ಮಂಗಳೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ರಿ. ಮಂಗಳೂರು, ಸಂಸ್ಕಾರ ಭಾರತಿ ಮಂಗಳೂರು ಹಾಗೂ ವಿಶ್ವಕರ್ಮ ಕಲಾ ಪರಿಷತ್ತು (ರಿ.) ಮಂಗಳೂರು ಸಂಯುಕ್ತವಾಗಿ ಆಯೋಜಿಸಿದ ಕೀರ್ತಿಶೇಷ ನೃತ್ಯಗುರು ಕರ್ನಾಟಕ ಕಲಾಶ್ರೀ ಕೆ. ಕಮಲಾಕ್ಷ ಆಚಾರ್ಯರ ‘ಶ್ರದ್ಧಾನಮನ’ ಸಭೆಯು ದಿನಾಂಕ 25 ಜನವರಿ 2025ರಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಳದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮೈಸೂರಿನ ನೃತ್ಯ ವಿದ್ವಾಂಸರಾದ ಪ್ರೊ. ರಾಮಮೂರ್ತಿ ರಾವ್ ಮಾತನಾಡಿ “ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು (ರಿ.) ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾಗಿದ್ದು, ಭರತನಾಟ್ಯ ಶಿಕ್ಷಕರ ಸಂಘಟನೆಯನ್ನು ಬಲಪಡೆಸಿದವರು ಕೀರ್ತಿಶೇಷ ವಿದ್ವಾನ್ ಕಮಲಾಕ್ಷ ಆಚಾರ್ಯರು. ಮಂದಸ್ಮಿತವದನರಾಗಿದ್ದ ಇವರದು ನೇರವಾದ ಮೃದು ನುಡಿಯಿಂದ ಕೂಡಿದ ಶಿಸ್ತು ಬದ್ಧ ಬದುಕು. ಸದಾ ಭರತನಾಟ್ಯ ಕಲಾವಿದರು ಒಗ್ಗಟ್ಟಾಗಿದ್ದು ಅಧ್ಯಯನಶೀಲರಾಗಿ ಮುಂದುವರಿಯಬೇಕೆಂಬ ಮನಸ್ಸಿನಿಂದಲೇ ಕರ್ತವ್ಯ ನಿರ್ವಹಿಸಿದ ಪ್ರಾಮಾಣಿಕ” ಎಂದರು.
ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷರಾದ ಯು.ಕೆ. ಪ್ರವೀಣ್ ಮಾತನಾಡಿ “ಇತ್ತೀಚೆಗೆ ಅಗಲಿದ ಹೆಸರಾಂತ ಗುರು ಕಮಲಾಕ್ಷ ಆಚಾರ್ಯರು ಬೆಳ್ತಂಗಡಿಯ ನೃತ್ಯ ನಿಕೇತನದ ಸ್ಥಾಪಕರಾಗಿದ್ದು , ಕರ್ನಾಟಕ ಕರಾವಳಿ ನೃತ್ಯ ಪರಿಷತ್ತಿನ ಧೀಶಕ್ತಿಯಾಗಿದ್ದವರು” ಎಂದರು.
ಕ. ಸಾ. ಪ. ಇದರ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಶ್ರೀ ಪ್ರದೀಪ ಕುಮಾರ್ ಕಲ್ಕೂರ, ಸಂಸ್ಕಾರ ಭಾರತಿಯ ದ.ಕ. ಜಿಲ್ಲಾಧ್ಯಕ್ಷರಾದ ಶ್ರೀ ಪುರುಷೋತ್ತಮ ಭಂಡಾರಿ, ವಿಶ್ವಕರ್ಮ ಕಲಾ ಪರಿಷತ್ತಿನ ಉಪಾಧ್ಯಕ್ಷೆ ಶ್ರೀಮತಿ ರತ್ನಾವತಿ ಜೆ. ಬೈಕಾಡಿ, ಕರಾವಳಿ ನೃತ್ಯಕಲಾ ಪರಿಷತ್ತಿನ ಉಡುಪಿ ವಿಭಾಗದ ಪ್ರಮುಖರಾದ ಗುರು ವಿದ್ವಾನ್ ರಾಮಕೃಷ್ಣ ಕೊಡಂಚ, ಪುತ್ತೂರು ವಿಭಾಗದ ಪ್ರಮುಖರಾದ ಗುರು ವಿದುಷಿ ನಯನ ವಿ. ರೈ, ಕರ್ನಾಟಕ ಕಲಾಶ್ರೀ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೀರ್ತಿಶೇಷರಿಗೆ ಮಾತಿನ ಹಾರದ ನಮನ ಸಮರ್ಪಿಸಿದರು.
ಸಂಸ್ಕಾರ ಭಾರತಿಯ ಸಂರಕ್ಷಕರಾದ ಶ್ರೀ ಚಂದ್ರಶೇಖರ ಶೆಟ್ಟಿ, ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಸ್ಥಾಪಕರಾದ ಶ್ರೀ ಪಿ. ನಿತ್ಯಾನಂದ ರಾವ್ ಸುರತ್ಕಲ್, ದ. ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಕೋಶಾಧಿಕಾರಿಯಾದ ಶ್ರೀ ಪ್ರಕಾಶ್ ಕುಂಟಾಡಿ, ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತು, ಸಂಸ್ಕಾರ ಭಾರತಿ ಮಂಗಳೂರು ಹಾಗೂ ವಿಶ್ವಕರ್ಮ ಕಲಾ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಪ್ತಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮ ನಿರೂಪಿಸಿ, ಗುರು ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ವಂದನಾರ್ಪಣೆಗೈದರು.