ಮಂಗಳೂರು: ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 26 ಜನವರಿ 2025 ರವಿವಾರ ಅಪರಾಹ್ನ ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 62ವರ್ಷ ವಯಸ್ಸಾಗಿತ್ತು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು 39ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿದ್ದರು. ‘ಅಮೃತ’, ‘ಚೇತನಾ’, ‘ದಿ ಗೋಲ್ಡ್’, ‘ಸಪ್ತಸಾರ’ ವಾರಪತ್ರಿಕೆಗಳು ಮತ್ತು ದೈನಿಕಗಳಾದ ‘ಕರಾವಳಿ ಅಲೆ’, ‘ಕನ್ನಡ ಜನ ಅಂತರಂಗ’, ‘ಕೆನರಾ ಟೈಮ್ಸ್’, ‘ಮಂಗಳೂರು ಮಿತ್ರ’ ‘ಸಂಯುಕ್ತ ಕರ್ನಾಟಕ’ಗಳಲ್ಲಿ ಕೆಲಸ ಮಾಡಿದ್ದರು. ‘ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರ ಕನಸು’ ಎಂಬ ಶೀರ್ಷಿಕೆಯ ವರದಿ ಮೂಲಕ ಹರೇಕಳ ಹಾಜಬ್ಬ ಅವರನ್ನು ಬಾಳೇಪುಣಿ ಪರಿಚಯಿಸಿದ್ದರು.
ಇವರಿಗೆ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, ರಾಜ್ಯ ಸರ್ಕಾರದ ‘ಡಾ. ಬಿ. ಆರ್.ಅಂಬೇಡ್ಕರ್ ಪ್ರಶಸ್ತಿ’ , ‘ಬೆ. ಸು. ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ’, ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ’, ‘ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಪ್ರಶಸ್ತಿ’, ಹಂಗರ್ ಪ್ರಾಜೆಕ್ಟ್ ಸಂಸ್ಥೆಯ ‘ಸರೋಜಿನಿ ನಾಯ್ಡು ಪ್ರಶಸ್ತಿ’, ‘ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ’ ಹಾಗೂ ‘ಕಾಂತಾವರ ಪುರಸ್ಕಾರ’ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.