ಮಡಿಕೇರಿ : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ನೀಡಲಾಗುವ 2024-25ನೇ ಸಾಲಿನ ರಾಜ್ಯಮಟ್ಟದ ಯುವ ಪ್ರಶಸ್ತಿಗೆ ವಿರಾಜಪೇಟೆ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಭರತನಾಟ್ಯ ಹಾಗೂ ಪಾಶ್ಚಾತ್ಯ ನೃತ್ಯ ತರಬೇತುದಾರರಾದ ವಿದುಷಿ ಕಾವ್ಯಶ್ರೀ ಆಯ್ಕೆಯಾಗಿದ್ದಾರೆ. 15ರಿಂದ 30 ವರ್ಷದೊಳಗಿನ ವಿವಿಧ ಕ್ಷೇತ್ರದ ಸಾಧನೆಗೆ ಈ ಪ್ರಶಸ್ತಿ ನೀಡಲಾಗಿದೆ.
ಕಾವ್ಯಶ್ರೀ ವಿರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮದ ಎಂ.ಪಿ. ಕಾಂತರಾಜ್ ಹಾಗೂ ಎಂ.ಎನ್. ಹೇಮಾವತಿ ದಂಪತಿಯ ಸುಪುತ್ರಿ. ಅಮ್ಮತ್ತಿಯ ಗುಡ್ ಶೇಫರ್ಡ್ ಕಾನ್ವೆಂಟ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ಕಾವ್ಯಶ್ರೀ ವಿರಾಜಪೇಟೆ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನಲ್ಲಿ ಪದವಿ ಮುಗಿಸಿ ಪ್ರಸ್ತುತ ಮೈಸೂರಿನ ಮುಕ್ತ ಗಂಗೋತ್ರಿ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ಅರಮೇರಿಯ ಎಸ್.ಎಂ.ಎಸ್. ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭರತನಾಟ್ಯದಲ್ಲಿ ಅಂತರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿರುವ ಕಾವ್ಯಶ್ರೀ, ಕರ್ನಾಟಕ ಸರ್ಕಾರ, ಜಿಲ್ಲಾ ವೈಯಕ್ತಿಕ ಯುವ ಪ್ರಶಸ್ತಿ ವಿಜೇತರಾಗಿದ್ದು, ಮೈಸೂರಿನ ಗಂಗೂಬಾಯಿ ಹಾನಗಲ್ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಪರೀಕ್ಷಕರಾಗಿ ನೇಮಕಗೊಂಡಿದ್ದಾರೆ.
2020ನೇ ಸಾಲಿನ ಮಿಸ್ ಕೊಡಗು ವಿಜೇತೆಯಾಗಿದ್ದು, ಜಿಲ್ಲಾ ಹಾಗೂ ರಾಜ್ಯ ಯುವ ಉತ್ಸವ, ಯುವಜನೋತ್ಸವ, ಯುವ ಜನ ಮೇಳ ಸ್ಪರ್ಧೆಗಳ ವಿಜೇತೆ, ಅಂತಾರಾಷ್ಟ್ರೀಯ ನೃತ್ಯ ಮಂಜರಿ ಪ್ರಶಸ್ತಿ, ಹಂಪಿಯ ನಾಟ್ಯಾ ಚೂಡಮಣಿ, ಕಲ್ಪಶ್ರೀ ಕಲಾ ಪ್ರತಿಷ್ಠಾನದ ನಾಟ್ಯಾ ವಿನೋದಿನಿ ಪ್ರಶಸ್ತಿ, ಸ್ವಸ್ತ ಸಮೃದ್ದ ಭಾರತ – ರಾಜ್ಯಮಟ್ಟದ ನೃತ್ಯ ಸ್ಪರ್ಧೆ ವಿಜೇತೆ, ಕಲಾಕ್ಷೇತ್ರ – ನೃತ್ಯ ಸಾಧನ ಗೌರವ ಪ್ರಶಸ್ತಿ, ಶತಾಕ್ಷಿ ಯುವ ರತ್ನ ಪ್ರಶಸ್ತಿ, ನೃತ್ಯ ಕಿಂಕಿಣಿ ಸಂಸ್ಥೆಯ ವತಿಯಿಂದ ನೃತ್ಯ ಕಲಾಮಣಿ ಪ್ರಶಸ್ತಿ, ರಾಜ್ಯಮಟ್ಟದ ಜ್ಞಾನಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿದ್ದು, ಈ ಸಾಧನೆಗಳನ್ನು ಗುರುತಿಸಿ ಈ ಬಾರಿ ಇವರಿಗೆ ಪ್ರಶಸ್ತಿ ನೀಡಲಾಗಿದೆ.