ಬೆಂಗಳೂರು : ನಾಟಕ ಬೆಂಗಳೂರು 25 ರಂಗಭೂಮಿ ಸಂಭ್ರಮದ ಪ್ರಯುಕ್ತ ಕಾಜಾಣ ಅರ್ಪಿಸುವ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನಾಧಾರಿತ ಡಾ. ಬೇಲೂರು ರಘುನಂದನ್ ಇವರ ರಂಗಪಠ್ಯ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಸಾಲುಮರಗಳ ತಾಯಿ ತಿಮ್ಮಕ್ಕ’ ನಾಟಕ ಪ್ರದರ್ಶನವನ್ನು ದಿನಾಂಕ 27 ಜನವರಿ 2025ರಂದು ಸಂಜೆ 7-00 ಗಂಟಗೆ ಬೆಂಗಳೂರಿನ ಮಲ್ಲತ್ತಹಳ್ಳಿ, ನಾಗರಭಾವಿ, 2ನೇ ಸ್ಟೇಜ್, ಎನ್.ಜಿ.ಇ.ಎಫ್. ಲೇಔಟ್ ಇಲ್ಲಿರುವ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 8431803866, 9880339669 ಮತ್ತು 8660886439 ಸಂಪರ್ಕಿಸಿರಿ.
ನಾಟಕದ ಬಗ್ಗೆ :
ನಮ್ಮ ರಾಜ್ಯದ ಹೆಮ್ಮೆಯ ವೃಕ್ಷಮಾತೆಯಾದ ಸಾಲುಮರದ ತಿಮ್ಮಕ್ಕನವರು ಸುಮಾರು ೮೦ಕ್ಕೂ ಹೆಚ್ಚು ವರ್ಷಗಳಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿ ಇಡೀ ವಿಶ್ವಕ್ಕೆ ಮಾದರಿಯಾಗಿರುವಂತಹ ವ್ಯಕ್ತಿ. ಬಡತನದ ಬೇಗೆಯನ್ನು ಲೆಕ್ಕಿಸದೆ ಗಿಡಗಳ ಪಾಲನೆಯೇ ಜೀವನದ ಮಹಾಕಾಯಕವೆಂದು ಭಾವಿಸಿ ಇಳಿ ವಯಸ್ಸಿನಲ್ಲೂ ಪರಿಸರ ಸಂರಕ್ಷಣೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಇವರ ಸೇವೆಯು ಅನನ್ಯ ಹಾಗೂ ಅವಿಸ್ಮರಣೀಯವಾದುದು. ನಮ್ಮ ನಾಡಿಗೆ, ನಮ್ಮ ಪರಿಸರಕ್ಕೆ ಅಪೂರ್ವ ಸೇವೆ ನೀಡಿದಂತಹ ತಿಮ್ಮಕ್ಕನವರ ಕುರಿತಾದ ನಾಟಕವೇ ‘ಸಾಲು ಮರಗಳ ತಾಯಿ ತಿಮ್ಮಕ್ಕ’.
‘ಸಾಲು ಮರಗಳ ತಾಯಿ ತಿಮ್ಮಕ್ಕ’ ನಾಟಕವು ತಿಮ್ಮಕ್ಕನವರ ಅರ್ಥಪೂರ್ಣ ಜೀವನದ ಬಗ್ಗೆ ಹೇಳುತ್ತಲೇ ಪರಿಸರದ ಕಾಳಜಿ, ಹಸಿವು, ಬಡತನ, ಜಾತಿ ವ್ಯವಸ್ಥೆ, ಜೀತ ಪದ್ಧತಿ, ಹೆಣ್ಣು ಮಕ್ಕಳ ಸಂಕಷ್ಟದ ಬಗ್ಗೆಯೂ ಮಾತನಾಡುತ್ತದೆ. ಈ ಎಲ್ಲಾ ಅಂಶಗಳನ್ನು ನಿರ್ದೇಶಕರಾದ ಡಾ. ಬೇಲೂರು ರಘುನಂದನ್ ಇವರು ಅಚ್ಚುಕಟ್ಟಾಗಿ ರಂಗದ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 1 ಘಂಟೆ 30 ನಿಮಿಷ ಇರುವಂತಹ ಈ ನಾಟಕವು ಪ್ರೇಕ್ಷಕರ ಮನದಲ್ಲಿ ಪರಿಸರ ವಿಷಯದ ಬೀಜವನ್ನು ಬಿತ್ತುವಂತದ್ದಾಗಿದೆ. 25 ಜನರ ಪರಿಶ್ರಮದೊಂದಿಗೆ ರಂಗವೇರಲು ಸಿದ್ಧವಾಗಿರುವ ಈ ನಾಟಕವನ್ನು ‘ಕಾಜಾಣ’ ತಂಡವು ನಿರ್ಮಿಸಿದೆ. ತಿಮ್ಮಕ್ಕನವರ ಜೊತೆ ಹಾಗೂ ಮಗ ಉಮೇಶರೊಂದಿಗೆ ಚರ್ಚಿಸಿ, ಮತ್ತು ಅವರ ಕುರಿತಾದ ಲೇಖನಗಳನ್ನು ಆಧಾರವಾಗಿ ಇಟ್ಟುಕೊಂಡು ಈ ರಂಗಪಠ್ಯವನ್ನು ಸಿದ್ಧಪಡಿಸಲಾಗಿದೆ.
