ಪತ್ರಿಕೋದ್ಯಮ ಶಿಕ್ಷಣ ಮತ್ತು ಬರಹಗಳಿಗೆ ಪ್ರಸಿದ್ಧರಾದ ಸಾಹಿತಿ ಡಾ. ನಾಡಿಗ ಕೃಷ್ಣಮೂರ್ತಿಯವರು. “ಬಹುಮುಖೀ ವ್ಯಕ್ತಿತ್ವದ ಇವರು ‘ಪತ್ರಿಕೋದ್ಯಮ ಶಿಕ್ಷಣದ ಭೀಷ್ಮ’ ಎಂದೇ ಪ್ರಖ್ಯಾತರಾಗಿದ್ದಾರೆ”. ಎಂಬುದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊಫೆಸರ್ ಜಿ. ಹೇಮಂತ್ ಇವರ ಅಭಿಮಾನದ ಮಾತುಗಳು.
ನರಸಿಂಗರಾವ್ ನಾಡಿಗ ಮತ್ತು ಕಮಲಾ ಬಾಯಿ ದಂಪತಿಗೆ 25 ಜನವರಿ 1920ರಂದು ಜನಿಸಿದ ಸುಪುತ್ರ ನಾಡಿಗ ಕೃಷ್ಣಮೂರ್ತಿಯವರು. ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಹುಟ್ಟೂರಾದ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಗ್ರಾಮದಲ್ಲಿ ನಡೆಯಿತು.
ಶಿವಮೊಗ್ಗದಲ್ಲಿ ಪ್ರೌಢ ಶಾಲೆಯ ಶಿಕ್ಷಣವನ್ನು ಪೂರೈಸಿದ ಮೇಲೆ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ದೇಶ ಕಟ್ಟುವ ಕಾರ್ಯದಲ್ಲಿ ಸಮೂಹ ಮಾಧ್ಯಮಗಳ ಕಾರ್ಯ ಮಹತ್ತರವಾದುದು ಎಂಬುದನ್ನು ಕಂಡುಕೊಂಡು 1947ರಲ್ಲಿ ಅಮೆರಿಕಾದ ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಶಿಕ್ಷಣದಲ್ಲಿ ಸ್ನಾತಕೋತ್ತರ ಪ್ರವೇಶ ಪಡೆದುಕೊಂಡ ಸ್ಪೂರ್ತಿಯ ಚಿಲುಮೆ ಇವರು. ಶಿಕ್ಷಣ ಹಾಗು ಹಡಗಿನ ಪ್ರಯಾಣಕ್ಕೆ ವೆಚ್ಚ ಭರಿಸಲು ರಸ್ತೆಯಲ್ಲಿ ನಿಂತು ಪುಸ್ತಕ ಮಾರಿ ಹಣ ಕೂಡಿಸಿದ್ದು ಇವರ ಕಾರ್ಯ ತತ್ಪರತೆಗೆ ಮತ್ತು ಪತ್ರಿಕೋದ್ಯಮ ಶಿಕ್ಷಣವನ್ನು ಪೂರ್ತಿಗೊಳಿಸುವ ಛಲಕ್ಕೆ ಸಾಕ್ಷಿಯಾಗಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ “ಪತ್ರಿಕೋದ್ಯಮ ಇತಿಹಾಸ” ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಮಂಡಿಸಿ ಪಿ. ಎಚ್. ಡಿ. ಪದವಿಯನ್ನು ಗಳಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರ ಜವಾಬ್ದಾರಿಯುತ ಹೊಣೆ ಕೈಗೆತ್ತಿಕೊಂಡು, ಮುಂದೆ ಪ್ರಾಂಶುಪಾಲರಾಗಿಯೂ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಜ್ಞಾನವನ್ನು ಕರ್ನಾಟಕದಲ್ಲಿ ಕಾರ್ಯರೂಪಕ್ಕಿಳಿಸಿದರು. ರಷ್ಯಾ, ಫ್ರಾನ್ಸ್, ಜರ್ಮನಿ, ಜಪಾನ್, ಚೀನ, ಥೈಲ್ಯಾಂಡ್, ಫಿಲಿಫೈನ್ಸ್ ಇತ್ಯಾದಿ ದೇಶಗಳಲ್ಲಿ ತಿರುಗಾಡಿ ಅಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಅನೇಕ ಉಪನ್ಯಾಸಗಳನ್ನು ನೀಡಿದ ಮೇಧಾವಿ ಇವರು. ‘ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಮತ್ತು ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಖ್ಯಾತಿ ಇವರದು.
‘ ಶಾಂತಿ ಸಾರ್ವಭೌಮರು ‘, ‘ಕಮಲಾ ನೆಹರು ‘, ‘ ಭಾರತದ ವೀರ ರಮಣಿಯರು ‘ ಇತ್ಯಾದಿ ಜೀವನ ಚರಿತ್ರೆಗಳನ್ನು ರಚಿಸುವುದರೊಂದಿಗೆ ‘ಭಾರತೀಯ ಪತ್ರಿಕೋದ್ಯಮ’, ಮತ್ತು ‘ ಪತ್ರಿಕೋದ್ಯಮ ಪರಿಚಯ’ ಇತ್ಯಾದಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಕೃತಿಗಳ ಕರ್ತೃ ಇವರು. ಪ್ರವಾಸ ಪ್ರಿಯರಾಗಿದ್ದ ನಾಡಿಗರು ‘ಸಾಗರದಾಚೆ’ ಎಂಬ ಪ್ರವಾಸ ಸಾಹಿತ್ಯವನ್ನೂ ರಚಿಸಿದ್ದಾರೆ. ‘ಅಮೆರಿಕನ್ ಜರ್ನಲಿಸಂ’ ಎಂಬುದು ಇವರ ಅನುವಾದ ಕೃತಿ ಮಾತ್ರವಲ್ಲದೆ ಇಂಗ್ಲೀಷಿನಲ್ಲಿ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಹೀಗೆ ಒಟ್ಟು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಜ್ಞಾನದ ಆಗರ ಡಾ. ನಾಡಿಗ ಕೃಷ್ಣಮೂರ್ತಿಯವರು.
ಡಾ. ನಾಡಿಗ ಕೃಷ್ಣಮೂರ್ತಿಯವರ ಕಾರ್ಯತತ್ಪರತೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗೆ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು. ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರಶಸ್ತಿ, ಲೋಕ ಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕೇಂದ್ರ ಶಿಕ್ಷಣ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನ ಅಲ್ಲದೆ ಹಿಂದಿ ಸಾಹಿತ್ಯ ಪರಿಷತ್ತಿನಿಂದ ‘ಪತ್ರಕಾರ ಶಿರೋಮಣಿ’ ಬಿರುದು ಇವುಗಳು ಪ್ರಮುಖವಾದವುಗಳು.
ಇಂತಹಾ ಬಹುಮುಖ ಪ್ರತಿಭೆಯ ಮೇಧಾವಿ, ಜೀವನೋತ್ಸಾಹದ ಚಿಲುಮೆ ಡಾ. ನಾಡಿಗ ಕೃಷ್ಣಮೂರ್ತಿಯವರು 1983ರಲ್ಲಿ ಭಗವಂತನ ಪಾದ ಸೇರಿದ್ದಾರೆ. ಆ ದಿವ್ಯ ಚೇತನಕ್ಕೆ ಅನಂತ ನಮನಗಳು.
Subscribe to Updates
Get the latest creative news from FooBar about art, design and business.
Previous Articleತಾರಾನಾಥ ವರ್ಕಾಡಿ ಇವರಿಗೆ ಡಿ. ಲಿಟ್ ಪದವಿ