ಮೈಸೂರು : ರೋಟರಿ ಮೈಸೂರು ಉತ್ತರ ಹಾಗೂ ಕದಂಬ ರಂಗವೇದಿಕೆ ಇದರ ವತಿಯಿಂದ ‘ರೋಟರಿ- ಕದಂಬ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 17 ಜನವರಿ 2025ರಂದು ಜೆ.ಎಲ್.ಬಿ. ರಸ್ತೆಯ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ಹಾಗೂ ರಂಗಭೂಮಿ ನಟ ಮಂಡ್ಯ ರಮೇಶ್ ಮಾತನಾಡಿ “ಕನ್ನಡ ರಂಗಭೂಮಿಯು ವಿಶ್ವದಲ್ಲೇ ವಿಶಿಷ್ಟ ಗೌರವಕ್ಕೆ ಪಾತ್ರವಾಗಿದ್ದು, ಅದಕ್ಕೆ ಇಲ್ಲಿನ ಮಣ್ಣಿನ ಗುಣ ಹಾಗೂ ಜಾನಪದ ಕಾರಣ. ಮೈಸೂರಿನಲ್ಲಿ ರಾಜರ ಕಾಲದಿಂದ ನಾಟಕಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಗುಬ್ಬಿ ವೀರಣ್ಣ ಕಂಪನಿಯನ್ನು ಕರೆಸಿ, ಜಗನ್ಮೋಹನ ಅರಮನೆಯಲ್ಲಿ ರಾಜರು ನಾಟಕ ಮಾಡಿಸಿ ಪ್ರೋತ್ಸಾಹಿಸಿದ್ದರು. ಈಗಲೂ ಒಳ್ಳೆಯ ನಾಟಕಗಳನ್ನು ಪ್ರದರ್ಶಿಸಿದರೆ ಜನ ಬೆಂಬಲ ನೀಡುತ್ತಾರೆ. ಉತ್ತಮ ನಾಟಕಕ್ಕೆ ಸೋಲೇ ಇಲ್ಲ. ಜನ ಬರುತ್ತಾರೆ. ಸುಳ್ಳನ್ನು ಹೇಳುತ್ತಲೇ ಸತ್ಯವನ್ನು ಅನಾವರಣ ಮಾಡುವ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ. ಆ ಮೂಲಕ ಉತ್ತಮ ಸಂಸ್ಕಾರ ರೂಪಿಸಲು ನೆರವಾಗುತ್ತಿದೆ. ರೋಟರಿ ಸಂಸ್ಥೆಯವರು ಕೇವಲ ಇಂಗ್ಲೀಷ್ ಕಾರ್ಯಕ್ರಮಗಳಿಗೆ ಸೀಮಿತವಾಗದೇ ಕಲೆ, ಕಲಾವಿದರಿಗೂ ಪ್ರೋತ್ಸಾಹ ನೀಡುತ್ತಿರುವುದು ಸ್ವಾಗತಾರ್ಹ” ಎಂದು ಹೇಳಿದರು.
ನಟ ನಿರ್ದೇಶಕ ಯು.ಎಸ್. ರಾಮಣ್ಣ, ನಟ ಪ್ರಸಾಧನ ಪಟು ವಿನ್ಯಾಸಕ ಅಶ್ವತ್ಥ್ ಕದಂಬ, ನಟ ನಿರ್ದೇಶಕ ಎನ್. ಧನಂಜಯ ಹಾಗೂ ನಟಿ ನಿರ್ದೇಶಕಿ ಗಾಯಕಿ ದಿಶಾ ರಮೇಶ್ ಇವರುಗಳಿಗೆ ‘ರೋಟರಿ- ಕದಂಬ ಪ್ರಶಸ್ತಿ’ಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರದಾನ ಮಾಡಿದರು. ರೋಟರಿ ಉತ್ತರ ಅಧ್ಯಕ್ಷ ಪಿ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಲ್.ಆರ್. ಮಹದೇವ ಸ್ವಾಮಿ ಉಪಸ್ಥಿತರಿದ್ದರು. ಕದಂಬ ರಂಗವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಸ್ವಾಗತಿಸಿ, ಶಿವಕುಮಾರ್ ನಿರೂಪಿಸಿದರು.