ಧಾರವಾಡ : ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ.) ಇದರ ವತಿಯಿಂದ ‘ಹೆಸರಾಯಿತು ಕರ್ನಾಟಕ’ ಸುವರ್ಣ ಮಹೋತ್ಸವ ಪ್ರಯುಕ್ತ ಕವಿಗೋಷ್ಠಿ, ಕಾವ್ಯ ಗಾಯನ, ನೃತ್ಯ ನಮನ, ಸುವರ್ಣ ಸಿರಿ ಸನ್ಮಾನ ಸಮಾರಂಭವನ್ನು ದಿನಾಂಕ 19 ಜನವರಿ 2025 ರಂದು ಬೆಳಿಗ್ಗೆ 10-00 ಗಂಟೆಗೆ ಧಾರವಾಡದ ಮನ್ಸೂರು ಶ್ರೀ ರೇವಣಸಿದ್ಧೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ರೇವಣಸಿದ್ಧೇಶ್ವರ ಮಠದ ಪೂಜ್ಯಶ್ರೀ ಡಾ. ಬಸವರಾಜ ದೇವರು ಇವರ ದಿವ್ಯ ಸಾನಿಧ್ಯದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಇದರ ಅಧ್ಯಕ್ಷರಾದ ವೇ. ಪಂ. ಪಕ್ಕೀರೇಶ್ವರ ಶಾಸ್ತ್ರಿಗಳು ಹಿರೇಮಠ ಇವರ ಅಧ್ಯಕ್ಷತೆಯಲ್ಲಿ ಪ್ರಾಧ್ಯಾಪಕರಾದ ಡಾ. ಮೃತ್ಯುಂಜಯ ಅಗಡಿ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿರುವರು. ‘ಹೆಸರಾಯಿತು ಕರ್ನಾಟಕ’ ಎಂಬ ವಿಷಯದ ಬಗ್ಗೆ ನಿವೃತ್ತ ಉಪನ್ಯಾಸಕರಾದ ಶ್ರೀ ಸುರೇಶ ಕಡೆಮನಿ ಇವರು ಉಪನ್ಯಾಸ ನೀಡಲಿದ್ದಾರೆ. ಧಾರವಾಡದ ಆಕಾಶವಾಣಿ ದೂರದರ್ಶನ ಕಲಾವಿದರಾದ ಶ್ರೀಮತಿ ಡಾ. ಸುಮಾ ಬಸವರಾಜ ಹಡಪದ ಮತ್ತು ಶ್ರೀಗುರು ಕುಮಾರೇಶ್ವರ ವಿದ್ಯಾ ಸೇವಾ ಸಂಸ್ಥೆಯ ಸಂಗೀತ ಶಿಕ್ಷಕರು ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಹಾಗೂ ಶ್ರೀ ಬಸವೇಶ್ವರ ನೃತ್ಯ ಶಾಲೆಯ ಶ್ರೀ ಶರಣ ಶೇಖಪ್ಪ ಬಡ್ಡಿ ಇವರಿಂದ ನೃತ್ಯ ಪ್ರಸ್ತುತಗೊಳ್ಳಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಸುವರ್ಣ ಕರ್ನಾಟಕ ಶ್ರೀ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಸಾಹಿತಿ ಎಂ.ಪಿ.ಎಂ. ಕೊಟ್ರಯ್ಯ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.