ಮಂಗಳೂರು : ಸಾಲಿಗ್ರಾಮ ಗುರುನರಸಿಂಹ ದೇವಳದ ವಾರ್ಷಿಕ ರಥೋತ್ಸವ ದೇವರ ಅವಭೃತೋತ್ಸವದ ಅಂಗವಾಗಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಯಕ್ಷ ಚಿಂತಕ ಸುಜಯೀಂದ್ರ ಹಂದೆ ಹೆಚ್. ವಿರಚಿತ “ರಾಜಾ ದ್ರುಪದ” ಯಕ್ಷಗಾನದ ಪ್ರದರ್ಶನ ದಿನಾಂಕ 17 ಜನವರಿ 2025 ರಂದು ನಡೆಯಿತು.
ಕೋಟ ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಾಲಯದ ನಾಗಪ್ಪಯ್ಯ ಹಂದೆ ರಂಗಮಂಟಪದಲ್ಲಿ ನಡೆದ ಈ ಕಾರ್ಯಕ್ರಮವನ್ನು ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಸಾಹಿತಿ ಹಾಗೂ ಕಲಾಪೋಷಕರಾದ ಹೆಚ್. ಜನಾರ್ದನ ಹಂದೆ ಮಾತನಾಡಿ “ಕಲಾಸೇವೆ ಮಾಡುವ ಕಲಾವಿದರಿಗೆ ಹಾಗೂ ಸಂಘಟಕರಿಗೆ ಪ್ರೋತ್ಸಾಹ ನೀಡಬೇಕಾದುದು ಕಲಾಭಿಮಾನಿಗಳ ಮತ್ತು ದಾನಿಗಳ ಕರ್ತವ್ಯ. ಆಗ ಮಾತ್ರ ನಮ್ಮ ಶ್ರೀಮಂತ ಸಂಸ್ಕೃತಿಯ ಉಳಿವು ಸಾಧ್ಯ. ರಥೋತ್ಸವ ಹಾಗೂ ಅವಭೃತದ ಸಂದರ್ಭದಲ್ಲಿ ಯಕ್ಷಗಾನ ಆಯೋಜಿಸಿರುವುದರಿಂದ ಹಂದೆ ದೇವಳದ ಆಡಳಿತ ಮಂಡಳಿ ಮತ್ತು ಸಂಘಟಕರು ಅಭಿನಂದನಾರ್ಹರು” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರಿನ ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಯಕ್ಷ ಚಿಂತಕರಾದ ಡಾ. ಆನಂದ ರಾಮ ಉಪಾಧ್ಯ ಮಾತನಾಡಿ “ನೂರಾರು ವರ್ಷಗಳ ಇತಿಹಾಸದ ಯಕ್ಷಗಾನ ಕಲೆಗೆ ಕಲಾವಿದರ ಕೊಡುಗೆ ಅಪಾರ. ಅಂತೆಯೇ ಡಾ. ಕಾರಂತರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಯೋಗ್ಯವಾದ ಯಕ್ಷಗಾನ ಬಯಲಾಟ ಪ್ರಕಟಿಸಿದ ಬಳಿಕ ಹೆಚ್ಚಿನ ಜನಸ್ಪಂದನೆ ದೊರೆಯಿತು. ಆಟ, ಬಯಲಾಟ, ದಶಾವತಾರ ಆಟ, ಯಕ್ಷಗಾನ ಹೀಗೆ ಹಲವಾರು ಹೆಸರಿನಲ್ಲಿ ಪರಿಷ್ಕರಣೆಗೊಂಡು ವಿದ್ಯಾವಂತರು ಹಾಗೂ ವಿದ್ವಜ್ಜನರು ಹೆಚ್ಚು ಹೆಚ್ಚು ಕಲೆಯ ಕುರಿತು ಆಕರ್ಷಿತರಾದರು ಮತ್ತು ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಕೃಷಿ ಮಾಡಿದರು. ಹಾಗಾಗಿ ಯಕ್ಷಗಾನಕ್ಕೆ ವಿಶ್ವ ಮಾನ್ಯತೆ ದೊರೆಯಿತು. ಇಂದು ಶಾಲಾ ಶಿಕ್ಷಣದ ಜೊತೆಗೆ ಯಕ್ಷಗಾನ ಶಿಕ್ಷಣ ನೀಡುತ್ತಿರುವುದು ಸಂತೋಷದಾಯಕ ಬೆಳವಣಿಗೆ. ಎಲ್ಲರೂ ಕಲಾವಿದರಾಗದಿದ್ದರೂ ಉತ್ತಮ ಪ್ರೇಕ್ಷಕರಾಗಿ ರೂಪುಗೊಂಡರೆ ಕಲೆಗೆ ಅದೇ ಪೂರಕ ಎಂದರು”.
ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಕಲಾ ಪೋಷಕರಾದ ಕಾರ್ಕಡ ತಾರಾನಾಥ ಹೊಳ್ಳ ಮತ್ತು ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಅಮರ ಹಂದೆಯವರು ಉಪಸ್ಥಿತರಿದ್ದರು. ಉಪನ್ಯಾಸಕ ರಾಘವೇಂದ್ರ ತುಂಗ ಕೆ. ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಭಾಕಾರ್ಯಕ್ರಮದ ಬಳಿಕ ಕೋಟ ಸುದರ್ಶನ ಉರಾಳ ಇವರ ಸಂಯೋಜನೆಯಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಕಲಾವಿದರಾಗಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಸುದೀಪ ಉರಾಳ, ಸುಜಯೀಂದ್ರ ಹಂದೆ, ತಮ್ಮಣ್ಣ ಗಾಂವ್ಕರ್, ಸಂಜೀವ ಹೆನ್ನಾಬೈಲು, ಡಾ. ಶಿವಕುಮಾರ್ ಅಲಗೋಡು, ಆದಿತ್ಯ ಹೆಗಡೆ, ನರಸಿಂಹ ತುಂಗ, ಶ್ರೀರಾಮ್ ಹೆಬ್ಬಾರ್, ಶಶಾಂಕ ಉರಾಳ, ರಾಜು ಪೂಜಾರಿ ಭಾಗವಹಿಸಿದರು.