ಇತಿಹಾಸದ ಪುಟಗಳ ಅಜರಾಮರರ ಸಾಲಿನಲ್ಲಿ ಇರುವ ಅಪ್ರತಿಮ ಮೇಧಾವಿಗಳಲ್ಲಿ ಒಬ್ಬರು ಕೀರ್ತಿಶೇಷ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರು. ಇವರು 20ನೇ ಶತಮಾನದ ತ್ರಿಭಾಷಾ ಪಂಡಿತರು (ಕನ್ನಡ, ಸಂಸ್ಕೃತ, ತೆಲುಗು) ಕರ್ನಾಟಕ ಸಂಗೀತದ ಪ್ರಸಿದ್ಧ ಸಂಯೋಜಕರು ಮತ್ತು ಗಾಯಕರು. ಆಕಾಶವಾಣಿ ಎಂಬ ಪದವನ್ನು ಸೂಚಿಸಿದ ಕೀರ್ತಿವಂತರು. ಪದಕವಿ ಪಿತಾಮಹ ಎಂಬ ಬಿರುದು ಪಡೆದವರು. ಮೇಲಾಗಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ತಿರುಮಲ ತಿರುಪತಿ ದೇವಳದ ವೆಂಕಟೇಶ್ವರ ಸ್ವಾಮಿಯ ಪರಮ ಭಕ್ತರು. ಗುರುಕುಲದಲ್ಲಿ ಬೆಳೆದ ಇವರು ವೇದೋಪನಿಷತ್ತುಗಳ ಪ್ರಚಂಡ ವಿದ್ವಾಂಸರು, ಮಹಾ ಜ್ಞಾನಿಗಳು, ವ್ಯಾಕರಣ ತಜ್ಞರು.
ಇಂತಹ ಬಹುಮುಖ ಪ್ರತಿಭೆಯ ಅನಂತಕೃಷ್ಣ ಶರ್ಮರು ದಿನಾಂಕ 23 ಜನವರಿ 1893ರಲ್ಲಿ ಆಂಧ್ರದ ಅನಂತಪುರ ಜಿಲ್ಲೆಯ ಕಂಬದೂರು ಮಂಡಲದ ರಾಳ್ಳಪಲ್ಲಿ ಗ್ರಾಮದ ಕೃಷ್ಣಮಾಚಾರ್ಯ ಮತ್ತು ಅಲಮೇಲು ಮಂಗಮ್ಮರ ಸುಪುತ್ರರಾಗಿ ಜನಿಸಿದರು. ಬಾಲಕನಾಗಿದ್ದಾಗಲೇ ಕಬ್ಬಿಣದ ಕಡಲೆ ಎನ್ನುತ್ತಿದ್ದ ಸಂಸ್ಕೃತ ಗ್ರಂಥಗಳಾದ ಚಂಪೂ ರಾಮಾಯಣ, ಕಾಳಿದಾಸನ ರಘುವಂಶ, ಅಚ್ಚ ತೆಲುಗು ರಾಮಾಯಣ, ನೀಲಾ ಸುಂದರಿಯ ಪರಿಣಯ ಮುಂತಾದ ಪ್ರಾಚೀನ ಗ್ರಂಥಗಳನ್ನು ಓದಿ ಅರಗಿಸಿಕೊಂಡಿದ್ದರು. 1911ರಲ್ಲಿ ರುಕ್ಮಿಣಮ್ಮನವರನ್ನು ವಿವಾಹವಾಗಿದ್ದು, ಮೂವರು ಪುತ್ರಿಯರು, ಈರ್ವರು ಪುತ್ರರನ್ನು ಪಡೆದ ಸಂಸಾರ ಇವರದು.
ಅಂದಿಗೂ ಇಂದಿಗೂ ದೇಶದಲ್ಲಿಯೇ ಮಾದರಿ ವಿದ್ಯಾ ಸಂಸ್ಥೆ ಎನಿಸಿರುವ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಹಲವು ಮೇರು ವಿದ್ವಾಂಸರುಗಳಾದ ಡಾ. ಸರ್ವಪಳ್ಳಿ ರಾಧಾಕೃಷ್ಣನ್, ಎ.ಆರ್. ವಾಡಿಯ, ಜೆ.ಸಿ. ರಾಲೊ, ಬಿ.ಎಂ. ಶ್ರೀಕಂಠಯ್ಯ, ಎನ್.ಎಸ್. ಸುಬ್ಬರಾವ್ ಇವರೇ ಮುಂತಾದವರು ಪ್ರಾಧ್ಯಾಪಕರುಗಳಾಗಿದ್ದ ಸಮಯದಲ್ಲಿ, ಇವರು ಸಾಹಿತ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅನುಭವಿ. ತದನಂತರದಲ್ಲಿ ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾಲಯದವರು ಓರಿಯೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ ರೀಡರ್ ಆಗಿ ಇವರನ್ನು ನೇಮಕ ಮಾಡಿದರು. ತೆಲುಗಿನ ‘ತೆನಾಲಿ ರಾಮ ಗ್ರಂಥ’, ‘ಸರಸ್ವತ ಲೋಕಮು’, ‘ಕಾವ್ಯ ಲೋಕಮು’ ಶ್ರೇಷ್ಠ ಪ್ರಬಂಧ ಸಂಕಲನಗಳು ಮತ್ತು ಕನ್ನಡದಲ್ಲಿ ‘ಗಾನಕಲೆ ಸಾಹಿತ್ಯ’, ‘ಜೀವನ ಕಲೆ’ ಜೊತೆಗೆ ಹಳೆಯ ಗ್ರಂಥಗಳನ್ನು ಶೋಧಿಸಿ ತಿದ್ದಿ ಪ್ರಕಟಿಸಿದ ಕೀರ್ತಿ ಇವರದ್ದು.
