ಬೆಂಗಳೂರು : ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕದ 25ನೇ ಪ್ರದರ್ಶನವನ್ನು ದಿನಾಂಕ 25 ಜನವರಿ 2025ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರಿನ ಬಸವೇಶ್ವರನಗರ ಇಂಜಿನಿಯರ್ಸ್ ಅಸೋಸಿಯೇಷನ್ ಆವರಣದಲ್ಲಿರುವ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ನಾಟಕದ ನಿರ್ವಹಣೆ ಅಜಯ್ ಕುಮಾರ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕಿನ ವಿನ್ಯಾಸ ಮಂಜು ನಾರಾಯಣ್ ಮತ್ತು ಸೂರ್ಯ ಸಾಥಿ ನೀಡಿದ್ದು, ಕರಣಂ ಪವನ್ ಪ್ರಸಾದ್ ರಂಗ ರೂಪ ಹಾಗೂ ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9686869676. ಪ್ರವೇಶ ದರ ರೂ.200/- ಆಗಿರುತ್ತದೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯು ಮಹಾಕವಿ ಕುವೆಂಪು ಇವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಹಾಗೆಯೇ ಇದು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದೂ ಹೇಳಬಹುದು. ಕುವೆಂಪು, ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದಾಗಿ ಇವು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳೂ ಆಗಿದೆ. ಇದೆಲ್ಲದರ ಜೊತೆಗೆ ಇದೊಂದು ಅತಿಸುಂದರ ಕಾದಂಬರಿಯಂಥ ಕಲಾಕೃತಿ. ಇದರಲ್ಲಿ ಚಿತ್ರಿತವಾಗಿರುವ ಕುವೆಂಪುರವರ ವ್ಯಕ್ತಿತ್ವ ಮತ್ತು ಅವರ ಸುತ್ತ ಅರಳಿರುವ ಅನೇಕ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿನ ಅನನ್ಯ ದಾಖಲೆ.