ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಫ್ರೆಂಡ್ಸ್ ಸೆಂಟರ್ ಸಹಯೋಗದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 233ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ದಿನಾಂಕ 19 ಜನವರಿ 2025ರಂದು ಗೋಪಾಲ ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೂಡಾ ಅಧ್ಯಕ್ಷರಾದ ಎಚ್.ಎಸ್. ಸುಂದರೇಶ್ “ಸಮಾಜದಲ್ಲಿನ ವಾಸ್ತವತೆಯನ್ನು ಕವಿತೆ, ಹನಿಗವನ, ಕಥೆಗಳ ಮೂಲಕ ವಿಶ್ಲೇಷಿಸಿ ಪರಸ್ಪರ ಚರ್ಚಿಸುವಂತಹ ಕಾರ್ಯಕ್ಕೆ ಸಾಹಿತ್ಯ ಹುಣ್ಣಿಮೆ ಪ್ರೇರಣೆಯಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಸಾಹಿತ್ಯ ಹುಣ್ಣಿಮೆ ಮೂಲಕ ಸಾಹಿತ್ಯವನ್ನು ಪಸರಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸುತ್ತಿರುವ ವಿಚಾರಗಳು ಸರ್ಕಾರದ ಆಡಳಿತವನ್ನು ಸದಾ ಎಚ್ಚರಿಸುತ್ತಿದ್ದು, ಸಮಾಜಕ್ಕೆ ಪೂರಕ ಶಕ್ತಿಯಾಗಿ ನಿಲ್ಲಲಿದೆ. ಮಲೆನಾಡಿನ ಸಾಹಿತಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ವಿದೇಶದಲ್ಲಿರುವ ಕನ್ನಡಿಗರು ರಾಜ್ಯೋತ್ಸವ ಕಾರ್ಯಕ್ರಮಗಳನ್ನು ತಮ್ಮ ದೇಶಗಳಲ್ಲಿ ಆಯೋಜಿಸುವ ಮೂಲಕ ನಾಡಿನ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ” ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ “ಆಧುನಿಕತೆಯ ಧಾವಂತದಲ್ಲಿರುವ ಸಮಾಜವನ್ನು ಸಾಹಿತ್ಯ ಹೊರತರಲಿ. ಸಾಹಿತ್ಯದ ಮೂಲಕ ಜೀವಪರವಾದ ಚರ್ಚೆಗಳನ್ನು ತಂತ್ರಜ್ಞಾನದಷ್ಟೆ ಪ್ರಭಾವಯುತವಾಗಿ ಮಾಡಬೇಕಾದ ಸಂದರ್ಭ ಇದಾಗಿದೆ. ಮೊಬೈಲ್‌ಗಳ ಅತಿಯಾದ ಬಳಕೆ, ಹೊಸತಲೆಮಾರಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ಇದರಿಂದ ಹೊರತರಲು, ಮಕ್ಕಳ ಸಾಹಿತ್ಯ ಸಮ್ಮೇಳಗಳನ್ನು ಆಯೋಜಿಸಲಾಗುತ್ತಿದೆ. ಇಂದಿನ ಮಕ್ಕಳಲ್ಲಿ ಇಂಗ್ಲೀಷ್ ಮತ್ತು ಕನ್ನಡ ಭಾಷೆ ಎರಡರಲ್ಲಿಯೂ ಪರಿಪೂರ್ಣವಾಗಿ ಕಲಿಯಲು ಸಾಧ್ಯವಾಗಿಲ್ಲ. ಧಾವಂತದ ಜೀವನದಲ್ಲಿ ಪೋಷಕರು ಪ್ರತಿಷ್ಟಿತ ಶಾಲೆಗಳ ಮೇಲೆ ತೋರುವಷ್ಟು ಆಸಕ್ತಿಯನ್ನು ತಮ್ಮ ಮಕ್ಕಳಿಗೆ ಸ್ವತಃ ಭಾಷೆಯನ್ನು ಕಲಿಸಲು ತೋರುತ್ತಿಲ್ಲ. ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಪರಿಪೂರ್ಣವಾಗಿ ಕಲಿಯದೆ ಇದ್ದಲ್ಲಿ, ಇತರೆ ಭಾಷೆಗಳ ಕಲಿಕೆಯಾದರು ಹೇಗೆ ಸಾಧ್ಯ. ಕಲಿಕೆಯ ಗುಣಮಟ್ಟ ಸುಧಾರಣೆ ಮಾಡುವುದು ಹೇಗೆ ಎಂಬುದರ ಚರ್ಚೆಯ ಜೊತೆಗೆ ಸೃಜನಾತ್ಮಕ ಚಿಂತನೆಗಳನ್ನು ಬೆಳೆಸುವತ್ತ ಯೋಚಿಸಬೇಕಿದೆ. ಜನಪದ ಕಲಾವಿದರು ನಮ್ಮ ಸಂಸ್ಕೃತಿಯ ತಾಯಿಬೇರುಗಳು. ಅವರಿಗೆ ಬೆಂಬಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಕಲಾವಿದರನ್ನು ಎಂದಿಗೂ ಅವಮಾನಿಸದಿರಿ” ಎಂದು ಹೇಳಿದರು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷರಾದ ಬಿ.ಜಿ. ಧನರಾಜ್ ಅಧ್ಯಕ್ಷತೆ ವಹಿಸಿದ್ದರು. ಫ್ರೆಂಡ್ಸ್ ಸೆಂಟರ್ ಮಹಿಳಾ ಘಟಕದ ಅಧ್ಯಕ್ಷೆ ಸ್ವಪ್ನ ಬದರಿನಾಥ, ಮಾಜಿ ಅಧ್ಯಕ್ಷ ಜಿ. ವಿಜಯಕುಮಾರ್, ವೇದಿಕೆ ಪದಾಧಿಕಾರಿಗಳಾದ ಮಧುಸೂದನ್ ಐತಾಳ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದರಾದ ಭದ್ರಾವತಿ ಲಕ್ಷ್ಮಣ್ ರಾವ್ ಮತ್ತು ತಂಡದವರು ಚೌಡಿಕೆ ಪದ ಹಾಡಿದರು. ಎನ್.ಇ.ಎಸ್. ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಕಥೆ ಹೇಳಿದರು. ಕವಿಗಳಾದ ಊರ್ಮಿಳಾ ರಾವ್, ಲತಾ ನಾಗರಾಜ್ ಕವನ ವಾಚಿಸಿ, ಡಿ. ಗಣೇಶ್, ಕೆ.ಎಸ್. ಮಂಜಪ್ಪ ಹನಿಗವನ ವಾಚಿಸಿದರು. ಫ್ರೆಂಡ್ಸ್ ಸೆಂಟರ್ ಪದಾಧಿಕಾರಿ ರವೀಂದ್ರ ಐತಾಳ್ ಸ್ವಾಗತಿಸಿದರು.