ಅನಂತ ಭಾರತಿ ಸಂಸ್ಕೃತ ಕೃತಿಗಳ ಸಂಗ್ರಹಗಳಾದ ‘ಮೀರಾಬಾಯಿ’, ‘ತಾರಾದೇವಿ’, ‘ಸಾರಸ್ವತ ಲೋಕಮು’ ಇವರ ಮೇರು ಕೃತಿಗಳು. ಅಂದು ಹಲವು ಮರೆತು ಹೋಗಿದ್ದ ಅನೇಕ ರಚನೆಗಳನ್ನು ಪತ್ತೆ ಮಾಡಿದ ಮಹಾನ್ ಮೇಧಾವಿ ಇವರು. ಇವರಿಂದ ಪುನರ್ಜೀವಗೊಂಡ ಗೀತ ಸಂಯೋಜನೆಗಳಿಗೆ ಗಾನಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಇಂದಿಗೂ ಮನೆಮನೆಗಳಲ್ಲಿ ಸುಪ್ರಭಾತ ಕೇಳಿಸುವ ಎಂ.ಎಸ್. ಸುಬ್ಬಲಕ್ಷ್ಮೀ ಇವರು ಜನಪ್ರಿಯತೆಯನ್ನು ತಂದವರಾಗಿದ್ದಾರೆ. ಇಷ್ಟೇ ಅಲ್ಲದೆ ಸಾಹಿತ್ಯ ಕಣಜಗಳೆಂದೇ ಹೇಳಬಹುದಾದ ಜ್ಞಾನಪೀಠದ ಕುವೆಂಪು, ಡಿ.ಎಲ್. ನರಸಿಂಹಾಚಾರ್ಯ, ಎಂ. ಚಿದಾನಂದಮೂರ್ತಿ, ಜಿ.ಪಿ. ರಾಜರತ್ನಂ, ಎಂ.ಪಿ. ಸೀತಾರಾಮಯ್ಯ, ಬಿ.ಎನ್. ಶಾಮರಾವ್, ಜಿ.ಎಸ್. ಶಿವರುದ್ರಪ್ಪ, ಬಿ. ಕುಪ್ಪುಸ್ವಾಮಿ, ಬನಗಿರಿ ಲಕ್ಷ್ಮೀನರಸಿಂಹಾಚಾರ್, ಎಂ.ಎಸ್. ವೆಂಕಟರಾವ್ ಇವರೇ ಮುಂತಾದವರು ಇವರ ಶಿಷ್ಯಂದಿರಾಗಿ ಪಡೆದ ಹೆಗ್ಗಳಿಕೆ ಇವರದು.
ತಿರುಪತಿ ದೇವಾಲಯದ ‘ಆಸ್ಥಾನ ವಿದ್ವಾನ್’ ‘ಸಂಗೀತ ಕಲಾ ನಿಧಿ’, ‘ಸಂಗೀತ ಕಲಾರತ್ನ’ ಮುಂತಾದ ಪ್ರಶಸ್ತಿಗಳೊಂದಿಗೆ ವೆಂಕಟೇಶ್ವರ ವಿಶ್ವವಿದ್ಯಾನಿಲಯದ ‘ಗೌರವ ಡಾಕ್ಟರೇಟ್ ಪದವಿ’ಯೂ ಇವರಿಗೆ ಸಂದಿರುತ್ತವೆ. ಮೇಲಾಗಿ ಇವರ ಅಪ್ರತಿಮ ಸಾಹಿತ್ಯ ಮತ್ತು ಸಂಗೀತ ಕಲಾ ಸೇವೆಯನ್ನು ಗುರುತಿಸಿ ತಿರುಮಲ ತಪ್ಪಲನ್ನು ತಲುಪುವ ರಸ್ತೆಗಳಲ್ಲಿ ಒಂದನ್ನು ಗಾನಕಲಾ ಸಿಂಧು ಅನಂತ ಶರ್ಮರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಇದು ಇಂದಿಗೂ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ.
1979ರಲ್ಲಿ ಸಂಗೀತ ಸಾಹಿತ್ಯ ಆಸ್ಥಾನ ವಿದ್ವಾನ್ ಗೌರವ ಪಡೆದ ಒಂದೆರಡು ಘಳಿಗೆಗಳಲ್ಲಿಯೇ ಭಗವಂತನ ಚರಣಕಮಲಗಳಲ್ಲಿ ಐಕ್ಯರಾದವರು. ಇಂತಹಾ ಮೇರು ವ್ಯಕ್ತಿತ್ವದ ಮಹಾನುಭಾವರ ಸಂಸ್ಮರಣೆಯ ಜನುಮದಿನದಂದು ಅಭಿನಂದನಾ ನಮನಗಳನ್ನು ದಿವ್ಯ ಚೇತನಕ್ಕೆ ಸಲ್ಲಿಸೋಣ.
ಲಲಿತಾ ಕೆ. ಆಚಾರ್, ನಿವೃತ್ತ ಪ್ರಾಂಶುಪಾಲರು
ಬೆಂಗಳೂರು.