ಡಾ. ಬೇಲೂರು ರಘುನಂದನ್ – ನಾಟಕಕಾರ ಮತ್ತು ನಿರ್ದೇಶಕ
ಸಾಹಿತ್ಯ ಕ್ಷೇತ್ರ ಹಾಗೂ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರು ಇಪ್ಪತೈದಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಭಿನ್ನ ವಸ್ತು, ನಿರೂಪಣೆ, ಕಥನತಂತ್ರ ಮತ್ತು ನಾಟಕೀಯ ಅಂಶಗಳ ಮೂಲಕ ಅತ್ಯಂತ ಸಮರ್ಥ ನಾಟಕಗಳನ್ನು ಇವರು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುತ್ತಿದ್ದಾರೆ. ಇವರು ರಚಿಸಿರುವ ಇನ್ನೂರೈವತ್ತಕ್ಕೂ ಹೆಚ್ಚು ರಂಗಗೀತೆಗಳು ಪ್ರೇಕ್ಷಕರ ಮನಮುಟ್ಟಿವೆ. ಇವರ ನಾಟಕಗಳು ಇಂಗ್ಲೀಷ್, ಹಿಂದಿ ಕೊಂಕಣಿ ಹಾಗೂ ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ, ಜೊತೆಗೆ ನಟನಾಗಿಯೂ ಯಶಸ್ವಿಯಾಗಿದ್ದಾರೆ.
ಹುಟ್ಟಿದ್ದು ಹಾಸನ ಜಿಲ್ಲೆಯ ಬೇಲೂರಿನಲ್ಲಿ. ಅಲ್ಲಿಯೇ ಪದವಿ ಶಿಕ್ಷಣ ಪೂರೈಸಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ಚಿನ್ನದ ಪದಕ ಸೇರಿದಂತೆ ಮೂರು ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ. ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ದೇಜಗೌ ಅವರ ಅನಲಾ ಮತ್ತು ದುಷ್ಟಬುದ್ಧಿ ನಾಟಕಗಳು : ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿ ಹಾಗೂ ‘ಕನ್ನಡ ರಂಗಭೂಮಿ ಮತ್ತು ಸಿನೆಮಾ : ವ್ಯಕ್ತಿ ನೆಲೆಯ ತಾತ್ವಿಕ ಚಿಂತನೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.
ಬಾಲ್ಯದಿಂದಲೇ ರಂಗಭೂಮಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರವಾದ ಒಲವಿರುವ ಇವರು ಕಾವ್ಯ ಕಟ್ಟುಪದ, ನಾಟಕ, ಮಕ್ಕಳ ಸಾಹಿತ್ಯ, ಪ್ರವಾಸ ಸಾಹಿತ್ಯ, ಅಂಕಣಬರಹ, ಕಥೆ, ಸಂಪಾದನೆ, ಸಂಶೋಧನೆ ಮತ್ತು ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. 2017ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿ ನೇಮಕ ಮತ್ತು ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 2019ನೇ ಸಾಲಿನ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನೇಮಕಗೊಂಡದ್ದು ಇವರ ಸಾಂಸ್ಕೃತಿಕ ಸಾಧನೆಗೆ ಬೇಲೂರಿನ ಜನತೆ ಇವರಿಗೆ ನೀಡಿದ ಗೌರವ.
ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಸಾಲುಮರದ ತಿಮ್ಮಕ್ಕ ಹಸಿರು ಪ್ರಶಸ್ತಿ, ತೇಜಸ್ವಿ ಕಟ್ಟಿಮನಿ ಯುವ ಪುರಸ್ಕಾರ, ಮುಂಬೈ ಕರ್ನಾಟಕ ಸಂಘದ ನೇಸರು ಜಾಗತಿಕ ಏಕಾಂಕ ನಾಟಕ ಪ್ರಶಸ್ತಿ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ, ಆರ್ಯಭಟ ಪುರಸ್ಕಾರ, ‘ಆಯಾಮ’ ನಾಟಕಕ್ಕೆ ಶಿವಮೊಗ್ಗದ ರಂಗ ಕಲಾವಿದರ ಒಕ್ಕೂಟದಿಂದ ಬಹುಮಾನ, ಬೆಂಗಳೂರು ಕಿರು ನಾಟಕೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಹಶ್ಮಿ ಥಿಯೇಟರ್ ನಡೆಸಿದ ಎನಾಕ್ಟ್ ರಂಗೋತ್ಸವದಲ್ಲಿ ಅತ್ಯುತ್ತಮ ನಾಟಕಕಾರ ಪ್ರಶಸ್ತಿ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ಮಯೂರವರ್ಮ ಪ್ರಶಸ್ತಿಗಳು ಇವರ ಸಾಹಿತ್ಯ ಮತ್ತು ರಂಗ ಕೃಷಿಗೆ ಸಂದಿವೆ.
