ಕೋಟ : ಪ್ರಪ್ರಥಮ ಯಕ್ಷಗಾನವನ್ನು ವಿದೇಶಕ್ಕೊಯ್ದ ಶ್ರೇಯಸ್ಸಿನ ಕೋಟದ ಸಾಲಿಗ್ರಾಮ ಮಕ್ಕಳ ಮೇಳ (ರಿ.) ಇದರ ವತಿಯಿಂದ ಸುವರ್ಣ ಪರ್ವ -6ರ ಸರಣಿಯಲ್ಲಿ ಎರಡು ದಿನಗಳ ‘ಕಲೋತ್ಸವ 2025’ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ ಮತ್ತು ಹಂದೆ ಉಡುಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 31 ಜನವರಿ 2025 ಮತ್ತು 01 ಫೆಬ್ರವರಿ 2025ರಂದು ಕೋಟ ಪಟೇಲರ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 31 ಜನವರಿ 2025ರಂದು ಸಂಜೆ 4-00 ಗಂಟೆಗೆ ‘ಯಕ್ಷ ಕಿಶೋರ-ಗಾನ ಮಧುರ’ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇವರಿಂದ ಪ್ರಸ್ತುತಗೊಳ್ಳಲಿದೆ. 5-00 ಗಂಟೆಗೆ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಕೆ. ವಿದ್ಯಾಕುಮಾರಿ ಇವರು ಈ ಕಲೋತ್ಸವ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿರುವರು. ರಾಷ್ಟ್ರೀಯ ರಂಗ ನಿರ್ದೇಶಕರಾದ ಡಾ. ಶ್ರೀಪಾದ ಭಟ್ ಇವರಿಗೆ ‘ಹಂದೆ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಹಂದೆ ಕುಟುಂಬದ ಕಲಾವಿದ ಬಂಧುಗಳಿಂದ ಸಂಗೀತ ನೃತ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 01 ಫೆಬ್ರವರಿ 2025ರಂದು ಸಂಜೆ 4-00 ಗಂಟೆಗೆ ವಿದ್ವಾನ್ ಶಂಭು ಭಟ್ ಮತ್ತು ಬಳಗದವರಿಂದ ಹಿಂದೂಸ್ಥಾನಿ ಗಾಯನ ಪ್ರಸ್ತುತಗೊಳ್ಳಲಿದೆ. 5-00 ಗಂಟೆಗೆ ನಡೆಯಲಿರುವ ಉಡುಪ ಸಂಸ್ಮರಣ ಕಾರ್ಯಕ್ರಮದಲ್ಲಿ ನಿವೃತ್ತ ಜಂಟಿ ನಿರ್ದೇಶಕರಾದ ಮೋಹನದಾಸ ಶ್ಯಾನುಭೋಗ್ ಇವರು ಸಂಸ್ಮರಣ ಮಾತುಗಳನ್ನಾಡಲಿದ್ದು, ಬಡಗುತಿಟ್ಟಿನ ಪ್ರಸಿದ್ಧ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗ ಇವರಿಗೆ ‘ಉಡುಪ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರು ಮತ್ತು ಯಕ್ಷಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ.) ಕೋಟ ಇವರಿಂದ ‘ದಕ್ಷಯಜ್ಞ – ಚಿತ್ರಸೇನ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಪ್ರಸ್ತುತಗೊಳ್ಳಲಿದೆ.