ಸುರತ್ಕಲ್ : ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್ ಇದರ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು ಮತ್ತು ಸುರತ್ಕಲ್ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘ, ಪ್ರೊ. ಯಚ್ .ಜಿ. ಕೆ. ರಾವ್ ದತ್ತಿನಿಧಿ, 1982ರ ವಿಜ್ಞಾನ ತಂಡದ ದತ್ತಿನಿಧಿ, ರಕ್ಷಕ ಶಿಕ್ಷಕ ಸಂಘ, ಗೋವಿಂದದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್ ಹಾಗೂ ಬಿ. ಎ. ಎಸ್. ಎಫ್. ಕೈಗಾರಿಕಾ ಸಂಸ್ಥೆ ಬಾಳ ಸುರತ್ಕಲ್ ಇವುಗಳ ಸಹಭಾಗಿತ್ವದಲ್ಲಿ ‘ನೀನಾಸಂ ತಿರುಗಾಟ – 2024’ ನಾಟಕೋತ್ಸವವು ದಿನಾಂಕ 18 ಮತ್ತು 19 ಜನವರಿ 2025ರಂದು ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನ ಆವರಣದಲ್ಲಿ ನಡೆಯಿತು.
ಹಿರಿಯ ರಂಗ ನಿರ್ದೇಶಕ ಮತ್ತು ನಿವೃತ್ತ ಶಿಕ್ಷಕ ಯಚ್.ಯು. ಅನಂತಯ್ಯ ‘ನೀನಾಸಂ ನಾಟಕೋತ್ಸವ’ವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗೋವಿಂದದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ “ಕಾಲೇಜಿನ ಲಲಿತಕಲಾ ಅಧ್ಯಯನ ಕೇಂದ್ರವು ‘ನೀನಾಸಂ ತಿರುಗಾಟ’ದ ನಾಟಕಗಳನ್ನು ನಿರಂತರವಾಗಿ ನಡೆಸುತ್ತಿದ್ದು ಸಾಂಸ್ಕೃತಿಕ ಅಭಿರುಚಿಯ ವರ್ಧನೆಯೊಂದಿಗೆ ಪ್ರಭುದ್ಧ ಕಲಾವಿದರು ರೂಪುಗೊಳ್ಳುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ” ಎಂದರು.
ಹಿರಿಯ ರಂಗನಟಿ ಗೀತಾ ಸುರತ್ಕಲ್, ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್., ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ, 1982ರ ವಿಜ್ಞಾನ ತಂಡದ ಪ್ರತಿನಿಧಿ, ವಿದ್ಯಾದಾಯಿನೀ ಸ್ಪೋರ್ಟ್ಸ್ ಅಕಾಡಮಿಯ ಸಂಯೋಜಕ ಸುಬ್ರಹ್ಮಣ್ಯ ಟಿ., ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿನಯ ಆಚಾರ್, ನೀನಾಸಂ ನಾಟಕ ತಂಡದ ಸಂಯೋಜಕ ರಘು ಹೆಗ್ಗೋಡು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್, ಗೋವಿಂದ ದಾಸ ಕಾಲೇಜು ಅಲ್ಯುಮ್ನಿ ಅಸೋಸಿಯೇಶನ್ ಇದರ ಅಧ್ಯಕ್ಷೆಯಾದ ಡಾ. ಸಾಯಿಗೀತಾ ಉಪಸ್ಥಿತರಿದ್ದರು. ಕಾಲೇಜಿನ ಸಾಂಸ್ಕೃತಿಕ ನಿರ್ದೇಶಕ ವಿನೋದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
‘ನೀನಾಸಂ’ ತಂಡದವರಿಂದ ಭವಭೂತಿಯವರ ರಚನೆಯ ಅಕ್ಷರ ಕೆ.ವಿ. ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ ‘ಮಾಲತಿ ಮಾಧವ’ ಮತ್ತು ಅಭಿರಾಮ ಭಡ್ಕಮಕರ್ ರಚನೆಯ ಜಯಂತ ಕಾಯ್ಕಿಣಿಯವರು ಕನ್ನಡಕ್ಕೆ ಅನುವಾದಿಸಿದ ವಿದ್ಯಾನಿಧಿ ವನಾರಸೆ (ಪ್ರಸಾದ್) ನಿರ್ದೇಶನದ ‘ಅಂಕದ ಪರದೆ’ ನಾಟಕಗಳು ಪ್ರದರ್ಶನಗೊಂಡಿತು.