾಗಿ ವಿಸ್ತರಿಸುತ್ತಾ ಹೋಗಬೇಕು. ಸಾಹಿತ್ಯ ಸಾಮರಸ್ಯದ ದೀವಿಗೆಯಾಗಬೇಕು. ನಮ್ಮ ನಾಡು ಎಂದಿಗೂ ಸೌಹಾರ್ದ ಸಾಮರಸ್ಯವನ್ನು ಕಳೆದುಕೊಳ್ಳದಿರಲಿ. ಮಾನವೀಯತೆಯನ್ನು ಮೀರಿದ ಧರ್ಮ ಬೇರೆ ಇಲ್ಲ. ಇದನ್ನಷ್ಟೇ ನಾವು ನಮ್ಮ ಎಳೆಯರಿಗೆ ಕಲಿಸೋಣ” ಎಂದು ಉಳ್ಳಾಲ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಶ್ಯಾಮಾಲಾ ಮಾಧವ್ ಹೇಳಿದರು.