ಮಂಗಳೂರು : 2025ನೇ ಸಾಲಿನ ಡಾ ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರಕ್ಕೆ ಗುಲ್ವಾಡಿ ರಾಮದಾಸ ದತ್ತಾತ್ರೇಯ ಭಟ್ ಹಾಗೂ 2025ನೇ ಸಾಲಿನ ಡಾ ಪಿ. ದಯಾನಂದ ಪೈ ಭಾಷಾನುವಾದ ಪುರಸ್ಕಾರಕ್ಕೆ ಡಾ. ಗೀತಾ ಶೆಣೈ ಇವರು ಆಯ್ಕೆಯಾಗಿರುತ್ತಾರೆ.
ಗುಲ್ವಾಡಿ ರಾಮದಾಸ ದತ್ತಾತ್ರೇಯ ಭಟ್ :
ಎಳವೆಯಿಂದಲೆ ನಾಟಕಕ್ಷೇತ್ರಕ್ಕೆ ಆಕರ್ಷಿತರಾದ ಶ್ರೀ ಗುಲ್ವಾಡಿಯವರು ತಮ್ಮ ನಿರಂತರ ಎಂಟು ದಶಕಗಳ ಸುದೀರ್ಘ ಹವ್ಯಾಸಿ ರಂಗಕಲಾ ಬದುಕಿನಲ್ಲಿ ಸಾಂಪ್ರದಾಯಿಕ, ವಿಶೇಷವಾಗಿ ಪೌರಾಣಿಕ ನಾಟಕಗಳ (ಪ್ರಚಂಡ ಪರಶು, ಆತ್ಮಲಿಂಗ, ಸಂತ ಜ್ಞಾನೇಶ್ವರ, ತುಲಸಿ ಜಲಂದರ) ವರ್ಣಾಲಂಕಾರ, ಧ್ವನಿ ಬೆಳಕಿನಿಂದ ಹಿಡಿದು ಸ್ವಂತ ನಾಟಕ ರಚನೆ, ಅಭಿನಯ, ನಿರ್ದೇಶನ ಸಾಮರ್ಥ್ಯಗಳೊಂದಿಗೆ ಮಂಗಳೂರಿಂದ ಮುಂಬೈ ನಗರದವರೆಗೂ ಹೆಸರು ಗಳಿಸಿದ್ದಾರೆ. ಸದ್ಯ ಗೋವಾದಲ್ಲಿ ನೆಲೆಸಿರುವ ಇವರ ಎಲೆಮರೆಯ ಪ್ರತಿಭೆಯನ್ನು ವಿಶ್ವ ಕೊಂಕಣಿ ಕೇಂದ್ರವು ಗುರುತಿಸಿ ಗೌರವಿಸಿದೆ.
ಡಾ ಗೀತಾ ಶೆಣೈ :
ಡಾ. ಗೀತಾ ಶೆಣೈಯವರು ವಚನ ಸಾಹಿತ್ಯ, ಕನಕದಾಸರ ಸಮಗ್ರ ಸಾಹಿತ್ಯ, ಕುವೆಂಪು ಸಾಹಿತ್ಯ ಮುಂತಾದ ಬೃಹತ್ ಸಾಹಿತ್ಯಗಳ ಬಹುಭಾಷಾ ಅನುವಾದ ಕಾರ್ಯ, 21 ಕೊಂಕಣಿ ಕಥೆ- ಕಾದಂಬರಿಗಳನ್ನು ಕನ್ನಡಕ್ಕೆ , 4 ಕನ್ನಡ ಕೃತಿಗಳನ್ನು ಕೊಂಕಣಿಗೆ ಹಾಗೂ 16 ಇಂಗ್ಲೀಷ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಸುಮಾರು 300ರಷ್ಟು ಸ್ವತಂತ್ರ ಲೇಖನಗಳು ಹಾಗೂ ಅನುವಾದಿತ ಲೇಖನಗಳು ಪ್ರಕಟಣೆಗೊಂಡಿವೆ. ಕೊಂಕಣಿ ಸಾಹಿತ್ಯಗಳನ್ನು ಕನ್ನಡಿಗರಿಗೆ ಪರಿಚಯಿಸುವಲ್ಲಿ ಡಾ ಗೀತಾ ಶೆಣೈಇವರ ಭಾಷಾಂತರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಈ ಪ್ರಶಸ್ತಿಗಳು ತಲಾ ಒಂದು ಲಕ್ಷ ನಗದು ಹಾಗೂ ಸನ್ಮಾನ ಫಲಕಒಳಗೊಂಡಿದೆ. ಪ್ರಶಸ್ತಿಗಳನ್ನು ದಿನಾಂಕ 08 ಫೆಬ್ರವರಿ 2025 ರಂದು ಟಿ. ವಿ. ರಮಣ ಪೈ ಸಭಾಂಗಣದಲ್ಲಿ ಸಂಜೆ ನಡೆಯುವ ವಿಶ್ವಕೊಂಕಣಿ ನಾಟಕೋತ್ಸವದಲ್ಲಿ ವಿತರಿಸಲಾಗುವುದು.