ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಡಾ. ಇರುವೈಲು ರಘುರಾಮ ಅಸ್ರಣ್ಣ ಮತ್ತು ಶ್ರೀಮತಿ ಲೀಲಾ ಅಸ್ರಣ್ಣ ನೆನಪಿನ ದತ್ತಿನಿಧಿ ಉಪನ್ಯಾಸದಲ್ಲಿ ‘ಕೊಡಗಿನ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ’ ವಿಷಯಗಳ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 20 ಜನವರಿ 2025ರಂದು ಭಾಗಮಂಡಲ ಹೋಬಳಿಯ ಕೋರಂಗಲದ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸವನ್ನು ನೀಡಿದ ಭಾಗಮಂಡಲ ಕಾವೇರಿ ಕಾಲೇಜಿನ ಪ್ರಾಂಶುಪಾಲ ಕೆ.ಜಿ. ದಿವಾಕರ್ “ಕೊಡಗು ಜಿಲ್ಲೆಯ ಜನ ಅತ್ಯಂತ ಸಾಮರಸ್ಯದಿಂದ ಬದುಕು ಸಾಧಿಸುವವರು. ಎಲ್ಲೋ ಕೆಲವೆಡೆ ಅಪವಾದವಿರಬಹುದು, ಆದರೆ ನಮ್ಮಲ್ಲಿ ಜಾತಿ ಕೇಳಿ ಮನೆಗೆ ಸೇರಿಸುವ ಪದ್ಧತಿ ಇಲ್ಲ. ಅತ್ಯಂತ ಪ್ರಬುದ್ಧ ಸಾಮರಸ್ಯದ ಬದುಕು ಕೊಡಗಿನಲ್ಲಿದೆ. ಇಂದು ಕೊಡಗಿನಲ್ಲಿ ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ಬೇಕಾದಷ್ಟು ಅವಕಾಶಗಳಿದ್ದು, ನಮ್ಮ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಇಲ್ಲಿಯ ಕಾಫಿ, ಒಳ್ಳೆಮೆಣಸು, ಏಲಕ್ಕಿಗಳಿಗೆ ದೇಶಾದ್ಯಂತ ಬೇಡಿಕೆ ಇದ್ದು ಅದನ್ನು ಜಾಗತಿಕ ಮಟ್ಟದಲ್ಲಿಯೂ ವ್ಯವಹಾರ ಮಾಡುವ ಅವಕಾಶವಿದೆ. ಜೊತೆಗೆ ಇಲ್ಲಿಯ ಪ್ರಾಕೃತಿಕ ಸೌಂದರ್ಯಕ್ಕೆ ಮರುಳಾಗಿ ಬರುವ ಪ್ರವಾಸಿಗರಿಗೆ ಹೋಂಸ್ಟೇ ಮೂಲಕ ಆರ್ಥಿಕ ಆದಾಯ ಗಳಿಸುವ ಅವಕಾಶವಿದೆ” ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ದತ್ತಿದಾನಿಗಳಾದ ಡಾ. ದುರ್ಗಾಪ್ರಸಾದ್ ಮತ್ತು ಐ.ಆರ್. ಪ್ರಮೋದ್ ಇವರು ತಮ್ಮ ತಂದೆ ದಿ. ಡಾ. ರಘುರಾಮ ಅಸ್ರಣ್ಣ ಮತ್ತು ಲೀಲಾ ಅಸ್ರಣ್ಣರವರ ಜ್ಞಾಪಕರ್ತ ದತ್ತಿ ಸ್ಥಾಪಿಸಿದ್ದು ಕೊಡಗಿನ ಸಾಮಾಜಿಕ ಸಾಹಿತಿಕ ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟ ಉಪನ್ಯಾಸ ನಡೆಸುವಂತೆ ಮತ್ತು ಜಿಲ್ಲೆಯಲ್ಲಿ ಹತ್ತನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯನ್ನು ಗುರುತಿಸಿ ಸನ್ಮಾನಿಸುವಂತೆ ದತ್ತಿ ಸ್ಥಾಪಿಸಿರುತ್ತಾರೆ. ಅವರ ಆಶಯದಂತೆ ಇಂದು ಈ ಕಾರ್ಯಕ್ರಮ ನಡೆಯುತ್ತಿದೆ” ಎಂದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವ್ಯವಸ್ಥಾಪಕರಾದ ಚೀಯಕ ಪೂವಂಡ ಚಂಗಪ್ಪರವರು “ಸಾಹಿತ್ಯ ಪರಿಷತ್ತು ಈ ರೀತಿಯ ದತ್ತಿ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಮಾಡುವ ಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಕೊಡಗಿನ ಸಾಮಾಜಿಕ, ಆರ್ಥಿಕ ವಿಚಾರಗಳ ಬಗ್ಗೆ ತಿಳುವಳಿಕೆ ಮೂಡುವಂತಾಗಿದೆ. ಜೊತೆಗೆ ಹತ್ತನೇ ತರಗತಿಯಲ್ಲಿ ಪ್ರಥಮ ಪಡೆದ ವಿದ್ಯಾರ್ಥಿಯನ್ನು ಸನ್ಮಾನಿಸುವ ಮೂಲಕ ಇತರ ವಿದ್ಯಾರ್ಥಿಗಳಿಗೂ ಪ್ರೇರೇಪಣೆಯಾಗಿದೆ” ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಮಾತನಾಡುತ್ತಾ “ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿಯ ಪರಿಚಯ ಮಾಡುವ ಉದ್ದೇಶದಿಂದ ದತ್ತಿ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿಯೇ ನಡೆಸಿಕೊಂಡು ಬರುತ್ತಿದೆ” ಎಂದರು.
2023-24ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ಅಂಕ ಪಡೆದ ಮಾದಾಪುರದ ಶ್ರೀಮತಿ ಚೆನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಅದವಿಯಾ ಯು.ರವರ ಪರವಾಗಿ ಅವರ ಪೋಷಕರಾದ ಉಮ್ಮರ್ ಮತ್ತು ಶ್ರೀಮತಿ ಅಮೀನಾರವರು ಗೌರವ ಸ್ವೀಕರಿಸಿದರು. ನಂತರ ಅಮೀನಾರವರು ತಮ್ಮ ಪುತ್ರಿಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಜ್ಞಾನೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ವೇತನ್ ಚಂಗಪ್ಪ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾಗಮಂಡಲ ಹೋಬಳಿ ಅಧ್ಯಕ್ಷರಾದ ಸುನೀಲ್ ಪತ್ರವೋ ಮಾತನಾಡುತ್ತಾ “ಕೊಡಗಿನ ಗಡಿಭಾಗ ಭಾಗಮಂಡಲದಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಿರುವುದು ಸಂತಸ ತಂದಿದೆ” ಎಂದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಭಾಗಮಂಡಲ ಹೋಬಳಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಎ.ಎಸ್. ಶ್ರೀಧರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಕವಿ ಕಿಶೋರ್ ಸಂಯೋಜಿಸಿ, ವಿದ್ಯಾರ್ಥಿ ಹೇಮಂತ್ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಮೌಲ್ಯ, ಕುಮಾರಿ ದೀಕ್ಷಿತಾ ಮತ್ತು ಕುಮಾರಿ ಪ್ರಣಿತ ಕವನ ವಾಚನ ಮಾಡಿದರು. ಅಧ್ಯಾಪಕಿ ಇಂದಿರಾರವರು ಸ್ವಾಗತಿಸಿ, ಎ.ಎಸ್. ಶ್ರೀಧರ್ ವಂದಿಸಿದರು.