ಬೆಳ್ತಂಗಡಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ತಾಲೂಕಿನ ಪ್ರಥಮ ನೃತ್ಯ ಗುರು, ಪಡ್ಡಿರೆ ನಿವಾಸಿ ಪಿ. ಕಮಲಾಕ್ಷ ಆಚಾರ್ ದಿನಾಂಕ 14 ಜನವರಿ 2025ರಂದು ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 78ವರ್ಷ ವಯಸ್ಸಾಗಿತ್ತು.
2022ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಇವರು 1976ರಲ್ಲಿ ಬೆಳ್ತಂಗಡಿಯಲ್ಲಿ “ನೃತ್ಯನಿಕೇತನ’ವೆಂಬ ನೃತ್ಯ ಸಂಸ್ಥೆಯನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಶ್ರೀಯುತರು ಜಿಲ್ಲಾ ಸಾಲಿಯಾನ್ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ, ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಸ್ಥಾಪಕಾಧ್ಯಕ್ಷರಾಗಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನೃತ್ಯ ಪರೀಕ್ಷಕರಾಗಿ ಹಾಗೂ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ನೃತ್ಯ ವಿದ್ಯಾನಿಧಿ’ ಬಿರುದು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಮತ್ತು ಗೌರವಗಳಿಗೆ ಭಾಜನರಾಗಿದ್ದರು.
1967ರಲ್ಲಿ ಪ್ರೌಢ ಶಾಲಾ ಶಿಕ್ಷಕನಾಗಿ ಸರಕಾರಿ ಶಾಲೆಗೆ ಸೇರ್ಪಡೆಗೊಂಡ ಇವರು ಮಂಗಳೂರಿನಲ್ಲಿ ಟಿ. ಸಿ. ಎಚ್ ಶಿಕ್ಷಕ ತರಬೇತಿ ಪಡೆಯುತ್ತಿರುವಾಗ ಕದ್ರಿ ನೃತ್ಯ ವಿದ್ಯಾನಿಲಯದ ನಾಟ್ಯಾಚಾರ್ಯ ಯು. ಎಸ್. ಕೃಷ್ಣರಾಯರ ಬಳಿ ನೃತ್ಯಾಭ್ಯಾಸ ಆರಂಭಿಸಿದ್ದರು. ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಸಮಯ ಸರಕಾರದ ಶಿಕ್ಷಣ ಇಲಾಖೆಯಿಂದಲೇ ನಿಯೋಜನೆಗೊಂಡು ಬೆಂಗಳೂರಿನ ‘ಸನಾತನ ಕಲಾ ಕ್ಷೇತ್ರ’ದಲ್ಲಿ ಗುರು ವಿ. ಎಸ್. ಕೌಶಿಕ್ ಅವರಲ್ಲಿ ತರಬೇತಿ ಪಡೆದು ನೃತ್ಯದಲ್ಲಿ ಡಿಪ್ಲೋಮಾ ಗಳಿಸಿದ್ದರು. ಶ್ರೀಯುತರು ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಶಿಷ್ಯವೃಂದವನ್ನು ಅಗಲಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಮಂಗಳೂರಿನ ಸಾಹಿತ್ಯ ಉತ್ಸವದಲ್ಲಿ ಲೋಕಾರ್ಪಣೆಗೊಂಡ ‘ಮಾಗಧ‘ ಕೃತಿ
Next Article ವಿಶೇಷ ಲೇಖನ – ಸಾಂಸ್ಕೃತಿಕ ಕಲೆಗಳ ಆಗರ ಹೊನ್ನಪ್ಪ ಭಾಗವತರ್