ಕುಂದಾಪುರ : ನಿರ್ದಿಗಂತ ಮೈಸೂರು ನಿರಂತರ ರಂಗ ಉತ್ಸವ ಪ್ರಯುಕ್ತ ಸಮುದಾಯ ಕುಂದಾಪುರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಯೋಜನೆಯಲ್ಲಿ ಶಕೀಲ್ ಅಹ್ಮದ್ ಇದರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನವನ್ನು ದಿನಾಂಕ 18 ಜನವರಿ 2025ರಂದು ಸಂಜೆ 6-30 ಗಂಟೆಗೆ ಕುಂದಾಪುರ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ನಾಟಕದ ಹಿನ್ನೆಲೆ :
ಮೋಡಿ ಮಾಡಬಲ್ಲ ಮೋಹಕ ಮಾತುಗಳನ್ನಾಡುವ ತುಂಡೇರಾಯ, ಬಯಸಿದ್ದನ್ನು ಪಡೆಯಲು ಏನು ಮಾಡಲೂ ಹಿಂಜರಿಯದವ ತುಂಡೇರಾಯನ ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸಿಕೊಳ್ಳುವ ಮಾರ್ಗಗಳೂ ಹೆಚ್ಚು ಕ್ರೂರಗೊಳ್ಳುತ್ತಾ ಹೋಗುತ್ತವೆ. ತನ್ನ ಬುದ್ಧಿ ಮತ್ತು ಬಲಪ್ರಯೋಗದಿಂದ ಅಧಿಕಾರದ ಗದ್ದುಗೆಗಳನ್ನು ಏರುವ ಹವಣಿಕೆ ಈತನದು. ಜನರನ್ನು ಮಾತಿನಲ್ಲಿ ಮರುಳು ಮಾಡುತ್ತಾ ಮರುಳಾಗದಿದ್ದವರನ್ನು ಕೊಲ್ಲುತ್ತಾ, ತನ್ನ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬಯಸುತ್ತಾನೆ. ಸಮಕಾಲೀನ ಜಾಗತಿಕ ರಾಜಕೀಯ ಮತ್ತು ಯಾವುದೇ ದೇಶ ಕಾಲವನ್ನೂ ಸಂಕೇತವಾಗಿ ಪ್ರತಿನಿಧಿಸಬಲ್ಲ ವಿಡಂಬನಾತ್ಮಕ ನಾಟಕವಿದು.
ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ : ತನ್ನ ಕ್ರಾಂತಿಕಾರಿ ಮತ್ತು ಜನೋಪಕಾರಿ ರಾಜಕೀಯ ಸ್ಪಷ್ಟತೆಯ ನಿಲುವುಗಳ ಕಾರಣದಿಂದಾಗಿ ಅಡಾಲ್ಫ್ ಹಿಟ್ಲರನ ನಾಜ್ಹಿ ನಿರಂಕುಶಾಧಿಕಾರದ ನಿಶಾನೆಗೆ ಗುರಿಯಾಗಿದ್ದ ಬರ್ಟೋಲ್ಟ್ ಬ್ರೆಕ್ಟ್ ಅನಿವಾರ್ಯವಾಗಿ ತನ್ನ ದೇಶ ಜರ್ಮನಿಯನ್ನು ತೊರೆದು ಹೊರಡಬೇಕಾಯಿತು. ಜಗತ್ತಿನ ಮೇರುಚಿಂತಕ ಮಾರ್ಕ್ಸ್ ಚಿಂತನೆಗಳಿಂದ ಬಹುತೇಕ ಪ್ರಭಾವಿತನಾಗಿದ್ದ ಬ್ರೆಕ್ಟ್ ಅದುವರೆಗೂ ಜಾರಿಯಲ್ಲಿದ್ದ ನಾಟಕ-ಪರಂಪರೆಯನ್ನು ಮುರಿದು, ಅದನ್ನು ಸಾಮಾಜಿಕ ಬದಲಾವಣೆಗೆ ಅಗತ್ಯಬೇಕಾದ ಚಲನಶೀಲ ಆದ್ಯತೆ ಎಂಬಂತೆ ಪ್ರಯೋಗಿಸಲಾರಂಭಿಸಿದ್ದ ಇದು ನಾಜ್ಹ ಮತಾಂಧ ನಿರಂಕುಶಾಧಿಕಾರಕ್ಕೆ ಬಲುದೊಡ್ಡ ಸವಾಲಾಗಿ ಪರಿಣಮಿಸಿತ್ತು. ತತ್ಪರಿಣಾಮ ಬರ್ಟೋಲ್ಟ್ ಬ್ರೆಕ್ಟ್ ದೇಶ ತೊರೆದು ಹೊರಡಬೇಕಾಯಿತು. ದುರಂತ, ಅವಸಾನದತ್ತ ಇಳೇಬಿದ್ದಿದ್ದ ದೇಶದ ಉಳಿವಿಗಾಗಿ ಅವಿರತ ದುಡಿಯುತ್ತಿದ್ದ ದಿಟದ ದೇಶಪ್ರೇಮಿಯನ್ನೇ ದೇಶಾಂತರ ಮಾಡಿಸಲಾಯಿತು. ಪ್ರಸ್ತುತ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ, ಇಂತಹ ಬಹಳಷ್ಟನ್ನು ವಿಶಿಷ್ಟ ಶೈಲಿಯ ವಿಡಂಬನಾತ್ಮಕ ಪ್ರಯೋಗಶೀಲತೆಯಲ್ಲಿ ಪ್ರಸ್ತುತಪಡಿಸಲಿದೆ.
ನಿರ್ದಿಗಂತ ಪರಿಚಯ :
ನಿರ್ದಿಗಂತ ಸಂಘಟನೆಯು, ರಾಷ್ಟ್ರಕವಿ ಕುವೆಂಪುರವರ ಕಾವ್ಯ-ಸಾಲುಗಳಲ್ಲಿ ರೂಪಕವಾಗಿ ಪರಿಕಲ್ಪಿಸಲಾಗಿರುವ ‘ನಿರ್ದಿಗಂತ’ ಎಂಬುದರ ಅನನ್ಯ ಅನಂತತೆಯನ್ನು ತನ್ನ ಸೃಜನಾತ್ಮಕ ಕಾರ್ಯವಿಧಾನವನ್ನಾಗಿ ಪರಿಕಲ್ಪಿಸಿಕೊಂಡಿರುವ ಸಮಾನಮನಸ್ಕರ ಒಗ್ಗೂಡು. ಸಮಕಾಲೀನ ಸಾಂಸ್ಕೃತಿಕ ಜಗತ್ತ್-ವಿಸ್ತಾರದಲ್ಲಿ ಸೃಜನಾತ್ಮಕ ಸಂವಾದಿಯಾಗಿ ತೊಡಗಿಕೊಳ್ಳುವ ಹಂಬಲದಿಂದ, ಬಹುಭಾಷಾ ಸಿನೆಮಾ ನಟ ಮತ್ತು ಜನಪರ ಕಾಳಜಿಯ ಪ್ರಗತಿಪರ ಕಾರ್ಯಕರ್ತ ಪ್ರಕಾಶ್ ರಾಜ್ ಹಾಗೂ ಸಮಾನಮನಸ್ಕರು ರೂಪಿಸಿಕೊಂಡಿರುವ ‘ನಿರ್ದಿಗಂತೆ’ ಇದು.
