ಪ್ರೊ. ರಾಜಶೇಖರ ಭೂಸನೂರಮಠ ‘ರಾಭೂ’ ಎಂದೆ ಸಾಹಿತ್ಯ ಲೋಕಕ್ಕೆ ಚಿರಪರಿಚಿತರು. ಹುಬ್ಬಳ್ಳಿಯಲ್ಲಿ 16 ಜನವರಿ 1938ರಲ್ಲಿ ಜನಿಸಿದ ಇವರು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಯವರು. ಇವರ ತಂದೆ ಸಂ. ಶಿ. ಭೂಸನೂರಮಠ ಎಂದೇ ಪ್ರಖ್ಯಾತರಾದ, ದಾರ್ಶನಿಕ ಕವಿ ಎಂಬ ಗೌರವಕ್ಕೆ ಪಾತ್ರರಾದ, ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ.
ಕನ್ನಡದ ವಿಜ್ಞಾನ ಸಾಹಿತಿ, ಕಥೆ ಹಾಗೂ ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ, ವಿಮರ್ಶಕ, ಭಾಷಾಂತರಕಾರರಾಗಿ ಸಾಹಿತ್ಯ ಕೃಷಿ ಮಾಡಿದ ‘ರಾಭೂ’ ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದ ಸಾಹಿತಿಯಾಗಿದ್ದರು. ಕನ್ನಡ ಭಾಷೆಯಲ್ಲಿ 80 ಇಂಗ್ಲಿಷ್ ಭಾಷೆಯಲ್ಲಿ 20 ಕೃತಿಗಳನ್ನು ರಚನೆ ಮಾಡಿದ್ದು ಇವು ಲೋಕಾರ್ಪಣೆಗೊಂಡಿವೆ. ಮಕ್ಕಳಿಗಾಗಿ 15ಕ್ಕಿಂತಲೂ ಹೆಚ್ಚು ಕಥೆ, ಕಾದಂಬರಿ ಮತ್ತು ಕಾಮಿಕ್ಸ್ ಪುಸ್ತಕಗಳು ಇವರ ಲೇಖನಿಯಿಂದ ಹೊರಬಂದಿವೆ.
“ಭವ್ಯ ಮಾನವ” ಎಂಬ ಅಪರೂಪದ ಕೃತಿಯನ್ನು ಹೊರತುಪಡಿಸಿ, ಹಲವು ಸಂಪುಟಗಳಲ್ಲಿ ವಚನ ಸಾಹಿತ್ಯಗಳನ್ನು ಮತ್ತು ಸಿದ್ಧರ ಜೀವನ ಚರಿತ್ರೆಗಳನ್ನು ಸಂಪಾದಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತ ಗೊಳಿಸಿದವರು.
ಇವರೊಬ್ಬ ಇವರೊಬ್ಬ ಸುಸಂಸ್ಕೃತ, ವಿನಯವಂತ ಹಾಗೂ ಆದರ್ಶ ಉಪನ್ಯಾಸಕರಾಗಿದ್ದರು. ಎಲ್ಲಾ ವಿದ್ಯಾರ್ಥಿಗಳ ಪಾಲಿಗೂ ಪ್ರೇರಣೆಯ ಚಿಲುಮೆ ಮತ್ತು ಆಪ್ತ ಶಿಕ್ಷಕ. ಮನೆಗೆ ಬಂದ ವಿದ್ಯಾರ್ಥಿಗಳನ್ನು ಆದರದಿಂದ ಸ್ವಾಗತಿಸಿ, ಪ್ರೀತಿಯಿಂದ ಉಪಹಾರ ನೀಡಿ ಮತ್ತೆ ಮಾತಿಗಿಳಿಯುತ್ತಿದ್ದರು. ವಿದ್ಯಾರ್ಥಿಗಳಿಗೆ ಅರ್ಥವಾಗದ ವಿಷಯವನ್ನು ಪರಿಣಾಮವಾಗಿ ಬೋಧಿಸುವ ಜಾಣ್ಮೆ ಇವರಲ್ಲಿತ್ತು. ಅತ್ಯಂತ ಕ್ಲಿಷ್ಟ ಹಾಗೂ ನೀರಸ ವಿಷಯಗಳೂ, ಇವರು ಬೋಧಿಸುತ್ತಿದ್ದ ರೀತಿಯಿಂದ ವಿದ್ಯಾರ್ಥಿಗಳು ತಲ್ಲೀನರಾಗಿ ವಿಷಯ ಗ್ರಹಣ ಮಾಡುವಂತಾಗುತ್ತಿತ್ತು. ಅವರ ಪುಸ್ತಕಗಳ ಸಂಗ್ರಹದಿಂದಲೇ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿ ಓದಲು ಪ್ರೇರೇಪಿಸುತ್ತಿದ್ದರು. ಗ್ರಂಥಾಲಯದ ಮುಖ್ಯಸ್ಥರು ಆಗಿದ್ದ ಭೂಸನೂರಮಠ ಪಠ್ಯಪುಸ್ತಕ ಮಾತ್ರವಲ್ಲದೆ ಅದಕ್ಕೆ ಸಂಬಂಧಪಟ್ಟ ಇತರ ಪುಸ್ತಕಗಳನ್ನು ಓದುವಂತೆ, ಪ್ರೋತ್ಸಾಹಿಸಿ ಗ್ರಂಥಾಲಯದಲ್ಲಿ ಎಲ್ಲಾ ಪುಸ್ತಕಗಳೂ ಎಲ್ಲಾ ವಿದ್ಯಾರ್ಥಿಗಳಿಗೂ ದೊರೆಯುವಂತೆ ವ್ಯವಸ್ಥೆ ಮಾಡಿದ್ದರು. ಅವರ ವಿಜ್ಞಾನ ಬರಹಗಳು ‘ ಸುಧಾ ‘ ಮತ್ತಿತರ ಜನಪ್ರಿಯ ವಾರ ಮತ್ತು ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕ ಸದಸ್ಯರಾಗಿ ಅನಂತರ ರಾಜ್ಯ ಉಪಾಧ್ಯಕ್ಷರಾಗಿದ್ದ ಅವರು ಅಮೆರಿಕನ್ ಬಯೋಗ್ರಫಿಕಲ್ ಇನ್ಸ್ಟಿಟ್ಯೂಟ್ ವತಿಯಿಂದ 1999ರಲ್ಲಿ “ವರ್ಷದ ವ್ಯಕ್ತಿ” 2000ದಲ್ಲಿ “ಯುನಿವರ್ಸಲ್ ಅವಾರ್ಡ್ ಆಫ್ ಅಕಂಪ್ಲಿಷ್ಮೆಂಟ್ ಪ್ರಶಸ್ತಿ” ಪಡೆದಿದ್ದಾರೆ.
ಪ್ರೊಫೆಸರ್ ರಾಜಶೇಖರ ಭೂಸನೂರಮಠ ಇವರು ಧಾರವಾಡದ ಕಲಘಟಗಿ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ 12 ಏಪ್ರಿಲ್ 2015ರಂದು ತೀವ್ರ ಹೃದಯಘಾತಕ್ಕೊಳಗಾಗಿ ನಿಧನಗೊಂಡರು. ವೈಜ್ಞಾನಿಕ ಕನ್ನಡ ಸಾಹಿತ್ಯದ ಅಧಿಕೃತ ಜನಕ ಎಂದೇ ಗುರುತಿಸಿಕೊಳ್ಳುತ್ತಿದ್ದ ಸೃಜನಶೀಲ ಸಾಹಿತಿ ‘ರಾಭೂ’ ತಮ್ಮ ವಿದ್ಯಾರ್ಥಿಗಳು ಹಾಗೂ ಸಾಹಿತ್ಯ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.