ಕಾಜಾಣ :
ಸಾಹಿತ್ಯ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕವಾಗಿ ತನ್ನಷ್ಟಕ್ಕೆ ತಾನು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ದುಡಿಯುತ್ತಿರುವ ಬಳಗ ಕಾಜಾಣ. ಕಾವ್ಯ ಕಮ್ಮಟ, ರಂಗ ಕಮ್ಮಟ, ಚಿಣ್ಣರ ಕಾಜಾಣ, ಸಸ್ಯ ಕಾಜಾಣ, ಸಿನಿ ಕಾಜಾಣ ಹೀಗೆ ಹತ್ತು ಹಲವಾರು ಭಿನ್ನ ಭಿನ್ನ ಪ್ರಕಾರಗಳ ಕಾರ್ಯಕ್ರಮಗಳನ್ನು ಕಳೆದ 13 ವರ್ಷಗಳಿಂದ ಮಾಡುತ್ತಾ ಬಂದಿದೆ. ಪುಸ್ತಕ ಪ್ರಕಟಣೆ ಕೂಡ ಕಾಜಾಣದ ಮುಖ್ಯ ಹಾದಿಗಳಲ್ಲಿ ಒಂದು. ಸೃಜನಶೀಲ ಅಭಿವ್ಯಕ್ತಿಗಳಿಗಿರುವ ಅಗಾದ ಸಾಧ್ಯತೆಗಳನ್ನು ನೆಚ್ಚಿ ಅನೇಕ ಕನಸು ಮತ್ತು ಭರವನೆಗಳೊಂದಿಗೆ ಕಾಜಾಣ ಅವಿರತವಾಗಿ ಕೆಲಸ ಮಾಡುತ್ತಲೇ ಇದೆ.
ಪ್ರತೀ ವರ್ಷ ಕುಪ್ಪಳಿಯಲ್ಲಿ ನೂರಾರು ಹೊಸ ಕವಿಗಳಿಗೆ ಕಾವ್ಯ ಕಮ್ಮಟವನ್ನು ಏರ್ಪಾಟು ಮಾಡಿದೆ. ಹೊಸ ತಲೆಮಾರಿನ ಭರವಸೆಯ ಯುವ ಸಾಹಿತಿಗಳಿಗೆ ‘ಕಾಜಾಣ ಕಾವ್ಯ ಪುರಸ್ಕಾರ‘ವನ್ನು ಹಾಗೂ ಯುವ ರಂಗಕರ್ಮಿಗಳಿಗೆ ‘ಕಾಜಾಣ ರಂಗಪುರಸ್ಕಾರ‘ ನೀಡುತ್ತಾ ಬಂದಿದೆ. ಮಕ್ಕಳಲ್ಲಿ ಕಾವ್ಯಾಸಕ್ತಿ ಮತ್ತು ಅವರ ಸೃಜನಶೀಲ ಜಗತ್ತಿಗೆ ಅನುಗುಣವಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಾವ್ಯ ಕಾಜಾಣ ಯಶಸ್ವಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ಸಾಹಿತ್ಯಕ ಮತ್ತು ಸಾಂಸ್ಕೃತಿಕವಾಗಿ ಹೊಸ ಹೊಸ ಯೋಜನೆಗಳನ್ನು ಕಾಲ ಕಾಲಕ್ಕೆ ಅನುಗುಣವಾಗಿ ಕಾಜಾಣ ರೂಪಿಸುತ್ತಾ ಬರುತ್ತಿದೆ.
‘ಮೋಹನ ತರಂಗಿಣಿ‘, ‘ಚಿಟ್ಟೆ‘, ‘ಮುದ್ದು ಮಗಳೇ‘, ‘ಅಕ್ಕಯ್‘, ‘ಮಾತಾ‘, ‘ಸಾಲುಮರಗಳ ತಾಯಿ ತಿಮ್ಮಕ್ಕ‘, ‘ ಆದಿಶಕ್ತಿ‘, ‘ಮೂಲ‘, ‘ಪಂಚವರ್ಣೆ‘, ‘ಬೆಂಕಿರೂಟು‘ ನಾಟಕಗಳನ್ನು ರಂಗಕ್ಕೆ ತಂದಿದೆ. ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ನಾಟಕ ಕಲೆಯನ್ನು ಪ್ರೋತ್ಸಾಹಿಸಲು ಕಾರ್ಯಕ್ರಮಗಳನ್ನು ರೂಪಿಸಿದೆ. ಬೇರೆ ಬೇರೆ ತಂಡಗಳ ರಂಗ ಪ್ರಯೋಗಗಳನ್ನು ಆಯೋಜಿಸಿದೆ.
ದೂರವಾಣಿ ಸಂಖ್ಯೆ: 8431803866, 9880339669, 8660886439, 9742606000