ನಿರ್ದಿಗಂತ ಸಂಘಟನೆಯು, ರಂಗ-ವಿಕಾಸ ಎಂಬ ಮಹತ್ವದ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ನಿರತವಾಗಿದೆ. ಅದರ ಅಂಗವಾಗಿಯೇ, ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಖ್ಟ್ ರಚಿಸಿದ್ದ ‘ದ ರೆಜ್ಹಸ್ಟಬಲ್ ರೈಜ್ ಆಫ್ ಆರ್ಥುರೋ ಊಯಿ’ ಎಂಬ ನಾಟಕವನ್ನು ‘ತಿಂಡಿಗೆ ಬಂದ ತುಂಡೇರಾಯ’ನನ್ನಾಗಿ ಕನ್ನಡದಲ್ಲಿ ಪ್ರಯೋಗಿಸಲಾಗುತ್ತಿದೆ. ತಾಲೀಮಿನ ಸಂದರ್ಭದಲ್ಲಿ ನಿರ್ದೇಶಕ ಮತ್ತು ನಟ-ನಟಿಯರೇ ಸೇರಿ ಸೃಜಿಸಿರುವ ಕನ್ನಡದ ರಂಗಪಠ್ಯವಿದು. ಉತ್ತರ ಕರ್ನಾಟಕ ಜವಾರಿ-ದೇಶಾವರಿಯ ರಂಗುಗಳು ರಂಗ-ಪ್ರಯೋಗಕ್ಕೆ ಮೆರುಗು ತಂದಿವೆ.
ನಿರ್ದೇಶಕ ಶಕೀಲ್ ಅಹ್ಮದ್
ಭಿನ್ನ ಭಿನ್ನ ಸಾಂಸ್ಕೃತಿಕ ಸಂಕರಗಳ ಕೂಡು-ಕಳೆಯ ಮೂಲಕ ಸಾಂಪ್ರದಾಯಿಕ ಮತ್ತು ಸಮಕಾಲೀನ ನೃತ್ಯ ಮಾದರಿಗಳ ಕೌಶಲಗಳನ್ನು ಅಭ್ಯಸಿಸುವ ‘ಸ್ಪಿನ್ನಿಂಗ್ ಟ್ರೀ ಥಿಯೇಟರ್ ರಂಗಸಂಸ್ಥೆಯ ಸಂಸ್ಥಾಪಕ. ಭಾರತೀಯ ರಂಗಭೂಮಿಯ ಒಬ್ಬ ಉತ್ತಮ ನಟ ಮತ್ತು ಅಪರೂಪದ ರಂಗ-ನಿರ್ದೇಶಕ, ನೀನಾಸಂ ರಂಗ ಶಾಲೆಯಲ್ಲಿ ರಂಗ ತರಬೇತಿಯನ್ನು ಪಡೆದ ನಂತರ, ಸಿಂಗಾಪುರದ ಇಂಟರ್ ಕಲ್ಚರಲ್ ಥಿಯೇಟರ್ ಇನ್ಸ್ಟಿಟ್ಯೂಟ್ ನಲ್ಲಿ ಏಷಿಯಾ ಖಂಡದಲ್ಲಿನ ಬಹುಮುಖೀ ರಂಗ-ಕೌಶಲಗಳನ್ನು ಮೂರು ವರ್ಷಗಳ ಕಠಿಣ ತರಬೇತಿಯಿಂದ ಕಲಿತಿದ್ದಾರೆ. ಇತ್ತೀಚೆಗಷ್ಟೇ ಯುನೈಟೆಡ್ ಕಿಂಗ್‌ಡಮ್‌ನ ಕೇಂಟ್ ವಿಶ್ವವಿದ್ಯಾಲಯದಿಂದ ಥಿಯೇಟರ್ ಮಾಸ್ಟರ್ಸ್ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಇವರು ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ, ಅನೇಕ ಬೆಂಗಳೂರು, ಪ್ಯಾರಿಸ್ಸಿನ ಕೇಜ್ ಅಂಡ್ ಐಪ್ಯಾಕ್, ಕೆನೊಪಿ, ಪಾಸ್ ಡೆ ಡ್ಯೂಸ್ ತರಹದ ಆಧುನಿಕೋತ್ತರ ರಂಗ-ಮೀಮಾಂಸೆಗಳ ಶೋಧದಲ್ಲಿ ತೊಡಗಿರುವ ರಂಗ-ಸಂಸ್ಥೆಗಳ ಜೊತೆ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ನಿರ್ದಿಗಂತ ಸಂಸ್ಥೆಯೊಂದಿಗೆ ರಂಗ-ಬೆಸುಗೆ ಹೊಂದಿದ್ದಾರೆ.